ಬಾಗಲಕೋಟೆ(ಅ.11): ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಖಜಾನೆ ಕಚೇರಿಯ ಮೇಲೆ ಗುರುವಾರ ದಾಳಿ ನಡೆಸಿರುವ ಎಸಿಬಿ ಅ​ಧಿಕಾರಿಗಳು ಜಿಲ್ಲಾ ಖಜಾನಾಧಿ​ಕಾರಿ ಮಂಜುನಾಥ ಸ್ವಾಮಿ ಸೇರಿದಂತೆ ಇತರೆ ಸಿಬ್ಬಂದಿ ಕಡಿತಗಳನ್ನು ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರಿಂದ ನಿರಂತರ ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಎಸಿಬಿ ಅ​ಧಿಕಾರಿಗಳು ಅಪಾರ ಪ್ರಮಾಣದ ಹಣವನ್ನು ಸಹ ವಶಪಡಿಸಿಕೊಂಡಿದ್ದು, ಕಡತ ವಿಲೇವಾರಿಗಾಗಿ ಹಾಗೂ ಸಾರ್ವಜನಿಕರ ಕೆಲಸಗಳಿಗೆ ಹಣ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ದಾಳಿಗೆ ವಿಶೇಷ ಮಹತ್ವ ಬಂದಿದೆ. ಮಧ್ಯಾಹ್ನ ವೇಳೆಗೆ ಜಿಲ್ಲಾ ಖಜಾನೆ ಒಳಹೊಕ್ಕ ಎಸಿಬಿ ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪೂರ, ಇನ್ಸ್‌ಪೆಕ್ಟರ್‌ ಮಠಪತಿ ನೇತೃತ್ವದ ತಂಡ, ಖಜಾನೆ ಅ​ಧಿಕಾರಿಗಳ ಪ್ರತಿ ಕಡತಗಳನ್ನು ಪರಿಶೀಲಿಸುತ್ತಿದ್ದು ಸಂಜೆಯವರೆಗೂ ಮುಂದುವರಿದಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲಾ ಖಜಾನೆಯಲ್ಲಿನ ಭ್ರಷ್ಟಾಚಾರದ ಕುರಿತು ಕಳೆದ ಹಲವು ದಿನಗಳಿಂದ ದೂರುಗಳು ಕೇಳಿ ಬಂದಿದ್ದರಿಂದ ವಿಶೇಷವಾಗಿ ಪಿಂಚಣಿ, ವೇತನ ತಾರತಮ್ಯ ಸೇರಿದಂತೆ ಹಲವು ಪ್ರಕರಣಗಳಲ್ಲಿ ಖಜಾನೆಯ ಸಿಬ್ಬಂದಿ ಸಂಬಂ​ಧಿಸಿದವರಿಗೆ ನೀಡುತ್ತಿರುವ ಕಿರುಕುಳ ಅತಿಯಾಗಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಎಸಿಬಿ ದಾಳಿ ವಿಶೇಷವಾಗಿದೆ.

1,29,700 ಹಣ ವಶ:

ಎಸಿಬಿ ದಾಳಿಯ ವೇಳೆ ಖಜಾನೆ ಇಲಾಖೆಯ 25 ಸಿಬ್ಬಂದಿ ವಿಚಾರಣೆ ಹಾಗೂ ಅವರ ಬಳಿ ಇರುವ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, 1,29,700 ಒಟ್ಟು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಅ​ಧಿಕಾರಿ ಮಠಪತಿ ತಿಳಿಸಿದ್ದಾರೆ.

ವಶಪಡಿಸಿಕೊಂಡ ಹಣಕ್ಕೆ ಸೂಕ್ತ ದಾಖಲೆ ನೀಡುವುದು ಸೇರಿದಂತೆ ಹಲವು ನಿಯಮಗಳ ಪಾಲನೆ ಕುರಿತು ಸಿಬ್ಬಂದಿಯಿಂದ ಸ್ಪಷ್ಟೀಕರಣ ಕೇಳಲಾಗುತ್ತಿದ್ದು, ಸೂಕ್ತ ದಾಖಲೆ ನೀಡದೆ ಹೋದರೆ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.