ಸಣ್ಣ ಉದ್ದಿಮೆದಾರರಿಗೆ ಫೇಸ್ಬುಕ್ ವೇದಿಕೆಯಾಗಿದ್ದಾಯ್ತು. ಈಗ ಗೂಗಲ್ ಸರದಿ. ಗೂಗಲ್ ಈಗ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಸಿದ್ಧಪಡಿಸುತ್ತಿದ್ದು, ಸಣ್ಣ ಉದ್ದಿಮೆದಾರರನ್ನು ಒಂದೇ ವೇದಿಕೆಯಡಿ ತಂದಿದೆ. ಇದು ಉದ್ದಿಮೆಗಳಿಗೆ ಸಹಾಯಕವಾಗುತ್ತಿದ್ದು, ಗ್ರಾಹಕರಿಗೂ ಅನುಕೂಲವಾಗಿದೆ. ಹೀಗಾಗಿ ಕೋವಿಡ್-19 ಯುಗದಲ್ಲಿ ಡಿಜಿಟಲ್ ಕ್ರಾಂತಿ ಮಾಡಲು ಗೂಗಲ್ ಸಹ ಮುಂದಾಗಿದ್ದು, ಎಷ್ಟರಮಟ್ಟಿಗೆ ಸಕ್ಸಸ್ ಕಾಣಲಿದೆ ಎಂಬುದನ್ನು ನೋಡಬೇಕಿದೆ.
ಈ ಟೆಕ್ ಯುಗದಲ್ಲಿ ತಂತ್ರಜ್ಞಾನದ ಬಗ್ಗೆ ಎಷ್ಟು ತಿಳಿದರೂ ಸಾಲದು. ಹೊಸ ಹೊಸ ತಂತ್ರಜ್ಞಾನಗಳು ಬರುತ್ತಲೇ ಇವೆ. ಇದೇ ವೇಳೆ ಇರುವ ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಎಷ್ಟೆಲ್ಲ ಲಾಭ ಮಾಡಿಕೊಳ್ಳಬಹುದು ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ. ನಾವು ಗೂಗಲ್ ಅನ್ನೇ ನೋಡುವುದಾದರೂ ಇದು ಕೇವಲ ಸರ್ಚ್ ಇಂಜಿನ್ ಆಗಿ ಮಾತ್ರ ಉಳಿದಿಲ್ಲ. ಗೂಗಲ್ ಪೇ ಮೂಲಕ ಬ್ಯಾಂಕಿಂಗ್ ಕ್ಷೇತ್ರ, ಗೂಗಲ್ ಮೀಟ್, ಗೂಗಲ್ ಮ್ಯಾಪ್ ಹೀಗೆ ಅನೇಕ ಕ್ಷೇತ್ರಗಳತ್ತ ನುಗ್ಗಿದೆ, ನುಗ್ಗುತ್ತಿದೆ. ಈಗ ಗೂಗಲ್ ಸಣ್ಣ ಉದ್ದಿಮೆಗಳತ್ತ ಕಣ್ಣಿಟ್ಟಿದೆ…!
ಹೌದು, ಗೂಗಲ್ ಸಣ್ಣ ಉದ್ದಿಮೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲು ಮುಂದಾಗಿದೆ. ಹಾಗಂತ ಸಣ್ಣ ಉದ್ದಿಮೆಗಳಿಗೆ ಕಾಂಪಿಟೇಟ್ ಆಗಿ ಯಾವುದೇ ಉದ್ಯಮವನ್ನು ಹುಟ್ಟುಹಾಕುತ್ತಿಲ್ಲ. ಬದಲಾಗಿ ಆ್ಯಪ್ ಆಧಾರಿತ ಸೇವೆ ನೀಡುವ ಮೂಲಕ ಅವರ ಉದ್ಯಮಗಳಿಗೇ ಸಹಾಯ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಈಗಾಗಲೇ ಫೇಸ್ಬುಕ್ ಇಂಥದ್ದೊಂದು ಸೇವೆಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಅದು ಯಶಸ್ಸನ್ನೂ ಸಾಧಿಸಿದೆ. ಹಾಗಾಗಿ ಅದೇ ಹಾದಿಯಲ್ಲಿ ಈಗ ಟೆಕ್ ದೈತ್ಯ ಗೂಗಲ್ ಸಹ ಮುಂದಾಗಿದೆ. ಇದಕ್ಕೆ ದೊಡ್ಡ ಪ್ಲಸ್ ಎಂದರೆ ಫೇಸ್ಬುಕ್‌ಕ್ಕಿಂತ ಬಳಕೆದಾರರ ಬಳಗ ತುಸು ದೊಡ್ಡದಿದೆ ಅಲ್ಲವೇ? ಹಾಗಾಗಿ ಆ ನಿಟ್ಟಿನಲ್ಲಿ ಯಶ ಸಾಧಿಸಬಹುದು ಎಂಬುದು ಟೆಕ್ ವಿಶ್ಲೇಷಕರ ಅಂಬೋಣ.
ಇದನ್ನು ಓದಿ: ಆ್ಯಂಡ್ರಾಯ್ಡ್, ಐಫೋನ್‌ನಲ್ಲಿ ಅನಿಮೇಟೆಡ್ ಸ್ಟಿಕ್ಕರ್ ಪೀಚರ್ ಕೊಡ್ತಿರೋ ವಾಟ್ಸಪ್
'ಗೂಗಲ್ ಸ್ಮಾಲ್ ಬ್ಯುಸಿನೆಸ್ ಹಬ್'
ಈಗ ಹೆಚ್ಚು ಪ್ರಚಲಿತದಲ್ಲಿರುವುದು ಸೋಷಿಯಲ್ ಮೀಡಿಯಾ ಆಗಿರುವುದಲ್ಲದೆ, ಕೋವಿಡ್-19 ಮಹಾಮಾರಿ ಬಂದ ಮೇಲೆ ಬಹುತೇಕ ಎಲ್ಲ ಚಟುವಟಿಕೆ ಕುಂಟಿತಗೊಂಡಿವೆ. ಆದರೆ, ಹೀಗೆ ಎಷ್ಟು ಎಂದು ಕುಳಿತುಕೊಳ್ಳಲು ಆದೀತು. ಜನ ಸಹ ಹೊರಬರಲು ಹೆದರುತ್ತಿದ್ದಾರೆ. ಆ ನಿಟ್ಟಿನಲ್ಲಿ ಉದ್ದಿಮೆಗಳ ಮಾಹಿತಿಯನ್ನು ಒಂದೇ ಕಡೆ ಕೊಡುವಂತೆ ಮಾಡಲು ಈಗ ಯೋಜನೆ ಸಿದ್ಧವಾಗಿದೆ. ಇದಕ್ಕಾಗಿ “ಗೂಗಲ್ ಸ್ಮಾಲ್ ಬ್ಯುಸಿನೆಸ್ ಹಬ್” ಅನ್ನು ಪ್ರಾರಂಭಿಸಿದೆ. ಸದ್ಯ ಇದು ಇಂಗ್ಲಿಷ್ ನಲ್ಲಿದ್ದು, ಶೀಘ್ರದಲ್ಲೇ ಹಿಂದಿಯಲ್ಲೂ ಪ್ರಾರಂಭಿಸುವುದಾಗಿ ಗೂಗಲ್ ಹೇಳಿಕೊಂಡಿದೆ.
ಈಗಾಗಲೇ ಬ್ಯುಸಿನೆಸ್‌ಗಳಿಗೆ ಸಹಾಯವಾಗಲೆಂದು ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಗೂಗಲ್ ಪರಿಚಯಿಸಿದೆ. ಇದಲ್ಲದೆ, ಗೂಗಲ್ ಮೈ ಬ್ಯುಸಿನೆಸ್ ಆ್ಯಪ್ ಹಾಗೂ ಗೂಗಲ್ ಪೇ ಆ್ಯಪ್ ಗಳು ಉದ್ದಿಮೆಗಳಿಗೆ ಸಹಕಾರಿಯಾಗಿದೆಯಲ್ಲದೆ, ಸಣ್ಣ ಸಣ್ಣ ಉದ್ದಿಮೆಗಳಿಗೂ ಬಹಳ ಸಹಾಯಕವಾಗಿದೆ. ಇದು ಡಿಜಿಟಲ್ ಪೇಮೆಂಟ್ ಪದ್ಧತಿಯನ್ನು ಪ್ರೋತ್ಸಾಹ ಮಾಡಿದಂತೆಯೂ ಆಗುತ್ತಿದೆ. ಇದೇ ಮಾದರಿಯಾಗಿ ಉದ್ದಿಮೆಗಳಿಗೆ ನೆರವಾಗಲು ಗೂಗಲ್ ಮುಂದಾಗಿದೆ.
ಇದನ್ನು ಓದಿ: ವಾಟ್ಸಪ್ ರೀತಿ ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಟ್ವೀಟ್ ಮಾಡಿ!
ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಡಿಜಿಟಲ್ ವೇದಿಕೆಯಲ್ಲಿ ಅನುಕೂಲವಾಗಬೇಕು. ಆದರೆ, ಇಲ್ಲಿ ಇರುವ ಕೆಲವು ಸಮಸ್ಯೆಗಳನ್ನು ಗುರುತಿಸಿ ನಿವಾರಿಸಲಾಗಿದೆ. ಈ ನಿಟ್ಟಿನಲ್ಲಿ ಫೀಚರ್ ಗಳು ಕೆಲಸ ಮಾಡುತ್ತಿದ್ದು, ಸ್ಥಿರತೆಯನ್ನು ಪ್ರದರ್ಶಿಸುವುದರಿಂದ ಡಿಜಿಟಲ್ ಕ್ಷೇತ್ರದಲ್ಲಿ ಸಫಲತೆಯನ್ನು ಸಾಧಿಸಬಹುದು ಎಂದು ಗೂಗಲ್ ಹೇಳಿಕೊಂಡಿದೆ.
ಪ್ರತಿ ತಿಂಗಳು 15 ಕೋಟಿ ನೇರ ಸಂಪರ್ಕ
ಉದ್ದಿಮೆ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಸಾಧಿಸಲು ಇದು ಅನುಕೂಲವಾಗಿದೆ. ಗ್ರಾಹಕರ ಕರೆ, ಆನ್‌ಲೈನ್ ರಿಸರ್ವೇಶನ್, ಡೈರೆಕ್ಷನ್ ರಿಕ್ವೆಸ್ಟ್ ಗಳ ಸಹಿತ ಪ್ರತಿ ತಿಂಗಳು 15 ಕೋಟಿ ನೇರ ಸಂಪರ್ಕ ಸಾಧಿಸಲು ವೇದಿಕೆಯಾಗುತ್ತಿದೆ. ಅಲ್ಲದೆ, ಸಾರ್ವಜನಿಕರೂ ಸಹ ಕೋವಿಡ್-19 ಹಿನ್ನೆಲೆ ಹೆಚ್ಚೆಚ್ಚು ಡಿಜಿಟಲ್ ಕ್ಷೇತ್ರದತ್ತ ಒಲವು ತೋರುತ್ತಿದ್ದಾರೆ. ಇದರಿಂದ ಬೇರೆ ಬೇರೆ ಉದ್ದಿಮೆಗಳಿಗೆ ಸಹಾಯಕವಾಗುತ್ತಿದೆ. ಜೊತೆಗೆ ಡಿಜಿಟಲ್ ಸ್ಕಿಲ್ಲಿಂಗ್ ಪ್ರೋಗ್ರಾಮ್ ಇನ್ ಇಂಡಿಯಾ ಯೋಜನೆಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಹಾಗೂ ಉದ್ದಿಮೆದಾರರು ಅನುಕೂಲವನ್ನು ಪಡೆದುಕೊಂಡಿದ್ದಾರೆಂದು ಗೂಗಲ್ ಹೇಳಿಕೊಂಡಿದೆ.
ಇದನ್ನು ಓದಿ: ನಿಮ್ಮನೆ ಹತ್ತಿರ ಕೊರೋನಾ ಟೆಸ್ಟಿಂಗ್ ಸೆಂಟರ್ ಎಲ್ಲಿದೆ ಅಂತ ಹೇಳುತ್ತೆ ಗೂಗಲ್!.
ಗ್ರಾಹಕರಿಗೆ ಅನುಕೂಲ
ಗೂಗಲ್‌ನ ನೂತನ ಸಿಸ್ಟಮ್‌ನಿಂದ ಗ್ರಾಹಕರಿಗೂ ಸಾಕಷ್ಟು ಅನುಕೂಲವಾಗಲಿದ್ದು, ತಮ್ಮ ಸುತ್ತಮುತ್ತಲು ಇರುವ ಉದ್ದಿಮೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಯಾವುದು ಎಲ್ಲಿ ಸಿಗಲಿದೆ? ಅವುಗಳಿಗೆ ಬೆಲೆ ಎಷ್ಟು? ಅವುಗಳಿಗೆ ಯಾವ ರೇಟಿಂಗ್ ಇದೆ ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ.