Asianet Suvarna News Asianet Suvarna News

ಸೂರ್ಯನ ಆರಾಧಿಸಿದರೆ ದರಿದ್ರನೂ ಅಂಬಾನಿಯಂತಾಗುತ್ತಾನೆ!

ಜ್ಯೋತಿಷ್ಯವೊಂದು ಶಾಸ್ತ್ರ. ಇದನ್ನು ಶಾಸ್ತ್ರಬದ್ಧವಾಗಿ ನೋಡಲು ಕಲಿತರೆ ಯಾರು ಬೇಕಾದರೂ ಜ್ಯೋತಿಷಿ ಆಗಬಹುದು. ಜ್ಯೋತಿಷ್ಯದ ಮಹತ್ವ ಹಾಗೂ ಜಾತಕ ನೋಡುವ ಟಿಪ್ಸ್ ಇಲ್ಲಿದೆ...

Learn to study horoscope significance of Sun in astrology
Author
Bengaluru, First Published Oct 29, 2018, 5:21 PM IST
  • Facebook
  • Twitter
  • Whatsapp

ಜಾತಕ ನೋಡುವುದ ಕಲೀರಿ-3

ಕಳೆದ ಸಂಚಿಕೆಯಲ್ಲಿ ನಾವು ಈ ಜ್ಯೋತಿಷ ಶಾಸ್ತ್ರ ಯಾಕೆ ಅಷ್ಟು ಮಹತ್ವ? ಮನುಷ್ಯನ ಜೀವನಕ್ಕೂ ಜ್ಯೋತಿಷಕ್ಕೂ ಇರುವ ನಂಟೇನು? ಪ್ರತಿ ಮನೆಯೂ ಹೇಳುವ ರಹಸ್ಯ ಏನು?  ಇತ್ಯಾದಿ ಗಮನ ಹರಿಸಿದ್ವಿ. ಇಂದು ನಾವು ಈ ಶಾಸ್ತ್ರದ ಪ್ರಧಾನ ಗ್ರಹ, ಕೇಂದ್ರ ಬಿಂದು ಅಂತ ಕರೆಯುವ ಸೂರ್ಯನ ಕುರಿತಾಗಿ ಅಂದರೆ ಸೂರ್ಯಗ್ರಹದ ಶಕ್ತಿ ಏನು..? ಯಾಕಾಗಿ ಆತ್ಮ ಕಾರಕ ಅಂತಾರೆ ಇತ್ಯಾದಿ ವಿಷಯಗಳ ಕುರಿತಾಗಿ ಚಿಂತನೆ ಮಾಡೋಣ. 

ಜ್ಯೋತಿಷ್ಯದ ಪ್ರಕಾರ ಸೂರ್ಯ ಪ್ರಧಾನ ಗ್ರಹ. ಸೂರ್ಯನೇ ರಾಜ. ರಾಜ ಗ್ರಹ ಅಂತಲೇ ಹೆಸರು.  ಸೂರ್ಯಗ್ರಹ ಇತರೆ ಗ್ರಹಗಳ ಜೊತೆ ಸೇರಿದರೆ, ಅಂದ್ರೆ ಗ್ರಹಗಳ ಸಾಮೀಪ್ಯತೆಯಾದರೆ ಇತರೆ ಗ್ರಹಗಳು ತಮ್ಮ ಶಕ್ತಿಯನ್ನೇ ಕಳೆದುಕೊಳ್ಳುತ್ತವೆ.  ಅದನ್ನೇ ಜ್ಯೋತಿಷ್ಯ ಭಾಷೆಯಲ್ಲಿ ಅಸ್ತರಾಗುವುದು ಅಂತಾರೆ. ಮೌಢ್ಯ ಅಂತಲೂ ಹೇಳ್ತಾರೆ. ಅಷ್ಟ್ಯಾಕೆ ಸ್ವಾಮಿ  ನಾವೇ ಎಷ್ಟೋ ಬಾರಿ ಗಮನಿಸಿದ್ದೇವಲ್ಲ : ನಾಲ್ಕುದಿನ ಮೋಡ ಮುಚ್ಚಿದ್ರೆ ನಮ್ಮ ಮನಸ್ಸೂ ಮಂಕಾಗಿರತ್ತೆ. ಏನೂ ತೋಚುವುದಿಲ್ಲ. ಯಾವಾಗ ಬಿಸಿಲು ಬರತ್ತಪ್ಪಾ ಅಂತ ಚಡಪಡಿಸಿರ್ತೇವೆ ಅಲ್ವಾ..? ಅದೇ ಸೂರ್ಯ ಶಕ್ತಿ.  ಅಷ್ಟು ಪ್ರಭಾವ ಶಾಲಿ ಸೂರ್ಯ. ತಾನಿದ್ದಾನೆ ಅಂದರೆ ಹತ್ತಿರ ಇರುವ ಯಾವ ಗ್ರಹಗಳೂ ಏನೂ ಮಾಡಲಾರವು. ಅಷ್ಟೇ ಅಲ್ಲ ಬೇರೆ ಯಾವ ಗ್ರಹಗಳೂ ಕೂಡ ಸೂರ್ಯನ ಸಮೀಪದಲ್ಲಿದ್ದಾವೆ ಅಂದ್ರೆ ( ಒಂದೊಂದೂ ಗ್ರಹಕ್ಕೂ ಇಷ್ಟು ಡಿಗ್ರಿ ಒಳಗಡೆ ಇರಬೇಕು ಅಂತ ಪ್ರಮಾಣ ಇದೆ) ಹಾಗಿದ್ದಾಗ ಅವುಗಳ ಪಾಲಿನ ಫಲವನ್ನ ಕೊಡಲಾರವು. ಹಾಗೆ ಸೂರ್ಯ ಎಲ್ಲ ಗ್ರಹಗಳನ್ನೂ ಮೀರಿ ನಿಂತಿರುವ ಶಕ್ತಿಯಾಗಿದ್ದಾನೆ. ಅದನ್ನೇ ಸೂರ್ಯ ಪ್ರಭಾವ ಅಂತಾರೆ. 

ಇಂಥ ಸೂರ್ಯನ ಹಿನ್ನೆಲೆ ಏನು..? 
ಯಾರೀ ಸೂರ್ಯ? ಇದು ಅರ್ಥವಾಗದೆ ಸೂರ್ಯನ ಫಲಗಳನ್ನ ಹೇಳುವುದಕ್ಕಾಗಲೀ, ಸೂರ್ಯ ಕೊಡುವ ಫಲಗಳನ್ನಾಗಲೀ ಚಿಂತನೆ ಮಾಡಲಿಕ್ಕೆ ಸಾಧ್ಯವಿಲ್ಲ. ಸೂರ್ಯನ ಮೂಲ ಎಲ್ಲಿಯದು ಅಂತ ಹುಡುಕಿ ಹೊರಟರೆ ವಿಸ್ತಾರವಾದ ವಂಶವೃಕ್ಷ ಬಿಚ್ಚಿಕೊಳ್ಳತ್ತೆ. ಸ್ವಲ್ಪ ವಿಸ್ತಾರವಾಗಿ ತಿಳಿದರೆ ತಾನೆ ಸ್ಪಷ್ಟವಾಗಿ ತಿಳಿಯುತ್ತದೆ. ಬುನಾದಿ ಭದ್ರವಾಗಿರಬೇಕು ಆಗಲೇ ನಾವು ಕಟ್ಟುವ ಸೌಧ ಗಟ್ಟಿಯಾಗಿರುತ್ತೆ. ಹಾಗಾಗಿ ವಿಸ್ತಾರವಾಗಿ ತಿಳಿಯುವ ಪ್ರಯತ್ನ ಮಾಡೋಣ. 

ಈ ಜಗದ ಆದಿಯಲ್ಲಿ ಪರಬ್ರಹ್ಮ ವಸ್ತು ವ್ಯಾಪಕವಾಗಿತ್ತು. ಅದನ್ನ ಅವ್ಯಕ್ತ ಬ್ರಹ್ಮ ಅಂತಾರೆ. ಅದನ್ನ ಉಪನಿಷತ್ ಭಾಷೆಯಲ್ಲಿ ಸತ್ ಅಂತ ಕರೀತಾರೆ. ಆ ಸತ್‌ನಿಂದ ವಿಷ್ಣುವಿನ ಸೃಷ್ಟಿಯಾಗತ್ತೆ. ಆ ವಿಷ್ಣುವಿನಿಂದ ಚತುರ್ಮುಖ ಬ್ರಹ್ಮ, ಆ ಚತುರ್ಮುಖನಿಂದ ಹತ್ತು ಜನ ಮಾನಸ ಪುತ್ರರ ಸೃಷ್ಟಿಯಾಗತ್ತೆ. ಆ ಹತ್ತು ಜನರೇ ಮರೀಚಿ ಮತ್ರ್ಯಂಗಿರಸೌ ಪುಲಸ್ತ್ಯಂ ಪುಲಹಂ ಕ್ರತುಮ್ ಪ್ರಚೇತಸಂ ವಸಿಷ್ಠಂ ಚ ಭೃಗುಂ ನಾರದಮೇವ ಚ ಅಂತ.  ಅಂದ್ರೆ 
ಮರೀಚಿ
ಅತ್ರಿ
ಅಂಗಿರಸ
ಪುಲಸ್ತ್ಯ
ಪುಲಹ
ಕ್ರತು
ಪ್ರಚೇತಸ
ವಸಿಷ್ಠ
ಭೃಗು
ನಾರದ
 ಈ ಹತ್ತು ಜನರನ್ನೇ ಬ್ರಹ್ಮ ಮಾನಸ ಪುತ್ರರು ಅಂತಾರೆ. 

ಮೊದಲು ಸೂರ್ಯನ ಮೂಲವನ್ನಷ್ಟೇ ತಿಳಿಯೋಣ. ಈ ಹತ್ತು ಜನ ಮಾನಸಪುತ್ರರಲ್ಲಿ ಮೊತ್ತ ಮೊದಲ ಋಷಿಯೇ ಮರೀಚಿ. ಆ ಮರೀಚಿಯೇ ಸೂರ್ಯನ ಮೂಲ. ಆ ಮರೀಚಿಯ ಮಗ ಕಶ್ಯಪ ಅಂತ. ಆ ಕಶ್ಯಪರಿಗೆ ಸಾಕಷ್ಟು ಜನ ಮಡದಿಯರು. ಅದರಲ್ಲಿ ಒಬ್ಬಳು ಅದಿತಿ. ಈ ಕಶ್ಯಪ ಅದಿತಿಯರು ಒಮ್ಮೆ ಸಂತಾನಕ್ಕಾಗಿ ತಪಸ್ಸು ಮಾಡಿದರು. ಅದಿಯಂತೂ ಕಟ್ಟುನಿಟ್ಟಾಗಿ ಉಪವಾಸ ವ್ರತದಲ್ಲಿದ್ದು, ತಪಸ್ಸನ್ನಾಚರಿಸುತ್ತಿದ್ದಳು. ಆ ಉಪವಾಸದಿಂದಾಗಿ ಆಕೆ ತುಂಬ ಕೃಶಳಾಗಿಬಿಟ್ಟಿದ್ದಳು. ಆಗ ಕಶ್ಯಪರು ಅದಿತಿಗೆ ಗಟ್ಟಿ ಧ್ವನಿಯಲ್ಲಿ  ಉಪವಾಸ ಅಂದ್ರೆ ದೇವರ ಸಮೀಪದಲ್ಲಿರೋದು,  ಹೀಗೆ ಅನ್ನಪಾನಾದಿಗಳನ್ನ ಬಿಟ್ಟು ಕೂರುವುದಲ್ಲ ಅಂತ ಹೇಳಿದರಂತೆ. ಆಗ ಆಕೆಗಾದ ನೋವನ್ನ ಉಪಶಮನ ಮಾಡಲಿಕ್ಕೆ  ಮಾ ಆರ್ತ: ( ಅಳಬೇಡ ) ಹುಟ್ಟುವ ಮಗು ಚನ್ನಾಗೇ ಹುಟ್ಟಲಿದೆ ಅಂತ ಅಭಯ ನೀಡ್ತಾರೆ. ಅವರು ನೀಡಿದ ಅಭಯ ಮಾತೇ ಆ ಮಗುವಿನ ಹೆಸರಾಯಿತು ಅಂತಾರೆ. 

ಜಾತಕದಲ್ಲಿರುವ ಮನೆಗಳ ಅರ್ಥವೇನು?

ಮಾ ಆರ್ತ: ಅಂಡ: ಮಾರ್ತಾಂಡ: ಅಂತ ಹಾಗಾಗೇ ಆ ಮಗುವಿಗೆ ಮಾರ್ತಾಂಡ ಅನ್ನುವ ಹೆಸರು ಬಂದದ್ದು. 
ಇನ್ನೊಂದು ಕಥೆ ಪ್ರಕಾರ ಅದಿತಿಯ ಮುಂದೆ ಬುಧ ಭಿಕ್ಷಾರ್ಥಿಯಾಗಿ ಬಂದಿದ್ದ ಆಕೆ ಎಷ್ಟು ಹೊತ್ತಾದರೂ ಭಿಕ್ಷೆ ನೀಡದ ಕಾರಣ ನಿಮ್ಮ ಗರ್ಭ ನಷ್ಟವಾಗಲಿ ಅಂತ ಶಾಪ ಕೊಟ್ಟನಂತೆ. ಆ ಶಾಪದ ನುಡಿ ಕೇಳಿ ಅದಿತಿ ಗೋಳಿಡಳು ಪ್ರಾರಂಭಿಸಿದಳಂತೆ. ಆನಂತರ ಕಶ್ಯಪರು ಮಾ ಆರ್ತ: ಅಂತ ಅಭಯ ಕೊಟ್ಟರು ಹಾಗಾಗಿ ಮಾರ್ತಾಂಡ ಅಂತ ಆಯ್ತು ಅಂತಲೂ ಹೇಳ್ತಾರೆ. ಇರಲಿ ಇಂಥ ಅದಿತಿಗೆ ಹನ್ನೆರಡು ಜನ ಮಕ್ಕಳು. ಧಾತೃ, ಅರ್ಯಮ, ಮಿತ್ರ, ವರುಣ, ಅಂಶ, ಭಗ, ಇಂದ್ರ, ವಿವಸ್ವಾನ್, ಪರ್ಜನ್ಯ, ಪೂಷ, ತ್ವಷ್ಟ, ( ತ್ವಷ್ಟ್ರು ) ವಿಷ್ಣು ಅಂತ. 

ರಹಸ್ಯ ತಿಳಿದುಕೊಳ್ಳಿ, ಜಾತಕ ನೋಡುವುದ ಕಲೀರಿ

ಈ ಹನ್ನೆರಡು ಜನರಲ್ಲಿ ಒಬ್ಬನಾದ ವಿವಸ್ವಾನ್ ಇದ್ದಾನಲ್ಲಾ ಅವನೇ ನಾವೂ ನೀವೂ ನೋಡಿತ್ತಿದ್ದೇವಲ್ಲ ಆ ಸೂರ್ಯ. ಗ್ರಹ ರಾಜ. ಈ ಸೂರ್ಯನಿಂದಲೇ ಸೂರ್ಯವಂಶ ಅನ್ನೋದು ಬಂದದ್ದು ಅದೇ ವಂಶದಲ್ಲೇ ಶ್ರೀರಾಮಚಂದ್ರರ ಅವತಾರವಾಗಿದ್ದು. ಆ ಅದು ವಿಷಯ ಬೇರೆ. ಸದ್ಯಕ್ಕೆ ನಾವು ಸೂರ್ಯನ ಕಡೆ ತಿರುಗೋಣ. ಈ ಸೂರ್ಯನನ್ನ ಜ್ಯೋತಿಷ್ಯದಲ್ಲಿ ಆತ್ಮ ಕಾರಕ ಅಂತಾರೆ. ಅಂದ್ರೆ ನಮ್ಮೊಳಗಿನ ಅಂತ:ಶಕ್ತಿ ಇದೆಯಲ್ಲಾ ಆ ಶಕ್ತಿಗೆ ಕಾರಣವೇ ಸೂರ್ಯ ಅಂತಾರೆ.  ಯಾಕೆ ಗೊತ್ತಾ..? ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದ್ದರೆ ನಾವು ಉಪನಿಷತ್ತುಗಳನ್ನ ಆಶ್ರಯಿಸಬೇಕು. ಅಲ್ಲಿ ಸೂರ್ಯನ ನಿಜ ಸ್ವರೂಪ ಆತ್ಮ ಸ್ವರೂಪ ಅನ್ನೋದು ಅರ್ಥವಾಗತ್ತೆ. ಅದು ಅರ್ಥವೇ ಆಗದೆ ಜ್ಯೋತಿಷದಲ್ಲಿನ ಸೂರ್ಯ ಫಲ ಹೇಳಲಿಕ್ಕೆ ಸಾಧ್ಯವಾಗೋದೇ ಇಲ್ಲ. 
Learn to study horoscope significance of Sun in astrology

ಸಾಮಾನ್ಯನಲ್ಲ ಸೂರ್ಯ:
ಸೂರ್ಯ ಸಾಮಾನ್ಯ ಗ್ರಹವಲ್ಲ. ಆ ಗ್ರಹಬಲವೊಂದಿದ್ದರೆ ಎಂಥವನೂ ರಾಜನಾಗಿಬಿಡ್ತಾನೆ. ಎಂಥ ದರಿದ್ರನೂ ಅಂಬಾನಿಯಂತಾಗಿಬಿಡ್ತಾನೆ. ಅಷ್ಟೇ ಯಾಕೆ ಸ್ವಾಮಿ ನೀವು ಯಾವುದೇ ರಂಗದಲ್ಲಿರಿ, ಆ ರಂಗದಲ್ಲಿ ನೀವು ಬೆಳಗಬೇಕು, ಆ ರಂಗದಲ್ಲಿ ನೀವು ಅದ್ವಿತೀಯ ವ್ಯಕ್ತಿಯಾಗಬೇಕು ಎಲ್ಲರೂ ನಿಮ್ಮ ಅಂಗೈಯಲ್ಲಿರ್ಬೇಕು ಅಂದ್ರೆ ಸೂರ್ಯನ ಅನುಗ್ರಹ ಇರಲೇಬೇಕು. ಯಾರು ಸೂರ್ಯನ ಉಪಾಸನೆಯನ್ನು ಮಾಡ್ತಾರೋ ಅವರು ಜೀವನದಲ್ಲಿ ಎಂದಿಗೂ ಕುಗ್ಗುವುದಿಲ್ಲ. ಎಂದಿಗೂ ಮತ್ತೊಬ್ಬರ ಬಳಿ ತಲೆ ಬಗ್ಗಿಸುವ ಪ್ರಸಂಗವೇ ಬರೋದಿಲ್ಲ. ಅದರಲ್ಲೂ ಜ್ಯೋತಿಷ್ಯದ ಆಸಕ್ತರು ಸೂರ್ಯನ ಅನುಗ್ರಹಕ್ಕೆ ಪಾತ್ರರಾಗಿಬಿಟ್ಟರೆ ಸಾಕ್ಷಾತ್ ವರಾಹಮಿಹಿರರೇ ಆಗಿಬಿಡುತ್ತೀರಿ. 

ವರಾಹಮಿಹಿರ ಯಾರು..? 
ಮಿಹಿರ ಅಂದ್ರೆ ಸೂರ್ಯ ಅಂತಲೇ. ವರಾಹ ಅಂದ್ರೆ ಹಂದಿ ಅಂತ. ಯಾಕೆ ವರಾಹ ಮಿಹಿರ ಅಂತ ಆಯ್ತು ಅಂತ ನೋಡಿದರೆ ಅದರ ಹಿಂದಿರುವ ಶಕ್ತಿಯೂ ಸೂರ್ಯನೇ.  ಆ ಮಹನೀಯನ ಜೀವನ ಕಥೆ ಕೇಳಿಬಿಟ್ಟರೆ ನೀವೂ ಸೂರ್ಯನ ಆರಾಧಕರಾಗುವುದರಲ್ಲಿ ಸಂಶಯವೇ ಇಲ್ಲ. ಆ ಕಥೆ ಏನು..? ಮತ್ತು ಆ ಸೂರ್ಯನನ್ನೇ ಆತ್ಮ ಕಾರಕ ಅಂತ ಯಾಕೆ ಕರೀತಾರೆ. ಸೂರ್ಯನೇ ಜ್ಯೋತಿಷ್ಯದ ಶಕ್ತಿಯಾಗಿರುವುದು ಯಾಕೆ..? ಈ ಎಲ್ಲ ಮಹತ್ತರ ಮಾಹಿತಿ ತಿಳಿಯೋಣ ಮುಂದಿನ ಸಂಚಿಕೆಯಲ್ಲಿ ಕಾಯ್ತಾ ಇರಿ.

( ಮುಂದುವರೆಯಲಿದೆ...)
- ಗೀತಾಸುತ

ಸಂಪರ್ಕ ಸಂಖ್ಯೆ :  9741743565 / 9164408090

Follow Us:
Download App:
  • android
  • ios