ಬಾಗಲಕೋಟೆ: ರಾಜ್ಯ-ಕೇಂದ್ರ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ನೆರೆ ಪರಿಹಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ| ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ| ನೆರೆ ಸಂತ್ರಸ್ತರ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ| ಇದರಿಂದ ಲಕ್ಷಾಂತರ ಸಂತ್ರಸ್ತರಿಗೆ ಬಹುದೊಡ್ಡ ಅನ್ಯಾಯ| ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಘೋಷಣೆ|
ಬಾಗಲಕೋಟೆ(ಅ.20): ನೆರೆ ಸಂತ್ರಸ್ತರ ವಿಷಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದ್ದು, ಇದರಿಂದ ಲಕ್ಷಾಂತರ ಸಂತ್ರಸ್ತರಿಗೆ ಬಹುದೊಡ್ಡ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಶನಿವಾರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಯುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ವಿನಯ್ ತಿಮ್ಮಾಪುರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಕಿಡಿ ಕಾರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ತಿಮ್ಮಾಪುರ, ಪ್ರವಾಹದ ಪರಿಹಾರ ಪಡೆಯುವಲ್ಲಿ ಮತ್ತು ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯದಿಂದ ಸಂತ್ರಸ್ತರ ಬದುಕು ಅತ್ಯಂತ ದಯನೀಯವಾಗಿದ್ದು ಎರಡು ತಿಂಗಳು ಗತಿಸಿದರೂ ಅವರ ಬದುಕು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲಾ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ಪರಿಹಾರದ ವಿಷಯದಲ್ಲಿ ಪಕ್ಕದ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ತ್ವರಿತವಾಗಿ 6813 ಕೋಟಿ ನೆರೆಯ ಪರಿಹಾರಕ್ಕಾಗಿ ತುರ್ತಾಗಿ ಕೊಡಬೇಕೆಂದು ಅಗಸ್ಟ್ 13 ರಂದೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯದ ಪ್ರವಾಹಕ್ಕೆ ತುರ್ತಾಗಿ ಎಷ್ಟು ಪರಿಹಾರಬೇಕೆಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ, ಸಲ್ಲಿಸಿದ್ದರೆ ಪ್ರಸ್ತಾವನೆಯ ದಿನಾಂಕ ಪರಿಹಾರದ ಮೊತ್ತವೆಷ್ಟು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಕಬ್ಬು ಬೆಳೆಯಲು ಕೇಂದ್ರ ಸರ್ಕಾರ ಸಿ.ಎ.ಸಿ.ಪಿ ವರದಿ ಪ್ರಕಾರ ಪ್ರತಿ ಎಕೆರೆಗೆ 60 ಸಾವಿರ ಖರ್ಚಾಗುತ್ತದೆ ಎಂದು ತಿಳಿಸುತ್ತದೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ 2014-15ನೇ ಸಾಲಿನಲ್ಲಿ ಕೇವಲ ರೈತರ ಕಬ್ಬಿನ ಬೆಳೆ ಕಡಿಮೆ ಆಗಿದ್ದಕ್ಕೆ ಕಬ್ಬು ಬೆಳೆಗಾರರಿಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಪ್ರತಿ ಟನ್‌ಗೆ 350 ನಂತೆ ಸಹಾಯ ಧನ ನೀಡಿತ್ತು. ಅಂದರೆ ಪ್ರತಿ ಎಕರೆಗೆ ಅಂದಾಜು 15 ಸಾವಿರ ರೂಪಾಯಿ ಎಲ್ಲ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ನೀಡಿದ್ದರು ಎಂಬುದನ್ನು ನೆನಪಿಸಿದರು.
ಮನೆಗಳನ್ನು ಕಳೆದುಕೊಂಡವರಿಗೆ 5 ಲಕ್ಷ ಪರಿಹಾರವನ್ನು ಘೋಷಿಸಿರುವ ಸರ್ಕಾರದ ನಿರ್ಧಾರದಿಂದ ಮನೆಯ ಎರಡು ಕೋಣೆಗಳನ್ನು ಕಟ್ಟಲು ಆಗುವುದಿಲ್ಲಾ. ಕೊಡಗಿನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಪ್ರತಿ ಕುಟುಂಬಕ್ಕೆ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ 9 ಲಕ್ಷದ 80 ಸಾವಿರ ಪರಿಹಾರವನ್ನು ನೀಡಿತ್ತು, ತಾವು ಕನಿಷ್ಠ 10ಲಕ್ಷ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಯುವ ಮುಖಂಡ ಸದುಗೌಡ ಪಾಟೀಲ ಮಾತನಾಡಿ ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದರೂ ಅವರು ರಾಜ್ಯದ ಸಂತ್ರಸ್ತರ ನೆರೆವಿಗೆ ಬರಲಿಲ್ಲ. ಕೇಂದ್ರವನ್ನು ಪ್ರತಿನಿಧಿಸುವ ಸಚಿವರಾಗಲಿ, ಪಕ್ಷದ ಅಧ್ಯಕ್ಷರಾಗಲಿ ಸಂತ್ರಸ್ತರ ವಿಷಯದಲ್ಲಿ ಕಾಳಜಿ ತೋರದೆ ಇರುವುದು ದುರದೃಷ್ಟಕರ ಎಂದರು.
ಶೆಡ್ ನಿರ್ಮಾಣದ ಪಟ್ಟಿ ಬಿಡುಗಡೆ ಮಾಡಲಿ:
ಮನೆಗಳನ್ನು ಕಳೆದುಕೊಂಡ ನಿರಾತರಿಗೆ ಬಾಗಲಕೋಟೆ ಜಿಲ್ಲೆಯಲ್ಲಿ 303 ಶೆಡ್ ಗಳನ್ನು ನಿರ್ಮಾಣ ಮಾಡಿಕೊಟ್ಟಿರುತ್ತೇವೆ ಮತ್ತು ಇದರ ನಿರ್ಮಾಣಕ್ಕೆ ಆದ ಖರ್ಚು 4.80 ಕೋಟಿ ಎಂದು ಹೇಳಲಾಗುತ್ತಿದೆ, ಜಿಲ್ಲೆಯ ಯಾವ ತಾಲೂಕಿನ ಯಾವ ಗ್ರಾಮಗಳಲ್ಲಿ ಎಷ್ಟೆಷ್ಟು ಶೆಡ್ ಗಳ ನಿರ್ಮಾಣವಾಗಿವೆ ಎಂಬುದರ ಬಗ್ಗೆ ಪಟ್ಟಿ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಯುಥ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ ಪಾಟೀಲ, ಚಿನ್ನು ಅಂಬಿ, ಬಸು ಕುಲಕುಟಿ, ಬಾಲಪ್ಪ ಹುಂಡಿ, ರಮೇಶ ತೇಲಿ, ಸಚಿನ ಕನಕರಡ್ಡಿ, ಸೂರಜ್ ಅವಟಿ, ನಿಸ್ಸಾರ ಪಟ್ಟೆವಾಲ್, ಪ್ರಕಾಶ ಮಾಂಗ, ಆರಿಫ್ ಮೋಮಿನ್, ಸದಾಶಿವ ದೇಸಾಯಿ, ಕುಮಾರ ಮಿರ್ಜಿ, ನಿಂಗು ಮಂಟೂರ, ರಂಗು ಮಲಕನ್ನವರ ಉಪಸ್ಥತರಿದ್ದರು.