ಟೈರ್‌ ಪಂಕ್ಚರ್‌ ಆದ ಬೈಕಲ್ಲಿ ರೇಸ್‌ ಗೆದ್ದ ವೀರ!

ಮೈನವಿರೇಳಿಸುವ ಕ್ರೀಡೆಗಳಲ್ಲಿ ಬೈಕ್‌ ರೇಸ್‌ ಕೂಡ ಒಂದು. ಆದರೆ ಇದರ ಬಗ್ಗೆ ನಮ್ಮಲ್ಲಿ ಕ್ರೇಜ್‌ ಇರುವವರ ಸಂಖ್ಯೆ ತೀರಾ ಕಡಿಮೆ. ಅಂತವರಲ್ಲಿ ಒಬ್ಬರು ಬೆಂಗಳೂರಿನ ವಿಶ್ವಾಸ್‌. ಇವರು ಇತ್ತೀಚೆಗೆ ನಡೆದಿದ್ದ ದಕ್ಷಿಣ್‌ ಡೇರ್‌ ಬೈಕ್‌ ರೇಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮೂರನೇ ಸ್ಥಾನಿಯಾಗಿ ಸಾಧನೆ ಮಾಡಿದ್ದಾರೆ. ರಾಜಸ್ಥಾನದಲ್ಲಿ ನಡೆದ ಥಾರ್‌ ಡೆಸರ್ಟ್‌ ಸ್ಟೊ್ರೕಮ್‌ ರೇಸ್‌ನಲ್ಲಿ ಬೈಕ್‌ನ ಟೈರ್‌ ಪಂಕ್ಚರ್‌ ಆದರೂ ಗುರಿ ಮುಟ್ಟಿದ್ದು ಇವರ ದೊಡ್ಡ ಹೆಗ್ಗಳಿಕೆ.

Bangalore Techie Vishwas grabs 3rd place in  Dakshin Dare  bike Rally

ಧನಂಜಯ ಎಸ್‌. ಹಕಾರಿ

ವಿಶ್ವಾಸ್‌ ಬೆಂಗಳೂರಿನ ಪ್ರತಿಭೆ. ಐಟಿ ಉದ್ಯೋಗಿಯಾಗಿದ್ದರೂ ಬೈಕ್‌ ರೇಸ್‌ನಲ್ಲಿ ಅತೀವ ಆಸಕ್ತಿ. ಸ್ಪರ್ಧೆಗೆ ಇಳಿದ ಮೇಲೆ ಅದೆಂತಹದ್ದೇ ಹಾದಿಯಾಗಿದ್ದರೂ ಗುರಿ ಮುಟ್ಟಬೇಕು ಎನ್ನುವ ಜಾಯಾಮಾನದ ಇವರು ಕಳೆದ 4 ವರ್ಷಗಳಲ್ಲಿ 50 ಬೈಕ್‌ ರೇಸ್‌ಗಳಲ್ಲಿ ಭಾಗವಹಿಸಿದ್ದು ಸುಮಾರು 48 ರೇಸ್‌ಗಳನ್ನು ಪೂರ್ಣಗೊಳಿಸಿದ ಖ್ಯಾತಿ ಪಡೆದಿದ್ದಾರೆ. ಜೊತೆಗೆ ಇತ್ತೀಚೆಗೆ ನಡೆದ ದಕ್ಷಿಣ್‌ ಡೇರ್‌ ರಾರ‍ಯಲಿಯಲ್ಲಿ ಕೆಸರು ಗದ್ದೆಯಂತಿದ್ದ ಹಾದಿಯಲ್ಲಿ ಬೈಕ್‌ ಚಲಾಯಿಸಿ ಅಗ್ರ 3ರಲ್ಲಿ ಸ್ಥಾನ ಪಡೆದಿದ್ದಾರೆ ಕೂಡ.

ಕಡಿಮೆ ಬೆಲೆಯ ರಾಯಲ್ ಎನ್‌ಫೀಲ್ಡ್ 350X ಬೈಕ್ ಬಿಡುಗಡೆ!

250 ಸಿಸಿ ಬೈಕ್‌ನಲ್ಲಿ 2000ಕಿ.ಮೀ ಸಾಹಸ

ಬೆಂಗಳೂರಿನಲ್ಲಿ ಆರಂಭವಾಗಿ ಚಿತ್ರದುರ್ಗದಿಂದ ಉತ್ತರ ಕರ್ನಾಟಕದ ಪ್ರಮುಖ ಸ್ಥಳಗಳ ಮೂಲಕ ಹಾದು ಹೋಗಿ ಹುಬ್ಬಳ್ಳಿಯಲ್ಲಿ ಕೊನೆಗೊಂಡ ದಕ್ಷಿಣ್‌ ಡೇರ್‌ ರಾರ‍ಯಲಿಯಲ್ಲಿ ವಿಶ್ವಾಸ್‌ ಬಳಕೆ ಮಾಡಿದ್ದು 250 ಸಿಸಿ ಬೈಕ್‌. ಸಾಮಾನ್ಯವಾಗಿ ಡರ್ಟ್‌ ರೇಸ್‌ನಂತಹ ಕಷ್ಟಕರವಾದ ಬೈಕ್‌ ರೇಸ್‌ ಗಳಲ್ಲಿ 400 ಅಥವಾ 450 ಸಿಸಿ ಸಾಮರ್ಥ್ಯದ ಬೈಕ್‌ಗಳನ್ನು ರೇಸರ್‌ಗಳು ಬಳಸುತ್ತಾರೆ. ಕಡಿದಾದ ಮಾರ್ಗದಲ್ಲಿ ಸಂಚರಿಸಲು ಬೈಕ್‌ಗಳ ರೋಡ್‌ ಗ್ರಿಪ್‌ ಚೆನ್ನಾಗಿರಬೇಕು. ದಕ್ಷತೆಯೂ ಹೆಚ್ಚಾಗಿರಬೇಕು. ಆಗ ಮಾತ್ರವೇ ಉತ್ತಮ ಪ್ರದರ್ಶನ ನೀಡುವುದಕ್ಕೆ ಸಾಧ್ಯ. ಹಾಗಿದ್ದೂ ತಾನು 250 ಸಿಸಿ ಬೈಕ್‌ನಲ್ಲಿಯೇ ಗುರಿ ಮುಟ್ಟುತ್ತೇನೆ ಎನ್ನುವ ಆತ್ಮವಿಶ್ವಾಸದಿಂದ ಸಾಗಿದ ವಿಶ್ವಾಸ್‌ ತೀರಾ ಕ್ಲಿಷ್ಟಕರವಾಗಿದ್ದ 2000 ಕಿ.ಮೀ. ದೂರವನ್ನು ಕ್ರಮಿಸಿ ಮೂರನೇ ಸ್ಥಾನಿಯಾಗಿ ಹೊರ ಹೊಮ್ಮಿದ್ದರು.

ಮತ್ತೆ ಬಂದ ವಿಶ್ವಾಸ್‌

ಐಟಿ ಉದ್ಯೋಗಿಯಾಗಿರುವ ವಿಶ್ವಾಸ್‌ಗೆ ರೇಸ್‌ ಮೇಲೆ ಆಸಕ್ತಿ ಹುಟ್ಟಿದ್ದು 2000ರ ಹೊತ್ತಿನಲ್ಲಿ. ಆಗಲೇ ಅವರು ನಾಲ್ಕು ವರ್ಷಗಳ ಕಾಲ ಪ್ರತಿಷ್ಟಿತ ಟಿವಿಎಸ್‌ ಕಂಪೆನಿಯ ರೇಸ್‌ಗಳಲ್ಲಿ ಪ್ರಮುಖ ರೇಸರ್‌ ಆಗಿ ಭಾಗವಹಿಸಿ ಭರವಸೆ ಮೂಡಿಸಿದ್ದರು. ಆದರೆ ಒಂದು ದಿನ ಇದ್ದಕ್ಕಿದ್ದ ಹಾಗೆ ತಾನು ಇನ್ನು ಮುಂದೆ ರೇಸ್‌ಗಳಲ್ಲಿ ಭಾಗವಹಿಸಲಾರೆ ಎನ್ನುವ ನಿರ್ಧಾರ ತೆಗೆದುಕೊಂಡು ತಮ್ಮ ಪಾಡಿಗೆ ಐಟಿ ಕ್ಷೇತ್ರದಲ್ಲಿಯೇ ತೊಡಗಿಸಿಕೊಂಡುಬಿಡುತ್ತಾರೆ. ಆದರೆ ಮನದಾಳದಲ್ಲಿ ಇದ್ದ ರೇಸ್‌ ಕ್ರೇಸ್‌ ಮತ್ತೆ ಹನ್ನೊಂದು ವರ್ಷದ ಬಳಿಕ ಅವರನ್ನು ಮೈದಾನಕ್ಕಿಳಿಯುವಂತೆ ಮಾಡಿತ್ತು.

ಹೀಗ್ ಮಾಡಿ, ರಸ್ತೆ ಅವಘಡ ತಡೀರಿ...

2015ರಲ್ಲಿ 2ನೇ ಬಾರಿ ರೇಸ್‌ ಜೀವನಕ್ಕೆ

ಫೆಡರೇಷನ್‌ ಮೋಟಾರ್‌ ಸ್ಪೋಟ್ಸ್‌ ಕ್ಲಬ್‌ ಆಫ್‌ ಇಂಡಿಯಾ ವಾರಂತ್ಯದಲ್ಲಿ ನಡೆಸುವ ರೇಸ್‌ನಲ್ಲಿ ಚಾಂಪಿಯನ್‌ ಆಗುವ ಮೂಲಕ 2ನೇ ಬಾರಿ ರೇಸ್‌ ವೃತ್ತಿ ಜೀವನವನ್ನು ಆರಂಭಿಸಿದ್ದರು ವಿಶ್ವಾಸ್‌. ಈ ರೇಸ್‌ನಲ್ಲಿ ಕೆಟಿಎಂ 390 ಡ್ಯುಕ್‌ ಬೈಕ್‌ನ್ನು ಚಲಾಯಿಸಿದ್ದರು. ಮತ್ತೆ 2016ರಲ್ಲಿ ರಾಷ್ಟ್ರೀಯ ಬೈಕ್‌ ರೇಸ್‌ನ 1ಎ ಕೆಟಗರಿಯಲ್ಲಿ 6 ಸುತ್ತಿನಲ್ಲೂ ಜಯ ಗಳಿಸಿ, ಚಾಂಪಿಯನ್‌ಶಿಪ್‌ ಗೆದ್ದಿದ್ದರು. ಇದಾದ ಬಳಿಕ 2017ರ ಅಕ್ಟೋಬರ್‌ನಲ್ಲಿ ನಡೆದ ದಕ್ಷಿಣ್‌ ಡೇರ್‌ ರಾರ‍ಯಲಿಯಲ್ಲಿ ‘ರೈಡ್‌ ದಿ ಹಿಮಾಲಯ’ (ದ ಡೆಸರ್ಟ್‌) ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಶ್ವಾಸ್‌ ವೃತ್ತಿ ಜೀವನದ ಮುಖ್ಯ ಘಟ್ಟ. ಮೈನಸ್‌ 25 ಡಿಗ್ರಿ ವಾತಾವರಣದಲ್ಲಿ 250 ಸಿಸಿ ಸಾಮರ್ಥ್ಯದ ಬೈಕ್‌ನ್ನು ಓಡಿಸಿ ಟಿವಿಎಸ್‌ ಮೋಟಾರ್‌ ಸಂಸ್ಥೆ, ಮಹೀಂದ್ರ ರೇಸರ್‌ ತಂಡ, ಪೋಲಾರಸ್‌ ಬೈಕ್‌ನೊಟ್ಟಿಗೆ ಉತ್ತಮ ಪೈಪೋಟಿ ನೀಡಿ ಬಂದಿದ್ದರು.

2 ಟೈರ್‌ ಪಂಚರ್‌ ಆದ್ರೂ ಗುರಿ ತಪ್ಪಲಿಲ್ಲ

ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ನಡೆದ ಥಾರ್‌ ಡೆಸರ್ಟ್‌ ಸ್ಟೊ್ರೕಮ್‌ ರೇಸ್‌ ನಡೆದಿತ್ತು. 50 ಡಿಗ್ರಿಯ ಸುಡುವ ಬಿಸಿಲು, ಕಡಿದಾದ ರಸ್ತೆಗಳು, ಎಲ್ಲಿ ನೋಡಿದರೂ ಮರಳು. ಇಂತಹ ಹಾದಿಯಲ್ಲಿ 4 ದಿನಗಳ ಕಾಲ ನಡೆದಿದ್ದ ರೇಸ್‌ನಲ್ಲಿ ಮೊದಲ 2 ದಿನ ಎಲ್ಲವು ಚೆನ್ನಾಗಿತ್ತು. ತಾನು ನಿರೀಕ್ಷಿತ ಮಟ್ಟದಲ್ಲಿಯೇ ಸಾಗುತ್ತಿದ್ದೇನೆ ಎಂದುಕೊಂಡಿದ್ದ ವಿಶ್ವಾಸ್‌ಗೆ ಮೂರನೇ ದಿನ ಎದುರಾಗಿದ್ದು ಸವಾಲು. 200 ಕಿ.ಮೀ. ದೂರವನ್ನು ಯಾವುದೇ ನಿಲುಗಡೆ ಇಲ್ಲದೇ ತಲುಪಬೇಕು ಎನ್ನುವ ಸವಾಲನ್ನು ಸ್ವೀಕರಿಸಿ ಮುಂದೆ ಸಾಗುತ್ತಿರಬೇಕಾದರೆ ಬೈಕ್‌ನ ಮುಂದಿನ ಟೈರ್‌ ಪಂಕ್ಚರ್‌ ಆಗುತ್ತದೆ. ಆದದ್ದು ಆಗಲಿ ಎಂದು ಮುಂದೆ ಸಾಗಿದರೆ ಗುರಿಗೆ ಇನ್ನೇನು 30 ಕಿ.ಮೀ. ಬಾಕಿ ಇದೆ ಎನ್ನುವಾಗ ಹಿಂದಿನ ಚಕ್ರವು ಪಂಕ್ಚರ್‌ ಆಗುತ್ತದೆ. ಆದರೂ ವೆಲ್‌ ಬ್ಯಾಲೆನ್ಸ್‌ ಮಾಡಿಕೊಂಡು ಗುರಿ ಮುಟ್ಟಿಇಡೀ ರೇಸ್‌ನ ಹೀರೋ ಆಗುತ್ತಾರೆ ವಿಶ್ವಾಸ್‌.

ಭಾರತದ ಡಿಎಲ್ ಇದ್ರೆ ಈ ದೇಶಗಳಲ್ಲಿ ಡ್ರೈವಿಂಗ್‌ಗೆ ಪರ್ಮಿಶನ್ ಬೇಕಾಗಿಲ್ಲ!

ಡ್ರೀಮ್‌ ಮಷಿನ್‌ ಸಂಸ್ಥೆಯ ತಾರೆ

ಸದ್ಯ ವಿಶ್ವಾಸ್‌ ಬೆಂಗಳೂರಿನ ಡ್ರೀಮ್‌ ಮಷಿನ್‌ ಸಂಸ್ಥೆಯ ಅಡಿಯಲ್ಲಿ ಬೈಕ್‌ ರೇಸ್‌ಗಳಲ್ಲಿ ಮಿಂಚುತ್ತಿದ್ದಾರೆ. ‘ಪ್ರತಿ ಭಾನುವಾರ ಬೆಂಗಳೂರು ಹೊರ ವಲಯದಲ್ಲಿನ ದುರ್ಗಮ ಹಾದಿಗಳಲ್ಲಿ ಅಭ್ಯಾಸ ಮಾಡುತ್ತೇನೆ. ಸ್ಪರ್ಧೆಗಳಿಗೆ ಭಾಗವಹಿಸುವ ಮೊದಲು 5 ರಿಂದ 6 ಗಂಟೆಗಳ ಕಾಲ ಅಭ್ಯಾಸ ನಡೆಸಬೇಕು. ಕಾರ್ಡಿಯೊ, ಧ್ಯಾನ, ಯೋಗ, ಈಜುವ ಅಭ್ಯಾಸ ಒಳ್ಳೆಯ ಬೈಕ್‌ ರೇಸರ್‌ಗೆ ಇರಲೇಬೇಕು. ಇನ್ನು ನಾನು ರೇಸ್‌ನಲ್ಲಿ 150 ರಿಂದ 200 ಕೆ.ಜಿ. ತೂಕ ಇರುವ ಬೈಕ್‌ಗಳನ್ನು ಬಳಸುತ್ತೇನೆ. ನನ್ನ ಪ್ರಕಾರ ಒಳ್ಳೆಯ ಬ್ಯಾಲೆನ್ಸ್‌ ಕ್ಯಾಪಾಸಿಟಿ ಇದ್ದು ಕಡಿಮೆ ತೂಕದ ಬೈಕ್‌ ಹೊಂದಿದ್ದರೆ ರೇಸ್‌ನಲ್ಲಿ ಉತ್ತಮ ಪ್ರದರ್ಶನ ತೋರಬಹುದು’ ಎನ್ನುತ್ತಾರೆ ವಿಶ್ವಾಸ್‌.

Latest Videos
Follow Us:
Download App:
  • android
  • ios