ಹಿರಿಯ ಪತ್ರಕರ್ತ ಜೋಗಿಗೆ ಭಾನುವಾರ ವಡ್ಡರ್ಸೆ ಪ್ರಶಸ್ತಿ ಪ್ರದಾನ
- ಜೋಗಿ ವೃತ್ತಿಯಲ್ಲಿ ಪತ್ರಕರ್ತ; ಕತೆ, ಕಾದಂಬರಿ, ಅಂಕಣ ಬರಹ, ಸಾಹಿತ್ಯ ವಿಮರ್ಶೆ, ಧಾರಾವಾಹಿ-ಸಿನಿಮಾಗಳಿಗೆ ಸಾಹಿತ್ಯ, ಚಿತ್ರಕತೆ, ಸಂಭಾಷಣೆಗಳಿಗೆ ಪ್ರಸಿದ್ಧ
- ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ; ಸಾಹಿತಿ ಜಯಂತ್ ಕಾಯ್ಕಿಣಿ ಅವರಿಂದ ಪ್ರದಾನ
ಉಡುಪಿ: ಹಿರಿಯ ಪತ್ರಕರ್ತ, ಸಾಹಿತಿ, ಕನ್ನಡಪ್ರಭದ ಪುರವಣಿ ಸಂಪಾದಕ ಜೋಗಿಯವರಿಗೆ ಇದೇ ಭಾನುವಾರ ‘ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ’ಪ್ರದಾನ ಮಾಡಲಾಗುತ್ತಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೂಡುಬಿದಿರೆ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಉಡುಪಿ ಶಾಸಕ ಕೆ.ರಘುಪತಿ ಭಟ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಉದ್ಯಮಿಗಳಾದ ಆನಂದ ಸಿ. ಕುಂದರ್, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಸುಗ್ಗಿ ಸುಧಾಕರ ಶೆಟ್ಟಿ, ರಾಜ್ಯ ಪಾನೀಯ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ್ ಪಾಂಡೇಲು, ಬ್ರಹ್ಮಾವರ ಬಂಟರ ಸಂಘದ ಸಂಚಾಲಕ ಸುದರ್ಶನ ಹೆಗ್ಡೆ ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೊದಲು ‘ರಾಜಕೀಯ - ಕಾನೂನು - ಪತ್ರಿಕೋದ್ಯಮ’ ಕುರಿತು ಕೊಪ್ಪದ ರೈತ ಹೋರಾಟಗಾರ ಸುಧೀರ್‌ಕುಮಾರ್ ಮುರೊಳ್ಳಿ, ಮಾಜಿ ಶಾಸಕ ವೈ.ಎಸ್.ದತ್ತ ಹಾಗೂ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಸಂವಾದ ನಡೆಸಲಿದ್ದಾರೆ.
ನಂತರ ಉಡುಪಿಯ ಪ್ರೆಸ್ ಕ್ಲಬ್ ಸದಸ್ಯರಿಂದ ಗುರು ಸಂಜೀವ ಸುವರ್ಣರ ನಿರ್ದೇಶನದಲ್ಲಿ ಯಕ್ಷರೂಪಕ ‘ವೀರ ಅಭಿಮನ್ಯು’ ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ರಾಜಾರುದ್ರಕೋಪ’ ಎಂಬ ಯಕ್ಷಗಾನ ಪ್ರದರ್ಶನ ಕೂಡಾ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತ ಜೋಗಿ ಬಗ್ಗೆ:
ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಯಾನೆ ಗಿರೀಶ್ ರಾವ್ ಹತ್ವಾರ್ ಅವರು ಕತೆ, ಕಾದಂಬರಿ, ಅಂಕಣ ಬರಹ, ಸಾಹಿತ್ಯ ವಿಮರ್ಶೆ, ಧಾರಾವಾಹಿ-ಸಿನಿಮಾಗಳಿಗೆ ಸಾಹಿತ್ಯ, ಚಿತ್ರಕತೆ, ಸಂಭಾಷಣೆಗಳಿಂದ ಪ್ರಸಿದ್ಧರಾಗಿದ್ದಾರೆ.
ಸುರತ್ಕಲ್ ಸಮೀಪದ ಹೊಸಬೆಟ್ಟುವಿನ ಹತ್ವಾರ್ ಕುಟುಂಬದಲ್ಲಿ ಜನಿಸಿದ ಅವರು ಬಿ.ಕಾಂ. ಮುಗಿಸಿ, ತಮ್ಮ ಸ್ವಂತ ಆಸಕ್ತಿಯಿಂದ ಬರವಣಿಗೆ ಕ್ಷೇತ್ರಕ್ಕೆ ಧಮುಕಿದವರು. ಪ್ರಸ್ತುತ ಕನ್ನಡಪ್ರಭದ ಪುರವಣಿ ಸಂಪಾದಕರಾಗಿರುವ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣಗಳನ್ನು ಬರೆಯುತ್ತಿದ್ದರು. ಲಂಕೇಶ್ ಪತ್ರಿಕೆಗೂ ಎಚ್.ಗಿರೀಶ್ ಹೆಸರಿನಲ್ಲಿ ಪ್ರಬಂಧಗಳನ್ನು ಬರೆಯುತ್ತಿದ್ದರು. ಅವರು ರಾಜ್ಯ ಸರ್ಕಾರದಿಂದ ‘ಅತ್ಯುತ್ತಮ ಕತೆ’ ಪ್ರಶಸ್ತಿ ಪಡೆದಿದ್ದಾರೆ. ರಾಜ್ಯದ ಅನೇಕ ಪತ್ರಿಕೆಗಳಲ್ಲಿ ಸಣ್ಣಕತೆಗಳನ್ನು ಪ್ರಟಿಸಿದ್ದಾರೆ. ಅನೇಕ ಕಥಾಸಂಕಲನ, ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.
ಈ ಸಂದರ್ಭದಲ್ಲಿ ಜೋಗಿ ಬಗ್ಗೆ ನಿರ್ದೇಶಕ ಟಿ.ಎನ್. ಸೀತರಾಮ್ ಏನು ಹೇಳಿದ್ದಾರೆ ನೋಡೋಣ:
"
ಪ್ರಶಸ್ತಿ ಪ್ರದಾನ ಎಲ್ಲಿ, ಯಾವಾಗ:
ಭಾನುವಾರ, 5 ಆಗಸ್ಟ್ 2018ಬ್ರಹ್ಮಾವರ ಬಂಟರ ಭವನ, ಉಡುಪಿ ಜಿಲ್ಲೆ