ಮಹಾಬಲ ಸೀತಾಳಬಾವಿ

ಮಂತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು ಗಾಯತ್ರಿ ಮಂತ್ರ ಎಂಬ ಪ್ರತೀತಿ ಇದೆ. ಇದರಲ್ಲಿರುವ ಸಂದೇಶ, ಈ ಮಂತ್ರಕ್ಕೆ ಬಳಸಿರುವ ಸ್ವರಗಳು, ಈ ಮಂತ್ರ ಪಠಿಸುವಾಗ ಆಗುವ ಧ್ವನಿಯ ಏರಿಳಿತ, ಶ್ವಾಸೋಚ್ಛ್ವಾಸದ ಮೇಲಾಗುವ ಪರಿಣಾಮ, ಕೊನೆಗೆ ಇದರಿಂದ ಮೆದುಳಿನ ಮೇಲೆ ಹಾಗೂ ದೇಹದ ಆರೋಗ್ಯದ ಮೇಲಾಗುವ ಪ್ರಭಾವವನ್ನು ಗಮನಿಸಿಯೇ ಇದಕ್ಕೆ ಪರಮ ಮಂತ್ರದ ಪಟ್ಟ ನೀಡಲಾಗಿದೆ. ವಿಶ್ವಾಮಿತ್ರ  ರಚಿಸಿದ, ಋಗ್ವೇದದಲ್ಲಿ ಗಾಯತ್ರಿ ಎಂಬ ಛಂದಸ್ಸಿನಲ್ಲಿರುವ ಮಂತ್ರ ಇದಾಗಿರುವುದರಿಂದ ಇದಕ್ಕೆ ಗಾಯತ್ರಿ ಮಂತ್ರ ಎಂಬ ಹೆಸರು ರೂಢಿಯಲ್ಲಿದೆ. ‘ನಮ್ಮ ಬೌದ್ಧಿಕ ಶಕ್ತಿಯನ್ನು ಬೆಳಗು’ ಎಂದು ಸೂರ್ಯನನ್ನು ಪ್ರಾರ್ಥಿಸುವ ಮಂತ್ರವಿದು. ಹಾಗಾಗಿ ಇದಕ್ಕೆ ಸಾವಿತ್ರಿ ಅಥವಾ ಸವಿತೃ ಮಂತ್ರ ಎಂಬ ಹೆಸರೂ ಇದೆ. 

ಅರಿಶಿನಕ್ಕೇಕೆ ಹಿಂದು ಧರ್ಮದಲ್ಲಿ ಅಷ್ಟು ಮಹತ್ವ?

ಒಂದು ಅಧ್ಯಯನದ ಪ್ರಕಾರ ಗಾಯತ್ರಿ ಮಂತ್ರವನ್ನು ಸ್ವರಬದ್ಧವಾಗಿ ಪಠಿಸುವಾಗ 1,10,000 ರೀತಿಯಲ್ಲಿ ಧ್ವನಿ ಏರಿಳಿತವಾಗುತ್ತವೆ. ಈ ಏರಿಳಿತಕ್ಕೆ ನಮ್ಮ ಉಸಿರಾಟದ ರೀತಿಯನ್ನು ವಿಶಿಷ್ಟವಾಗಿ ಬದಲಿಸುವ ಹಾಗೂ ಪ್ರಭಾವಿಸುವ ಶಕ್ತಿ ಇದೆ. ಅದು ಅಂತಿಮವಾಗಿ ನಮ್ಮ ಮೆದುಳುನ್ನು ಚುರುಕುಗೊಳಿಸುತ್ತದೆ ಎಂದೂ, ಅದರಿಂದ ಆರೋಗ್ಯದ ಮೇಲೆ ಧನಾತ್ಮಕ ಪ್ರಭಾವ ಉಂಟಾಗುತ್ತದೆ ಎಂದೂ ಹೇಳಲಾಗಿದೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಪ್ರತಿದಿನ ಗಾಯತ್ರಿ ಮಂತ್ರ ಪಠಿಸಬೇಕು, ತಂದೆ ಮೂಲಕ ಉಪದೇಶ ಪಡೆದೇ ಅದನ್ನು ಜಪಿಸಬೇಕು ಎಂಬುದು ಶಾಸ್ತ್ರ ವಿಧಿಸಿದ ಕಟ್ಟಳೆ. ಆದರೆ, ಇಂದು ಆಡಿಯೋ ಕೇಳಿಕೊಂಡು ಅಥವಾ ಪುಸ್ತಕ ನೋಡಿಕೊಂಡು ಇದನ್ನು ಕಲಿಯುವವರೂ ಇದ್ದಾರೆ. ಅವರು ಗಾಯತ್ರಿ ಮಂತ್ರವನ್ನು ಸ್ವರಬದ್ಧವಾಗಿ ಸರಿಯಾದ ರೀತಿಯಲ್ಲಿ ಪಠಿಸದೆ ಇದ್ದರೆ ಪ್ರಯೋಜನವಿಲ್ಲ. ಏಕೆಂದರೆ ಗಾಯತ್ರಿ ಮಂತ್ರದ ಅಕ್ಷರಗಳಿಗಿರುವಷ್ಟೇ ಪ್ರಾಮುಖ್ಯತೆ ಅದರ ಸ್ವರಕ್ಕೂ ಇದೆ.

- ಮಹಾಬಲ ಸೀತಾಳಬಾವಿ