ಮಕ್ಕಳಿಗಾಗಿ ಮಕ್ಕಳಾದ ಟೀಚರ್ಸ್: ಹೀಗೊಂದು ವಿಶೇಷ ಮಕ್ಕಳ ದಿನಾಚರಣೆ!
ಮಕ್ಕಳಿಗಾಗಿ ರ‍್ಯಾಂಪ್‌ವಾಕ್ ಮಾಡಿದ ಗುರುಗಳು| ವಿಭಿನ್ನ ಬಗೆಯ ವೇಷ. ಭೂಷಣಗಳಿಂದ ಮಕ್ಕಳನ್ನು ರಂಜಿಸಿದ ಗುರುಗಳು| ಗುರುಗಳ ರ‍್ಯಾಂಪ್‌ವಾಕ್ ಕಂಡು ಚಪ್ಪಾಳೆ ತಟ್ಟಿ ಕೇಕೆ ಹಾಕಿದ ಮಕ್ಕಳು| ಕಿಡ್‌ಜೀ ಸ್ಕೂಲ್ & ರ‍್ಯಾಪಲ್ ಸ್ಕೂಲ್ ಸೇರಿದಂತೆ ಹಲವೆಡೆ ಮಕ್ಕಳ ದಿನಾಚರಣೆ| ಬಾಗಲಕೋಟೆ ನಗರದ ವಿವಿಧ ಶಾಲೆಗಳಲ್ಲಿ ನಡೆದ ಮಕ್ಕಳ ದಿನಾಚರಣೆ|
ಮಲ್ಲಿಖಾರ್ಜುನ ಹೊಸಮನಿ
ಬಾಗಲಕೋಟೆ(ನ.14): ಸಾಮಾನ್ಯವಾಗಿ ಗುರುಗಳನ್ನು ಮೆಚ್ಚಿಸಲು ಮಕ್ಕಳು ಮಿಮಿಕ್ರಿ ಮಾಡೋದು ಸಾಮಾನ್ಯ. ಆದರೆ ಇಲ್ಲಿ ಮಾತ್ರ ಮಕ್ಕಳನ್ನು ಮೆಚ್ಚಿಸಲು ಗುರುಗಳು ಇನ್ನಿಲ್ಲದ ಕಸರತ್ತು ನಡೆಸಿದ್ದರು.
ಹೀಗೆ ನೆಹರು ಭಾವಚಿತ್ರಕ್ಕೆ ಕೈಮುಗಿದು ನಿಂತಿರುವ ಪುಟಾಣಿ ಮಕ್ಕಳು, ಇತ್ತ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ಮಕ್ಕಳು, ಅತ್ತ ಮಕ್ಕಳ ಜೊತೆ ಮಕ್ಕಳಗಾಗಿಯೇ ರ‍್ಯಾಂಪ್‌ವಾಕ್ ಮೇಲೆ ಹೆಜ್ಜೆ ಹಾಕುತ್ತಿರುವ ಗುರುಗಳು, ಈ ದೃಶ್ಯ ವಿವಿಧ ಶಾಲೆಗಳಲ್ಲಿ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ.
"
ನಗರದ ಕಿಡ್‌ಜಿ ಮತ್ತು ರ‍್ಯಾಫಲ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಇವತ್ತು ವಿಶೇಷ ಮಕ್ಕಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮಕ್ಕಳನ್ನು ರಂಜಿಸಲು ಸ್ವತ: ಶಿಕ್ಷಕರೇ ದೇಶದ ಐಕ್ಯತೆಯನ್ನು ಸಾರುವ ವಿಭಿನ್ನ ದೇಶಿಯ ಉಡುಪು ತೊಟ್ಟು ರ‍್ಯಾಂಪ್‌ವಾಕ್ ಮಾಡಲು ಮುಂದಾದರು.
ಇತ್ತ ಮಕ್ಕಳಿಗೆ ಮೊದಲು ಡ್ಯಾನ್ಸ್ ಮೂಲಕ ಆಟೋಟಗಳನ್ನು ನಡೆಸಿದ ಗುರುಳು ಕೊನೆಯಲ್ಲಿ ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ ಇತ್ತ ಶಾಲಾ ಮಕ್ಕಳು ಕೇಕೆ ಹಾಕಿ ಚಪ್ಪಾಳೆ ತಟ್ಟಿ ಕುಣಿದು ಕುಪ್ಪಳಿಸಿದರು.
"
ಮಕ್ಕಳ ದಿನಾಚರಣೆ ನಿಮಿತ್ಯ ನಮ್ಮನ್ನು ರಂಜಿಸಲು ನಮ್ಮ ಗುರುಗಳು ಈ ರೀತಿಯ ವಿಭಿನ್ನ ದೇಶಿಯ ವೇಷಭೂಷಣ ತೊಟ್ಟಿದ್ದು ಖುಷಿಯಾಗಿದೆ ಎಂದು ಶಾಲಾ ಮಕ್ಕಳು ಸಂತಸ ಪಟ್ಟರು.
ಇನ್ನು ವಿಶೇಷ ಎಂದರೆ ಲಂಬಾಣಿ, ಕೊಡವ ಸಂಪ್ರದಾಯ ಬಟ್ಟೆಗಳು, ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮಿಯರ ಉಡುಪು ಆಚಾರ ವಿಚಾರ ಸೇರಿದಂತೆ ವಿಭಿನ್ನ ಬಗೆಯ ಉಡುಪು ತೊಟ್ಟು ಗುರುಗಳು ಗಮನ ಸೆಳೆದರು.
"
ಇನ್ನು ಮಕ್ಕಳಂತೂ ಇಂದು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಕಲರ್ ಕಲರ್ ಬಟ್ಟೆ ತೊಟ್ಟು ಫುಲ್ ಎಂಜಾಯ್ ಮೂಡ್‌ನಲ್ಲಿದ್ದರು. ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ ಆ ಮಕ್ಕಳ ನಗು ಎಂತವರಲ್ಲೂ ಸಂತಸ ತರುವಂತೆ ಮಾಡಿತ್ತು.
ಈ ಬಾರಿ ಮಕ್ಕಳಿಗಾಗಿಯೇ ಗುರುಗಳೆಲ್ಲಾ ಸೇರಿ ವಿಭಿನ್ನ ರ‍್ಯಾಂಪ್‌ವಾಕ್ ಮಾಡಿದ್ದೇವೆ. ಅವರಿಗಾಗಿ ವಿವಿಧ ಆಟೋಟ ಹಮ್ಮಿಕೊಂಡಿದ್ದೇವೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ. ಹೇಳಿದರು.
"
ಒಟ್ಟಿನಲ್ಲಿ ನಾಡಿನಾದ್ಯಂತ ಇಂದು ಜವಾಹರಲಾಲ ನೆಹರೂ ಅವರ ಜನ್ಮದಿನಾಚರಣೆಯನ್ನ ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡುತ್ತಿರುವ ಬೆನ್ನಲ್ಲೆ ಮುಳುಗಡೆ ನಗರಿ ಬಾಗಲಕೋಟೆಯಲ್ಲಿ ಮಕ್ಕಳಿಗಾಗಿ ಶಿಕ್ಷಕರೇ ವಿಶೇಷ ವೇಷಭೂಷಣ ತೊಟ್ಟು ಮಕ್ಕಳ ಸಂತಸಕ್ಕೆ ಕಾರಣವಾಗಿದ್ದು ಮಾತ್ರ ಹೆಮ್ಮೆ ತರುವಂತಹದ್ದು.