ಬೆಂಗಳೂರು(ನ.07): ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ಭಾರತೀಯ ಜನಸಾಮಾನ್ಯರ ಬದುಕು ಹೈರಾಣಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಇದೀಗ ದಿನಬಳಕೆ ವಸ್ತುಗಳ ಬೆಲೆ, ಸಾರಿಗೆ ದರಗಳು ಹೆಚ್ಚಳವಾಗಿದೆ. ಹೀಗಾಗಿ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳಿಗೆ ಹೆಚ್ಚಿನ ಬೆಂಬಲ ನೀಡುತ್ತಿದೆ.

ಮಾಲಿನ್ಯ ರಹಿತ, ಹಾಗೂ ಇಂಧನ ಸಮಸ್ಯೆಗೆ ಮುಕ್ತಿ ಹಾಡಲು ಹಲವು ಮೋಟಾರು ಕಂಪೆನಿಗಳು ಎಲೆಕ್ಟ್ರಿಕಲ್ ವಾಹನ್ ಬಿಡುಗಡೆಗೆ ಸಜ್ಜಾಗಿದೆ. ಇದೀಗ ಮಹೀಂದ್ರ ಮೋಟಾರು ಸಂಸ್ಥೆ ಎಲೆಕ್ಟ್ರಿಕಲ್ ಆಟೋ ರಿಕ್ಷಾ ಬಿಡುಗಡೆಗೆ ಸಜ್ಜಾಗಿದೆ. ಇದೇ ನವೆಂಬರ್ 15 ರಂದು ಬಿಡುಗಡೆಯಾಗಲಿದೆ.

ಬಿಡುಗಡೆಗೂ ಮುನ್ನ ಈ ಎಲೆಕ್ಟ್ರಿಲಕ್ ಆಟೋ ರಿಕ್ಷಾ ರೋಡ್ ಟೆಸ್ಟ್ ಪೂರ್ಣಗೊಳಿಸಿದೆ. ಬ್ಯಾಟರಿ, ಎಂಜಿನ್ ಪವರ್, ಸಾಮರ್ಥ್ಯ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಮಹೀಂದ್ರ ಎಲೆಕ್ಟ್ರಿಕಲ್ ಆಟೋ ರಿಕ್ಷಾ ಯಶಸ್ವಿಯಾಗಿದೆ.

2018ರ ಗ್ಲೋಬಲ್ ಮೊಬಿಲಿಟಿ ಸಮ್ಮಿಟ್ ಎಕ್ಸ್‌ಪೋದಲ್ಲಿ ಮಹೀಂದ್ರ ಎಲೆಕ್ಟ್ರಿಕಲ್ ಆಟೋ ರಿಕ್ಷಾ ಪರಿಚಯಿಸಿತ್ತು. ಮಹೀಂದ್ರ ಟ್ರಿಯೋ ಹಾಗೂ ಮಹೀಂದ್ರ ಟ್ರಿಯೋ ಯಾರಿ ಅನ್ನೋ 2 ವೇರಿಯೆಂಟ್‌ಗಳನ್ನ ಮಹೀಂದ್ರ ಪರಿಚಯಿಸಿದೆ. ನವೆಂಬರ್ 15 ಕ್ಕೆ ಬಿಡುಗಡೆಯಾಗಲಿರುವ ಈ ಎಲೆಕ್ಟ್ರಿಕಲ್ ಆಟೋ ರಿಕ್ಷಾ ಭಾರತದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ಕಂಪೆನಿ ವಿಶ್ವಾಸ ವ್ಯಕ್ತಪಡಿಸಿದೆ.

ವಿಶೇಷ ಅಂದರೆ ಈ ಎಲೆಕ್ಟ್ರಿಕಲ್ ಆಟೋ ರಿಕ್ಷಾ ಎಂಜಿನ್ ಅಭಿವೃದ್ಧಿ ಪಡಿಸಿರುವುದು ಬೆಂಗಳೂರಿನ ಮಹೀಂದ್ರ ಎಲೆಕ್ಟ್ರಿಕ್ ಘಟಕದಲ್ಲಿ. ಇನ್ನು ಇದರ ಬೆಲೆ 1.12 ಲಕ್ಷ ಎಂದು ಹೇಳಲಾಗ್ತಿದೆ. ಇದೀಗ ಬಜಾಜ್ ಹಾಗೂ ಟಿವಿಎಸ್ ಕಂಪೆನಿಗಳ ಎದೆಯಲ್ಲಿ ನಡುಕ ಶುರುವಾಗಿದೆ.