ಟಾಟಾ ಹರಿಯರ್ ಬುಕಿಂಗ್ ಆರಂಭ- SUV ಇತರ ಕಾರಿಗಿಂತ ಹೇಗೆ ಭಿನ್ನ?
ಟಾಟಾ ಮೋಟಾರ್ಸ್ ಸಂಸ್ಥೆಯ ಹರಿಯರ್ ಕಾರು ಬುಕಿಂಗ್ ಆರಂಭಗೊಂಡಿದೆ. ಕೇವಲ 30,000 ರೂಪಾಯಿ ಪಾವತಿಸಿ ಈ ಕಾರನ್ನ ಬುಕ್ ಮಾಡಿಕೊಳ್ಳಬಹುದು. ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಬಲ್ಲ ಈ ಹರಿಯರ್ ಕಾರಿನ ವಿಶೇಷತೆ ಇಲ್ಲಿದೆ.
ಮುಂಬೈ(ಅ.15): ಟಾಟಾ ಮೋಟಾರ್ಸ್ ಸಂಸ್ಥೆಯ ಬಹುನಿರೀಕ್ಷಿತ ಟಾಟಾ ಹರಿಯರ್ SUV ಕಾರಿನ ಬುಕಿಂಗ್ ಆರಂಭಗೊಂಡಿದೆ. ಇಂದಿನಿಂದ(ಅ.15) ಟಾಟಾ ಮೋಟಾರ್ಸ್ ಶೋ ರೂಂ ಅಥವಾ ಟಾಟಾ ಮೋಟಾರ್ಸ್ ವೆಬ್‌ಸೈಟ್‌ಗಳಲ್ಲಿ ಗ್ರಾಹಕರು ಈ ಕಾರನ್ನ ಬುಕ್ ಮಾಡಿಕೊಳ್ಳಬಹುದು.
30,000 ರೂಪಾಯಿ ಪಾವತಿಸಿ ಟಾಟಾ ಹರಿಯರ್ SUV ಕಾರು ಮಾಡಬಹುದು. 2019ರ ಜನವರಿಯಲ್ಲಿ ಟಾಟಾ ಹರಿಯರ್ ಕಾರು ಬಿಡುಗಡೆಯಾಗಲಿದೆ. ಇಷ್ಟೇ ಅಲ್ಲ ಅದೇ ತಿಂಗಳಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಹರಿಯರ್ ಕಾರು ಡೆಲಿವರಿಯಾಗಲಿದೆ.
ನೂತನ ಟಾಟಾ ಹರಿಯರ್ ಕಾರು 2.0 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ವಿಶೇಷ ಅಂದರೆ ಇದು ಕ್ರಿಯೊಟೆಕ್ 2.0 ಎಂಜಿನ್. ಕ್ರಿಯೊಟೆಕ್ ರಾಕೆಟ್ ಎಂಜಿನ್‌ನಿಂದ ಸ್ಪೂರ್ತಿ ಪಡೆದು ಈ ಟಾಟಾ ಹರಿಯರ್ ಎಂಜಿನ್ ತಯಾರಿಸಲಾಗಿದೆ. 5 ಸೀಟರ್ ಹರಿಯರ್ ಕಾರು 140 ಬಿಹೆಚ್‌ಪಿ ಪವರ್ ಹೊಂದಿದ್ದರೆ, 7 ಸೀಟರ್ ಹರಿಯರ್ ಕಾರು 170 ಬಿಹೆಚ್‌ಪಿ ಪವರ್ ಹೊಂದಿದೆ. ಟಾಟಾ ಹೆಕ್ಸಾ ರೀತಿಯಲ್ಲೇ ಮಲ್ಟಿ ಡ್ರೈವ್ ಮೂಡ್ ತಂತ್ರಜ್ಞಾನ ಹೊಂದಿದೆ.
ನೂತನ ಟಾಟಾ ಹರಿಯರ್ ಕಾರು, ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ. ಇದರ ಬೆಲೆ 10 ಲಕ್ಷದಿಂದ 15 ಲಕ್ಷ(ಎಕ್ಸ್ ಶೋ ರೂಂ) ವರೆಗೆ ಇರಲಿದೆ.