* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆರಂಭ
* ಕೋವಿಡ್ ಭೀತಿಯ ನಡುವೆಯೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ
* ಕ್ರೀಡಾಪಟುಗಳಿಗೆ ಕೊರೋನಾ ಲಸಿಕೆ ಹಾಕಿಸುವಲ್ಲಿಯೂ ಐಒಎ ಯಶಸ್ವಿ
ಟೋಕಿಯೋ(ಜು.20): ಟೋಕಿಯೋ ಗೇಮ್ಸ್‌ಗೆ ಅರ್ಹತೆ ಪಡೆದ ಕೆಲ ಭಾರತೀಯ ಕ್ರೀಡಾಪಟುಗಳು ಸಹ ಕೊರೋನಾ ಸೋಂಕಿಗೆ ತುತ್ತಾಗಿದ್ದು ಆತಂಕ ಮೂಡಿಸಿತ್ತು. ಆದರೆ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಎಲ್ಲಾ ರಾಷ್ಟ್ರೀಯ ಫೆಡರೇಷನ್‌ಗಳಿಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿತು. ಅದರಂತೆ ಬಹುತೇಕ ಎಲ್ಲಾ ಒಲಿಂಪಿಕ್ಸ್ ಶಿಬಿರಗಳು ಬಯೋ ಬಬಲ್‌ನೊಳಗೇ ನಡೆದವು.
ಕ್ರೀಡಾಪಟುಗಳಿಗೆ ಕೊರೋನಾ ಲಸಿಕೆ ಹಾಕಿಸುವಲ್ಲಿಯೂ ಐಒಎ ಹಿಂದೆ ಬೀಳಲಿಲ್ಲ. ಎಲ್ಲಾ ಕ್ರೀಡಾಪಟುಗಳಿಗೆ 2 ಡೋಸ್ ಲಸಿಕೆ ಪೂರ್ಣಗೊಂಡಿದೆ. ಅಲ್ಲದೇ ಒಲಿಂಪಿಕ್ಸ್ ಅಭ್ಯಾಸಕ್ಕಾಗಿ ಹಲವು ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಂಡ ಭಾರತೀಯ ಕ್ರೀಡಾಪಟುಗಳಿಗೆ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ನವದೆಹಲಿಯಿಂದ ಟೋಕಿಯೋಗೂ ಐಒಎ ಹಾಗೂ ಕೇಂದ್ರ ಕ್ರೀಡಾ ಇಲಾಖೆ ವಿಶೇಷ ವಿಮಾನ ಸೌಲಭ್ಯ ಒದಗಿಸಿತು.
ಟೋಕಿಯೋ ಒಲಿಂಪಿಕ್ಸ್ 2020: ಕೋವಿಡ್ ನಡುವೆ ಕ್ರೀಡಾ ಕುಂಭಮೇಳಕ್ಕೆ ಕ್ಷಣಗಣನೆ
ಪ್ರಮುಖ ರಾಷ್ಟ್ರದಿಂದ ಏನೇನು ಸುರಕ್ಷತಾ ಕ್ಷಮ?
ಅಮರಿಕ: ಒಲಿಂಪಿಕ್ಸ್‌ನಲ್ಲಿ ಅತಿಹೆಚ್ಚು ಕ್ರೀಡಾಪಟುಗಳನ್ನು ಕಣಕ್ಕಿಳಿಸುವ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕ, ಅಚ್ಚುಕಟ್ಟಾದ ಕ್ರಮಗಳನ್ನು ಕೈಗೊಂಡಿದೆ. ತನ್ನೆಲ್ಲಾ ಕ್ರೀಡಾಪಟುಗಳಿಗೆ ಥರ್ಮೋಮೀಟರ್, ಮಾಸ್ಕ್‌ಗಳನ್ನು ತಾವೇ ಕೊಂಡೊಯ್ಯಲು ಸೂಚಿಸಿದೆ. ಜಪಾನ್ ತಲುಪಿದ ಬಳಿಕ ಕೆಲ ಆರೋಗ್ಯ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿತ್ಯ ತಮ್ಮ ಆರೋಗ್ಯದ ವಿವರಗಳನ್ನು ದಾಖಲಿಸಲು ಸೂಚಿಸಲಾಗಿದೆ. ಯಾವ್ಯಾವ ಔಷಧಗಳನ್ನು ಕೊಂಡೊಯ್ಯಬೇಕು ಎಂದೂ ತಿಳಿಸಲಾಗಿದೆ.
ಚೀನಾ: 450ಕ್ಕೂ ಹೆಚ್ಚು ಅಥ್ಲೀಟ್‌ಗಳನ್ನು ಜಪಾನ್‌ಗೆ ಕಳುಹಿಸಿರುವ ಚೀನಾ, ತನ್ನೆಲ್ಲಾ ಕ್ರೀಡಾಪಟುಗಳಿಗೆ ಲಸಿಕೆ ಹಾಕಿಸಿದ್ದು, ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದೆ.
ಆಸ್ಪ್ರೇಲಿಯಾ: ಟೋಕಿಯೋಗೆ ಮೊದಲು ತಲುಪಿದ್ದೇ ಆಸ್ಪ್ರೇಲಿಯಾದ ಸಾಫ್ಟ್‌ಬಾಲ್ ತಂಡ. ಆಸ್ಪ್ರೇಲಿಯಾ ಮುಂಚಿತವಾಗಿಯೇ ತನ್ನ ಅಥ್ಲೀಟ್‌ಗಳನ್ನು ಜಪಾನ್‌ಗೆ ಕಳುಹಿಸಿ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಎಲ್ಲಾ ಕ್ರೀಡಾಪಟುಗಳಿಗೂ ಲಸಿಕೆ ಹಾಕಿಸಿದೆ.