ಮುಧೋಳ ಜೋಡಿ ಕೊಲೆ ಪ್ರಕರಣ: ಏಳು ಆರೋಪಿಗಳ ಅರೆಸ್ಟ್

ಶಿರೋಳದಲ್ಲಿ ಜೋಡಿ ಕೊಲೆ ಪ್ರಕರಣ| ಆರೋಪಿಗಳನ್ನು ಸೆರೆ ಹಿಡಯುವಲ್ಲಿ ಪೊಲೀಸರು ಯಶಸ್ವಿ| ಬಂಧಿತ ಏಳು ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು| ಕೊಲೆಗೆ ಬಳಸಲಾದ ಮಚ್ಚು, ಕಲ್ಲು, ಕಾರು ವಶ| ಕೊಲೆ ಪ್ರಕರಣದ ತನಿಖೆ ತೀವ್ರ| 

Double Murder Case:  Accused Arrested

ಬಾಗಲಕೋಟೆ(ಅ.19): ಅ.15 ರಂದು ಮುಧೋಳ ತಾಲೂಕಿನ ಶಿರೋಳದಲ್ಲಿ ಯಲ್ಲಪ್ಪ ತಳಗೇರಿ, ವಿಠ್ಠಲ ತಳಗೇರಿ ಎಂಬುವವರ ಜೋಡಿ ಕೊಲೆ ಪ್ರಕರಣದ ಆರೋಪಿಗಳನ್ನು ಸೆರೆ ಹಿಡಯುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಬಂಧಿತ ಏಳು ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿ​ತರನ್ನು ಶಿವಪ್ಪ ಹುದ್ದಾರ, ಕಾಡಪ್ಪ ಮುಂಚಂಡಿ, ಶಂಕ್ರಪ್ಪ ಗುಡದಿನ್ನಿ, ಮಹೇಶ ನಾಗರೆಡ್ಡಿ, ಗಿರಿ ಮಲ್ಲಯ್ಯ ಗಣಾಚಾರಿ, ಕಾಡಪ್ಪ ಕಣಕಲ್ಲ, ಲಕ್ಷ್ಮಣ ವಗ್ಗನ್ನವರ ಎಂದು ಗುರುತಿಸಲಾಗಿದೆ. ಕೊಲೆಗೆ ಬಳಸಲಾದ ಮಚ್ಚು, ಕಲ್ಲು, ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಲೋಕೇಶ ಜಗಲಾಸರ ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಕೊಲೆಯಾದ ಕುಟುಂಬ ನೀಡಿದ 13 ಜನರ ವಿರುದ್ಧದ ತನಿಖೆಯಲ್ಲಿ ಇವರೆಗೆ 7 ಜನರನ್ನು ಬಂಧಿ​ಸಿದ್ದು ಇನ್ನಳಿದ ಆರೋಪಿಗಳ ಬಂಧನದ ಕುರಿತು ಕ್ರಮ ಕೈಗೊಳ್ಳಲಾಗುವುದೆಂದರು.

ಘಟನೆಯ ಹಿನ್ನೆಲೆ:

ಕಳೆದ ಮೇ ತಿಂಗಳಿನಲ್ಲಿ ನಡೆದ ತಳಗೇರಿ ಹಾಗೂ ಆರೋಪಿತರ ನಡುವಿನ ಜಗಳ ಹಾಗೂ ಜಾತಿ ದೌರ್ಜನ್ಯ ಪ್ರಕರಣ ಸಂಬಂ​ಧಿಸಿದಂತೆ ಉಭಯತರ ನಡುವಿನ ಭಿನ್ನಾಭಿಪ್ರಾಯದಿಂದ ಆರಂಭಗೊಂಡ ಕಲಹ ಹತ್ಯೆಯವರೆಗೂ ಮುಂದುವರೆದಿದ್ದು, ಉಭಯತರರ ನಡುವೆ ಹಣಕಾಸಿನ ವ್ಯವಹಾರ, ಹಳೆಯ ದ್ವೇಷ, ಹೊಲದ ಬದುವಿನ ಜಗಳಗಳು ಸೇರಿದ್ದು ಹಲವು ದಿನಗಳ ವೈಷಮ್ಯ ಕೊಲೆಯಲ್ಲಿ ಅಂತ್ಯವಾಗಿದೆ ಎಂದರು.

ಘಟನೆಯ ದಿನ ಕೊಲೆಗೀಡಾದ ಯಲ್ಲಪ್ಪ ತಳಗೇರಿ ಹಾಗೂ ವಿಠ್ಠಲ ತಳಗೇರಿಯನ್ನು ಅಡ್ಡಗಟ್ಟಿಎರಡು ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಕೊಲೆಗೆ ಬಳಿಸಲಾದ ಮಾರಕಾಸ್ತ್ರಗಳು ಸಹ ಸಿಕ್ಕಿದ್ದು ಅವುಗಳನ್ನು ವಿಧಿ​ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದರು.

ಗ್ರಾಮದಲ್ಲಿ ಶಾಂತಿ ತರಬೇಕಿದೆ:

ಸದ್ಯ ಕೊಲೆ ಪ್ರಕರಣದ ನಂತರ ಶಿರೋಳ ಗ್ರಾಮದಲ್ಲಿ ಉಂಟಾದ ಪ್ರಕ್ಷುಬ್ಧ ವಾತಾವರಣವನ್ನು ತಿಳಿ ಮಾಡುವ ಅಗತ್ಯತೆ ಇದ್ದು, ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ. ಸದ್ಯ ದಲಿತ ಮತ್ತು ಸವರ್ಣಿಯರಿಗೆ ಪೊಲೀಸ್‌ ಭದ್ರತೆಯನ್ನು ನೀಡಲಾಗಿದೆ. ಆದರೆ, ನಮಗೆ ಭದ್ರತೆ ಇಲ್ಲದೆ ಶಿರೋಳ ಗ್ರಾಮ ಶಾಂತವಾಗಬೇಕಿದೆ ಎಂದರಲ್ಲದೆ ಈ ನಿಟ್ಟಿನಲ್ಲಿ ಗ್ರಾಮಸ್ಥರು ಆತಂಕ ತೊರೆದು ಸಹಬಾಳ್ವೆ ನಡೆಸಲು ಮನವಿ ಮಾಡಿಕೊಂಡರು.

ಕೊಲೆಯಾದ ದಿನದಿಂದ ಈವರೆಗೆ ಈ ಪ್ರಕರಣಕ್ಕೆ ಸಂಬಂ​ಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಜಾತಿ ದೌರ್ಜನ್ಯ, ಕೊಲೆಗೆ ಯತ್ನ, ಗಲಭೆ ಹೆಸರಿನಲ್ಲಿ ಒಟ್ಟು 60 ಜನರ ವಿರುದ್ಧ ದೂರಿನಲ್ಲಿ ಹೆಸರು ಪ್ರಸ್ತಾಪಿಸಿದ್ದು, ಅವುಗಳ ಕುರಿತು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾಗಿ ಹೇಳಿದರಲ್ಲದೆ ಅ.16ರಂದು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನಡೆದ ಶವ ಸಾಗಿಸುವ ಸಂದರ್ಭದಲ್ಲಿನ ಘಟನೆಯ ಕುರಿತು ಮಾತನಾಡಿ, ಕೊಲೆ ಪ್ರಕರಣದಲ್ಲಿ ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸುವ ಜವಾÜಬ್ದಾರಿ ಇಲಾಖೆಯದಿದ್ದು, ಕಾನೂನಿನ ಪ್ರಕಾರವೇ ಕ್ರಮ ಕೈಗೊಂಡಿದ್ದಾಗಿ ಸಮರ್ಥಿಸಿಕೊಂಡರು.

ತನಿಖೆಗೆ ಪರ್ಯಾಯ ವ್ಯವಸ್ಥೆ :

ಕೊಲೆ ಪ್ರಕರಣದ ನಂತರ ಕೊಲೆಗೀಡಾದ ಕುಟುಂಬದ ಸದಸ್ಯರು ಸ್ಥಳೀಯ ಪೊಲೀಸರ ತನಿಖೆಯ ಮೇಲೆ ಅವಿಶ್ವಾಸ ವ್ಯಕ್ತಪಡಿಸಿದ್ದರಿಂದ ಪ್ರಕರಣದ ಕುರಿತು ರಾಜ್ಯ ಪೊಲೀಸ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ. ಅವರ ನಿರ್ದೇಶನದ ನಂತರ ಬೇರೆಯವರಿಂದ ಪ್ರಕರಣದ ತನಿಖೆಯನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದೆಂದರು.

ಬಾಗಲಕೋಟೆ ನವನಗರದಲ್ಲಿ ಇತ್ತೀಚಿಗೆ ರಾಘು ಗಾಣಿಗಾ ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಾಣುತ್ತಿದೆಯಾದರೂ ತನಿಖೆಯನ್ನು ಮತ್ತಷ್ಟು ಮುಂದುವರಿಸಲು ನಿರ್ಧರಿಸಲಾಗಿದೆ. ಹಳೆ ಬಾಗಲಕೋಟೆಯಲ್ಲಿ ನಡೆದ ಪ್ರಕರಣವೊಂದರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆನ ಬಲತ್ಕಾರದ ನಂತರದ ಗರ್ಭಿಣಿಯಾದ ಕುರಿತು ಫೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಯಾರು ಇಲ್ಲ. ಈ ಕುರಿತು ರಾಜ್ಯ ಪೊಲೀಸ್‌ ನಿರ್ದೇಶಕರು ಸಹ ಮಾಹಿತಿ ಕೇಳಿದ್ದರು. ಸಮಗ್ರ ತನಿಖೆ ನಂತರವೇ ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಯಾರು ಇಲ್ಲ ಎಂದು ವರದಿ ಕಳುಹಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಲೋಕೇಶ ಜಗಲಾಸರ ಅವರು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios