ರಾಜ್ಯದಲ್ಲೇ ಮೊದಲು: ಬಾಗಲಕೋಟೆ ಸಿಇಒ ಕಚೇರಿಗೆ ಸಿಸಿಟಿವಿ ಕಣ್ಗಾವಲು!

20 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ| ಕಡತಗಳಿಗೆ ಬಾರ್‌ಕೋಡ್‌ ಅಳವಡಿಸಲು ಸಾಫ್ಟವೇರ್‌ ಸಿದ್ಧತೆಯಲ್ಲಿ ಜಿಪಂ| ಜಿಪಂ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಕ್ರಮ| ಸಿಇಒ ಕಚೇರಿ ವ್ಯಾಪ್ತಿಯಲ್ಲಿಯ ಎಲ್ಲ ವಿಭಾಗಗಳ ದಿನನಿತ್ಯದ ಕಾರ್ಯಕಲಾಪಗಳನ್ನು ನೇರವಾಗಿ ತಮ್ಮ ಕಚೇರಿಯಿಂದ ವೀಕ್ಷಿಸಲು, ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಇದರಿಂದ ಅನುಕೂಲವಾಗಲಿದೆ| ಕಚೇರಿಗೆ ಅಹವಾಲು ಸಮಸ್ಯೆಗಳನ್ನು ಹೊತ್ತು ತರುವ ಸಾರ್ವಜನಿಕರ ಪ್ರಕರಣಗಳು, ಕಚೇರಿ ಕಡತಗಳ ವಿಳಂಬ, ಕೇಸ್‌ ವರ್ಕರ್‌ ಕಿರಿಕಿರಿ ತಪ್ಪಿಸಲು ಸಹಕಾರಿ|

20 CCTV Will Be Install in Bagalakot JP Office

ಬಾಗಲಕೋಟೆ(ಅ.17): ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿ​ಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಪಾರದರ್ಶಕತೆ ತರಲು ವಿವಿಧ ವಿಭಾಗಗಳ ಕಾರ್ಯವೈಖರಿ, ಆಡಳಿತ ಕಾರ್ಯದ ಕಡತಗಳನ್ನು ನೇರವಾಗಿ ವೀಕ್ಷಿಸಲು ಒಟ್ಟು 20 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರು ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಪಂ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಈ ಕ್ರಮ ಅನುಸರಿಸಲಾಗುತ್ತಿದೆ. ಸಿಇಒ ಕಚೇರಿ ವ್ಯಾಪ್ತಿಯಲ್ಲಿಯ ಎಲ್ಲ ವಿಭಾಗಗಳ ದಿನನಿತ್ಯದ ಕಾರ್ಯಕಲಾಪಗಳನ್ನು ನೇರವಾಗಿ ತಮ್ಮ ಕಚೇರಿಯಿಂದ ವೀಕ್ಷಿಸಲು, ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಇದರಿಂದ ಅನುಕೂಲವಾಗಲಿದೆ. ಕಚೇರಿಗೆ ತಮ್ಮ ಅಹವಾಲು ಸಮಸ್ಯೆಗಳನ್ನು ಹೊತ್ತು ತರುವ ಸಾರ್ವಜನಿಕರ ಪ್ರಕರಣಗಳು, ಕಚೇರಿ ಕಡತಗಳ ವಿಳಂಬ, ಕೇಸ್‌ ವರ್ಕರ್‌ ಕಿರಿಕಿರಿ ತಪ್ಪಿಸಲು ಸಹಕಾರಿಯಾಗಲಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿಇಒ ಕಚೇರಿಯಲ್ಲಿಯೂ ಕೆಲಸದ ವೇಳೆಯಲ್ಲಿ ತಮ್ಮ ಕೆಲಸ ಕಾರ್ಯದ ನೇರ ಪ್ರಸಾರವನ್ನು ಸಹ ಕಾರಿಡಾರ್‌ನ ಸ್ಕ್ರೀನ್‌ನಲ್ಲಿ ಸಾರ್ವಜನಿಕರು ಹಾಗೂ ಸಿಬ್ಬಂದಿ ನೇರವಾಗಿ ವೀಕ್ಷಿಸಬಹುದಾಗಿದೆ. ಸಿಇಒ ಕಚೇರಿ ಆಪ್ತ ಶಾಖೆ, ಉಪಕಾರ್ಯದರ್ಶಿ ಕಚೇರಿ, ಯೋಜನಾ ನಿರ್ದೇಶಕರ ಕಚೇರಿ, ಆಡಳಿತ ವಿಭಾಗ, ಯೋಜನಾ ವಿಭಾಗ, ಲೆಕ್ಕಪತ್ರ ಶಾಖೆ ಹಾಗೂ ಕಾರಿಡಾರ್‌ ಸೇರಿದಂತೆ ವಿವಿಧ ಪ್ರಮುಖ ಕೇಸ್‌ ವರ್ಕರ್‌ಗಳ ವಿಭಾಗಗಳಲ್ಲಿಯೂ ಸೇರಿ ಒಟ್ಟು 20 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಇವುಗಳನ್ನು ತಮ್ಮ ಕಚೇರಿಯಿಂದ ವೀಕ್ಷಣೆ ಹಾಗೂ ನಿರ್ವಹಣೆ ಮಾಡಲಾಗುವುದೆಂದರು.

ರಾಜ್ಯದಲ್ಲೇ ಪ್ರಥಮ ಪ್ರಯೋಗ:

ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ 28 ಇಲಾಖೆಗಳು ಒಳಪಡಲಿದ್ದು, ಗ್ರಾಪಂ, ತಾಪಂ ಹಾಗೂ ಜಿಲ್ಲಾ ಪಂಚಾಯತಿನ ಎಲ್ಲ ಇಲಾಖೆಗಳ ಪ್ರಮುಖ ಕಡತಗಳಿಗೆ ಬಾರ್‌ಕೋಡ್‌ ಅಳವಡಿಸಲಾಗುತ್ತಿದೆ. ಇದರಿಂದಾಗಿ ಅನುಮೋದಿಸಲ್ಪಟ್ಟ ಕಡತಗಳು ಕಾರಿಡಾರ್‌ನ ಸ್ಕ್ರೀನ್‌ನಲ್ಲಿ ಪ್ರದರ್ಶನಗೊಳ್ಳಲಿವೆ. ಆಡಳಿತ ಸುಸೂತ್ರವಾಗಿ ನಡೆಯಲು ಇದರಿಂದ ಸಹಕಾರಿಯಾಗಲಿದೆ. ರಾಜ್ಯದಲ್ಲಿಯೇ ಇದೊಂದು ಮಾದರಿ ಪ್ರಯೋಗವಾಗಿದೆ. ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕಡತಗಳ ಬಾರ್‌ಕೋಡ್‌ ಅಳವಡಿಸುವ ಸಾಫ್ಟವೇರ್‌ವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಪಂನ ಒಳಾಡಳಿತಕ್ಕೆ ಹೊಸರೂಪ ನೀಡಲಾಗುತ್ತಿದೆ ಎಂದು ಮಾನಕರ ತಿಳಿಸಿದರು.

ಪ್ರತಿಯೊಂದು ಕಡತಕ್ಕೆ ಬಾರ್‌ಕೋಡ್‌, ಕಡತದ ವಿಷಯ, ನಂಬ​ರ್ಸ್ ಅಳವಡಿಸಲಾಗುತ್ತಿದೆ. ಯಾವ ಕಡತ ಸಹಿಯಾಗಿದೆ ಎಂಬುದನ್ನು ಅಧಿ​ಕಾರಿಗಳು ಕಾರಿಡಾರ್‌ನ ಸ್ಕ್ರೀನ್‌ನಲ್ಲೇ ವೀಕ್ಷಿಸಬಹುದಾಗಿದೆ. ಇದರಿಂದ ಅ​ಧಿಕಾರಿಗಳು ಕಡತ ಸಹಿಗಾಗಿ ಕಾಯಬೇಕಾಗುತ್ತದೆಯೆಂಬ ಆರೋಪವನ್ನು ಸರಿಪಡಿಸಬಹುದು ಎಂದು ತಿಳಿಸಿದರು.

ಪೇಪರ್‌ಲೆಸ್‌ ಇ ಆಫೀಸ್‌:

ಪೇಪರ್‌ ಲೇಸ್‌ ಇ ಆಫೀಸ್‌ಗೆ ಕಳೆದೆರಡು ತಿಂಗಳಿನಿಂದಲೇ ಚಾಲನೆ ನೀಡಿದ್ದು, ಈ ತಿಂಗಳೊಳಗಾಗಿ ಸಂಪೂರ್ಣವಾಗಿ ಇ ಕಚೇರಿಯಾಗಿಸಲಾಗುವುದು. ಸದ್ಯ ಪ್ರತಿ ದಿನ 3-4 ಕಡತಗಳನ್ನು ಇ ಕಚೇರಿಯಲ್ಲೇ ವ್ಯವಹರಿಸಲಾಗುತ್ತಿದ್ದು, ನುರಿತ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ತಮ್ಮ ಪ್ರವಾಸದ ವೇಳೆ ಬೇರೆ ಕಡೆಯಿಂದಲೂ ಸಹ ಗೃಹಕಚೇರಿಯಿಂದಲೂ ಕಡತ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios