ಹೊಂಡಾ ನೂತನ ಘಟಕ್ಕೆ 9,200 ಕೋಟಿ ಇನ್ವೆಸ್ಟ್ - ಸ್ಥಳೀಯರಿಗೆ ಉದ್ಯೋಗವಕಾಶ!
ಹೊಂಡಾ ಕಾರು ಕಂಪೆನಿ ಇದೀಗ ಭಾರತದಲ್ಲಿ ನೂತನ ಘಟಕ ತೆರೆಯಲು ಮುಂದಾಗಿದೆ. ಹೊಸ ಫ್ಯಾಕ್ಟರಿಗಾಗಿ 9,200 ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಧರಿಸಿದೆ. ಇಷ್ಟೇ ಅಲ್ಲ ಈ ಕಾರು ಫ್ಯಾಕ್ಟರಿಯಿಂದ ಸ್ಥಳೀಯರಿಗೆ ಉದ್ಯೋಗವಕಾಶ ಸೃೃಷ್ಟಿಯಾಗಲಿದೆ.
ನವದೆಹಲಿ(ಅ.10) ಜಪಾನ್ ಮೂಲಕ ಕಾರು ತಯಾರಿಕಾ ಕಂಪೆನಿ ಹೊಂಡಾ ಇದೀಗ ಭಾರತದಲ್ಲಿ 9,200 ಕೋಟಿ ರೂಪಾಯಿ ಬಂಡವಾಳ ಹೂಡಲು ನಿರ್ಧರಿಸಿದೆ. ಈ ಮೂಲಕ ಭಾರತದಲ್ಲಿ ಗರಿಷ್ಠ ಕಾರು ವಹಿವಾಟು ನಡೆಸಲು ಮಹತ್ವದ ಯೋಜನೆ ರೂಪಿಸಿದೆ.
ಹೊಂಡಾ ಹೈಬ್ರಿಡ್ ಹಾಗೂ ಎಲೆಕ್ಟ್ರಿಕಲ್ ಕಾರು ನಿರ್ಮಾಣಕ್ಕಾಗಿ ಹೊಂಡಾ 9200 ಕೋಟಿ ರೂಪಾಯಿ ಇನ್ವೆಸ್ಟ್ ಮಾಡಲು ನಿರ್ಧರಿಸಿದೆ. 1998ರಲ್ಲಿ ಭಾರತಕ್ಕೆ ಕಾಲಿಟ್ಟ ಹೊಂಡಾ ಇದೀಗ ನೂತನ ಘಟಕ ನಿರ್ಮಾಣದಿಂದ ಭಾರತದಲ್ಲಿ ಹೊಂಡಾ ಹೂಡಿಕೆ ಒಟ್ಟು 18,500 ಕೋಟಿ ರೂಪಾಯಿ ದಾಟಲಿದೆ.
ಭಾರತದಲ್ಲಿ ಹೊಂಡಾ ಕಂಪೆನಿಯ 2 ಫ್ಯಾಕ್ಟರಿಗಳಿವೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಹಾಗೂ ರಾಜಸ್ಥಾನದ ತಪುಕರಾದಲ್ಲಿ ಹೊಂಡಾ ಕಾರು ನಿರ್ಮಾಣ ಫ್ಯಾಕ್ಟರಿಗಳಿವೆ. ಇದೀಗ ನೂತನ ಘಟಕವನ್ನ ಗುಜರಾತ್‌ನಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 380 ಎಕರೆ ಪ್ರದೇಶದ ಮನವಿಯನ್ನ ಸರ್ಕಾರಕ್ಕೆ ಕಳುಹಿಸಿದೆ.
ಗುಜರಾತ್ ಫ್ಯಾಕ್ಟರಿಯಿಂದ ಭಾರತದಲ್ಲಿ ಕಾರು ವಹಿವಾಟು ಸುಲಭವಾಗಿ ನಡೆಯಲಿದೆ ಎಂದು ಹೊಂಡಾ ಹೇಳಿದೆ. ಇಷ್ಟೇ ಅಲ್ಲ ನೂತನ ಫ್ಯಾಕ್ಟರಿಯಿಂದ ಸ್ಥಳೀಯರಿಗೆ ಉದ್ಯೋಗವಕಾಶವೂ ದೊರೆಯಲಿದೆ ಎಂದಿದೆ.