ಪೊಲೀಸರಿಗೆ ನೆರವಾಯ್ತು ಸಿನಿಮಾ ನಟ-ನಟಿಯರ ವ್ಯಾನಿಟಿ ವ್ಯಾನ್!
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು, ಪೊಲೀಸರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಪಾಡು ಹೇಳತೀರದು. ಬಹುತೇಕ ಮಾಲ್, ರೆಸ್ಟೋರೆಂಟ್‌ಗಳು ಬಂದ್ ಆಗಿವೆ. ಹೀಗಾಗಿ ಪೊಲೀಸರಿಗೆ ಶೌಚಾಲಯಗಳೂ ಸಿಗುತ್ತಿಲ್ಲ. ಈ ಸಮಸ್ಯೆ ಅರಿತ ಕೆಲವರು ಇದೀಗ ಪೊಲೀಸರಿಗೆ ಸೆಲೆಬ್ರೆಟಿಗಳ ವ್ಯಾನಿಟ್ ವ್ಯಾನ್ ನೀಡಿ ಸಹಕರಿಸಿದ್ದಾರೆ.
ಮುಂಬೈ(ಜು.18): ದೇಶದಲ್ಲಿ ಅತೀ ಭೀಕರ ಪರಿಸ್ಥಿತಿಯನ್ನು ಮುಂಬೈ ಮಹಾನಗರ ಎದುರಿಸುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೂ ಕೊರೋನಾ ವಕ್ಕರಿಸುತ್ತಿದೆ. ಗಲ್ಲಿ ಗಲ್ಲಿಗೂ ಕೊರೋನಾ ಲಗ್ಗೆ ಇಟ್ಟಿದೆ. ಇದರ ನಡುವೆ ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಮುಂಬೈ ನಗರದಲ್ಲಿ ಲಾಕ್‌ಡೌನ್ ಮುಂದುವರಿಸಲಾಗಿದೆ. ಇತ್ತ ಪೊಲೀಸರಿಗೆ ಕೈತೊಳೆದು, ಶುಚಿಯಾಗಿ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ನೀರು ಕುಡಿಯಲು ಆಗುತ್ತಿಲ್ಲ. ಇಷ್ಟೇ ಅಲ್ಲ ಶೌಚಾಲಯಗಳೂ ಇಲ್ಲ.
ಅಲ್ಲು ಅರ್ಜುನ್ ಫಾಲ್ಕನ್ ವ್ಯಾನ್; ಹೇಗಿದೆ 7 ಕೋಟಿ ರೂಪಾಯಿ ವಾಹನ?.
ಪೊಲೀಸರು ಸಮಸ್ಯೆ ಅರಿತ ಮುಂಬೈನ ಮುಂಬಾದೇವಿ ವೆಹಿಕಲ್ಸ್ ತಮ್ಮ ಕೈಲಾದ ಸಹಾಯ ಮಾಡಲು ನಿರ್ಧರಿಸಿದೆ. ಸಿನಿಮಾ ಶೂಟಿಂಗ್ ವೇಳೆ ನಟ-ನಟಿಯರಿಗೆ ಬಾಡಿಗೆಗೆ ನೀಡುತ್ತಿದ್ದ ವ್ಯಾನಿಟಿ ವ್ಯಾನ್‌ಗಳನ್ನು ಇದೀಗ ಮುಂಬೈ ಪೊಲೀಸರಿಗೆ ನೀಡಲಾಗಿದೆ. ಮುಂಬೈ ಪೊಲೀಸರು ಹಗಲು ರಾತ್ರಿ ಎನ್ನದೆ ದಾರಿಯಲ್ಲಿ ನಿಂತು ತಮ್ಮ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಕಾರಣ ಅವರು ಆಹಾರ ಸೇವಿಸಲು ಕೈತೊಳೆಯಲು ಸೋಪ್, ನೀರು, ಶೌಚಾಲಯ ಬಳಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ವ್ಯಾನಿಟ್ ವ್ಯಾನ್‌ನಲ್ಲಿ ಈ ಎಲ್ಲಾ ಸೌಲಭ್ಯವಿರುವುದರಿಂದ ಪೊಲೀಸರಿಗೆ ಅನೂಕಲವಾಗಲಿದೆ ಎಂದು ನಮ್ಮಲ್ಲಿರುವ ಎಲ್ಲಾ ವ್ಯಾನಿಟಿ ವ್ಯಾನ್ ಪೊಲೀಸರಿಗೆ ನೀಡಿದ್ದೇನೆ ಎಂದು ಮುಂಬಾದೇವಿ ವೆಹಿಕಲ್ಸ್ ಮಾಲೀಕ ಕೆತನ್ ರಾವಲ್ ಹೇಳಿದ್ದಾರೆ.
NGO ಸಂಸ್ಥೆಯೊಂದು ಲಾಕ್‌ಡೌನ್ ಸಂದರ್ಭದಲ್ಲಿ ನನಗೆ ಕರೆ ಮಾಡಿತ್ತು. ಬಳಿಕ ಮುಂಬೈ ಪೊಲೀಸರಿಗೆ ಶಾಮಿಯಾನ, ಚೇರ್, ಟೇಬಲ್ ವ್ಯವಸ್ಥೆ ಮಾಡಿಕೊಡಲು ಸಾಧ್ಯವೇ ಎಂದು ಕೇಳಿತ್ತು. ತಕ್ಷಣವೇ ನಾನು ನನ್ನ ವ್ಯಾನಿಟಿ ವ್ಯಾನ್‌ಗಳಲ್ಲಿ ಪೊಲೀಸರಿಗೆ ವಿಶ್ರಾಂತಿ ಪಡೆಯಲು ಕೋಣೆ,ಆಹಾರ ಸೇವಿಸಲು ಹಾಗೂ ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿದೆ. ಹೀಗಾಗಿ ಶಾಮಿಯಾನ, ಟೇಬಲ್, ಕುರ್ಚಿಗಿಂತ ವ್ಯಾನಿಟಿ ವ್ಯಾನ್ ಸೂಕ್ತ ಎಂದು ಪೊಲೀಸರಿಗೆ ನೀಡಿದ್ದೇನೆ ಎಂದು ಕೆತನ್ ರಾವಲ್ ಹೇಳಿದ್ದಾರೆ.
ಎಪ್ರಿಲ್ 12 ರಿಂದ ಮುಂಬೈನ 17 ಭಾಗಗಳಲ್ಲಿ ನಮ್ಮ ವ್ಯಾನಿಟಿ ವ್ಯಾನ್ ಪೊಲೀಸರೊಂದಿಗಿದೆ. ವಿಶೇಷ ಅಂದರೆ ಉಚಿತವಾಗಿ ಪೊಲೀಸರಿಗೆ ವ್ಯಾನಿಟಿ ವ್ಯಾನ್ ನೀಡಲಾಗಿದೆ. ಇಷ್ಟೇ ಅಲ್ಲ, ಪ್ರತಿ ವ್ಯಾನಿಟಿ ವ್ಯಾನ್‌ಗೆ ಚಾಲಕನ್ನು ನೀಡಲಾಗಿದೆ.