ಬೆಂಗಳೂರು(ಜು.01):  ವಿಮಾನದಲ್ಲಿ ದೂರ ಪ್ರಯಾಣ ಮಾಡುವ ಪ್ರಯಾಣಿಕರು ಕತ್ತು ನೋವು ಸಮಸ್ಯೆ ಎದುರಿಸುವುದು ಸಾಮಾನ್ಯ.  ಇನ್ನು ಮುಂದೆ ತುಂಬಾ ದೂರದ ಪ್ರಯಾಣ ಮಾಡುವಾಗ ನಿಮಗೆ ಕತ್ತು ನೋವು ಬರುವುದಿಲ್ಲ. ನಿಮ್ಮ ಪ್ರಯಾಣವನ್ನು ಮತ್ತಷ್ಟು ಆರಾಮ ಮಾಡುವ ನಿಟ್ಟಿನಲ್ಲಿ ದೂರದ ಪ್ರಯಾಣ ಮಾಡುವ ಎಕಾನಮಿ-ಕ್ಲಾಸ್ ಪ್ರಯಾಣಿಕರಿಗೆ ವಿನೂತನವಾದ ಕಂಫರ್ಟ್ ಕಿಟ್ ಅನ್ನು ನೀಡಲಿದೆ. ಯುಯುಒ ಇನ್ನೋವೇಶನ್ ಎಂಬ ಸ್ಟಾರ್ಟಪ್ ಕಂಪನಿ ಏರ್‌ಬಸ್ ಇಂಡಿಯಾದ ಆಂತರಿಕ ಇಂಜಿನಿಯರ್‌ಗಳ  ನೆರವಿನಿಂದ ಈ ವಿನೂತನವಾದ ನ್ಯಾಪ್‍ಈಸಿ ಟ್ರಾವೆಲ್ ಪಿಲ್ಲೋವನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: PRESS, POLICE ಯಾವುದೇ ಸ್ಟಿಕ್ಕರ್ ಹಾಕಿದ್ರೆ ವಾಹನ ಸೀಝ್!

ದೇಶದ ವಿಮಾನಯಾನ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಇಂತಹ ವಿನೂತನವಾದ ಸೌಲಭ್ಯ ನೀಡಲಾಗುತ್ತಿದೆ. ಈ ನ್ಯಾಪ್‍ಈಸಿ ಟ್ರಾವೆಲ್ ಪಿಲ್ಲೋ ಕೇವಲ ಕುತ್ತಿಗೆ ದಿಂಬು ಅಲ್ಲ. ಇದು ಬಹು ಉಪಯೋಗಿ ದಿಂಬಾಗಿರುತ್ತದೆ. ಅಂದರೆ, ಇದನ್ನು ಕೇವಲ ವಿಮಾನದಲ್ಲಿ ಪ್ರಯಾಣಿಸುವಾಗ ಬಳಕೆ ಮಾಡುವುದಷ್ಟೇ ಅಲ್ಲ, ಕಾರಿನಲ್ಲಿ ಪ್ರಯಾಣ ಮಾಡುವಾಗ, ರೈಲಿನಲ್ಲಿ ಪ್ರಯಾಣ ಮಾಡುವಾಗ ಈ ದಿಂಬನ್ನು ಬಳಸಿಕೊಂಡು ಆರಾಮವಾಗಿ ನಿದ್ದೆ ಮಾಡಬಹುದಾಗಿದೆ.

ಏರ್‌ಬಸ್ ಇಂಡಿಯಾ ಈ ಪಿಲ್ಲೋವನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಯುಯುಒ ಇನ್ನೋವೇಶನ್ಸ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲೂ ಯುಯುಒ ಇನ್ನೋವೇಶನ್‍ಗೆ ನೆರವಾಗಲಿದೆ. ಬೆಂಗಳೂರಿನ ಏರ್‌ಬಸ್ ಘಟಕದ ಉದ್ಯೋಗಿಗಳಾದ ಪ್ರದಿಪ್ತ ಕಿಶೋರ್ ಸಾಹು ಮತ್ತು ಸೋಹಮ್ ನಾರಾಯಣ್  ಈ ಪೇಟೆಂಟ್ ವಿನ್ಯಾಸವನ್ನು ಆಂತರಿಕ ಯೋಜನೆಯಾಗಿ ಅಭಿವೃದ್ಧಿಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಓಲಾ, ಉಬರ್ ಕಾರ್‌ಪೂಲಿಂಗ್ ನಿಷೇಧಿಸಿದ ಸರ್ಕಾರ!

ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಬೆಳೆಯುತ್ತಿದೆ. ಈ ದೂರದ ಪ್ರಯಾಣದಲ್ಲಿ ಆಗುವ ನೋವು ಮತ್ತು ಆಯಾಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಯುಯುಒ ಇನ್ನೋವೇಶನ್ ವಿನೂತನವಾದ ದಿಂಬಿನ ಮೂಲಕ ದೂರದ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಆರಾಮವಾದ ನಿದ್ದೆಯ ಅನುಭವವನ್ನು ನೀಡಲಿದೆ. ಈ ಮೌಲ್ಯಯುತವಾದ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಏರ್‍ಬಸ್ ಸೂಕ್ತ ಅವಕಾಶ ಮತ್ತು ಮಾರ್ಗದರ್ಶನವನ್ನು ನೀಡಿದೆ ಎಂದು ಯುಯುಒ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್‍ನ ಸಿಇಒ ಮತ್ತು ಸಹ-ಸಂಸ್ಥಾಪಕ ಸೋಹಮ್ ನಾರಾಯಣ್ ಪಟೇಲ್ ಹೇಳಿದರು. 

ಏರ್‍ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಸೂರಜ್ ಚೆಟ್ರಿ ಅವರು ಮಾತನಾಡಿ, ``ಏರ್‌ಬಸ್ ಯಾವಾಗಲೂ ಆವಿಷ್ಕಾರಗಳಿಗೆ ಮತ್ತು ಉದ್ಯಮಶೀಲತ್ವಕ್ಕೆ ಉತ್ತೇಜನ ನೀಡುತ್ತಾ ಬಂದಿದೆ. ಭಾರತದಲ್ಲಿ ವಿಶ್ವದರ್ಜೆಯ ಪ್ರತಿಭಾನ್ವಿತ ಇಂಜಿನಿಯರ್‌ಗಳಿದ್ದಾರೆ. ಒಂದು ಚಿಂತನಾಶೀಲ ಉತ್ಪನ್ನದ ಅಭಿವೃದ್ಧಿ ಮೂಲಕ ನಮ್ಮ ಇಬ್ಬರು ಉದ್ಯೋಗಿಗಳು ಪೂರ್ಣ ಪ್ರಮಾಣದ ಉದ್ಯಮಿಗಳಾಗಲು ಬೆಂಬಲವಾಗಿ ನಿಂತಿರುವುದಕ್ಕೆ ನಮಗೆ ಸಂತಸ ತಂದಿದೆ’’ ಎಂದು ತಿಳಿಸಿದರು. ಈ ನ್ಯಾಪ್‍ಈಸಿ ಕಂಫರ್ಟ್ ಕಿಟ್ 2019 ರ ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.