Asianet Suvarna News Asianet Suvarna News

ಬೌದ್ಧ ಸಂನ್ಯಾಸಿಗಳ ನಿಲುವಂಗಿ ಕತೆ ಗೊತ್ತಾ!

ಬೌದ್ಧ ಸನ್ಯಾಸಿಗಳ ಉಡುಪುಗಳಿಗೆ ಸುಮಾರು 25 ಶತಮಾನಕ್ಕೂ ಹಿಂದಿನ ಇತಿಹಾಸವಿದೆ. ಅವರು ಧರಿಸುವ ನಿಲುವಂಗಿಯ ಬಗ್ಗೆ ಬುದ್ಧ ಹೇಳಿರುವ ನಿಯಮಗಳು ವಿನಯ ಪೀಟಕ ಅಥವಾ ಟ್ರಿಪಿಟಕದಲ್ಲಿ ದಾಖಲಿಸಲ್ಲಟ್ಟಿವೆ.

Significance of Robes worn by Buddhist Monks Buddha Purnima
Author
Bangalore, First Published May 18, 2019, 12:20 PM IST

ಹೆಣದ ಮೇಲಿನ ಬಟ್ಟೆಸಂನ್ಯಾಸಿಯ ವಸ್ತ್ರವಾಗಿ ಬದಲಾಗುವ ಬಗೆ ಹೇಗೆ

ಬೌದ್ಧ ಬಿಕ್ಕುಗಳು ಧರಿಸುವ ನಿಲುವಂಗಿಗೆ ಹಿಂದೆ ಬಳಸುತ್ತಿದ್ದದ್ದು ಹೆಣದ ಮೇಲಿನ ಬಟ್ಟೆ, ಹೆರಿಗೆಯಲ್ಲಿ ಬಳಸಿ ಬಿಸಾಕಿದ ಬಟ್ಟೆಇಂಥ ನಿರುಪಯೋಗಿ ವಸ್ತ್ರಗಳನ್ನು. ಈಗ ಈ ನಿಯಮ ಬದಲಾಗಿದೆ. ಆದರೆ ಇಂದಿಗೂ ಬೌದ್ಧ ಬಿಕ್ಕುಗಳು ಒಂದು ತುಂಡು ಬಟ್ಟೆಯನ್ನೂ ಹಾಳುಮಾಡುವಂತಿಲ್ಲ.

ತಲೆಯಿಂದ ಕಾಲಿನವರೆಗೂ ಕಾವಿ ಬಟ್ಟೆಯಲ್ಲಿ ದೇಹವನ್ನು ಮುಚ್ಚಿ, ಹೆಗಲ ಮೇಲಿನಿಂದ ಚೀಲ ಇಳಿಬಿಟ್ಟು ಬಿಕ್ಕುಗಳು ರಸ್ತೆಯಂಚಿನಲ್ಲಿ ಸಾಗುತ್ತಿದ್ದರೆ, ಜಾರ್ಜಿಯೊ ಅರ್ಮಾನಿಯೂ ಅವರ ಉಡುಪಿನ ವಿನ್ಯಾಸಕ್ಕೆ ತಲೆಬಾಗಬೇಕು. ಬೌದ್ಧ ಸನ್ಯಾಸಿಗಳ ಈ ಉಡುಪುಗಳಿಗೆ ಸುಮಾರು 25 ಶತಮಾನಕ್ಕೂ ಹಿಂದಿನ ಇತಿಹಾಸವಿದೆ.

ದುಡ್ಡು ಉಳಿಯಲು ಮನೆಯಲ್ಲಿ ಇದಿರಲಿ..

ಅನುಯಾಯಿಗಳ ಸಂಖ್ಯೆ ಬೆಳೆಯುತ್ತಿದ್ದಂತೆ ಅವರು ಧರಿಸುವ ನಿಲುವಂಗಿಯ ಬಗ್ಗೆ ಕೆಲವು ನಿಯಮಗಳು ಅಗತ್ಯವೆನ್ನುವುದು ಬುದ್ಧನಿಗೆ ಮನದಟ್ಟಾಯಿತು. ನಿಲುವಂಗಿಯ ಬಗ್ಗೆ ಬುದ್ಧ ಹೇಳಿರುವ ನಿಯಮಗಳು ವಿನಯ ಪೀಟಕ ಅಥವಾ ಟ್ರಿಪಿಟಕದಲ್ಲಿ ದಾಖಲಿಸಲ್ಪಟ್ಟಿವೆ.

ಬುದ್ಧ ಹೇಳಿದ ನಿಲುವಂಗಿಯ ನಿಯಮ

ಬುದ್ಧ ತನ್ನ ಮೊದಲ ಅನುಯಾಯಿಗಳಿಗೆ ನಿಲುವಂಗಿಗಳ ತಯಾರಿಕೆ ಕಲಿಸಿ, ಅದಕ್ಕಾಗಿ ಕೇವಲ ಶುದ್ಧ ವಸ್ತ್ರವನ್ನು ಬಳಸಬೇಕೆಂದು ಕಟ್ಟುನಿಟ್ಟು ಮಾಡಿದನು. ಶುದ್ಧವಸ್ತ್ರವೆಂದರೆ ಯಾರೂ ಬಯಸದ, ಹರಿದ, ಯಾರಿಗೂ ಉಪಯೋಗಕ್ಕೆ ಬಾರದೆ ಬಿಸುಟ ಬಟ್ಟೆ, ಇಲಿ ತಿಂದು ಹರಿದ ಬಟ್ಟೆ, ಬೆಂಕಿಯಲ್ಲಿ ಕರಕಲಾದ ಬಟ್ಟೆ, ಹೆರಿಗೆಯಲ್ಲಿ ಅಥವಾ ಮುಟ್ಟಿನ ರಕ್ತದಲ್ಲಿ ಕಲೆಯಾದ ಬಟ್ಟೆ, ಅಥವಾ ಶ್ಮಶಾನಕ್ಕೆ ಕೊಂಡೊಯ್ಯುವಾಗ ಹೆಣವನ್ನು ಮುಚ್ಚಿದ ಬಟ್ಟೆ.

Significance of Robes worn by Buddhist Monks Buddha Purnima

ಬಿಕ್ಕುಗಳು ಕಸದ ತೊಟ್ಟಿಮತ್ತು ಶ್ಮಶಾನದಲ್ಲಿ ಶುದ್ಧ ಬಟ್ಟೆಗಳನ್ನು ಹುಡುಕಿ ತರಬೇಕಾಗಿತ್ತು. ಉಪಯೋಗಕ್ಕೆ ಬಾರದ ಬಟ್ಟೆಯ ಭಾಗವನ್ನು ಕತ್ತರಿಸಿ ಉಳಿದ ಬಟ್ಟೆಯನ್ನು ಭಿಕ್ಕುಗಳು ತೊಳೆದು ಸ್ವಚ್ಛ ಮಾಡುತ್ತಿದ್ದರು. ನಂತರ ಹಣ್ಣು-ತರಕಾರಿಗಳೊಡನೆ, ಇಲ್ಲವೇ ಗೆಡ್ಡೆ-ಗೆಣಸು, ಹಲಸು ಮತ್ತು ಕೆಂಪು ಮರದ ತೊಗಟೆ, ಹೂಗಳು, ಎಲೆಗಳು, ಹುಣಿಸೆಹಣ್ಣು, ಮತ್ತು ಅರಿಶಿನ ಅಥವಾ ಕೇಸರಿಗಳಂತಹ ಮಸಾಲೆಗಳನ್ನು ಹಾಕಿ ಚೆನ್ನಾಗಿ ಆ ಬಟ್ಟೆಯನ್ನು ಚೆನ್ನಾಗಿ ಕುದಿಸುತ್ತಿದ್ದರು. ಇದು ಬಟ್ಟೆಗೆ ಹಳದಿ ಅಥವಾ ಕಿತ್ತಳೆ ಬಣ್ಣವನ್ನು ನೀಡುತ್ತಿತ್ತು. ಈ ಬಟ್ಟೆಯ ತುಂಡುಗಳನ್ನು ಒಣಗಿಸಿ, ಹೊಲಿದು ನಿಲುವಂಗಿಗಳನ್ನು ತಯಾರಿಸುತ್ತಿದ್ದರು. ಆಗ್ನೇಯ ಏಷ್ಯಾದ ಥೇರವಾದ ಭಿಕ್ಕುಗಳು ಈಗಲೂ ತಮ್ಮ ನಿಲುವಂಗಿಯ ಬಣ್ಣಕ್ಕಾಗಿ ಮಸಾಲೆ ಪದಾರ್ಥಗಳಾದ ಜೀರಿಗೆ, ಅರಿಶಿನ, ಕೆಂಪು ಮೆಣಸಿನ ಪುಡಿ, ಮತ್ತು ಕೇಸರಿಯನ್ನು ಬಳಸುತ್ತಾರೆ. ಈ ದಿನಗಳಲ್ಲಿ ಬೌದ್ಧ ಭಿಕ್ಕು ಮತ್ತು ಭಿಕ್ಕುಣಿಯರು ಕಸದ ರಾಶಿಯಲ್ಲಾಗಲಿ, ಸ್ಮಶಾನದಲ್ಲಾಗಲಿ ಬಟ್ಟೆಯನ್ನು ಹುಡುಕುವುದಿಲ್ಲ. ಬದಲಾಗಿ, ದಾನ ಬಂದಿರುವ ಅಥವಾ ಖರೀದಿಸಿದ ಬಟ್ಟೆಯಿಂದ ಮಾಡಿದ ನಿಲುವಂಗಿಗಳನ್ನು ಧರಿಸುತ್ತಾರೆ.

ಭತ್ತದ ಗದ್ದೆಯ ವಿನ್ಯಾಸ

ವಿನಯ ಪೀಟಕದಲ್ಲಿ ದಾಖಲಾಗಿರುವ ಪ್ರಕಾರ, ಬುದ್ಧ ತನ್ನ ಮುಖ್ಯ ಸಹಾಯಕ ಆನಂದನನ್ನು ಕರೆದು ಭತ್ತದ ಗದ್ದೆಯನ್ನು ಪ್ರತಿನಿಧಿಸುವ ರೀತಿಯಲ್ಲಿ ಬಟ್ಟೆತುಂಡುಗಳನ್ನು ಹೊಲಿದು ನಿಲುವಂಗಿ ತಯಾರಿಸಲು ಹೇಳಿದನು. ಆನಂದ ದೊಡ್ಡ ಬಟ್ಟೆತುಂಡುಗಳನ್ನು ಭತ್ತದ ಗದ್ದೆಗಳ ವಿನ್ಯಾಸದಲ್ಲಿ, ನಡುನಡುವೆ ಕಿರಿದಾದ ಪಟ್ಟಿಗಳನ್ನು ಜೋಡಿಸಿ ಗದ್ದೆಗಳ ಮಧ್ಯದಲ್ಲಿ ಕಾಣುವ ಕಾಲುದಾರಿಯನ್ನು ಹೋಲುವ ರೀತಿಯಲ್ಲಿ ನಿಲುವಂಗಿಯನ್ನು ಹೊಲಿದನು. ಝೆನ್‌ ಸಂಪ್ರದಾಯದಲ್ಲಿ, ಭತ್ತದ ಗದ್ದೆಯ ಈ ಮಾದರಿ ಫಲಪ್ರದತೆಯ ಲಾಭದಾಯಕ ಕ್ಷೇತ್ರವನ್ನುಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಜಗತ್ತನ್ನು ಪ್ರತಿನಿಧಿಸುವ ಮಂಡಲ ಎಂದು ಕೂಡ ಪರಿಗಣಿಸಲಾಗುತ್ತದೆ.

ಗಾಯತ್ರಿ ಮಂತ್ರ ಪಠಿಸುವುದರಿಂದ ಲಾಭವಿದೆಯೇ?

ನಿಲುವಂಗಿಯ ಮೂರು ಮತ್ತು ಐದು ತುಣುಕುಗಳು

ಆಗ್ನೇಯ ಏಷ್ಯಾದ ಥೇರವಾದ ಪಂಥದ ಬಿಕ್ಕು ಮತ್ತು ಬಿಕ್ಕುಣಿಯರು ಧರಿಸುವ ಉಡುಪುಗಳು 25 ಶತಮಾನಗಳ ಹಿಂದಿನ ಮೂಲ ನಿಲುವಂಗಿಯಿಂದ ಹೆಚ್ಚೇನೂ ಬದಲಾಗಿಲ್ಲವೆಂದು ಹೇಳಲಾಗುತ್ತದೆ. ಇವರ ನಿಲುವಂಗಿಯಲ್ಲಿ ಮೂರು ತುಣುಕುಗಳಿವೆ. ಉತ್ತರಸಂಗವೆನ್ನುವುದು ಮೇಲುಡುಪು, ನಿಲುವಂಗಿಯ ಅತ್ಯಂತ ಪ್ರಮುಖವಾದ ತುಣುಕು. 6*9 ಅಡಿಗಳಷ್ಟುಅಗಲವಿರುವ ಇದನ್ನು ಕಷಾಯ ವಸ್ತ್ರ ಎಂದೂ ಕರೆಯುತ್ತಾರೆ. ಎರಡೂ ಭುಜಗಳನ್ನು ಮುಚ್ಚಲು ಇದನ್ನು ಬಳಸಬಹುದಾದರೂ, ಸಾಮಾನ್ಯವಾಗಿ ಎಡ ಭುಜದ ಹೊದಿಕೆಗೆ ಬಳಸಿ, ಬಲ ಭುಜ ಮತ್ತು ತೋಳನ್ನು ಮುಚ್ಚದೆ ಹಾಗೆಯೇ ಬಿಡುತ್ತಾರೆ. ಒಳ ವಸ್ತ್ರ, ಅಂತರವಸಕವನ್ನು ಉತ್ತರಸಂಗದ ಕೆಳಗೆ ಧರಿಸುತ್ತಾರೆ. ಇದನ್ನು ಸೊಂಟದ ಸುತ್ತಲೂ ಪಂಚೆಯ ಹಾಗೆ ಸುತ್ತಿ ಸೊಂಟದಿಂದ ಮೊಣಕಾಲಿನವರೆಗೆ ದೇಹವನ್ನು ಮುಚ್ಚುತ್ತಾರೆ. ಹೊರ ವಸ್ತ್ರ, ಸಂಘತಿ ಎನ್ನುವುದು ನಿಲುವಂಗಿಯ ಹೆಚ್ಚುವರಿ ತುಣುಕು. ಚಳಿಗಾಲದಲ್ಲಿ ಇದನ್ನು ಶಾಲಿನ ಹಾಗೆ ಎದೆಯ ಭಾಗವನ್ನು ಬೆಚ್ಚಗಿರಿಸಲು ಬಳಸಿ, ಬೇಸಿಗೆಕಾಲದಲ್ಲಿ ಮಡಚಿ ಭುಜದ ಮೇಲೆ ಧರಿಸಿಕೊಳ್ಳುತ್ತಾರೆ.

ಮೂಲ ಬಿಕ್ಕುಣಿಯರ ನಿಲುವಂಗಿಗಳು ಬಿಕ್ಕುಗಳ ನಿಲುವಂಗಿಯ ಮೂರು ತುಣುಕು ಮಾತ್ರವಲ್ಲದೆ, ಮತ್ತೆರಡು ಹೆಚ್ಚುವರಿ ತುಣುಕುಗಳನ್ನೂ ಹೊಂದಿದ್ದವು. ಬಿಕ್ಕುಣಿಗಳು ಉತ್ತರಸಂಗದ ಅಡಿಯಲ್ಲಿ ಸಂಕಚ್ಚಿಕ ಎನ್ನುವ ಕುಪ್ಪಸವನ್ನು ಧರಿಸುತ್ತಾರೆ. ಉದಕಸಟಿಕ ಎನ್ನುವ ಸ್ನಾನದ ಬಟ್ಟೆಯನ್ನೂ ಬಿಕ್ಕುಣಿಗಳು ಜೊತೆಯಲ್ಲಿ ಕೊಂಡೊಯ್ಯುತ್ತಾರೆ.

ದೇಶದಿಂದ ದೇಶಕ್ಕೆ ಬದಲಾಗುವ ನಿಲುವಂಗಿ

ಶ್ರೀಲಂಕಾ, ಥೈಲ್ಯಾಂಡ್‌, ಕಾಂಬೋಡಿಯಾ, ಮ್ಯಾನ್ಮಾರ್‌ ಮತ್ತು ಲಾವೋಸ್‌ ನಲ್ಲಿ ಬೌದ್ಧ ಥೇರವಾದ ಪಂಥ ಬಹಳ ಪ್ರಬಲವಾಗಿದೆ. ಈ ದೇಶಗಳಲ್ಲಿರುವ ಭಿಕ್ಕುಗಳ ಉಡುಪು ಆರಂಭಿಕ ಬೌದ್ಧ ಸನ್ಯಾಸಿಗಳ ನಿಲುವಂಗಿಯ ಶೈಲಿಯನ್ನೇ ಹೋಲುತ್ತದೆ. ಚೀನಾದಲ್ಲಿನ ಬಿಕ್ಕುಗಳು ಕಷಾಯ ವಸ್ತ್ರವನ್ನು ಧಾರ್ಮಿಕ ಸಂದರ್ಭಗಳಲ್ಲಿ ಧರಿಸುತ್ತಾರೆ. ಭತ್ತದ ಗದ್ದೆಯ ಮಾದರಿಯನ್ನು ಚೀನೀ ಕಷಾಯ ವಸ್ತ್ರದಲ್ಲಿ ಸಂರಕ್ಷಿಸಲಾಗಿದೆಯಾದರೂ, ಬೌದ್ಧ ವಿಹಾರದ ಮುಖ್ಯಸ್ಥನ ಕಷಾಯವಸ್ತ್ರವನ್ನು ಅಲಂಕೃತವಾದ, ಬ್ರೊಕೇಡ್‌ ಬಟ್ಟೆಯಿಂದ ತಯಾರಿಸಿರುತ್ತಾರೆ. ಇಲ್ಲಿನ ಬಿಕ್ಕುಗಳ ನಿಲುವಂಗಿ ಸಾಮಾನ್ಯವಾಗಿ ಹಳದಿ ಬಣ್ಣದ್ದಾಗಿದ್ದು, ಈ ಬಣ್ಣ ಭೂಮಿಯನ್ನು ಮತ್ತು ಸಮನ್ವಯತೆಯನ್ನು ಪ್ರತಿನಿಧಿಸುತ್ತದೆ. ಸಮಯ ಸರಿದ ಹಾಗೆ, ಚೀನೀ ಭಿಕ್ಕುಗಳು ಸಮುದಾಯಗಳಲ್ಲಿ, ವಿಹಾರಗಳಲ್ಲಿ ವಾಸಿಸಲಾರಂಭಿಸಿದರು. ಪ್ರತಿ ದಿನವೂ ಮನೆ ಮತ್ತು ಉದ್ಯಾನದಲ್ಲಿ ಕೆಲಸ ಮಾಡುತ್ತಿದ್ದರು. ಈ ಅನುಕೂಲಕ್ಕೆ ಕಷಾಯ ವಸ್ತ್ರಕ್ಕೆ ಬದಲಾಗಿ ಸೀಳಿದ ಲಂಗ ಅಥವಾ ಪೈಜಾಮ ಧರಿಸಲಾರಂಭಿಸಿದರು. ಧ್ಯಾನ ಮತ್ತು ಧಾರ್ಮಿಕ ಆಚರಣೆ ವೇಳೆ ಕಷಾಯ ವಸ್ತ್ರ ಧರಿಸಲಾರಂಭಿಸಿದರು.

ಟಿಬೆಟಿನಲ್ಲಿ ಬಿಕ್ಕುಗಳ ನಿಲುವಂಗಿ

Significance of Robes worn by Buddhist Monks Buddha Purnima

ಟೋಪಿಯಾಕಾರದ ತೋಳುಗಳಿರುವ ಹೊದಿಕೆ ಶರ್ಟ್‌ ಅನ್ನು ‘ಧೋಂಕ’ ಎನ್ನುತ್ತಾರೆ. ಇದು ಮರೂನ್‌ ಅಥವಾ ಮರೂನ್‌ ಮತ್ತು ಹಳದಿ ಬಣ್ಣದ್ದಾಗಿದ್ದು, ತೋಳುಗಳ ಮೇಲೆ ನೀಲಿ ವರ್ಣದ ಪೈಪಿಂಗ್‌ ಹೊಂದಿರುತ್ತದೆ. ‘ಧೋಂಕ’ದ ತೋಳುಗಳು ಸಿಂಹದ ಕೇಸರವನ್ನು ಪ್ರತಿನಿಧಿಸುತ್ತವೆ. ತೋಳುಗಳ ಮೇಲಿರುವ ನೀಲಿ ಪೈಪಿಂಗ್‌ ಟಿಬೆಟ್‌ ಮತ್ತು ಚೀನಾ ನಡುವಿನ ಸಂಪರ್ಕವನ್ನು ಪ್ರತಿನಿಧಿಸುತ್ತವೆ. ‘ಷೇಮ್ದಪ್‌’, ‘ಚೋಗ್ಯು’,‘ಜ್ಹೆನ್‌’ ‘ನಾಂಜರ್‌’ ಇತರ ವಿಭಿನ್ನ ವಿನ್ಯಾಸದ ನಿಲುವಂಗಿಗಳು.

ಜಪಾನಿನಲ್ಲಿ ಬಿಕ್ಕುಗಳ ನಿಲುವಂಗಿ

Significance of Robes worn by Buddhist Monks Buddha Purnima

ಉದ್ದವಾದ ಬಿಳಿ ಅಥವಾ ಬೂದು ನಿಲುವಂಗಿ ಅಥವಾ ಕಿಮೋನೋದ ಮೇಲೆ ಚಿಕ್ಕ ಹೊರಗಿನ ಉಡುಪನ್ನು ಧರಿಸುವುದು ಜಪಾನೀ ಬಿಕ್ಕುಗಳ ವಿಶಿಷ್ಟಅಭ್ಯಾಸ. ಇದನ್ನು ‘ಕೊರೊಮೊ’ ಎನ್ನುತ್ತಾರೆ. ಸಾಮಾನ್ಯವಾಗಿ ಕಪ್ಪು ಬಣ್ಣದ್ದಾದರೂ ಇತರೆ ಬಣ್ಣಗಳೂ ಕಂಡು ಬರುತ್ತವೆ.

ಝೆನ್‌ ಸನ್ಯಾಸಿಗಳು ‘ರಕುಸು’ ಎನ್ನುವ ಪುಟ್ಟಉಡುಗೆಯನ್ನು ಕಷಾಯ ನಿಲುವಂಗಿಯನ್ನು ಪ್ರತಿನಿಧಿಸುವ ಹಾಗೆ ಧರಿಸುತ್ತಾರೆ. ಎದೆಯ ಮೇಲೆ ಧರಿಸುವ ರಕುಸುವನ್ನು ಕಷಾಯ ವಸ್ತ್ರದ ಪುಟ್ಟರೂಪ ಎನ್ನಬಹುದು. ವೈವಿಧ್ಯಮಯ ಬಣ್ಣಗಳಲ್ಲಿ ಕಂಡು ಬರುವ ಇದರಲ್ಲಿ ಐದು, ಏಳು ಅಥವಾ ಒಂಬತ್ತು ಪಟ್ಟಿಗಳ ಭತ್ತದ ಗದ್ದೆಯ ಮಾದರಿಯನ್ನು ಕಾಣಬಹುದು.

ಇದಲ್ಲದೆ, ಧಾರ್ಮಿಕ ದಾನ ವಿಧಿವಿಧಾನಗಳಲ್ಲಿ, ದಾನ ಕೊಡುವ ಮತ್ತು ಪಡೆಯುವರಿಬ್ಬರೂ ಪರಸ್ಪರ ಮುಖಗಳನ್ನು ನೋಡದ ಹಾಗೆ ಸನ್ಯಾಸಿಗಳು ತಮ್ಮ ಮುಖವನ್ನು ಭಾಗಶಃ ಮರೆಮಾಚುವ ಒಣಹುಲ್ಲಿನ ಟೋಪಿಯನ್ನು ಧರಿಸುತ್ತಾರೆ. ಇದು ದಾನ ನೀಡುವವರ ಮತ್ತು ಸ್ವೀಕರಿಸುವವರ ಪರಿಪೂರ್ಣತೆಯನ್ನು ಪ್ರತಿನಿಧಿಸುತ್ತದೆ, ಇದು ಪರಿಶುದ್ಧ ದಾನ ಯಾರೂ ದಾನ ನೀಡಲಿಲ್ಲ, ಯಾರೂ ದಾನ ಪಡೆಯಲಿಲ್ಲ.

ಕೊರಿಯಾದಲ್ಲಿ ಭಿಕ್ಕುಗಳ ಉಡುಪು

Significance of Robes worn by Buddhist Monks Buddha Purnima

ದಕ್ಷಿಣ ಕೊರಿಯಾದಲ್ಲಿನ ಹಿರಿಯ ಮತ್ತು ಕಿರಿಯ ಭಿಕ್ಕುಗಳು ಅವರ ವಯಸ್ಸು ಮತ್ತು ಸ್ಥಾನಕ್ಕನುಗುಣವಾಗಿ ಕಷಾಯ ವಸ್ತ್ರವನ್ನು ಧರಿಸುತ್ತಾರೆ. ಸಿಯೋಲ್‌ನಲ್ಲಿರುವ ಚೊಗ್ಯೆ (ಕೊರಿಯನ್‌ ಝೆನ್‌) ಮೊನಾಸ್ಟರಿಯಲ್ಲಿ ಪ್ರತಿ ವರ್ಷ ಮಕ್ಕಳಿಗೆ ತಲೆ ಬೋಳಿಸಿ, ಭಿಕ್ಕುಗಳ ಬಟ್ಟೆಗಳನ್ನು ನೀಡಿ ತಾತ್ಕಾಲಿಕ ದೀಕ್ಷೆ ನೀಡುತ್ತಾರೆ. ಪುಟ್ಟಮಕ್ಕಳು ಮೂರು ವಾರಗಳ ಕಾಲ ಅಲ್ಲಿ ವಾಸವಿದ್ದು ಬೌದ್ಧ ಧರ್ಮದ ಬಗ್ಗೆ ತಿಳಿದುಕೊಳ್ಳುತ್ತಾರೆ. ಈ ಪುಟ್ಟಸನ್ಯಾಸಿಗಳು ‘ರಕಸು’ ಶೈಲಿಯ ಚಿಕ್ಕ ಕಷಾಯ ವಸ್ತ್ರವನ್ನು ಧರಿಸಿದರೆ, ದೊಡ್ಡ ಸನ್ಯಾಸಿಗಳು ಸಾಂಪ್ರದಾಯಿಕ ಕಷಾಯ ವಸ್ತ್ರವನ್ನು ಧರಿಸುತ್ತಾರೆ. ಧಾರ್ಮಿಕ ಸಂದರ್ಭಗಳಲ್ಲಿ ಬಿಕ್ಕುಗಳು, ಬಿಕ್ಕುಣಿಯರು ಮತ್ತು ಪೂಜಾರಿಗಳು ಸಾಮಾನ್ಯವಾಗಿ ಬೂದು ಅಥವಾ ಬಿಳಿ ಬಣ್ಣದ ಒಳ ನಿಲುವಂಗಿಯನ್ನು ಧರಿಸಿ, ಮೇಲುಡುಪಿನ ಸುತ್ತಲೂ ಕಷಾಯ ವಸ್ತ್ರ ಬಳಸುತ್ತಾರೆ. ಜಪಾನ್‌ ಮತ್ತು ಕೊರಿಯಾದಲ್ಲಿ ಮೇಲುಡುಪು ಸಾಮಾನ್ಯವಾಗಿ ಕಪ್ಪು, ಕಂದು, ಅಥವಾ ಬೂದು ಬಣ್ಣದ್ದಾಗಿರುತ್ತದೆ, ಹಾಗೂ ಕಷಾಯ ವಸ್ತ್ರವು ಕಪ್ಪು, ಕಂದು ಅಥವಾ ಚಿನ್ನದ ಬಣ್ಣದ್ದಾಗಿರುತ್ತದೆ.

ಹಳೆಯ ನಿಲುವಂಗಿಯ ವಿವಿಧ ರೂಪಗಳು

ಪ್ರತಿಯೊಬ್ಬ ಬಿಕ್ಕುವಿನ ಬಳಿ ಕೇವಲ ಎರಡು ಜೊತೆ ನಿಲುವಂಗಿಗಳು ಇರುತ್ತವೆ. ದಾನವಾಗಿ ಹೊಸ ನಿಲುವಂಗಿ ದೊರೆತಾಗ ಹಳೆಯದನ್ನು ಏನು ಮಾಡುತ್ತಾರೆ ಎನ್ನುವುದು ತಿಳಿದಾಗ ಮತ್ತಷ್ಟುಅಚ್ಚರಿಯಾಗುತ್ತದೆ. ಹಳೆಯ ನಿಲುವಂಗಿಯ ಬಗ್ಗೆ ಸಾಕ್ಯಮುನಿಯ ಶಿಷ್ಯ ಆನಂದ ಉದೇನ ರಾಜನಿಗೆ ವಿವರಿಸಿ ಹೇಳುವುದು ವಿನಯ ಪೀಟಕದಲ್ಲಿ ದಾಖಲಾಗಿದೆ: ಹೊಸ ನಿಲುವಂಗಿಯನ್ನು ಪಡೆದಾಗ, ಹಳೆಯ ನಿಲುವಂಗಿಯನ್ನು ಹೊದಿಕೆಗಳಾಗಿ ಬಳಸಬೇಕು, ಹೊದಿಕೆ ಸವೆದು ಹಳೆಯದಾದಾಗ ಹಾಸಿಗೆಯ ಮೇಲಿನ ಚಾದರವನ್ನಾಗಿ ಬಳಸಬೇಕು, ಅದೂ ಹಳೆಯದಾದಾಗ ಕಂಬಳಿಯನ್ನಾಗಿ ಉಪಯೋಗಿಸಬೇಕು, ಕಂಬಳಿ ಸವೆದು ತೂತು ಬಿದ್ದಾಗ ಧೂಳು ಒರೆಸುವ ಬಟ್ಟೆಯಾಗಿ ಬಳಸಬೇಕು, ಒರೆಸುವ ಬಟ್ಟೆಚಿಂದಿಯಾಗಿ ಹರಿದಾಗ ಜೇಡಿಮಣ್ಣಿನೊಂದಿಗೆ ಬೆರೆಸಿ ಬಿರುಕು ಬಿಟ್ಟನೆಲ ಮತ್ತು ಗೋಡೆಗಳ ಸಂದುಗಳನ್ನು ಮುಚ್ಚಲು ಬಳಸಬೇಕು. ಹೀಗಾಗಿ ಏನೂ ವ್ಯರ್ಥವಾಗುವುದಿಲ್ಲ.

Significance of Robes worn by Buddhist Monks Buddha Purnima

ಹಾಗೆ ನೋಡಿದರೆ, ನೋಡನೋಡುತ್ತಿದ್ದ ಹಾಗೆಯೇ ಶವದ ಮೇಲಿನ ಹೊದಿಕೆಯೊಂದು ಕಣ್ಣೆದುರೇ ಹತ್ತು ಹಲವು ರೂಪಗಳನ್ನು ಪಡೆಯುತ್ತದೆ. ಬೀಜದಿಂದ ಪ್ರಾರಂಭವಾಗಿ, ಅದು ಹತ್ತಿ ಸಸ್ಯವಾಗಿ, ಬಳಿಕ ದಾರವಾಗಿ, ಶವದ ಹೊದಿಕೆಯಾಗಿ, ಬಿಕ್ಕುವಿನ ನಿಲುವಂಗಿಯಾಗಿ, ಕಂಬಳಿಯಾಗಿ, ಹಾಸಿಗೆಯ ಹೊದಿಕೆಯಾಗಿ, ಅಂತಿಮವಾಗಿ ಬಿರುಕುಗಳನ್ನು ತುಂಬುವ ಸಾಧನವಾಗಿ ಜೀವ ತಳೆಯುತ್ತದೆ. ಒಟ್ಟಿನಲ್ಲಿ ಯಾರಿಗೂ ಬೇಡವಾದ ಬಟ್ಟೆತುಂಡುಗಳಿಂದ ಹೊಲಿದ ನಿಲುವಂಗಿಯೊಂದು ಮಣ್ಣಲ್ಲಿ ಮಣ್ಣಾಗುವಷ್ಟರಲ್ಲಿ ಹತ್ತು ಹಲವು ರೂಪಗಳನ್ನು ತಳೆದು, ಹಲವು ಕಾಲ, ಹಲವು ಬಗೆಗಳಲ್ಲಿ ಬಿಕ್ಕುವಿನ ಸಂಗಡವಿರುತ್ತದೆ.

Follow Us:
Download App:
  • android
  • ios