ನೋ ಪಾರ್ಕಿಂಗ್: 23 ಸಾವಿರ ರೂಪಾಯಿ ದಂಡ!
ನೋ ಪಾರ್ಕಿಂಗ್, ವಾಹನ ಪಾರ್ಕ್ ಮಾಡಿದ್ರೆ ಭರ್ಜರಿ 23000 ರು. ದಂಡ| ನಿರ್ದಿಷ್ಟ ಸ್ಥಳದ ಹೊರಗೆ ವಾಹನ ನಿಲ್ಲಿಸಿದರೆ ಭಾರೀ ದಂಡ
ಮುಂಬೈ[ಜು.07]: ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ಭರ್ಜರಿ ದಂಡ ವಿಧಿಸಲು ಮುಂಬೈ ಮಹಾನಗರ ಪಾಲಿಕೆ ಮತ್ತು ಪೊಲೀಸರು ನಿರ್ಧರಿಸಿದ್ದಾರೆ. ಈ ದಂಡದ ಪ್ರಮಾಣ 5000 ರು.ನಿಂದ 23000 ರು.ವರೆಗೂ ಇರಲಿದೆ. ಮುಂದಿನ ಭಾನುವಾರದಿಂದ ಹೊಸ ಕಾನೂನು ಜಾರಿಗೆ ಬರಲಿದೆ.
ಮುಂಬೈ ನಗರದಾದ್ಯಂತ 26 ಅಧಿಕೃತ ವಾಹನ ಪಾರ್ಕಿಂಗ್ ಮತ್ತು ಸಾರಿಗೆ ಇಲಾಖೆಗೆ ಸೇರಿದ 20 ಪಾರ್ಕಿಂಗ್ ಸ್ಥಳಗಳಿವೆ. ಈ ಸ್ಥಳಗಳನ್ನು ಬಿಟ್ಟು, ಇವುಗಳಿಂದ 500 ಮೀಟರ್ ಸುತ್ತಳತೆಯ ಪ್ರದೇಶದಲ್ಲಿ ವಾಹನಗಳನ್ನು ಅಕ್ರಮವಾಗಿ ನಿಲ್ಲಿಸಿದರೆ ಅಲ್ಲಿ, ಭಾರೀ ದಂಡ ವಿಧಿಸಲಾಗುವುದು.ಅದರಂತೆ ಬೈಕ್‌ಗಳಿಗೆ .5000 ರಿಂದ 8,300, ಹಗುರ ವಾಹನಗಳಿಗೆ .10 ಸಾವಿರದಿಂದ .15100, ಮೂರು ಚಕ್ರದ ವಾಹನಕ್ಕೆ .8 ಸಾವಿರದಿಂದ . 12,200, ಮಧ್ಯಮ ವಾಹನಗಳಿಗೆ .11 ಸಾವಿರದಿಂದ .17,600, ಇತರೆ ಭಾರೀ ವಾಹನಗಳಿಗೆ .15ಸಾವಿರದಿಂದ 23,250ರವರೆಗೆ ದಂಡ ಮತ್ತು ಎಳೆದೊಯ್ಯುವ ಶುಲ್ಕ ವಿಧಿಸಲಾಗುವುದು.
ಮುಂಬೈನಲ್ಲಿ ಎಲ್ಲ ಬಗೆಯ ಒಟ್ಟು 30 ಲಕ್ಷ ವಾಹನಗಳಿವೆ ಎಂದು ಅಂದಾಜಿಸಲಾಗಿದ್ದು, ಟ್ರಾಫಿಕ್ ಪೊಲೀಸರಿಗೆ ಈ ಕಾರ್ಯಚರಣೆಗೆ ನೆರವು ಒದಗಿಸಲು ಪಾಲಿಕೆ ನಿವೃತ್ತ ಸಿಬ್ಬಂದಿ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಬಳಕೆಗೆ ಪೊಲೀಸರು ಮುಂದಾಗಿದ್ದಾರೆ.