ನವದೆಹಲಿ[ಜು.30]: ಕಳವಾದ ವಾಹನಗಳ ಪತ್ತೆ, ನಕಲಿ ಬಿಡಿಭಾಗ ಪತ್ತೆಗೆ ರಾಮಬಾಣವೆಂದೇ ಹೇಳಲಾದ ಮೈಕ್ರೋಡಾಟ್ಸ್‌ ವ್ಯವಸ್ಥೆಯನ್ನು ಭಾರತೀಯ ವಾಹನಗಳಿಗೆ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 1989ಕ್ಕೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ ಈ ಕುರಿತ ಕರಡು ವರದಿಯನ್ನು ಬಿಡುಗಡೆ ಮಾಡಿದೆ.

ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ವ್ಯವಸ್ಥೆ ಭಾರತದಲ್ಲೂ ಜಾರಿಗೆ ಬಂದರೆ ವಾಹನ ಕಳ್ಳತನ, ನಕಲಿ ಬಿಡಿಭಾಗ ಮಾರಾಟಕ್ಕೆ ಕಡಿವಾಣ ಬೀಳಲಿದೆ.

ಏನೀದು ಮೈಕ್ರೋಡಾಟ್‌?

ಇದನ್ನು ವಾಹನಗಳ ಡಿಎನ್‌ಎ ಅಂತಲೂ ಕರೆಯಬಹುದು. ಯಾವುದೇ ಒಂದು ಸಂಖ್ಯೆ ಅಥವಾ ಹೆಸರನ್ನು ಅತ್ಯಂತ ಸೂಕ್ಷ್ಮ ಸ್ವರೂಪದಲ್ಲಿ ಬರೆದು, ಅದನ್ನು ವಾಹನಗಳ ಮೇಲೆ ಪೇಂಟ್‌ ರೀತಿ ಸ್ಪ್ರೇ ಮಾಡಲಾಗುವುದು. ಬರಿಗಣ್ಣಿನಲ್ಲಿ ಸಣ್ಣ ಚುಕ್ಕೆಯಂತೆ ಕಾಣುವ ಇವುಗಳನ್ನು ಮೈಕ್ರೋಸ್ಕೋಪ್‌ ಅಥವಾ ನೇರಳಾತೀತ ಬೆಳಕಿನಲ್ಲಿ ಮಾತ್ರವೇ ವೀಕ್ಷಿಸಬಹುದು. ಇದನ್ನು ವಿಶೇಷ ಉಪಕರಣಗಳ ಮೂಲಕ ಯಾವುದೇ ವಾಹನ, ಅಥವಾ ವಾಹನಗಳ ಯಾವುದೇ ಬಿಡಿಭಾಗಗಳ ಮೇಲೆ ಮುದ್ರಿಸಬಹುದು.

ಇದರ ಲಾಭ ಏನು?

ಮೈಕ್ರೋಡಾಟ್ಸ್‌ ಅತ್ಯಂತ ಸೂಕ್ಷ್ಮ ಸ್ವರೂಪದಲ್ಲಿದ್ದು, ಇದನ್ನು ಯಾವುದೇ ರೀತಿಯಲ್ಲೂ ಅಳಿಸಲು ಆಗದು. ಉದಾಹರಣೆಗೆ ಕಂಪನಿಯೊಂದು ತನ್ನ ಕಾರಿನ ಮೇಲೆ ಒಂದು ನಿರ್ದಿಷ್ಟಸಂಖ್ಯೆಯನ್ನು ಮುದ್ರಿಸಿರುತ್ತದೆ. ಯಾವುದೇ ವ್ಯಕ್ತಿ ಇಂಥ ಕಾರನ್ನು ಕದ್ದು, ಬಳಿಕ ಅದು ಪತ್ತೆಯಾದರೆ, ಕಾರು ಇಂಥದ್ದೇ ವ್ಯಕ್ತಿಗೆ ಸೇರಿದ್ದು ಎಂಬುದನ್ನು ಮೈಕ್ರೋಡಾಟ್ಸ್‌ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು. ಇನ್ನು ಕಂಪನಿಯೊಂದು ತನ್ನ ಎಲ್ಲಾ ಬಿಡಿಭಾಗಗಳಿಗೆ ಇಂಥದ್ದೇ ಸಂಖ್ಯೆ ಮುದ್ರಿಸಿದರೆ, ಅದನ್ನು ನಕಲು ಮಾಡಿದವರು ಸಿಕ್ಕಿಬೀಳುತ್ತಾರೆ.

ವೆಚ್ಚ ಎಷ್ಟು?

ಎಷ್ಟುಮೈಕ್ರೋಡಾಟ್ಸ್‌ ಅಳವಡಿಸಬೇಕು ಎಂಬುದರ ಮೇಲೆ ದರ ನಿರ್ಧಾರವಾಗುತ್ತದೆ. ಹಾಲಿ 5000 ಮೈಕ್ರೋಡಾಟ್ಸ್‌ಗಳಿಗೆ 500 ರು.ನಿಂದ 1500 ರು.ವರೆಗೂ ದರ ವಿಧಿಸಲಾಗುತ್ತಿದೆ.