ಕಾಡು ಪ್ರಾಣಿಗಳು ನಾಡಿನವರ ಮೇಲೆ ಅಟ್ಯಾಕ್ ಮಾಡುವುದಕ್ಕೆ ಕಾರಣವೇನು?

By Kannadaprabha NewsFirst Published Oct 22, 2019, 12:37 PM IST
Highlights

ನರಹಂತಕ ಹುಲಿ ಬಂಡಿಪುರದ ಚೌಡಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸೆರೆಯಾಯ್ತು. ಈ ಹುಲಿ ನರಹಂತಕನಾಗಿ ಬದಲಾಗಲು ಏನು ಕಾರಣಗಳಿರಬಹುದು. ಯಾಕೆ ಕಾಡು ಪ್ರಾಣಿಗಳು ನಾಡಿನವರು ಮೇಲೆ ಅಟ್ಯಾಕ್ ಮಾಡುತ್ತವೆ..ಎಂಬುದರ ಕುರಿತ ಬರಹವಿದು. 

ಗುಂ ಡ್ಲುಪೇಟೆ!

ಕೇವಲ ಆ ಊರಿನ ಹೆಸರು ಕೇಳಿದ್ದ ನನಗೆ ಅದರೊಂದಿಗೆ ಅವಿನಾಭಾವ ಸಂಬಂಧ ಹೊಂದಲು ನನ್ನ ವೃತ್ತಿ ಕಾರಣ. ಒಂದು ದಶಕಕ್ಕೂ ಮಿಗಿಲಾಗಿ ಅಲ್ಲಿ ಅಧ್ಯಾಪನ ವೃತ್ತಿ ಮಾಡುತ್ತಿರುವುದರಿಂದ ಆ ಪ್ರದೇಶದ ಬಗ್ಗೆ ಕಕ್ಕುಲಾತಿ. ಅಂಟಿಕೊಂಡಂತೆಯೆ ಇರುವ ಬಂಡೀಪುರ ಸದಾ ಅಚ್ಚರಿ ಹುಟ್ಟಿಸುವ ಕಾಡು. ಕೇವಲ ಸಫಾರಿ ಮಾಡುವಾಗ ವನ್ಯಜೀವಿಗಳನ್ನು ನೋಡಿ ಪುಳಕಗೊಳ್ಳುತ್ತಿದ್ದ ನನಗೆ ಅವುಗಳ ಜೀವನ ಕುರಿತು ತಿಳಿಯುತ್ತಾ ಹೋದಂತೆ ಕುತೂಹಲ ಇಮ್ಮಡಿಯಾಗುತ್ತಾ ಹೋಯಿತು.

Fact Check: ಅಮೆಜಾನ್‌ ಕಾಡಲ್ಲಿ 134 ಅಡಿ ಉದ್ದದ ಹಾವು ಪತ್ತೆ?

ಹೀಗೆ ಕೆಲವು ವರ್ಷಗಳ ಹಿಂದೆ ಪ್ರಯಾಣ ಮಾಡುವಾಗ ಸಾಗುವ ದಾರಿಯ ನಡುವೆ ಆನೆಗಳು ಪ್ರತ್ಯಕ್ಷವಾಗಿ ಬಿಡುತ್ತಿದ್ದವು. ಹಿರಿಕಾಟಿ ಗೇಟು ಮತ್ತಿತರ ಊರಂಚಿಗೆ ದಾಂಗುಡಿ ಇಡುತ್ತಿದ್ದ ಅವುಗಳನ್ನು ಊರಜನ ತಮ್ಮದೇ ತಂತ್ರಗಳ ಮೂಲಕ ಕಾಡಿಗೆ ಅಟ್ಟುವ ಹರಸಾಹಸ ಮಾಡುವ ಹೊತ್ತಿಗೇ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ತಮ್ಮ ಕೈಲಾದದ್ದನ್ನು ಮಾಡುತ್ತಿದ್ದರು. ಹೀಗೆ ಮತ್ತದೇ ಘಟನೆಗಳು ಪದೇ ಪದೇ ಜರಗುವುದು ಈಗೀಗ ಸಾಮಾನ್ಯವಾಗಿ ಹೋಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಹುಲಿಗಳ ಆಗಮನ ಆತಂಕ ಸೃಷ್ಟಿಸಿದೆ.

ಗಂಡ್ಲುಪೇಟೆಯ ಪಕ್ಕದಲ್ಲೇ ಇರುವ ಕೆಬ್ಬೆಪುರ, ಹುಂಡಿಪುರ ಮತ್ತು ಚೌಡಳ್ಳಿ ಎಲ್ಲೆಯಲ್ಲಿ ಕಾಣಿಸಿಕೊಂಡು ಜಾನುವಾರು ಸಹಿತ ಇಬ್ಬರು ವ್ಯಕ್ತಿಗಳನ್ನು ಸಾಯಿಸಿದ ಪ್ರಕರಣ ವನ್ಯಮೃಗಗಳು ಕಾಡಂಚಿನ ಗ್ರಾಮಗಳನ್ನು ಪ್ರವೇಶಿಸಿ ಭಯ ಹುಟ್ಟಿಸುವ ಕುರಿತ ಚರ್ಚೆಯನ್ನು ಮುನ್ನಲೆಗೆ ತಂದಿದೆ.

ಫಾರೆಸ್ಟ್‌ ಆಫೀಸರ್‌ ಹಿಂದೆ ಬಿದ್ದ ಶ್ರದ್ಧಾ ಶ್ರೀನಾಥ್ ?

ಹಾಗಾದರೆ ಕಾಡುಪ್ರಾಣಿಗಳು ನಾಡಿಗೆ ಬರಲು ಕಾರಣವೇನು, ಎಂಬ ಪ್ರಶ್ನೆಗೆ ಮೇಲ್ನೋಟಕ್ಕೆ ಕಾಣುವ ಹಲವು ಕಾರಣಗಳಲ್ಲಿ ಮುಖ್ಯವಾದುದು ಕಾಡಿಗೆ ಬೀಳುವ ಬೆಂಕಿ. 1,200 ಚದರ ಕಿಲೋ ಮೀಟರ್ ಇರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 882 ಚ.ಕಿ.ಮೀ ಹುಲಿ ಸಂರಕ್ಷಿತ ಪ್ರದೇಶವಿದೆ. ಇಲ್ಲಿ ಹಾಗೂ ಇನ್ನಿತರ ಸಾಗುವಳಿ ಜಮೀನುಗಳ ಸುತ್ತ ಚಿಕ್ಕ ಚಿಕ್ಕ ದ್ವೀಪಗಳ ಹಾಗೆ ಪರಿಸರ ಸೂಕ್ಷ್ಮ ವಲಯ ಇದೆ. ಬೇಸಿಗೆ ಕಾಲದಲ್ಲಿ ಕಾಡಿಗೆ ಬೆಂಕಿ ಬೀಳುತ್ತದೆ.

ಬೆಂಕಿ ಬಿದ್ದು ಸುಟ್ಟು ಹೋದರೆ ಅಲ್ಲಿ ಹುಲುಸಾಗಿ ಹುಲ್ಲು ಬೆಳೆಯುತ್ತದೆ ಎಂಬ ಸುಳ್ಳು ನಂಬಿಕೆ ಹಾಗೆ ಬೆಂಕಿ ಹಾಕುವುದಕ್ಕೆ ಕಾರಣ. ಆದರೆ ಬೆಂಕಿ ಬಿದ್ದ ಜಾಗದಲ್ಲಿ ಹುಲ್ಲಿನ ಬೀಜ, ಬೇರು ಸುಟ್ಟು ಹೋಗಿ ಅಲ್ಲಿ ಕ್ರಮೇಣ ಹುಲ್ಲಿನ ಬೆಳೆ ಕಡಿಮೆ ಯಾಗುತ್ತದೆ. ಬದಲಿಗೆ ಕಳೆ ಬೆಳೆಯುತ್ತದೆ. ಹುಲ್ಲು ತಿನ್ನುವ ಕಾಡು ಪ್ರಾಣಿಗಳು ತತ್ತರಿಸುತ್ತವೆ. ಮಾಂಸಾಹಾರಿ ಕಾಡು
ಪ್ರಾಣಿಗಳು ಆಹಾರದ ಕೊರತೆ ಅನುಭವಿಸುತ್ತವೆ. ಆಗ ಅವು ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಹಾಕುತ್ತವೆ.

Video: ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..! ಚೈನ್ ಕಿತ್ತುಕೊಂಡು ಓಡಿದ ಲಕ್ಷ್ಮೀ ಆನೆ!

ಇದು ಒಂದು ಕಡೆ, ಆದರೆ ಹುಲಿಗಳನ್ನು ವಿಶೇಷವಾಗಿ ಪರಿಗಣಿಸಿದರೆ ಮತ್ತೊಂದು ಅಚ್ಚರಿಯ ಸಂಗತಿ ಹೊರ ಬೀಳುತ್ತದೆ. 1974 ರ ಸುಮಾರಿಗೆ ಕೇವಲ 11 ಹುಲಿ ಇದ್ದ ಬಂಡೀಪುರದಲ್ಲಿ ಈಗ ಹತ್ತಿರತ್ತಿರ 140 ಹುಲಿಗಳಿವೆ. ಹುಲಿ ಆಯುಸ್ಸು ಸುಮಾರು 10 ರಿಂದ 12 ವರ್ಷ. ಜನ್ಮ ನೀಡಿದ ತಾಯಿ ಹುಲಿ ಮರಿಗಳನ್ನು ಸುಮಾರು 2-3 ವರ್ಷ ತನ್ನ ರಕ್ಷಣೆಯಲ್ಲಿ ಇಟ್ಟುಕೊಂಡು ನಂತರ ಹೊರ ಗಟ್ಟುತ್ತದೆ. ಈ ನಡುವೆ ಈಗಾಗಲೇ ತಮ್ಮ ತಮ್ಮ ಪ್ರದೇಶ ಗಳನ್ನು ಆಕ್ರಮಿಸಿಕೊಂಡಿರುವ ಹುಲಿವಾಸದ ಪ್ರದೇಶ ವನ್ನು ಹೊರತುಪಡಿಸಿ ಹೊಸ ಜಾಗ ಹುಡುಕುವ ದರ್ದು ಮರಿಗಳಿಗೆ ಬರುತ್ತದೆ. ಹೀಗೆ ತಮ್ಮ ವಾಸಸ್ಥಾನ ಹುಡುಕುತ್ತಾ ಹುಡುಕುತ್ತಾ ಹುಲಿಗಳು ಹೊಸ ಪ್ರದೇಶಕ್ಕೂ ಅಂದರೆ ಕಾಡಂಚಿಗೂ ಬರುತ್ತವೆ ಎನ್ನುವುದು ವೈಜ್ಞಾನಿಕ ಸತ್ಯ.

ಇನ್ನೂ ಅಚ್ಚರಿ ಎಂದರೆ ವರ್ಷಾಂತ್ಯಕ್ಕೆ ಹುಲಿಗಳಿಗೆ ಸಂತಾನೋತ್ಪತ್ತಿ ಕಾಲ. ಆಗ ಹುಲಿಗಳು ಮರಿಗಳನ್ನು ಓಡಿಸುತ್ತವೆ ಎಂಬುದೂ ನಿಜ. ಹಾಗಾಗಿ ಇಲ್ಲಿನ ಊರುಗಳಲ್ಲಿ ಹುಲಿಕಾಟ ತಪ್ಪಿದ್ದಲ್ಲ ಎಂಬುದು ನಿಶ್ಚಿತ. ಈ ಸಮಸ್ಯೆ ಹೋಗಲಾಡಿಸಲು ಕಷ್ಟಸಾಧ್ಯವಾದರೂ ಸಮಸ್ಯೆಯನ್ನು ಹತೋಟಿಗೆ ತರುವುದು ಸವಾಲಿನ ಕೆಲಸವೇ ಸರಿ. ಆಹಾರ ಅರಸಿ ಕಾಡಂಚಿಗೆ ಬರುವ ಹುಲಿಗಳು ಜಿಂಕೆ, ಕಾಟಿ, ಕಡವೆ ಇನ್ನಿತರ ಪ್ರಾಣಿಗಳನ್ನು ಬಿಟ್ಟು ಜಾನುವಾರುಗಳಿಗೆ ಬಾಯಿ ಹಾಕುತ್ತವೆ. ಅವುಗಳನ್ನು ತಿನ್ನದಂತೆ ತಡೆಯೊಡ್ಡುವ ಮನುಷ್ಯನ ಮೇಲೆ ಎರಗುತ್ತವೆ ಎಂಬುದು ಮತ್ತೊಂದು ನಿಜ ಸಂಗತಿ.

ನೀರಿಲ್ಲದ ಜಾಗದಲ್ಲಿ 15 ಎಕರೆ ಕಾಡು ಬೆಳೆಸಿದ ಹೀರೋ!

ಹೀಗೆ ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಹುಲಿಗಳು ತಿಂದ ತಕ್ಷಣ ಸಕಾಲಿಕ ಪರಿಹಾರ ಒದಗಿಸಿ ಸುತ್ತಮುತ್ತಲ ವಾಸಿಗಳ ವಿಶ್ವಾಸ ಗಳಿಸಿ ಸದರಿ ಪ್ರದೇಶವನ್ನು ಸೂಕ್ಷ್ಮವಾಗಿ ಕಾಯುತ್ತಲೇ ಇರುವುದು ಅರಣ್ಯ ಇಲಾಖೆಯ ಕೆಲಸವಾಗಬೇಕು. ಇಲ್ಲಿಯವರೆಗಿನ ಘಟನೆಗಳು ಪುಷ್ಠೀಕರಿಸುವಂತೆ ನಿಯಮಿತ ಕಾಲದಲ್ಲಿ ಕಾಡುಪ್ರಾಣಿಗಳು ನಾಡಿಗೆ ಬರುವ ಮುಂಚೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಸಜ್ಜಾಗುವಂತೆ ಆಗಬೇಕು. ಇಲ್ಲವಾದರೆ ಕಾಡಂಚಿನ ಗ್ರಾಮಗಳ ಜನ
ರೊಚ್ಚಿಗೇಳುವ ಸಾಧ್ಯತೆ ಇದೆ.

18ನೇ ಶತಮಾನದಲ್ಲಿ ಜನವಸತಿ ಪ್ರದೇಶ ನಿರ್ಮಿಸಲು ಆರಂಭವಾದ ಬೆಂಕಿ ಹಾಕಿ ಕಾಡು ಕಡಿಯುವ ವ್ಯವಸ್ಥೆ ಬ್ರಿಟೀಷರಿಂದ ಮುಂದುವರಿಯಿತು. ಹೀಗಿದ್ದರೂ ಕಾಡನ್ನು ಉಳಿಸುವ ಜೊತೆಗೆ ಕಾಡಿನ ಸೂಕ್ಷ್ಮ ಜೀವಿಗಳನ್ನು ರಕ್ಷಿಸುವ ಜವಾಬ್ದಾರಿಯೂ ಅರಣ್ಯ ಇಲಾಖೆಗಿದೆ. ಹಾಗಾಗಿ ಸೋಲಿಗರು, ಕಾಡಂಚಿನ ಗ್ರಾಮದವರ ವಿಶ್ವಾಸ ಗಳಿಸಿ ಅವರ ಅನುಭವ, ಸಲಹೆ, ಕೌಶಲ್ಯ ಉಪಯೋಗಿಸಿ ಕಾಡಂಚಿನ ಗ್ರಾಮಗಳ ಮಾನವ ವನ್ಯಜೀವಿ ಸಂಘರ್ಷ ಹತೋಟಿಗೆ ತರಬಹುದು ಎಂಬ ಅಭಿಪ್ರಾಯ ವನ್ಯಜೀವಿ ತಜ್ಞ ರಾಜ್‌ಕುಮಾರ್ ಡಿ. ಅರಸು ಅವರದು. 

ಗೋವಿಂದರಾಜು, ಪ್ರಧ್ಯಾಪಕ, ಗುಂಡ್ಲುಪೇಟೆ

click me!