ನವದೆಹಲಿ(ಆ.05): ಭಾರತದ ವಾಹನ ಮಾರುಕಟ್ಟೆ ತೀವ್ರ ಹೊಡೆತಕ್ಕೆ ಸಿಲುಕಿದೆ. ಹೊಸ ನಿಯಮ, GST ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ವಾಹನ ಮಾರುಕಟ್ಟೆ ದಾಖಲೆಯ ಕುಸಿತ ಕಂಡಿದೆ. ಈಗಾಗಲೇ 300ಕ್ಕೂ ಹೆಚ್ಚು ಡೀಲರ್ಸ್ ಹಾಗೂ ಶೋ ರೂಂ ಬಾಗಿಲು ಮುಚ್ಚಿವೆ. ಬಿಡಿಭಾಗ ತಯಾರಿಕಾ ಕಂಪನಿಗಳ 20,000ಕ್ಕೂ ಹೆಚ್ಚು ಉದ್ಯೋಗಗಳು ಕಡಿತಗೊಂಡಿದೆ. ಇದೀಗ ವಾಹನ ಮಾರಾಟ ಕುಸಿತ ಮಾರುತಿ ಸುಜುಕಿ ಸಂಸ್ಥೆಗೂ ತಟ್ಟಿದೆ.

ಭಾರತದ ವಾಹನ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆ ಇದೀಗ ಮಾರಾಟ ಕುಸಿತದಿಂದ ಚಿಂತೆಗೊಳಗಾಗಿದೆ. ಇದೀಗ ಮಾರುತಿ ಸುಜುಕಿ ಸಂಸ್ಥೆಯಲ್ಲಿರುವ ತಾತ್ಕಾಲಿಕ ಉದ್ಯೋಗಿಗಳನ್ನು ತೆಗೆದುಹಾಕಲು ಕಂಪನಿ ನಿರ್ಧರಿಸಿದೆ. ಭಾರತದ ಮಾರುತಿ ಸುಜುಕಿ ಸಂಸ್ಥೆಯಲ್ಲಿ 18,845  ತಾತ್ಕಾಲಿಕ ಉದ್ಯೋಗ ವಿಭಾಗದಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಕನಿಷ್ಠ 10 ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ.

ಮಾರುತಿ ಸುಜುಕಿ ಸಂಸ್ಥೆ ವಾಹನ ಮಾರಾಟ  33.5% ಕುಸಿದಿದೆ. ಸದ್ಯ ಉತ್ಪಾದನೆ ಪ್ರಮಾಣವನ್ನು ತಗ್ಗಿಸಲಾಗಿದೆ. ಮಾರುತಿ ಸುಜುಕಿ ಮಾತ್ರವಲ್ಲ, ಇತರ ಎಲ್ಲಾ ವಾಹನ ಕಂಪನಿಗಳಿಗೆ ಹೊಡೆತ ಬಿದ್ದಿದೆ. ಭಾರತದ 5.66% ರಷ್ಟಿದ್ದ ನಿರೋದ್ಯಗ ಸಮಸ್ಯೆ 2019ರ ಜುಲೈನಲ್ಲಿ 7.51%ಕ್ಕೇರಿದೆ. ಇದೀಗ ಮಾರುತಿ ಉದ್ಯೋಗ ಕಡಿತಕ್ಕೆ ಮುಂದಾಗಿರುವುದು ಮತ್ತೆ ಸಂಕಷ್ಟ ತರಲಿದೆ.