ಬಾಗಲಕೋಟೆ[ನ.6]: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಜೆಪಿ ಸಚಿವರು ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆಯ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಬಾದಾಮಿಯನ್ನು ಬಿಜೆಪಿ ಸಚಿವರು ಕಡೆಗಣಿಸಿದ್ದಾರೆ ಎಂದು ಸುವರ್ಣ ನ್ಯೂಸ್ ವಾಹಿನಿ ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ವಸತಿ ಸಚಿವ ವಿ.ಸೋಮಣ್ಣ ಎಚ್ಚೆತ್ತುಕೊಂಡಿದ್ದಾರೆ. 

ಹೌದು, ಇಂದು[ಬುಧವಾರ] ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸೋಮಣ್ಣ ಅವರು, ನಾನು ಮೊನ್ನೆ ತಾನೆ ವರುಣಾಕ್ಕೆ ಹೋಗಿ ಬಂದಿದ್ದೇನೆ. ಬಾಗಲಕೋಟೆ ಜಿಲ್ಲೆಗೆ ಈಗಷ್ಟೇ ಬಂದಿದ್ದೇನೆ. ಸಿದ್ದರಾಮಯ್ಯನವರ  ಬಾದಾಮಿಗೂ ಹೋಗ್ತೇನೆ. ನಮಗೇನು ಸಿದ್ದರಾಮಯ್ಯನವರು ಹೊಸಬರಲ್ಲ. ನಾನು, ಕಾರಜೋಳ, ಸಿದ್ದರಾಮಯ್ಯ ಒಟ್ಟಿಗೆ ಮಂತ್ರಿಯಾದವರು. ಅವತ್ತಿನ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ ಅಂತ ಹೇಳಿದ್ದೀನಿ ಈಗಲೂ ಅದನ್ನೇ ಹೇಳ್ತೀನಿ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ಯಡಿಯೂರಪ್ಪ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಾಪ್ಟ್ ಕಾರ್ನರ್ ವಿಚಾರದ ಬಗ್ಗೆ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, ನೋಡಿ ರಾಜಕೀಯದಲ್ಲಿ ಯಾರಿಗ್ಯಾರು ಶತ್ರುಗಳು ಅಲ್ಲ, ಮಿತ್ರರೂ ಅಲ್ಲ. ಯಡಿಯೂರಪ್ಪ ಒಬ್ಬ ಅನುಭವಿ ರಾಜಕಾರಣಿ. ದೂರದೃಷ್ಟಿ ಚಿಂತಕರು. ಪ್ರವಾಹದಿಂದ ಆದ ಅನಾಹುತ ನಿಭಾಯಿಸುವಂತಹ ಶಕ್ತಿ ಇರೋದು ಯಡಿಯೂರಪ್ಪಗೆ ಮಾತ್ರ. ಈ ಸಮಯದಲ್ಲಿ ಯಡಿಯೂರಪ್ಪಗೆ ಸಹಕಾರ ಮಾಡುವಂತವರನ್ನ ಸ್ವೀಕಾರ ಮಾಡುವಂತಹ ದೊಡ್ಡತನ ಅವರಲ್ಲಿದೆ. ಇದಕ್ಕೆ ಉಪ್ಪು ಕಾರ ಹಾಕುವಂತಹದ್ದೇನು ಬೇಡ ಎಂದು ಹೇಳಿದ್ದಾರೆ.

ಪ್ರತಿ ಬಡವರಿಗೂ ಮನೆ ಸಿಗಬೇಕು ಅನ್ನೋ ವಿಚಾರ ಡಿಸಿಎಂ ಗೋವಿಂದ ಕಾರಜೋಳರದು. ಪ್ರಧಾನಿ ಮತ್ತು ಸಿಎಂ ನಮಗೆ ಸೂಚನೆ ಕೊಟ್ಟಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಎಲ್ಲರಿಗೂ ಮನೆ ಒದಗಿಸುವ ಕೆಲಸ ಮಾಡ್ತೇವೆ ಎಂದು ಹೇಳಿದ್ದಾರೆ.