ನೀವು ರಾಜ್ಯಕ್ಕೆ ಸಚಿವರಾ ಬರೀ ಮುಧೋಳಕ್ಕೆ ಮಾತ್ರ ಮಂತ್ರಿಗಳಾ?
ಮುಧೋಳ ಕ್ಷೇತ್ರಕ್ಕೆ ಸೀಮಿತವಾದ ಸಚಿವರು| ಹಿಂದೆ ಪ್ರಭಾವ ಬಳಸಿ ಸಿದ್ದರಾಮಯ್ಯ ಸಚಿವರನ್ನು ಸ್ವಕ್ಷೇತ್ರಕ್ಕೆ ಕರೆದ್ಯೊಯುತ್ತಿದ್ದರು| ಇದೀಗ ಬಿಜೆಪಿ ಸರ್ಕಾರದ ಸಚಿವರು ಮುಧೋಳದತ್ತ ಹೋಗುತ್ತಿದ್ದಾರೆ| ಇತರೆ ತಾಲೂಕಿನ ತತ್ತರಿಸಿರುವ ಪ್ರವಾಹ ಸಂತ್ರಸ್ತರಲ್ಲಿ ಅಸಮಾಧಾನ|
ಈಶ್ವರ ಶೆಟ್ಟರ
ಬಾಗಲಕೋಟೆ[ನ.6]: ರಾಜ್ಯ ರಾಜಕಾರಣದಲ್ಲಿ ಪ್ರಮುಖ ಹುದ್ದೆ ಹೊಂದಿದ್ದ ಜಿಲ್ಲೆ ಮುಖಂಡರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ. ಈ ಮೂಲಕ ಉಳಿದ ತಾಲೂಕಿನ ಸಮಸ್ಯೆಗಳ ಮೇಲೆ ಅಷ್ಟಾಗಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಹೌದು! ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಮೈತ್ರಿ ಪಕ್ಷ ಆಡಳಿತವಿದ್ದಾಗ ಜಿಲ್ಲೆಗೆ ಬರುವ ಎಲ್ಲ ಸಚಿವರನ್ನು ತಮ್ಮ ಕ್ಷೇತ್ರಕ್ಕೆ ಮಾತ್ರ ಕರೆದುಕೊಂಡು ಹೋಗಿ ಅಲ್ಲಿಯ ಸಮಸ್ಯೆಗಳನ್ನು ಹಾಗೂ ಆಗ ಬೇಕಾಗಿರುವ ಅಭಿವೃದ್ಧಿ ಪರ ಕೆಲಸಗಳನ್ನು ಹೇಳಿ ಅನುದಾನ ಪಡೆಯುತ್ತಿದ್ದರು. ಆದರೆ ಈಗ ಬಾಗಲಕೋಟೆ ಜಿಲ್ಲೆಗೆ ಆಗಮಿಸುವ ಸಚಿವರು ಕೇವಲ ಮುಧೋಳ ಕ್ಷೇತ್ರಕ್ಕೆ ಮಾತ್ರ ಹೋಗಿ ಅಭಿವೃದ್ಧಿಗೆ ಅಗತ್ಯ ನೆರವು ನೀಡುತ್ತಿದ್ದಾರೆ ಎಂಬ ಆಪಾದನೆ ಸಾರ್ವತ್ರಿಕವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆರೋಪಕ್ಕೆ ಪುಷ್ಟಿ ಎಂಬಂತೆ ಇತ್ತೀಚಿನ ಪ್ರವಾಹದ ನಂತರ ಜಿಲ್ಲೆಯಲ್ಲಿನ ಸಮಸ್ಯೆ ಪರಿಶೀಲಿಸಲು ಬರುವ ಸಚಿವರು ಮುಧೋಳ ಮತಕ್ಷೇತ್ರಕ್ಕೆ ಸೀಮಿತವಾಗುತ್ತಿದ್ದಾರೆ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಜಿಲ್ಲೆಯ 195 ಗ್ರಾಮಗಳು ಪ್ರವಾಹದಲ್ಲಿ ಬಾಧಿತವಾಗಿ ಲಕ್ಷಾಂತರ ಕುಟುಂಬಗಳು ಬೀದಿಯಲ್ಲಿ ದಿನಗಳನ್ನು ಕಳೆದರೆ ಸಾವಿರಾರೂ ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ಭವಿಷ್ಯತ್ತಿನ ಬದುಕನ್ನು ನೆನೆಸಿಕೊಂಡು ಮತ್ತೆ ಹೊಸ ಜೀವನದ ಕನಸಿನೊಂದಿಗೆ ಹೋರಾಟವನ್ನು ಮುಂದುವರಿಸಿದ್ದು, ಶಾಶ್ವತ ಪುನರ್ವಸತಿಯ ಕನವರಿಕೆಯಲ್ಲಿರುವ ಸಂತ್ರಸ್ತರಿಗೆ ಸರ್ಕಾರ ನೆಪ ಮಾತ್ರದ ಪರಿಹಾರ ಧನ ನೀಡಿ ಕೈತೊಳೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಮುಧೋಳ ಕ್ಷೇತ್ರಕ್ಕೆ ನೀಡುವ ಆದ್ಯತೆ ಬೇರೆಡೆ ಕಾಣುತ್ತಿಲ್ಲ ಎಂಬ ನೋವು ಸಂತ್ರಸ್ತರಲ್ಲಿ ಕಾಡುತ್ತಿದೆ.
ಮುಧೋಳಕ್ಕೆ ಮಾತ್ರ ಇತರೆ ಸಚಿವರು:
ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನಗಳಲ್ಲಿ ಬಹುತೇಕ ದಿನಗಳು ಪ್ರವಾಹ, ನೆರೆ ಅಬ್ಬರ ಮತ್ತು ಸಂತ್ರಸ್ತರ ಪುನರ್ವಸತಿಗಾಗಿ ಸರ್ಕಾರ ಬಹುತೇಕ ಸಮಯವನ್ನು ಕಳೆದಿದೆ. ಆದರೆ, ಈ ಅವಧಿಯಲ್ಲಿ ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ 195 ಗ್ರಾಮಗಳಲ್ಲಿ ಮುಧೋಳ ತಾಲೂಕಿನ ಹತ್ತಾರು ಹಳ್ಳಿಗಳು ಮಾತ್ರ ಘಟಪ್ರಭಾ ಪ್ರವಾಹಕ್ಕೆ ತುತ್ತಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು, ಇತರೆ ತಾಲೂಕುಗಳಾದ ಬಾದಾಮಿ, ಹುನಗುಂದ, ಜಮಖಂಡಿಗೆ ಹೋಲಿಸಿದರೆ ಮುಧೋಳ ತಾಲೂಕು ಪ್ರವಾಹದಿಂದ ತತ್ತರಿಸಿರುವ ಪ್ರಮಾಣ ಕಡಿಮೆ. ಪ್ರವಾಹದ ನಂತರ ಬಿದ್ದ ಮನೆಗಳ ಪರಿಶೀಲನೆ, ಶಿಥಿಲಗೊಂಡ ಶಾಲೆಗಳ ವೀಕ್ಷಣೆ, ಪುನರ್ ನಿರ್ಮಿಸಬೇಕಾದ ಕಟ್ಟಡಗಳ ಪರಿಶೀಲನೆಗೆ ಜಿಲ್ಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವರಾಗಲಿ, ವಸತಿ ಸಚಿವರಾಗಲಿ ಕೇವಲ ಮುಧೋಳಕ್ಕೆ ಮಾತ್ರ ಮೀಸಲಾಗಿರುವುದು ಇತರೆ ತಾಲೂಕಿನ ತತ್ತರಿಸಿರುವ ಪ್ರವಾಹ ಸಂತ್ರಸ್ತರಲ್ಲಿ ಅಸಮಾಧಾನ ಮೂಡಿದೆ.
ಕಳೆದ ತಿಂಗಳು ಭೇಟಿ ನೀಡಿದ್ದ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವರಾದ ಸುರೇಶ ಕುಮಾರ ಅವರು ಮುಧೋಳ ತಾಲೂಕಿನ ಕೆಲವು ಗ್ರಾಮಗಳಿಗೆ ಮಾತ್ರ ಭೇಟಿ ನೀಡಿ ಪ್ರವಾಹದಿಂದಾದ ಶಾಲೆಗಳ ಹಾನಿ ಕುರಿತು ಪರಿಶೀಲಿಸಿದರು. ಮಂಗಳವಾರ ವಸತಿ ಸಚಿವರಾದ ವಿ.ಸೋಮಣ್ಣ ಅವರು ಸಹ ಇದೇ ಮತಕ್ಷೇತ್ರದ ಕೆಲವು ಗ್ರಾಮಗಳಿಗೆ ಭೇಟಿ ನೀಡಿದರು. ಇದನ್ನು ಗಮನಿಸಿದರೆ ಸಹಜವಾಗಿ ಉಳಿದ ಕ್ಷೇತ್ರದ ಸಂತ್ರಸ್ತರಲ್ಲಿ ನೋವು ತರಿಸಿದೆ.
ಏನೇ ಆಗಲಿ ಸಚಿವರು ಕೇವಲ ಮುಧೋಳ ಮತಕ್ಷೇತ್ರದ ಆದ್ಯತೆ ಜೊತೆಗೆ ಇತರೆ ಕ್ಷೇತ್ರಗಳಿಗೂ ಭೇಟಿ ನೀಡಿ ಪ್ರವಾಹದಿಂದಾಗಿರುವ ಹಾನಿಯ ಗಂಭೀರತೆಯನ್ನು ಪರಿಶೀಲಿಸಿ ಪರಿಹಾರ ಒದಗಿಸಿದಾಗ ಮಾತ್ರ ಸಚಿವರಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂಬ ಮಾತುಗಳು ಜನಸಾಮಾನ್ಯರಿಂದ ಕೇಳಿ ಬರುತ್ತಿದೆ. ಅದನ್ನು ಬರುವ ದಿನಗಳಲ್ಲಾದರೂ ಸಚಿವರು ಮಾಡಲಿ ಎಂಬುದು ಸಂತ್ರಸ್ತರ ಭಾವನೆಯಾಗಿದೆ.
ಸಿದ್ದು ದಾರಿ ಪುನರಾವರ್ತನೆ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದಲ್ಲಿ ತಾವು ಪ್ರತಿನಿಧಿಸುವ ಬಾದಾಮಿ ಮತಕ್ಷೇತ್ರದಲ್ಲಿ ಎಲ್ಲ ಸಚಿವರನ್ನು ಬಾದಾಮಿಗೆ ಕರೆದುಕೊಂಡು ಹೋಗಿ ಸಾಕಷ್ಟು ಟೀಕೆಗೊಳಗಾಗಿದ್ದರು. ಅಂದು ಸಚಿವರಾದ ಜಮೀರ, ಯು.ಟಿ.ಖಾದರ, ಶಂಕರ, ಸಾ.ರಾ.ಮಹೇಶ ಸೇರಿದಂತೆ ಇತರ ಸಚಿವರನ್ನು ಬಾದಾಮಿಗೆ ಕರೆಸಿ ಪ್ರಮುಖ ಕೆಲಸ ಕಾರ್ಯಗಳನ್ನು ಮಾಡಿಸಿಕೊಂಡಿದ್ದರು. ಇದೀಗ ಅದೇ ಸಂಪ್ರದಾಯ ಮುಧೋಳ ತಾಲೂಕಿನಲ್ಲಿ ಮುಂದುವರಿದಿದೆ ಎಂಬ ಟೀಕೆ ಶುರವಾಗಿದೆ. ಒಂದು ರೀತಿ ಎಲ್ಲ ಸಚಿವರ ಕಾರು ಮುಧೋಳದತ್ತ ಚಲಿಸುತ್ತಿವೆ ಎನ್ನುವಂತಾಗಿದೆ.