ನವದೆಹಲಿ[ಜು.11]: ಖಾಸಗಿ ಸಂಸ್ಥೆಗಳು ತಮ್ಮ ಬಳಿ ಇರುವ ಗ್ರಾಹಕರ ದತ್ತಾಂಶಗಳನ್ನು ಮಾರಿಕೊಳ್ಳುತ್ತವೆ ಎಂಬ ದೂರು ಸಾಮಾನ್ಯ. ಆದರೆ ಇದೀಗ ಸ್ವತಃ ಕೇಂದ್ರ ಸರ್ಕಾರವೇ ದೇಶದ ಕೋಟ್ಯಂತರ ವಾಹನ ಸವಾರರ ವಾಹನ ಚಾಲನ ಪರವಾನಗಿ ಮತ್ತು ಅವರು ಚಲಾಯಿಸುವ ವಾಹನಗಳ ಕುರಿತ ಮಾಹಿತಿಯನ್ನು ಮಾರುತ್ತಿದೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಈ ಬಗ್ಗೆ ಸ್ವತಃ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಬುಧವಾರದ ರಾಜ್ಯಸಭಾ ಕಲಾಪದಲ್ಲಿ ಈ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಗಡ್ಕರಿ ಅವರು, ‘ವಾಹನ ನೋಂದಣಿ ಮತ್ತು ವಾಹನ ಚಾಲನಾ ಪರವಾನಗಿ ಮಾಹಿತಿಯನ್ನೊಳಗೊಂಡ ವಾಹನ ಮತ್ತು ಸಾರತಿ ದತ್ತಾಂಶಗಳನ್ನು ಇದುವರೆಗೂ 87 ಖಾಸಗಿ ಹಾಗೂ 32 ಸರ್ಕಾರಿ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ಸರ್ಕಾರ 65 ಕೋಟಿ ರು. ಆದಾಯ ಗಳಿಸಿದೆ’ ಎಂದಿದ್ದಾರೆ.

ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಹುಸೇನ್‌ ದಲ್ವಾಯಿ ಅವರು, ಒಂದು ವೇಳೆ ವಾಹನ ಮತ್ತು ಸಾರತಿ ದತ್ತಾಂಶಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದೇ ಆದಲ್ಲಿ, ಅದರಿಂದ ಸರ್ಕಾರಕ್ಕೆ ಎಷ್ಟುಪ್ರಮಾಣದ ಆದಾಯ ಬರುತ್ತದೆ ಎಂದು ಪ್ರಶ್ನಿಸಿದ್ದರು.