ಕೆಸರಿನ ಗದ್ದೆಯಾದ ಮುಧೋಳದ ತರಕಾರಿ ಮಾರುಕಟ್ಟೆ

ಅವ್ಯವಸ್ಥೆಯ ಆಗರ ರನ್ನ ಮಾರುಕಟ್ಟೆ| ಮಾರ್ಕೆಟೋ, ಕೆಸರು ಗದ್ದೆಯೋ ಎನ್ನುವಂತಿರುವ ಮಾರುಕಟ್ಟೆ| ಎಲ್ಲೆಂದರಲ್ಲಿ ಗಲೀಜು|ಮೂಗು ಮುಚ್ಚಿಕೊಂಡೆ ವರ್ತಕರು ಹಾಗೂ ಗ್ರಾಹಕರು ವ್ಯಾಪಾರ, ವಹಿವಾಟು ನಡೆಸಬೇಕು|

Huge Garbage in Mudhol Vegetable Market

ವಿಶ್ವನಾಥ ಮುನವಳ್ಳಿ

ಮುಧೋಳ[ಅ.21]:  ಪಟ್ಟಣದ ಏಕೈಕ ರನ್ನ ತರಕಾರಿ ಮಾರುಕಟ್ಟೆಈಗ ಕೆಸರಿನ ಗದ್ದೆಯಾಗಿದೆ. ಔದ್ಯೋಗಿಕ ನಗರ ಎಂದೇ ಕರೆಯಿಸಿಕೊಳ್ಳುವ ಇಲ್ಲಿನ ರನ್ನ ತರಕಾರಿ ಮಾರುಕಟ್ಟೆಯ ಅವ್ಯವಸ್ಥೆ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಮಳೆಯಾದರೆ ಸಾಕು ಇಲ್ಲಿರುವ ಚರಂಡಿಗಳು ನೀರಿನಿಂದ ತುಂಬಿ ರಸ್ತೆಯ ಮೇಲೆ ಹರಿಯುತ್ತವೆ. ಹೀಗಾಗಿ ಮೂಗು ಮುಚ್ಚಿಕೊಂಡೆ ವರ್ತಕರು ಹಾಗೂ ಗ್ರಾಹಕರು ವ್ಯಾಪಾರ, ವಹಿವಾಟು ಮಾಡುವಂತಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರನ್ನ ತರಕಾರಿ ಮಾರುಕಟ್ಟೆಯ ಚರಂಡಿಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿರುವುದರಿಂದ ಚರಂಡಿಯ ನೀರು ಸರಿಯಾಗಿ ಹರಿಯುತ್ತಿಲ್ಲ. ಆಗಾಗ್ಗೆ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ಚರಂಡಿಯ ನೀರು ರಸ್ತೆಯ ಮೇಲೆ ಹರಿದು ಹೋಗುತ್ತದೆ. ಇತ್ತಕಡೆ ನಗರಸಭೆಯವರು ಗಮನ ಹರಿಸದ ಕಾರಣ ಗ್ರಾಹಕರು ಕೆಸರಿನಲ್ಲಿಯೇ ಕುಳಿತು ವ್ಯಾಪಾರ ಮಾಡುವುದು ಅನಿವಾರ್ಯವಾಗಿದೆ. ಶುದ್ಧ ಮತ್ತು ತಾಜಾ ತರಕಾರಿ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ಬರುವ ಗ್ರಾಹಕರಿಗೆ ನಿರಾಸೆ ಕಟ್ಟಿಟ್ಟಬುತ್ತಿ, ಸ್ವಚ್ಛತೆ ಇರದ ಕಾರಣ ರೋಗ ರುಜಿನಗಳಿಂದ ಕೂಡಿರುವ ತರಕಾರಿ ಮಾರುಕಟ್ಟೆ ಗಬ್ಬೆಂದು ನಾರುತ್ತಿದೆ. ನಗರಸಭೆಯ ಕಾರ್ಯವೈಖರಿಗೆ ಗ್ರಾಹಕರು ಬೇಸತ್ತು ಹೋಗಿದ್ದಾರೆ.

ಅಸಮಾಧಾನ:

ಮಾರುಕಟ್ಟೆ ಪಕ್ಕದಲ್ಲೇ ನಗರಸಭೆ ಇದ್ದರೂ ಮಾರುಕಟ್ಟೆಗೆ ಒಮ್ಮೆಯಾದರೂ ಅಧಿಕಾರಿಗಳು ಭೇಟಿ ನೀಡಿ ವ್ಯಾಪಾರಸ್ಥರ ಹಾಗೂ ಗ್ರಾಹಕರ ಕುಂದುಕೊರತೆಗಳನ್ನು ಆಲಿಸದೇ ಇರುವುದು ವಿಪರ್ಯಾಸವೇ ಸರಿ. ತರಕಾರಿ ಮಾರಾಟಗಾರರು ಮತ್ತು ಗ್ರಾಹಕರು ಹಲವು ಸಲ ನಗರಸಭೆಗೆ ಭೇಟಿ ನೀಡಿ ತರಕಾರಿ ಮಾರುಕಟ್ಟೆಸ್ವಚ್ಛತೆ ಇಡುವಂತೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಒಂದೆಡೆ ಕುಳಿತುಕೊಂಡು ವ್ಯಾಪಾರ ಮಾಡಲು ನಗರಸಭೆಯವರು ಶೆಡ್‌ಗಳನ್ನು ನಿರ್ಮಿಸಿದ್ದಾರೆ. ಆದರೆ ಅವುಗಳನ್ನು ಯಾರೂ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಕೇಳಿದರೆ ಶೆಡ್‌ಗಳು ಮಳೆಯಿಂದ ಸೋರುತ್ತಿವೆ. ಶೆಡ್‌ಗಳು ಕೆಲವರಿಗೆ ಮಾತ್ರ ಸೀಮಿತವಾಗಿವೆ ಎಂಬ ಉತ್ತರ ದೊರೆಯುತ್ತಿದೆ. ಆದರೆ, ನಗರಸಭೆಯವರು ವ್ಯಾಪಾರಸ್ಥರಿಂದ ಕರ ವಸೂಲಿ ಮಾಡಿದರೂ, ಮಾರುಕಟ್ಟೆಗೆ ಕಾಯಕಲ್ಪ ನೀಡಿ ಮೂಲ ಸೌಕರ್ಯ ಒದಗಿಸಲು ಮುಂದಾಗದೇ ಇರುವುದು ವ್ಯಾಪಾರಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಒತ್ತಾಸೆ:

ಶುಕ್ರವಾರ ಮುಧೋಳದ ಸಂತೆ ದಿನದಂದು ನಡೆಯುವ ತರಕಾರಿ ವ್ಯಾಪಾರ ಬೃಹತ್‌ ಮಟ್ಟದ್ದಾಗಿರುತ್ತದೆ. ಸಾವಿರಾರು ಗ್ರಾಹಕರು ತಾಜಾ ತರಕಾರಿ ಖರೀದಿಸಲು ಹರಸಾಹಸ ಪಡಬೇಕಾಗುತ್ತದೆ. ಇದಕ್ಕೆ ನಗರಸಭೆಯವರೇ ನೈತಿಕ ಹೊಣೆ ಹೊರಬೇಕಾಗುತ್ತದೆ. ಗ್ರಾಹಕರಿಗೆ ಶುದ್ಧ ಮತ್ತು ತಾಜಾ ತರಕಾರಿ ದೊರೆಯಬೇಕಾದರೆ ನಗರಸಭೆಯವರು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬುದು ಗ್ರಾಹಕರ ಒತ್ತಾಸೆಯಾಗಿದೆ.

ಸ್ವಚ್ಛತೆ ನಗರಸಭೆ ಕೆಲಸ:

ಸಾರ್ವಜನಿಕರ ತೆರಿಗೆ ಹಣದಲ್ಲಿ ನಗರಸಭೆಯವರು ಕೋಟ್ಯಂತರ ಹಣ ವೆಚ್ಚ ಮಾಡಿ ಶೆಡ್‌ಗಳನ್ನು ನಿರ್ಮಿಸಿದ್ದಾರೆ ನಿಜ! ಆದರೆ, ನಗರಸಭೆಯವರು ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವ ಕಾರಣ ಅವುಗಳು ಅಷ್ಟೊಂದು ಬಳಕೆಯಲ್ಲಿ ಇಲ್ಲ. ಹೀಗಾಗಿ ಸರ್ಕಾರದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ. ರಸ್ತೆ ಬದಿಯ ತರಕಾರಿ ವ್ಯಾಪಾರಿಗಳಿಂದ ಗುತ್ತಿಗೆದಾರರು ಪ್ರತಿನಿತ್ಯ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸುತ್ತಾರೆ. ತರಕಾರಿ ಮಾರುಕಟ್ಟೆಯನ್ನು ಸ್ವಚ್ಛತೆ ಇಡುವ ಕುರಿತು ವ್ಯಾಪಾರಿಗಳು ತೆರಿಗೆ ಸಂಗ್ರಹಕಾರರನ್ನು ಕೇಳಿದರೆ ಇದು ನಗರಸಭೆಯವರ ಕೆಲಸ ನಮ್ಮದಲ್ಲ ಎಂದು ಹೇಳಿ ತಮ್ಮ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಾರೆ. ಗುತ್ತಿಗೆದಾರರಿಂದ ಹಣ ಪಡೆದುಕೊಂಡಿರುವ ನಗರಸಭೆಯವರು ಏಕೆ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ಜ್ವಲಂತ ಪ್ರಶ್ನೆಯಾಗಿ ಉಳದಿದೆ.

ನಗರಸಭೆಯವರು ಗುತ್ತಿಗೆದಾರರ ಮೂಲಕ ತೆರಿಗೆ ಹಣ ಸಂಗ್ರಹಿಸುತ್ತಾರೆ. ಕನಿಷ್ಠ ಪಕ್ಷ ದಿನಕ್ಕೆ ಒಂದೆರಡು ಸಲ ಸ್ವಚ್ಛತೆಗೊಳಿಸಲು ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ಆಗಾಗ್ಗೆ ಸ್ವಚ್ಛತೆ ಕಾಪಾಡುವುದರಿಂದ ಗ್ರಾಹಕರಿಗೆ ಶುದ್ಧ ಮತ್ತು ತಾಜಾ ತರಕಾರಿ ದೊರೆಯಲು ಸಾಧ್ಯ ಎಂದು ತರಕಾರಿ ವ್ಯಾಪಾರಿಗಳಾದ  ರುಕ್ಮಿಣಿ, ಮಂಜುಳಾ, ರುಬೀನಾ, ಮಹಿಬೂಬಸಾಬ,ಇಮಾಮಸಾಬ ಅವರು ಹೇಳಿದ್ದಾರೆ.

ಶರವೇಗದಲ್ಲಿ ಬೆಳೆಯುತ್ತಿರುವ ಮುಧೋಳ ಪಟ್ಟಣದಲ್ಲಿ ಪ್ರತ್ಯೇಕ ರನ್ನ ತರಕಾರಿ ಮಾರುಕಟ್ಟೆ ಇದ್ದರೂ ಸಮರ್ಪಕ ನಿರ್ವಹಣೆ ಇಲ್ಲದೆ ಇರುವುದರಿಂದ ಇದೊಂದು ಕೊಳಚೆ ಪ್ರದೇಶದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶುದ್ಧ ಮತ್ತು ತಾಜಾ ತರಕಾರಿ ದೊರೆಯುವ ಹಾಗೆ ಮಾಡಬೇಕು ಎಂದು ತರಕಾರಿ ಗ್ರಾಹಕರಾದ ಸುಭಾಸ ಮೋದಿ, ಚಂದ್ರಶೇಖರ ಕಬ್ಬೂರ, ಮಲ್ಲಯ್ಯ ವಸ್ತ್ರದ, ಸಿದ್ದು ಕಾಳಗಿ ಅವರು ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios