ಸುಳ್ಳು ಹೇಳುವವರು ಎಷ್ಟೇ ಜಾಗೃತರಾಗಿ ತಮ್ಮ ಮಾತಿನ ಮೇಲೆ ಗಮನ ವಹಿಸಿದರೂ, ಅವರ ದೇಹ ಭಾಷೆ, ಆಂಗಿಕ ಚಲನೆಗಳು ಸುಳ್ಳು ಹೇಳುತ್ತಿರುವುದರ ಸೂಚನೆ ನೀಡುತ್ತಲೇ ಇರುತ್ತವೆ. ಸುಳ್ಳನ್ನು ಕೇಳಿಸಿಕೊಳ್ಳುವವರು ಇವಕ್ಕೆಲ್ಲ ಗಮನ ಹರಿಸಿದರೆ, ತಾವು ಮೋಸ ಹೋಗುತ್ತಿರುವುದು ತಿಳಿಯುತ್ತದೆ, ಕನಿಷ್ಠ ಪಕ್ಷ ಅನುಮಾನವಾದರೂ ಹುಟ್ಟಿಕೊಳ್ಳುತ್ತದೆ.
'ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು' ಎನ್ನೋರು ಬಹಳ. ಸತ್ಯದ ತಲೆ ಮೇಲೆ ಹೊಡೆದಂಗೆ ಸುಳ್ಳು ಹೇಳುವ ಕಲೆ ಸಿದ್ಧಿಸಿಕೊಂಡಿರುತ್ತಾರೆ. ಇಂಥವರ ಸಹವಾಸದಲ್ಲಿ ನೀವು ಹಲವಾರು ಬಾರಿ ಮೋಸ ಹೋಗಿರಬಹುದು. ಇದರಿಂದ ಬೇಸತ್ತು ಸುಳ್ಳು ಕಂಡುಹಿಡಿಯುವ ಮೆಷಿನ್ ಒಂದು ಕೈಲಿದ್ದರೆ ಎಂದು ಎಷ್ಟೋ ಬಾರಿ ನಿಮಗನಿಸಿರಬಹುದು. ಆದರೆ, ನೀವು ಮಾತನಾಡುವವರನ್ನು ಸರಿಯಾಗಿ ಗಮನಿಸಿದರೆ ಸುಳ್ಳನ್ನು ಕಂಡು ಹಿಡಿಯಲು ಯಾವ ಮೆಷಿನ್ ಕೂಡಾ ಬೇಕಾಗಿಲ್ಲ. ಇದಕ್ಕಾಗಿ ನೀವೇನು ಬಾಡಿ ಲಾಂಗ್ವೇಜ್ ಎಕ್ಸ್‌ಪರ್ಟ್ ಆಗಿರಬೇಕಿಲ್ಲ. ಯಾರಾದರೂ ಸುಳ್ಳು ಹೇಳುತ್ತಿದ್ದಾರೆಯೇ ಎಂದು ತಿಳಿಯಲು ಈ ವಿಷಯಗಳನ್ನು ಗಮನಿಸಿ ನೋಡಿ.
ಕಣ್ಣೋಟ
undefined
ಯಾವಾಗ ಒಬ್ಬರಿಂದ ತಪ್ಪಿಸಿಕೊಳ್ಳಬೇಕೆಂದರೂ, ಮಾತು ಹಾದಿ ತಪ್ಪಿಸಬೇಕೆಂದರೂ ಅವರು ಮೊದಲು ಕಣ್ಣಿನಲ್ಲೇ ತಪ್ಪಿಸಿಕೊಳ್ಳುವುದು. ನೀವೇನಾದರೂ ಪ್ರಶ್ನಿಸಿದಾಗ ಎದುರಿನವರು ಕಣ್ಣನ್ನು ಅತ್ತಂದಿತ್ತ, ಇತ್ತಿಂದತ್ತ ತಿರುಗಿಸುತ್ತ ಉತ್ತರಿಸುತ್ತಿದ್ದಾರೆಂದರೆ ಅವರು ಅರ್ಧ ಸತ್ಯ ಹೇಳುತ್ತಿದ್ದಾರೆಂದು ಅರ್ಥ.
ತಲೆ ವಾಲುವುದು
ವ್ಯಕ್ತಿಯು ಪ್ರಶ್ನೆಯೊಂದಕ್ಕೆ ಸುಳ್ಳು ಹೇಳುತ್ತಿದ್ದಾನೆ ಎಂದಾಗ ಮಾತು ಆರಂಭಿಸುವ ಮುನ್ನ ತಲೆ ಸ್ವಲ್ಪ ಹಿಂದೆ ತೆಗೆದುಕೊಂಡು ಹೋಗುವುದು, ಒಂದು ಬದಿಗೆ ಸ್ವಲ್ಪ ವಾಲಿಸುವುದು ಕಂಡುಬರುತ್ತದೆ.
ಕಣ್ಣು ಮುಚ್ಚಿ ಬಿಡುವುದು
ಸಾಮಾನ್ಯವಾಗಿ ವ್ಯಕ್ತಿಯೊಬ್ಬ 12 ಸೆಕೆಂಡ್‌ಗೆ ಒಂದು ಬಾರಿಯಂತೆ ನಿಮಿಷಕ್ಕೆ 5-6 ಬಾರಿ ಕಣ್ಣು ಮುಚ್ಚಿ ಬಿಡುತ್ತಾನೆ. ಆದರೆ, ಆತ ಒತ್ತಡಕ್ಕೊಳಗಾದಾಗ, ಸುಳ್ಳು ಹೇಳುವಾಗ ಅವರು ನಿರಂತರವಾಗಿ ಐದಾರು ಬಾರಿ ಕಣ್ಣು ಮುಚ್ಚಿ ಬಿಡುವುದು ಮಾಡುತ್ತಾರೆ. ಇಲ್ಲದಿದ್ದಲ್ಲಿ, ಒಂದೆರಡು ಸೆಕೆಂಡ್‌ಗಳ ಕಾಲ ಕಣ್ಣು ಮುಚ್ಚಿಕೊಳ್ಳುತ್ತಾರೆ. ಸತ್ಯವನ್ನು ಮರೆ ಮಾಚುವಾಗ ಜನ ಬಳಸುವ ಡಿಫೆನ್ಸ್ ಮೆಕ್ಯಾನಿಸಂಗಳಲ್ಲಿ ಇದೂ ಒಂದು.
ಬಲಕ್ಕೆ ನೋಡುವುದು
ಸಾಮಾನ್ಯವಾಗಿ ಬಲಗೈ ಮುಖ್ಯವಾಗಿ ಬಳಸುವವರು ಏನನ್ನಾದರೂ ನೆನಪು ಮಾಡಿಕೊಂಡು ಮಾತನಾಡುವಾಗ ಮೇಲೆ ನೋಡಿ ನಂತರ ಎಡಕ್ಕೆ ತಿರುಗಿ ವಿಷಯವನ್ನು ರಿಕಾಲ್ ಮಾಡಿಕೊಳ್ಳುತ್ತಾರೆ. ಆದರೆ ವ್ಯಕ್ತಿಯು ಬಲಕ್ಕೆ ತಿರುಗಿ ಉತ್ತರಿಸುತ್ತಿದ್ದಾನೆಂದರೆ ಆತ ತನ್ನ ಕಲ್ಪನೆಯನ್ನು ಬಳಸಿ ವಿಷಯ ಹುಟ್ಟು ಹಾಕುತ್ತಿದ್ದಾನೆಂದರ್ಥ. ಎಡಗೈ ಬಂಟರಲ್ಲಿ ಮಾತ್ರ ಈ ಪ್ರಕ್ರಿಯೆ ಉಲ್ಟಾ ಆಗಿರುತ್ತದೆ. ಏನನ್ನಾದರೂ ನೋಡಿದ್ದನ್ನು ನೆನಪಿಸಿಕೊಳ್ಳುವಾಗ ಬಹುತೇಕ ಜನರು ನೇರವಾಗಿ ಮುಂದೆ ನೋಡುತ್ತಾರೆ.
ಯೊರೊಟ್ಟಿಗೂ ಮಿಂಗಲ್ ಆಗೋಲ್ಲ ಅನ್ನೋರನ್ನು ಕಾಡುತ್ತೆ ಖಿನ್ನತೆ!...
ಪದ ಹಾಗೂ ವಾಕ್ಯಗಳ ಪುನರಾವರ್ತನೆ
ಜನ ಸುಳ್ಳು ಹೇಳುವಾಗ ತಾವು ಹೇಳಿದ್ದನ್ನು ನಿಜವೆಂದು ನಿರೂಪಿಸುವ ಸಲುವಾಗಿ ಕೆಲವೊಂದು ಪದಗಳು ಹಾಗೂ ವಾಕ್ಯಗಳನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾರೆ. ಈ ಪುನರಾವರ್ತನೆ ಎದುರಿನವರನ್ನು ನಂಬಿಸುವ ಸಲುವಾಗಿ ಮಾತ್ರವಲ್ಲ, ತಮ್ಮನ್ನು ತಾವೇ ನಂಬಿಸಿಕೊಳ್ಳುವ, ವಿಷಯವನ್ನು ನೆನಪಿಟ್ಟುಕೊಳ್ಳುವ ಸಲುವಾಗಿಯೂ ಹೌದು. ಇದರಿಂದಾಗಿ ಅವರಿಗೆ ಕತೆ ಕಟ್ಟಲು ಸ್ವಲ್ಪ ಹೆಚ್ಚಿನ ಸಮಯಾವಕಾಶವೂ ಸಿಗುತ್ತದೆ.
ಕಾಲು ಕುಣಿಸುವುದು
ಪಲಾಯನವಾದದ ದೃಶ್ಯರೂಪವಾಗಿ ಇದು ಕಾಣಸಿಗುತ್ತದೆ. ಸುಳ್ಳುಕೋರರು ಸುಳ್ಳು ಹೇಳುವಾಗ ಅವರ ಪಾದಗಳನ್ನು ಅತ್ತಿಂದಿತ್ತ ಮಾಡುವುದು, ಕುಣಿಸುವುದು ಕಾಣಬಹುದು. ಈ ಪ್ರಶ್ನೆಗೆ ಉತ್ತರಿಸುವುದಕ್ಕಿಂತ ತಾನು ಎಲ್ಲಾದರೂ ಎದ್ದು ಹೋಗುವುದೇ ಉತ್ತಮ ಎಂಬಂತೆ ಕಾಲುಗಳು ವರ್ತಿಸುತ್ತಿರುತ್ತವೆ.
ಕಣ್ಣು ರೆಪ್ಪೆ ಮುಚ್ಚದಿರುವುದು
ಸುಳ್ಳು ಹೇಳುವವರು ಕಣ್ಣಿಗೆ ಕಣ್ಣು ಕೊಟ್ಟು ಮಾತನಾಡುವುದಿಲ್ಲ ಎಂಬ ವಿಷಯ ಬಹಳ ಪ್ರಚಾರ ಪಡೆದಿರುವುದರಿಂದ, ಸುಳ್ಳು ಹೇಳುವವರು ಜಾಗೃತೆ ವಹಿಸಿ, ಅತಿಯಾಗಿ ಕಣ್ಣಿಗೆ ಕಣ್ಣು ಕೂಡಿಸಿ ಮಾತನಾಡುವುದು, ರೆಪ್ಪೆ ಅಲುಗಿಸದಂತೆ ಪ್ರಯತ್ನಪೂರ್ವಕವಾಗಿ ಇಟ್ಟುಕೊಂಡು ಮಾತನಾಡಲು ನೋಡುತ್ತಾರೆ. ಹಾಗೊಂದು ವೇಳೆ ಅತಿಯಾಗಿ ಕಣ್ಣನ್ನೇ ನೋಡಿ ಮಾತನಾಡುತ್ತಿದ್ದಾರೆಂದರೆ ಕೂಡಾ ಅವರು ಸುಳ್ಳು ಹೇಳುತ್ತಿರಬಹುದು.