'ಕೇಂದ್ರಕ್ಕೆ ಮಾತೃ ಹೃದಯವೇ ಇಲ್ಲ ಎಂದ ಮಾಜಿ ಸ್ಪೀಕರ್'
ನೆರೆ ಸಂತ್ರಸ್ತರಿಗೆ ಪರಿಹಾರ ಅನುದಾನ ನೀಡುವಲ್ಲಿ ಕೇಂದ್ರ ತಾರತಮ್ಯಕ್ಕೆ ಮಾಡುತ್ತಿದೆ ಎಂದ ರಮೇಶ ಕುಮಾರ| ಕಾಂಗ್ರೆಸ್‌ನಲ್ಲಿ ಹೊಸ ಕಾಂಗ್ರೆಸ್ ಹಳೇ ಕಾಂಗ್ರೆಸ್ ಎಂಬುವುದು ಇಲ್ಲ| ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡವರೆಲ್ಲರೂ ಕಾಂಗ್ರೆಸ್ಸಿಗರೆ| ಗಾಂಧೀಜಿ ಕೊಂದವರು ನನ್ನ ಬಿಟ್ಟಾರೇ?| ಮಾಧ್ಯಮಗಳ ಕತ್ತು ಹಿಚುಕುವ ಕಾರ್ಯ ಸರ್ಕಾರ ಮಾಡುತ್ತಿದೆ| ಕಾಶ್ಮೀರದ ಪ್ರತಿಬಿಂಬವೇ ಕರ್ನಾಟಕ ವಿಧಾನಸಭೆ|
ಬಾಗಲಕೋಟೆ(ಅ.14): ಕೇಂದ್ರ ಸರ್ಕಾರಕ್ಕೆ ತಾಯಿ ಹೃದಯವೇ ಇಲ್ಲ. ಇನ್ನು ಮಲತಾಯಿ ಧೋರಣೆ ತಾನೆ ಎಲ್ಲಿಂದ ಬರುತ್ತದೆ ಎಂದು ರಾಜ್ಯ ವಿಧಾನಸಭೆ ಮಾಜಿ ಸ್ಪೀಕರ ರಮೇಶ ಕುಮಾರ ಅವರು ಅಭಿಪ್ರಾಯಪಟ್ಟಿದ್ದಾರೆ.
ಅವರು ಭಾನುವಾರ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ವಿಜಯಪುರ ಜಿಲ್ಲೆಗೆ ಹೋಗುವಾಗ ಮಾರ್ಗ ಮಧ್ಯೆ ಬಾಗಲಕೋಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲತಾಯಿ ಮಕ್ಕಳನ್ನು ಮನೆಯಲ್ಲಾದರೂ ಇಟ್ಟುಕೊಳ್ಳುತ್ತಾರೆ. ಆದರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಧೋರಣೆ ಅದಕ್ಕಿಂತ ತೀರಾ ಅದ್ವಾನ ಎಂದ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಲ್ಲಿ ಹೊಸ ಕಾಂಗ್ರೆಸ್ ಹಳೇ ಕಾಂಗ್ರೆಸ್ ಎಂಬುವುದು ಇಲ್ಲ. ಇರುವುದು ಒಂದೇ ಕಾಂಗ್ರೆಸ್. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ನಾಯಕತ್ವ ಒಪ್ಪಿಕೊಂಡು ಬರುವವರೆಲ್ಲರು ಕಾಂಗ್ರೆಸ್‌ನವರೇ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ವಿಚಾರವಾಗಲಿ, ಮೂಲ ಹಾಗೂ ವಲಸಿಗರು ಅನ್ನುವ ವಿಚಾರವಾಗಲಿ ಬರುವುದಿಲ್ಲ ಎಂದು ಭಗವದ್ಗೀತೆಯ ಶ್ಲೋಕವನ್ನು ಪ್ರಸ್ತಾಪಿಸಿ ಆಕಾಶದಿಂದ ಬೀಳುವ ಎಲ್ಲ ಮಳೆ ಹನಿಗಳು ಸಾಗರವನ್ನೇ ಸೇರುತ್ತವೆ. ಹಾಗೆ ಕೊನೆಯ ಎಲ್ಲ ನಮಸ್ಕಾರಗಳು ಶ್ರೀ ಕೃಷ್ಣನಿಗೆ ಸಲ್ಲುತ್ತವೆ. ಹಾಗೆಯೇ ಕಾಂಗ್ರೆಸ್ ಪಕ್ಷದ ಸ್ಥಿತಿ ಎಂದು ತಮ್ಮದೆಯಾದ ಶೈಲಿಯಲ್ಲಿ ವಿಶ್ಲೇಷಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಒಂದು ಸಾರಿ ಕಾಂಗ್ರೆಸ್‌ಗೆ ಕಾಲಿಟ್ಟ ಮೇಲೆ ಹಳೆಯದು ಹೊಸದು ಎಂಬುದು ಇಲ್ಲ. ಇವೆಲ್ಲ ಭ್ರಮೆಗಳಷ್ಟೇ ಎಂದು ಹೇಳುವ ಮೂಲಕ ಮೂಲ ಹಾಗೂ ವಲಸೆ ಕಾಂಗ್ರೆಸಿಗರ ನಡುವೆ ಸದ್ಯ ನಡೆದಿರುವ ಪರ ವಿರೋಧ ಲಾಭಿಗಳಿಗೆ ಸೂಕ್ಷ್ಮವಾಗಿ ರಮೇಶ ಕುಮಾರ ಉತ್ತರಿಸಿದರು.
ಅನರ್ಹ ಶಾಸಕರ ವಿಚಾರದಲ್ಲಿ ನನ್ನ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳಿಗೆ ಉತ್ತರಿಸಿದ ಅವರು ನಾನು ಸಂವಿಧಾನಕ್ಕೆ ತಲೆಬಾಗಿ ನಡೆದುಕೊಳ್ಳುವ ಮನುಷ್ಯ. ಪ್ರಪಂಚದಲ್ಲಿ ಎಲ್ಲಿಯೂ ಇರದಂತಹ ಸಂವಿಧಾನ ನಮ್ಮ ದೇಶದಲ್ಲಿ ಇದೆ. ಸಂವಿಧಾನದಲ್ಲಿ 10ನೇ ಶೆಡ್ಯೂಲ್ ಪ್ರಕಾರ ಒಬ್ಬ ಮನುಷ್ಯ ಒಂದು ಪಕ್ಷದಡಿ ಆಯ್ಕೆಯಾಗಿದ್ದರೆ ಆ ಪಕ್ಷದ ಆದೇಶಗಳನ್ನು ಉಲ್ಲಂಘನೆ ಮಾಡಿದರೆ ಪೀಠಾಧಿಶನಿಗೆ ದೂರು ಬಂದಾಗ ವಿಚಾರಣೆ ನಡೆಸಿ ಸಾಕ್ಷಿಯಾದರಿಸಿ ಶಿಕ್ಷೆ ನೀಡಬೇಕಾದದ್ದು ಕರ್ತವ್ಯ, ನಾನು ನನ್ನ ಕರ್ತವ್ಯವನ್ನು ಸಂವಿಧಾನ ಪ್ರಕಾರವೇ ಮಾಡಿದ್ದೇನೆ. ಅದರಿಂದ ಯಾರಿಗೆ ಅರ್ಹತೆ ಬಂದಿದೆ ಯಾರಿಗೆ ಅನರ್ಹತೆ ಬಂದಿದೆ ನನಗೆ ಗೊತ್ತಿಲ್ಲ ಎಂದರಲ್ಲದೆ ನಮ್ಮಲ್ಲಿ ಅಸ್ಪೃಶ್ಯತೆ ನಿವಾರಣೆ ಕಾಯ್ದೆ ಇದೆ. ಹಾಗಂತ ಅಸ್ಪೃಶ್ಯತೆ ಸಂಪೂರ್ಣ ಹೊರಟು ಹೋಗಿದೆಯೇ? ಅದೇ ರೀತಿ ನಮಗೆ ಕಾಣದ ರೀತಿ, ಗೋಚರಿಸದ ರೀತಿಯಲ್ಲಿ ಇನ್ನೂ ಇದೆ ಎಂದು ಹೇಳಿದರು.
ಗಾಂಧಿ ಕೊಂದವರು ನನ್ನ ಬಿಟ್ಟಾರೆ?
ತಮ್ಮ ವಿರುದ್ಧದ ಬಿಜೆಪಿಯ ಟೀಕೆ ಟಿಪ್ಪಣೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ರಮೇಶ ಕುಮಾರ ಅವರು ಗಾಂಧೀಜಿ ಅವರಿಗೆ ಒಂದು ಕೋಲಿನಿಂದ ಹೊಡೆದಿದ್ದರೆ ಸತ್ತು ಹೋಗಿಬಿಡುತ್ತಿದ್ದರು. ಆದರೆ ಅವರಿಗೆ ನಮಿಸುವ ನೆಪದಲ್ಲಿ ಗುಂಡಿಟ್ಟು ಕೊಲೆ ಮಾಡಿರುವ ಜನ ಇನ್ನು ನನಗೆ ಬಿಡುತ್ತಾರಾ. ಎಲ್ಲಾ ಕಾಲಕ್ಕೂ ಸರ್ಕಾರ, ವಿರೋಧ ಪಕ್ಷ ಹೊರತು ಪಡಿಸಿ ಹೊರಗೆ ಜನತೆ ಇರುತ್ತಾರೆ ಅನ್ನುವದನ್ನು ಮೆರೆಯಬಾರದು. ಅವರು ಯಾರಿಗೂ ಮಾರಾಟವಾಗಿರುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ನೆಪೋಲಿಯನ್ ಹೋಲಿಕೆ:
ಅಧಿವೇಶನದಲ್ಲಿ ಸ್ಪೀಕರ್ ಹೊರಡಿಸಿರುವ ಮಾಧ್ಯಮ ನಿರ್ಬಂಧದ ಕುರಿತು ನೆಪೋಲಿಯನ್ ಹೇಳಿಕೆ ಪ್ರಸ್ತಾಪಿಸಿದ ರಮೇಶ ಕುಮಾರ, ನೆಪೋಲಿಯನ್ ಚಕ್ರವರ್ತಿಯಾಗಿದ್ದರು ಒಂದು ಮಾತನ್ನು ಹೇಳುತ್ತಾನೆ. ಪ್ರೇಮ ಅನ್ನುವುದು ಎರಡು ವಿಭಿನ್ನ ಲಿಂಗಕ್ಕೆ ಸೇರಿದ್ದು, ಸ್ತ್ರೀ ಲಿಂಗ, ಪುಲ್ಲಿಂಗ ಎರಡು ವ್ಯಕ್ತಿ ನಡುವೆ ಪ್ರಾಪ್ತ ವಯಸ್ಸಿಗೆ ಬಂದಾಗ ಖಾಸಗಿಯಾಗಿ ನಡೆಯುವ ವ್ಯವಹಾರ, ಪ್ರೇಮ ವ್ಯವಹಾರ ಹೊರಗಡೆ ಮಾಡಬಾರದು. ಖಾಸಗಿಯಾಗಿಯೇ ಮಾಡಬೇಕು. ಹೀಗಾಗಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೆ ಗುಟ್ಟಾಗಿ ಮಾಡಬಾರದು. ಹೊರಗೆ ಎಲ್ಲರಿಗೂ ಪಾರದರ್ಶಕವಾಗಿ ಎಲ್ಲರಿಗೂ ಗೊತ್ತಾಗುವ ಹಾಗೇ ಮಾಡಬೇಕು. ಇದಕ್ಕಿಂತ ಹೆಚ್ಚಿನ ವಿವರಣೆ ನಾನು ಕೊಡಲಾರೆ ಎಂದರು.
ಮಾಧ್ಯಮ ಕತ್ತು ಹಿಚುಕುವ ಕೆಲಸ:
ಇದು ಜನರ ಬದುಕಿನ ಪ್ರಶ್ನೆ . ಇಲ್ಲಿ ಪಾರದರ್ಶಕವಾಗಿರಬೇಕು. ಮಾಧ್ಯಮಗಳನ್ನು ಹೊರಗಿಟ್ಟಿದ್ದು, ದುರದೃಷ್ಟಕರ, ಸಂವಿಧಾನದಲ್ಲಿ ಮಾಧ್ಯಮಕ್ಕೆ ದೊಡ್ಡ ಪಾತ್ರವಿದೆ. ಮಾಧ್ಯಮಗಳ ಕತ್ತು ಹಿಚುಕಿ ಹಾಕುವ ಪ್ರವೃತ್ತಿ ನಡೆಯುತ್ತಿದೆ. ಕಾಶ್ಮೀರದಲ್ಲಿನ ಪ್ರತಿಬಿಂಬವೇ ಕರ್ನಾಟಕದ ವಿಧಾನಸಭೆ ಎಂದು ತಿಳಿಸಿದ್ದಾರೆ.
ಮಾಜಿ ಡಿಸಿಎಂ ಪರಮೇಶ್ವರ ಪಿಎ ರಮೇಶ ಆತ್ಮಹತ್ಯೆ ಕುರಿತು ಮಾತನಾಡಿ, ಚಿಕ್ಕವಯಸ್ಸಿನ ಹುಡುಗ ನನಗೆ ಪರಿಚಯ ಇದ್ದ ಹುಡುಗ. ಈ ಕುರಿತು ಹೆಚ್ಚಿನ ಮಾಹಿತಿ ನನಗೆ ಇಲ್ಲ. ಅಕಾಲಿಕ ಮರಣಕ್ಕೆ ದುಃಖ ವ್ಯಕ್ತಪಡಿಸುವುದಾಗಿ ಹೇಳಿದರಲ್ಲದೆ ಅಧಿವೇಶನದಲ್ಲಿ ಶಾಸಕರು ಗೈರು ಆಗಿರುವ ಕುರಿತು ಪ್ರತಿಕ್ರಿಯಿಸಿ ಸರ್ಕಾರ ಇರಲು ವಾಸ್ತವ್ಯ, ಪ್ರಯಾಣಕ್ಕೆ ಭತ್ಯೆ, ಸದನಕ್ಕೆ ಬಂದರೆ ಹಣ ನೀಡಿದರೂ ಅಧಿವೇಶನದಲ್ಲಿ ಗೈರು ಆಗುವುದು ದುರದೃಷ್ಟಕರ ಎಂದು ಹೇಳಿದ್ದಾರೆ.