ಫೋಕ್ಸ್‌ವ್ಯಾಗನ್ ಹೊಸ ವರ್ಷನ್ - ಪಾಪ್ ಅಪ್ ಸ್ಟೋರ್ ಆರಂಭ!
ಫೋಕ್ಸ್‌ವ್ಯಾಗನ್ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಭರ್ಜರಿ ತಯಾರಿ ನಡೆಸುತ್ತಿದೆ. ಈಗಾಗಲೆ ಪೋಲೋ ಹಾಗೂ ಆ್ಯಮಿಯೋ ಕಾರುಗಳು 1.0 ಲೀಟರ್ ಎಂಜಿನ್ ಹಾಗೂ ಪೈಪೋಟಿ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಬೆಂಗಳೂರು ಹಾಗೂ ತುಮಕೋರಿನಲ್ಲಿ ಡಿಜಿಟಲ್ ಶೋ ರೂಂ ಹಾಗೂ ಕಾರ್ಪೋರೇಟ್ ಸೆಂಟರ್ ಆರಂಭಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು(ಮೇ.18): ಡ್ರೈವಿಂಗ್ ಸೀಟಿನಲ್ಲಿ ಕುಳಿತು ಸೀಟ್ ಅಡ್ಜಸ್ಟ್ ಮಾಡಿಕೊಂಡು ಡ್ರೈವಿಂಗ್ ಮೋಡ್‌ಗೆ ಕಾರು ಸೆಟ್ ಮಾಡಿ ಆ್ಯಕ್ಸಿಲೇಟರ್ ಕೊಟ್ಟಕೆಲವೇ ಸೆಕೆಂಡುಗಳಲ್ಲಿ ಸ್ಟೇರಿಂಗ್ ಮುಂದೆ ಇರುವ ಮೀಟರ್ ಬೋರ್ಡಿನಲ್ಲಿ ವೇಗದ ಮುಳ್ಳು ನೂರು ತಲುಪಿರುತ್ತದೆ. ಈ ಕಾರಿನ ಹೆಸರು ಫೋಕ್ಸ್‌ವ್ಯಾಗನ್ ಪಸ್ಸಟ್. ಎಷ್ಟೇ ವೇಗದಲ್ಲಿದ್ದರೂ ಎಲ್ಲಿ ನಿಲ್ಲಿಸಬೇಕು ಅಂತ ಅನ್ನಿಸುತ್ತದೋ ಬ್ರೇಕ್ ಒತ್ತಿದರೆ ಅಲ್ಲೇ ನಿಲ್ಲುತ್ತದೆ ಕಾರು. ಅಲುಗಾಡುವುದಿಲ್ಲ. ಮಿಸುಕಾಡುವುದಿಲ್ಲ. ಹೇಳಿದಂತೆ ಕೇಳುತ್ತದೆ.
ಹೇಳಿಕೇಳಿ ನಮ್ಮ ದಾರಿ ಇದ್ದಿದ್ದೇ ನಂದಿ ಬೆಟ್ಟದ ತಿರುವು ಮುರುವು ಹಾದಿ. ಪಸ್ಸಟ್ ಸೆಡಾನ್ ಮಾದರಿಯ ಕಾರು. ಸ್ವಲ್ಪ ಉದ್ದ ಇರುವಂತೆ ಭಾಸವಾಗುತ್ತದೆ. ಆದರೆ ಕಾರಿನೊಳಗೆ ಕೂತರೆ ನೆಮ್ಮದಿ, ಸಮಾಧಾನ, ನಿರಾಳ. ಎಷ್ಟುಸ್ಪೀಡಾಗಿ ಹೋದರೂ ಅದ್ಧೂರಿ. ನಿಧಾನವಾಗಿ ಹೋದರೂ ಪಯಣ ಲಕ್ಸುರಿ. ಗತ್ತಿನಲ್ಲಿ ಹೋಗುವುದಾದರೆ ಡ್ರೈವರ್‌ನ ಎಡಗಡೆ ಕೈ ಇಡುವುದಕ್ಕೆ ಜಾಗವಿದೆ. ಒಂದು ಲೆವೆಲ್ಲಲ್ಲಿ ಜಗತ್ತು ನೋಡುತ್ತಾ ಸಾಗಬಹುದು. ಹೆವೀ ಸ್ಪೀಡು ಹೋಗುತ್ತಿದ್ದೇವೆ, ಕಂಟ್ರೋಲ್ ಮಾಡೋಕಾಗಲ್ಲ ಅಂದಾಗ ಡ್ಯಾಶ್ ಬೋರ್ಡಿನಲ್ಲಿರುವ ಇಂಜಿನ್ ಕಂಟ್ರೋಲ್ ಆಯ್ಕೆ ಒತ್ತಿದರೆ ತನ್ನಿಂತಾನೇ ಕಾರು ಕಂಟ್ರೋಲಿಗೆ ಬರುತ್ತದೆ. ಪಾರ್ಕ್ ಮಾಡಲು ಕಷ್ಟಅನ್ನಿಸಿದಾಗ ಪಾರ್ಕ್ ಅಸಿಸ್ಟ್ ಆಪ್ಷನ್ ಒತ್ತಿದರೆ ಅದೂ ಸುಲಭವಾಗುತ್ತದೆ.
ಟೂರಿಗೆ ಹೋದಾಗ ಹಿಂದಿನ ಸೀಟಲ್ಲಿ ಕುಳಿತವರು ಆರಾಮಾಗಿದ್ದಾಗ ತಲೆ ಮೇಲಿನ ಪರದೆ ಸರಿಸಿ ಆಕಾಶ ನೋಡುತ್ತಾ ಕೂರಬಹುದು. ಜೊತೆಗೆ ಮಕ್ಕಳಿಗೆ ಕಾರಿನ ಮೇಲ್ಭಾಗವನ್ನು ಪೂರ್ತಿ ತೆರೆಯಬಹುದು. ಕಾರು ನಿಲ್ಲಿಸಿದಾಗೊಮ್ಮೆ ಮಕ್ಕಳು ತೆರೆದಿರುವ ಮೇಲ್ಭಾಗದಿಂದ ತಲೆ ಮೇಲೆ ಹಾಕಿ ಹೊರಗೆ ನೋಡಿದರೆ ಅವರಿಗೂ ಖುಷಿ, ಡ್ರೈವರಿಗೂ ಸಂತಸ. ಅಷ್ಟರ ಮಟ್ಟಿಗೆ ಅದ್ದೂರಿ ಕಾರು ಈ ಫೋಕ್ಸ್‌ವ್ಯಾಗನ್ ಪಸ್ಸಟ್.
ಫೋಕ್ಸ್‌ವ್ಯಾಗನ್ ಪಾಪ್ ಅಪ್ ಸ್ಟೋರ್‌ಗಳು
ಇಷ್ಟೆಲ್ಲಾ ಹೇಳುವುದಕ್ಕೆ ಕಾರಣವಿದೆ. ಇತ್ತೀಚೆಗೆ ಫೋಕ್ಸ್‌ವ್ಯಾಗನ್ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಪ್ಲಾನ್ ಹಾಕಿಕೊಂಡಿದೆ. ಅದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಮತ್ತು ತುಮಕೂರಿನಲ್ಲಿ ಎರಡು ಅತ್ಯಾಧುನಿಕ ಶೋರೂಮ್‌ಗಳನ್ನು ಆರಂಭಿಸಿದೆ. ಇಲ್ಲಿ ಎಲ್ಲವೂ ಡಿಜಿಟಲ್. ಕಾರು ಪ್ರಿಯರು ಕಾರು ಖರೀದಿಸುವ ಮುನ್ನವೇ ಕಾರಿನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಂತೆ ಈ ಶೋರೂಮ್‌ಗಳನ್ನು ರೂಪಿಸಲಾಗಿದೆ. ಇದೇ ಥರ ದೇಶಾದ್ಯಂತ ಸುಮಾರು 30 ಪಾಪ್ ಅಪ್ ಸ್ಟೋರ್‌ಗಳನ್ನು ಆರಂಭಿಸುವ ಆಲೋಚನೆ ಫೋಕ್ಸ್‌ವ್ಯಾಗನ್ ಮಂದಿಗೆ ಇದೆ. ಅಲ್ಲದೇ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾರ್ಪೋರೇಟ್ ಬಿಸಿನೆಸ್ ಸೆಂಟರ್ ಸ್ಥಾಪಿಸಿದ್ದಾರೆ. ಇವೆಲ್ಲದರ ಜೊತೆಗೆ ಫೋಕ್ಸ್‌ವ್ಯಾಗನ್ ಕಾರುಗಳ ಸಾಮರ್ಥ್ಯ ಪ್ರದರ್ಶನಕ್ಕೆಂದೇ ಡ್ರೈವ್ ಎಕ್ಸ್‌ಪೀರಿಯನ್ಸ್ ಕಾರ್ಯಕ್ರಮ ಆಯೋಜಿಸಿದ್ದರು.
ಸ್ಟೈಲಿಷ್ ಪಸ್ಸಟ್
ಫೋಕ್ಸ್‌ವ್ಯಾಗನ್‌ನ ಅದ್ದೂರಿ ಮತ್ತು ಸ್ಟೈಲಿಷ್ ಕಾರ್ ಇದು. 2.0 ಟಿಡಿಐ ಡೀಸೆಲ್ ಇಂಜಿನ್‌ನ ಕಾರು. ಎಲ್ಲಾ ಐಷಾರಾಮಿ ಕಾರುಗಳಲ್ಲಿರುವ ಒಳ್ಳೊಳ್ಳೆ ಫೀಚರ್ ಇದರಲ್ಲಿವೆ. ಈ ಕಾರನ್ನು ಟ್ರಾಫಿಕ್‌ನಲ್ಲಿ ಎಲ್ಲಾದರೂ ನಿಲ್ಲಿಸಿ ಬ್ರೇಕ್ ಬಿಟ್ಟರೆ ಈ ಕಾರು ಹಿಂದೆ ಹೋಗುವುದಿಲ್ಲ. ಹಿಲ್ ಸ್ಟಾರ್ಟ್ ಅಸಿಸ್ಟ್ ಇದೆ. ಬೆಟ್ಟದಿಂದ ಕೆಳಗಿಳಿಯುವ ಸಂದರ್ಭ ಬಂದರೆ ಹಿಲ್ ಅಸಿಸ್ಟ್ ಒತ್ತಿದರೆ ಕಾರು ಅದೇ ಬೆಟ್ಟದಿಂದ ಇಳಿಯುತ್ತದೆ. ಆರು ಬಣ್ಣಗಳಲ್ಲಿ ಲಭ್ಯ ಇರುವ ಈ ಕಾರಿನ ಆರಂಭಿಕ ಬೆಲೆ ರು. 25.99 ಲಕ್ಷ. ಇದು ಎಕ್ಸ್ ಶೋರೂಮ್ ಬೆಲೆ.
ಆಫ್‌ರೋಡ್‌ಗಾಗಿಯೇ ಎಸ್‌ಯುವಿ ಟಿಗ್ವಾನ್
ಫೋಕ್ಸ್‌ವ್ಯಾಗನ್ ಮೂಲತಃ ಯುರೋಪ್ ಕಾರು. ಅಲ್ಲೆಲ್ಲಾ ಬೇಜಾನ್ ಹವಾ ಇದೆ. ಅದರಲ್ಲೂ ಅಲ್ಲಿ ಈ ಟಿಗ್ವಾನ್‌ಗೆ ಭಾರಿ ಬೇಡಿಕೆ. ದೇಶಾದ್ಯಂತ ಸುಮಾರು ಐವತ್ತು ಲಕ್ಷ ಟಿಗ್ವಾನ್ ಕಾರುಗಳು ಓಡುತ್ತಿವೆ. 2 ಲೀಟರ್ ಟಿಡಿಐ ಡೀಸೆಲ್ ಇಂಜಿನ್ ಹೊಂದಿರುವ ಶಕ್ತಿಶಾಲಿ ಎಸ್‌ಯುವಿ ಇದು. ಗುಡ್ಡಗಾಡು ರಸ್ತೆಗಳಿಗೆ ಹೇಳಿ ಮಾಡಿಸಿದ್ದು. ಈ ಎಸ್‌ಯುವಿ ಮತ್ತು ಪಸ್ಸಟ್ ಇಂಜಿನ್ ಒಂದೇ ಹಾಗಾಗಿ ಈ ಕಾರು ಕೂಡ ಹೇಳಿದಂತೆ ಕೇಳುತ್ತದೆ. ಡ್ರೈವರ್ ಕರೆಕ್ಟಾಗಿ ಹೇಳಬೇಕಷ್ಟೇ. ಇದು ಎತ್ತರವಾಗಿರುವುದರಿಂದ ಇದರಲ್ಲಿ ಕೂರುವ ಫೀಲ್ ಬೇರೆಯೇ. ಸಿಂಹಾಸನದಲ್ಲಿ ಕೂತಂತೆ ಅನ್ನಿಸುತ್ತದೆ. ಕ್ರೂಸ್ ಕಂಟ್ರೋಲ್, ಮಳೆ ಮತ್ತು ಬೆಳಕಿನ ಸೆನ್ಸರ್, ಕೀಲೆಸ್ ಎಂಟ್ರಿ ಇವೆಲ್ಲಾ ಇದರ ವಿಶೇಷತೆಗಳೇ. ನಾಲ್ಕು ಬಣ್ಣಗಳಲ್ಲಿ ಸಿಗುವ ಈ ಎಸ್‌ಯುವಿ ಆರಂಭಿಕ ಬೆಲೆ ರು. 28.07 ಲಕ್ಷ.
ಶಕ್ತಿಶಾಲಿ ವೆಂಟೋ
ಸಾಮಾನ್ಯ ಸೆಡಾನ್‌ನಂತೆ ಕಾಣುವ ವೆಂಟೋ ಕಾರಿದೆಯಲ್ಲ, ನೋಡಿದಂತೆ ಇಲ್ಲ. ಹೈಯರ್‌ಎಂಡ್ ವೆಂಟೋದಲ್ಲಿ ಕೂತರೆ ಅದರ ಪವರ್ ಬೇರೆಯೇ ಇದೆ. ಹಲವು ವರ್ಷಗಳಿಂದ ವೆಂಟೋ ಓಡಿಸುವ ಚಾಲಕನೊಬ್ಬ ಕಾರನ್ನು ನೋಡಿದ ತಕ್ಷಣ ಭಾರಿ ಒಳ್ಳೆ ಕಾರು ಎಂದ. ಯಾಕೆ ಅಂದ್ರೆ ಎಷ್ಟುಸ್ಪೀಡಾಗಿ ಓಡಿಸಿದ್ರೂ ಅಲ್ಲಾಡಲ್ಲ ಎಂದ. ಹಾಗಂತ ಯಾವ್ಯಾವುದೋ ರಸ್ತೆಯಲ್ಲಿ ಸ್ಪೀಡಾಗಿ ಓಡಿದರೆ ಪೊಲೀಸರು ಹಿಡೀತಾರೆ. ಆದರೆ ಇದರ ಶಕ್ತಿ ಭಯಂಕರ. 1.2 ಲೀಟರ್ ಟಿಎಸ್‌ಐ, 1.5 ಲೀಟರ್ ಟಿಡಿಐ ಡೀಸೆಲ್ ಇಂಜಿನ್ ಮತ್ತು 1.6 ಲೀಟರ್ ಎಂಪಿಐ ಪೆಟ್ರೋಲ್ ಇಂಜಿನ್ ಹೊಂದಿರುವ ಒಟ್ಟು ಮೂರು ಮಾದರಿಯ ವೆಂಟೋ ಕಾರುಗಳು ಲಭ್ಯವಿದೆ. ಇದರಲ್ಲಿ ನೀವು ಮ್ಯಾನ್ಯುವಲ್‌ಗೂ ಹೋಗಬಹುದು, ಬೇಕಿದ್ದರೆ ಅಟೋಮ್ಯಾಟಿಕ್ ಕೂಡ ಖರೀದಿಸಬಹುದು. ಇದರ ಆರಂಭಿಕ ಬೆಲೆ ರು. 8.64 ಲಕ್ಷ.
ನಾಜೂಕು ಆ್ಯಮಿಯೋ
ಆ್ಯಮಿಯೋ ಸ್ವಲ್ಪ ವೆಂಟೋ ಥರ ಕಂಡರೂ ವೆಂಟೋ ಅಲ್ಲ. ಇದೊಂಥರೂ ನಾಜೂಕು ವಿನ್ಯಾಸ ಹೊಂದಿರುವ ಕಾರು. ಮ್ಯಾನ್ಯುವಲ್, ಅಟೋಮ್ಯಾಟಿಕ್ ಎರಡು ಮಾದರಿಯಲ್ಲೂ ಸಿಗುತ್ತದೆ. ಆ್ಯಮಿಯೋ ಪೆಟ್ರೋಲ್ ಕಾರು 1.0 ಲೀಟರ್ ಇಂಜಿನ್ ಹೊಂದಿದ್ದರೆ ಡೀಸೆಲ್ ಕಾರು 1.5 ಲೀಟರ್ ಇಂಜಿನ್ ಹೊಂದಿದೆ. ಪೆಟ್ರೋಲ್ ಕಾರ್ ಆರಂಭಿಕ ಬೆಲೆ ರು.5.82 ಲಕ್ಷ. ಡೀಸೆಲ್ ಕಾರಿನ ಆರಂಭಿಕ ಬೆಲೆ ರು.7 ಲಕ್ಷ.
ಪೋಲೋ
ಕಡಿಮೆ ಬಜೆಟ್ ಇರುವ ಫೋಕ್ಸ್‌ವ್ಯಾಗನ್ ಪ್ರೇಮಿಗಳ ಕಾರು ಇದು ಪೋಲೋ. ಗಾತ್ರ ಮತ್ತು ಸ್ಟೈಲು ಎರಡೂ ಚೆಂದವೇ. ಇದರಲ್ಲಿ ಎರಡು ಮಾದರಿ ಇದೆ. ಒಂದು ಪೋಲೋ. ಇನ್ನೊಂದು ಪೋಲೋ ಜಿಟಿ. ಪೋಲೋದಲ್ಲಿ 1.5 ಲೀಟರ್ ಜಿಟಿ ಟಿಡಿಐ ಡೀಸೆಲ್ ಇಂಜಿನ್ ಮತ್ತು 1.0 ಲೀಟರ್ ಪೆಟ್ರೋಲ್ ಇಂಜಿನ್ ಕಾರು ಲಭ್ಯ. ಪೋಲೋ ಜಿಟಿಯಲ್ಲಿ 1.2 ಲೀಟರ್ ಟಿಎಸ್‌ಐ ಪೆಟ್ರೋಲ್ ಇಂಜಿನ್ ಮತ್ತು 1.5 ಲೀಟರ್ ಟಿಡಿಐ ಡೀಸೆಲ್ ಇಂಜಿನ್ ಕಾರು ಲಭ್ಯ. ಪೋಲೋ ಪೆಟ್ರೋಲ್ ಕಾರ್ ಆರಂಭಿಕ ಬೆಲೆ ರು. 5.71. ಡೀಸೆಲ್ ಕಾರು ಆರಂಬಿಕ ಬೆಲೆ ರು.7.23.