ಘನತ್ಯಾಜ್ಯ ಘಟಕದಿಂದ ಒಂದೂವರೆ ಕಿ.ಮೀ.ವರೆಗೂ ದುರ್ನಾತ

By Kannadaprabha NewsFirst Published Sep 27, 2022, 6:47 AM IST
Highlights
  •  ಘನತ್ಯಾಜ್ಯ ಘಟಕದಿಂದ ಒಂದೂವರೆ ಕಿ.ಮೀ.ವರೆಗೂ ದುರ್ನಾತ
  • ಲಿಂಗಧೀರನಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕದಿಂದ ಸ್ಥಳೀಯ ನಿವಾಸಿಗಳಿಗೆ ಸಂಕಷ್ಟ
  • ಕಾಲರಾ ಭೀತಿ

ವಿಶೇಷ ವರದಿ

ಬೆಂಗಳೂರು (ಸೆ.27) : ಯಶವಂತಪುರ ಕ್ಷೇತ್ರದ ಲಿಂಗಧೀರನಹಳ್ಳಿ ನಿವಾಸಿಗಳಿಗೆ ಇಲ್ಲಿನ ಘನತ್ಯಾಜ್ಯ ಸಂಸ್ಕರಣಾ ಘಟಕ ತಲೆನೋವಾಗಿ ಪರಿಣಮಿಸಿದ್ದು, ಇಲ್ಲಿನ ದುರ್ನಾತ ಸಹಿಸಲಾಗದೆ ನಿತ್ಯವೂ ಮೂಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಲಿಂಗಧೀರಣಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕ ಕೆಲ ವರ್ಷ ಸ್ಥಗಿತಗೊಂಡಿತ್ತು. ಆ ನಂತರ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್‌ಜಿಟಿ) ಮತ್ತು ಸುಪ್ರೀಂ ಕೋರ್ಚ್‌ನಲ್ಲಿದ್ದ ವ್ಯಾಜ್ಯ ಇತ್ಯರ್ಥದಿಂದಾಗಿ ಘಟಕ ಪುನಾರಂಭಗೊಂಡಿದೆ. ವೈಜ್ಞಾನಿಕ ಮಾದರಿಯಲ್ಲಿ ಘಟಕದಲ್ಲಿ ಹಸಿ ಮತ್ತು ಒಣ ಕಸಗಳನ್ನು ವಿಂಗಡಿಸಿ, ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತನೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳೇನೋ ಮಾಹಿತಿ ನೀಡುತ್ತಾರೆ.

ಹಸಿ ಕಸ ವಾಸನೆ ತಡೆಗೆ ಹೊಸ ತಂತ್ರಜ್ಞಾನ: ಸಿಎಂ ಬೊಮ್ಮಾಯಿ

ಆದರೆ, ಘನತ್ಯಾಜ್ಯ ಸಂಸ್ಕರಣಾ ಘಟಕದ ಸಮೀಪವೇ ಮೆಟ್‌ಕಲ್‌ಪಾಳ್ಯದ ಗ್ರಾಮದೇವತೆ ದೇವಸ್ಥಾನ, ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಿರುವ ಪರಿಸ್ಥಿತಿ ಇದೆ. ಇದರೊಂದಿಗೆ ಈ ಘಟಕದಿಂದ ಸುಮಾರು ಒಂದೂವರೆ ಕಿ.ಮೀ ವರೆಗೂ ದುರ್ನಾತ ಬೀರುತ್ತಿದೆ. ಗಾಳಿ ಬೀಸಿದ ದಿಕ್ಕಿನೆಲ್ಲೆಡೆ ಕೊಳೆತ ತ್ಯಾಜ್ಯದ ವಾಸನೆ ಹಬ್ಬುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಗಂಭೀರವಾಗಿ ಆರೋಪಿಸಿದ್ದಾರೆ.

ಜೊತೆಗೆ ಘಟಕದ ಅಕ್ಕಪಕ್ಕದ ನಿವಾಸಿಗಳಿಗೆ ನೊಣ ಮತ್ತು ಸೊಳ್ಳೆಗಳ ಕಾಟ ಬಿಟ್ಟು ಬಿಡದಂತೆ ಕಾಡುತ್ತಿದೆ. ಈ ಪರಿಣಾಮ ಆಹಾರದ ಮೇಲೆ ನೊಣಗಳು ಮುತ್ತಿಕೊಳ್ಳುತ್ತಿರುವುದರಿಂದ ಊಟ, ತಿಂಡಿ ಸೇವಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವಾಂತಿ, ಭೇದಿ, ತಲೆನೋವು, ಹೊಟ್ಟೆನೋವು ಸಮಸ್ಯೆಯಿಂದ ಬಳಲುವಂತಾಗಿದೆ. ನೊಣಗಳ ನಿಯಂತ್ರಣಕ್ಕೆ ಎಷ್ಟುಪ್ರಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬಫರ್‌ ವಲಯ ಘೋಷಿಸಿಲ್ಲ:

ಘನತ್ಯಾಜ್ಯ ಸಂಸ್ಕರಣಾ ಘಟಕದ ಯಂತ್ರಗಳಿಂದ ಶಬ್ದ ಮಾಲಿನ್ಯವಾಗುತ್ತಿದ್ದು ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಾಗುತ್ತಿಲ್ಲ. ಲಿಂಗಧೀರನಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕ ಪ್ರಾರಂಭಿಸಲು ಅನುಮತಿ ನೀಡುವ ಪೂರ್ವದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಘನ ತ್ಯಾಜ್ಯ ನಿರ್ವಹಣೆ ನಿಯಮಗಳ ಪ್ರಕಾರ ಘಟಕದ ಸುತ್ತಲೂ 200 ಮೀಟರ್‌ ಬಫರ್‌ ವಲಯವೆಂದು ಘೋಷಿಸಬೇಕು. ಸದರಿ 200 ಮೀಟರ್‌ ಸುತ್ತಲೂ ಯಾವುದೇ ಚಟುವಟಿಕೆ ನಡೆಯದಂತೆ ನೋಡಿಕೊಳ್ಳುವ ಭರವಸೆ ನೀಡಲಾಗಿತ್ತು. ಆದರೆ, ಯಾವುದೇ ಬಫರ್‌ ವಲಯವನ್ನು ಘೋಷಿಸದೇ ಲಿಂಗಧೀರನಹಳ್ಳಿ ಕಸ ವಿಲೇವಾರಿ ಘಟಕವನ್ನು ಪ್ರಾರಂಭಿಸಿರುವುದರಿಂದ ಈ ಎಲ್ಲ ಸಮಸ್ಯೆಗಳು ಉದ್ಭವಿಸಿವೆ ಎಂದು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಘಟಕದ ಸುತ್ತಲೂ ಇರುವ ಕೊಳವೆ ಬಾವಿಗಳಿಗೆ ಘಟಕದ ತ್ಯಾಜ್ಯ ನೀರು ಸೇರುತ್ತಿದ್ದು ಕಲುಷಿತಗೊಂಡಿವೆ. ಈ ಪರಿಣಾಮ ಕುಡಿಯಲು ಯೋಗ್ಯವಾದ ನೀರು ದೊರಕದ ಪರಿಸ್ಥಿತಿ ನಿರ್ಮಾಣವಾಗಿದೆ. ಘಟಕದ ದುರ್ನಾತ ಹೊರ ಬರದಂತೆ ಎಚ್ಚರಿಕೆ ವಹಿಸಬೇಕು. ಕಲುಷಿತ ನೀರನ್ನು ಎಲ್ಲೆಂದರಲ್ಲಿ ಬಿಡಬಾರದು. ಮುಖ್ಯವಾಗಿ ಸೊಳ್ಳೆ ಮತ್ತು ನೊಣದ ಕಾಟಕ್ಕೆ ಕಡಿವಾಣ ಹಾಕಬೇಕು ಎಂದು ಬನಶಂಕರಿ 6ನೇ ಹಂತದ ಬಿಡಿಎ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎಸ್‌.ಮಹೇಶ್‌ ಒತ್ತಾಯಿಸಿದ್ದಾರೆ.

ಪ್ಲಾಸ್ಟಿಕ್‌ ಕವರಲ್ಲಿ ಹಸಿ ಕಸ ಕೊಟ್ಟರೆ ದಂಡ ಕಟ್ಟಬೇಕು..!

ಆದರೆ, ಅಧಿಕಾರಿಗಳು ಮಾತ್ರ ಲಿಂಗಧೀರನಹಳ್ಳಿ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಎಲ್ಲ ನಿಯಮಗಳನ್ನು ಅನುಸರಿಸಲಾಗಿದೆ. ದಿನಕ್ಕೆ 150 ಟನ್‌ ಸಾಮರ್ಥ್ಯ ಇದ್ದರೂ ಕೇವಲ 40 ಟನ್‌ ತ್ಯಾಜ್ಯ ಮಾತ್ರ ಘಟಕಕ್ಕೆ ಬರುತ್ತಿದೆ. ವಾಸನೆ, ಸೊಳ್ಳೆ ಬರದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದೇವೆ. ಇನ್ನು ರಾತ್ರಿ ಹೊತ್ತಿನಲ್ಲಿ ಕಸದ ಲಾರಿಗಳು ಓಡಾಡುವುದಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ.

click me!