ಮಧ್ಯಮ ವರ್ಗದ ಡಾರ್ಲಿಂಗ್ ಟಿವಿಎಸ್ ರೇಡಿಯೋನ್!
ಒಮ್ಮೆ ಟ್ಯಾಂಕ್ ಫುಲ್ ಪೆಟ್ರೋಲ್ ಹಾಕಿಸಿದರೆ ಅದೆಷ್ಟೇ ಓಡಿಸಿದರೂ ಮುಗಿಯುವುದಿಲ್ಲ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಹಾಗೂ ಆಕರ್ಷಕ ರೆಟ್ರೋ ಲುಕ್ ಹೊಂದಿರು ಟಿವಿಎಸ್ ರೇಡಿಯೋನ್ ಮಧ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದ ಬೈಕ್. ಈ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು(ಆ.28): 100 ಸಿಸಿ ಸೆಗ್‌ಮೆಂಟಿನ ಬೈಕುಗಳಿಗೆ ಡಿಮ್ಯಾಂಡ್ ಜಾಸ್ತಿ. ಅದರಲ್ಲೂ ಮೈಲೇಜ್ ಜಾಸ್ತಿ ಕೊಟ್ಟರೆ ತುಸು ಹೆಚ್ಚೇ ಪ್ರೀತಿ. ಅಂಥದ್ದೊಂದು ಹೊಸ ಬೈಕು ಬಂದಿದೆ. ಹತ್ತು ಲೀಟರ್ ಪೆಟ್ರೋಲ್ ಟ್ಯಾಂಕಲ್ಲಿ ಸುಮಾರು 600 ಕಿಮೀಗೂ ಜಾಸ್ತಿ ಚಲಿಸಬಹುದಾದ ಮಧ್ಯಮವರ್ಗದ ಡಾರ್ಲಿಂಗ್ ಬೈಕು ಟಿವಿಎಸ್ ರೇಡಿಯೋನ್.
ಇದನ್ನೂ ಓದಿ: ವಾಹದಿಂದ ಕಂಗೆಟ್ಟ TVS ಗ್ರಾಹಕರಿಗೆ ಭರ್ಜರಿ ಆಫರ್!
ಒಮ್ಮೆ ನೋಡಿದರೆ ಟಿವಿಎಸ್ ಸ್ಟಾರ್ ಸಿಟಿ ನೆನಪಿಸುವ ಬೈಕು ಅದು. 110 ಸಿಸಿಯ ಇಂಜಿನ್ನು. ನೋಡಲು ಉದ್ದ ಇದೆ. ಉದ್ದಗಿರುವವರು ಗಿಡ್ಡಗಿರುವವರು ಆರಾಮಾಗಿ ಕೂರಬಹುದಾದಷ್ಟುಎತ್ತರದಲ್ಲಿ ಸೀಟು. ಸೀಟು ಕೂಡ ಸ್ವಲ್ಪ ಉದ್ದಕ್ಕೇ ಇರುವುದರಿಂದ ಇಬ್ಬರು ಆರಾಮಾಗಿ ಕೂರಬಹುದು. ಒಬ್ಬರು ಎಕ್ಷಾ$್ಟ್ರ ಕೂತರೂ ಅಂಥಾ ಕಷ್ಟಏನೂ ಆಗುವುದಿಲ್ಲ. ಸೈಡಲ್ಲಿ ಬೇಕಿದ್ದರೆ ನಾಲ್ಕು ಕೆಜಿ ತೊಂಡೆ ಕಾಯಿ, ಅರ್ಧ ಕೆಜಿ ಟೊಮೆಟೋ ಚೀಲವನ್ನು ನೇತಾಡಿಸಬಹುದು. ಯಾವುದೇ ಕಿರಿಕ್ ಮಾಡದೆ ಬೈಕು ಮುಂದೆ ಹೋಗುತ್ತದೆ. ಹಿಂದೆ ಬಹುಭಾರದ ವ್ಯಕ್ತಿ ಕೂತಿದ್ದರೆ ಹಂಪ್‌ಗಳಲ್ಲಿ ತುಸು ಎಚ್ಚರ ಅಗತ್ಯ. ಒಮ್ಮೊಮ್ಮೆ ಅಗತ್ಯಕ್ಕಿಂತ ಹೆಚ್ಚು ಜಂಪ್ ಆಗುತ್ತದೆ. 110 ಸಿಸಿ ಅಲ್ವಾ, ಬೈಕಿನ ಶಕ್ತಿಗಿಂತ ಜಾಸ್ತಿ ನಿರೀಕ್ಷೆ ಮಾಡಬಾರದು. ಹಾಗಂತ ವೇಗದಲ್ಲಿ, ಪಿಕಪ್‌ನಲ್ಲಿ ಇದು ರಾಜ. ಗಂಟೆಗೆ 60 ಕಿಮೀ ಸ್ಪೀಡಲ್ಲಿ ಸಾಗುವಾಗ ರೇಡಿಯೋನ್ ಕಿಂಗು. ಅದಕ್ಕಿಂತ ವೇಗ ಸ್ವಲ್ಪ ಜಾಸ್ತಿಯಾದರೂ ಕಿಂಗು ಅಲ್ಲಾಡುವುದಿಲ್ಲ. ಗಂಟೆಗೆ 80-85 ಕಿಮೀ ಹೋದರೆ ಮಾತ್ರ ವೈಬ್ರೇಷನ್ ಶುರುವಾಗುತ್ತದೆ. ಇದರಲ್ಲಿ ಇರುವುದೇ ನಾಲ್ಕು ಗೇರು. ಸ್ಪೀಡ್ ಬೈಕಂತೂ ಅಲ್ಲ ಅನ್ನುವುದು ಆಗ ನೆನಪಿಗೆ ಬರಬೇಕು.
ಇದನ್ನೂ ಓದಿ: ಹೊಸ ಅವತಾರದಲ್ಲಿ TVS Nಟಾರ್ಕ್ 125 ಸ್ಕೂಟರ್ ಬಿಡುಗಡೆ!
ಟಿವಿಎಸ್ ರೇಡಿಯೋನ್ ಅನ್ನು ಆನ್ ಮಾಡಿ ಮುಂದೆ ಸಾಗುತ್ತಿದ್ದರೆ ಅದರ ಸೌಂಡಿಗೇ ಮರುಳಾಗಬೇಕು. ಹಿತವಾದ ಸೌಂಡು. ಡಿಸೈನ್ ಬಗ್ಗೆ ಹೇಲುವುದಾದರೆ ಅಷ್ಟೇನೂ ಸ್ಟೈಲೀಶ್ ಡಿಸೈನ್ ಹೊಂದಿಲ್ಲ. ಒಂಥರಾ ರೆಟ್ರೋ ಡಿಸೈನ್ ಇದರದು. ಅದೇ ಕಣ್ಣಿಗೆ ಹಿತವಾಗಿ ಕಂಡರೆ ಅಚ್ಚರಿಯಿಲ್ಲ. ಒಟ್ಟು ಆರು ಬಣ್ಣಗಳಲ್ಲಿ ರೇಡಿಯೋನ್ ಲಭ್ಯ. ನಿಮ್ಮಿಷ್ಟನಿಮಗೆ.
ಇದನ್ನು ಮಧ್ಯಮ ವರ್ಗದ ಡಾರ್ಲಿಂಗ್ ಅನ್ನುವುದಕ್ಕೆ ಅದರ ಡಿಸೈನ್, ಸೈಜು ಮತ್ತು ಮೈಲೇಜು ಕಾರಣ. 60ಕ್ಕೂ ಜಾಸ್ತಿ ಮೈಲೇಜು ನೀಡುವುದು ಬಹುತೇಕ ನಿಶ್ಚಿತ. ಆಫೀಸು- ಮನೆ ಎಂದು ಓಡಾಡುವವರಿಗೆ ಪೆಟ್ರೋಲ್ ಮುಗಿಯುವುದೇ ಇಲ್ಲವೇನೋ ಅನ್ನಿಸುತ್ತದೆ. ಹಾಗಾಗಿ ದಿನವಿಡೀ ಬೈಕಲ್ಲಿ ಓಡಾಡುವವರಿಗೆ, ಡೆಲಿವರಿಗೆ ಹೋಗುವವರಿಗೆ ರೇಡಿಯೋನ್ ಮೇಲೆ ಲವ್ವಾಗುವುದು ಸಹಜ.
18 ಇಂಚುಗಳ ಚಕ್ರಗಳಿವೆ. ಟ್ಯೂಬ್‌ಲೆಸ್ ಟೈರುಗಳೇ ಆದ್ದರಿಂದ ಪಂಚರ್ ಹಾಕಿಸುವುದು ಸುಲಭ. 180 ಮಿಲಿ ಮೀಟರ್ ಗ್ರೌಂಡ್ ಕ್ಲಿಯರೆನ್ಸ್ ಇದೆ. ಹಾಗಾಗಿ ಹಂಪು, ಗುಂಡಿಗಳಲ್ಲಿ ಬೈಕು ಸಾವಾಧಾನವಾಗಿ ಚಲಿಸಬಲ್ಲದು. ಒಟ್ಟಾರೆ ನೋಡುವುದಾದರೆ ಕೊಟ್ಟಹಣಕ್ಕೆ ಮೋಸವಿಲ್ಲ ಅನ್ನುವಂತಹ ಬೈಕು ಇದು. 110 ಸಿಸಿಯ ಬಿಎಸ್4 ಇಂಜಿನ್ ಹೊಂದಿರುವ ಈ ಬೈಕು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಅಂದಹಾಗೆ ಈ ಬೈಕಿನ ಬೆಲೆ 52765.
ಯುಎಸ್‌ಬಿ ಚಾರ್ಜಿಂಗು, ಸೈಡ್ ಸ್ಟಾಂಡ್ ಅಲರ್ಟ್
ಅರ್ಜೆಂಟಲ್ಲಿ ಮನೆಯಲ್ಲಿ ಚಾಜ್‌ರ್ ಮಾಡದೆ ಬರುವವರು, ಯಾವಾಗಲೂ ಮೊಬೈಲಲ್ಲೇ ಇರುವವರಿಗೆ ರೇಡಿಯೋನ್ ಒಂಥರಾ ಆಪ್ತಮಿತ್ರ. ಯಾಕೆಂದರೆ ಇದರಲ್ಲಿ ಮೊಬೈಲ್ ಚಾಜ್‌ರ್ ಮಾಡಬಹುದು. ಹ್ಯಾಂಡಲ್‌ನ ಬಲಬದಿಯಲ್ಲಿ ಯೂಎಸ್‌ಬಿ ಪೋರ್ಟ್ ಇದೆ. ಇನ್ನು ಅವಸರವಾಗಿ ಸೈಡ್ ಸ್ಟಾಂಡ್ ತೆಗೆಯದೇ ಹೋಗುವ ಮರೆವು ಶೂರರ ಸೇಫ್ಟಿಯೂ ರೇಡಿಯೋನ್‌ಗೆ ಮುಖ್ಯ. ಒಂದು ವೇಳೆ ಸೈಡ್ ಸ್ಟಾಂಡ್ ಹಾಕಿದ್ದರೆ ಬೈಕು ಕಿರುಚಿಕೊಳ್ಳುತ್ತದೆ. ಸೈಡ್ ಸ್ಟಾಂಡ್ ತೆಗೆಯುವವರೆಗೆ ಬಿಡುವುದಿಲ್ಲ. ಇದು ಈ ಬೈಕಿನ ಒಳ್ಳೆಯ ಫೀಚರ್.