ಪೈಥಾಣಿ: ಒಂದು ತಾಯಿ ಮಗಳ ಭಾವನಾತ್ಮಕ ಕಥೆ

By Suvarna News  |  First Published Nov 25, 2024, 5:28 PM IST

ಪೈಥಾಣಿ ಸೀರೆಯ ಸುತ್ತ ಹೆಣೆದಿರುವ ಈ ಕಥೆಯು ತಾಯಿ ಮಗಳ ಅನೋನ್ಯ ಸಂಬಂಧವನ್ನು ಅನಾವರಣಗೊಳಿಸುತ್ತದೆ. ಮೃಣಾಲ್ ಕುಲಕರ್ಣಿ, ಈಶಾ ಸಿಂಗ್ ಮತ್ತು ಸಂಗೀತಾ ಬಾಲಚಂದರ್ ಅವರ ಅಭಿನಯವು ಭಾವನಾತ್ಮಕವಾಗಿ ಸ್ಪರ್ಶಿಸುತ್ತದೆ.


-ವೀಣಾ ರಾವ್, ಕನ್ನಡಪ್ರಭ

ಪೈಥಾಣಿ ಎನ್ನುವುದು ಮರಾಠಾ ಸಮುದಾಯದ ಒಂದು ಭಾವನಾತ್ಮಕ ನಂಟು. ಪೈಥಾಣಿ ಸೀರೆಗಳು ಮರಾಠಿಗರ ಭಾವುಕತೆ. ಕರ್ನಾಟಕದವರಿಗೆ ಮೈಸೂರು ರೇಷ್ಮೆ ಎಷ್ಟು ಮುಖ್ಯವೋ ಹಾಗೆ ಅವರಿಗೆ ಪೈಥಾಣಿ ಸೀರೆ. ಪೈಥಾಣಿ ಸೀರೆ ನೇಯುವುದೂ ಒಂದು ಕಲೆ. ರೇಷ್ಮೆ ದಾರದಲ್ಲಿ ಅದರ ಕುಸುರಿ ಕೆಲಸ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದೊಂದು ದೈವದತ್ತವಾದ ಕಲೆ. ಮತ್ತೆ ಪ್ರತಿಯೊಬ್ಬ ಮರಾಠಿ ಹೆಣ್ಣು ತನ್ನ ಬಳಿ ಒಂದಾದರೂ ಪೈಥಾಣಿ ಸೀರೆ ಇರಬೇಕೆಂದು ಬಯಸುತ್ತಾಳೆ. ಅದು ಅವಳ ಸೌಭಾಗ್ಯದ ಪ್ರತೀಕದಂತೆ. ಇಂಥ ಪೈಥಾಣಿಯ ಸುತ್ತ ಭಾವನಾತ್ಮಕವಾಗಿ ಹೆಣೆದಿರುವ ಕತೆ ಪೈಥಾಣೀ ಝೀ5  ನಲ್ಲಿ ಸೀರೀಸ್ ಆಗಿ ಬಿಡುಗಡೆಯಾಗಿದೆ. ಗಜೇಂದ್ರ ಅಹಿರೆ ನಿದೇಶನದಲ್ಲಿ ಮೃಣಾಲ್ ಕುಲಕರ್ಣಿ ಈಶಾ ಸಿಂಗ್, ಶಿವಮ್ ಭಾರ್ಗವ, ಸಂಗೀತಾ ಬಾಲಚಂದರ್, ಸೈಯದ್ ಝಫರ್ ಆಲಿ ತಾರಾಗಣದಲ್ಲಿ ಏಳು ಎಪಿಸೋಡುಗಳಲ್ಲಿ ಭಾವನಾತ್ಮಕವಾಗಿ ಮೂಡಿಬಂದಿದೆ.

ಇದೊಂದು ತಾಯಿಮಗಳ ಭಾವನಾತ್ಮಕ ಸಂಬಂಧವನ್ನು ಹೇಳುವ ಕಥೆ. ತಾಯಿಮಗಳ ಅನೋನ್ಯ ಅನುಬಂಧಕ್ಕೆ ಪೈಥಾಣಿಯ ಅಲಂಕಾರ ಮಾಡಿದ ಈ ಸೀರೀಸ್ ನೋಡಿ ಮುಗಿಸಿದಾಗ ಯಾವುದೋ ಭಾವನಾತ್ಮಕ ಲೋಕಕ್ಕೆ ನಮ್ಮನ್ನು ಕರೆದೋಯ್ದಂತೆ ಭಾಸವಾಗುತ್ತದೆ. ಮುಖ್ಯ ಪಾತ್ರಗಳಾದ ಮೃಣಾಲ್ ಕುಲಕರ್ಣಿ (ಕಿರುತೆರೆ ನಟಿ) ಈಶಾ ಸಿಂಗ್ ಹಾಗೂ ಸಂಗೀತಾ ಬಾಲಚಂದರ್ ತಮ್ಮ ಆಳವಾದ ಅಭಿನಯದಿಂದ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತಾರೆ.

Tap to resize

Latest Videos

undefined

ಗೋದಾವರಿ (ಮೃಣಾಲ್ ಕುಲಕರ್ಣಿ) ಪೈಥಾಣಿ ಸೀರೆಯನ್ನು ನೇಯುವ ಒಬ್ಬ ಕಲೆಗಾತಿ. ಅವಳು ನೇಯುವ ಸೀರೆಗಳು ಬಹಳ ಪ್ರಸಿದ್ಧ. ಸೀರೆಯ ಅಂದದ ಕುಸುರಿ ಕೆಲಸ ಮಾಡುವುದರಲ್ಲಿ ಪರಿಣಿತೆ. ಅವಳು ನೇಯ್ದ ಸೀರೆಗಳನ್ನು ಕಾದು ಕೊಂಡೊಯ್ಯುವ, ಮುಂಚೆಯೇ ಆರ್ಡರ್ ಮಾಡಿ ತೆಗೆದುಕೊಂಡು ಹೋಗುವ ಗಿರಾಕಿಗಳು ಇರುತ್ತಾರೆ. ಆ ನೇಯ್ಗೆ ಸೆಂಟರಿನಲ್ಲಿ ಅವಳು ಮುಖ್ಯ ನೇಕಾರಳು. ಅವಳು ನೇಯ್ದ ಸೀರೆ ಮೇಲೆ ಅವಳಿಗೆ ತಾನೇ ಹೆತ್ತ ಮಗುವಿನಷ್ಟು ಮಮತೆ, ಮಮಕಾರ.

ರೈಲಿನಲ್ಲಿ ರಕ್ತಸಿಕ್ತ ಹೋರಾಟ: 'ಕಿಲ್' ಚಿತ್ರ ವಿಮರ್ಶೆ

ಗೋದಾವರಿಯ ಬಾಳೇನೂ ಹೂವಿನ ಹಾಸಿಗೆಯಾಗಿರಲಿಲ್ಲ. ಮದುವೆಯಾದ ಗಂಡ ಕ್ರೂರಿ. ಗೋದಾವರಿಗೆ ಮೊದಲ ಮಗು ಹೆಣ್ಣೆಂದು ತಿಳಿದು ಗಂಡಾಗಲಿಲ್ಲವೆಂದು ಬಹಳ ಹಿಂಸಿಸುತ್ತಾನೆ. 'ಮಗ ಎಂದರೆ ಮನೆಗೆ ಮನೆತನಕ್ಕೆ ಹೆಮ್ಮೆ. ಮಗನನ್ನು ಹೆರದೆ ಪರರ ಮನೆಗೆ ಹೋಗುವ ಮಗಳನ್ನು ಹೆತ್ತಿದ್ದೀಯಾ,' ಎಂದು ಕುಳಿತಲ್ಲಿ, ನಿಂತಲ್ಲಿ ಹಂಗಿಸುತ್ತಿರುತ್ತಾನೆ. ಗೋದಾವರಿಯ ಕಣ್ಣೆದುರೇ ಆ ಹೆಣ್ಣು ಮಗು ಕಾವೇರಿಯನ್ನು ಹಿಂಸಿಸುವಷ್ಟು  ರಾಕ್ಷಸ. ಒಮ್ಮೆ ಇದೇ ವಿಷಯಕ್ಕೆ ಜಗಳವಾಗಿ ಗೋದಾವರಿ ಮತ್ತು ಹಸುಗೂಸು ಕಾವೇರಿಯನ್ನು ಹೊಡೆಯುವಾಗ ರೋಸಿಹೋದ ಗೋದಾವರಿ ಮನೆ ಬಿಟ್ಟು ನಡೆಯುತ್ತಾಳೆ. ಆಗಲೇ ಅವಳ ಗರ್ಭದಲ್ಲಿ ಎರಡನೇ ಮಗು ಬೆಳೆಯುತ್ತಿರುತ್ತದೆ. ಗಂಡನಿಂದ ಬೇರೆ ಬಂದು ಮಗಳೊಡನೆ ಹೊಸದಾದ ಬದುಕು ಕಟ್ಟಿಕೊಳ್ಳುವ ಗೋದಾವರಿ ಎರಡನೆಯ ಗಂಡು ಮಗುವಿಗೆ ಜನ್ಮನೀಡುತ್ತಾಳೆ. ಎರಡನೆಯ ಮಗು ಗಂಡೆಂದು ತಿಳಿದ ಗಂಡ ಕಳ್ಳಬೆಕ್ಕಿನಂತೆ ಬಂದು ಗೋದಾವರಿಯಿಂದ ಆ ಮಗುವನ್ನು ಕಸಿದು ಪರಾರಿಯಾಗುತ್ತಾನೆ. ಗೋದಾವರಿ ತನ್ನ ತಾಯಿ ಗಂಗಾ ಹಾಗೂ ಮಗಳು ಕಾವೇರಿಯೊಡನೆ ಬೇರೆ ಜೀವನ ಪ್ರಾರಂಭಿಸುತ್ತಾಳೆ. ಕಳೆದು ಹೋದ ಮಗನ ಬಗ್ಗೆ ಆಗಾಗ ಕರುಳು ಚುರ‍್ರೆಂದರೂ ಸಹಿಸಿಕೊಂಡು, ತನ್ನ ಬಳಿ ಇರುವ ಹೆಣ್ಣು ಮಗು ಕಾವೇರಿಯನ್ನು ಸಂಸ್ಕಾರವಂತಳಾಗಿ, ವಿದ್ಯಾವಂತಳಾಗಿ, ಜವಾಬ್ದಾರಿಯುಳ್ಳ ಹೆಣ್ಣುಮಗಳಾಗಿ ಬೆಳೆಸುತ್ತಾಳೆ.

ಕಾವೇರಿ ಬೆಳೆದು ದೊಡ್ಡವಳಾಗಿ, ವಿದ್ಯಾವಂತಳಾಗಿ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗುತ್ತಾಳೆ. ಅಜ್ಜಿ, ತಾಯಿ ಮೊಮ್ಮಗಳದು ಬಹಳ ಅನೋನ್ಯವಾದ ಸಂಬಂಧ. ಮೂವರೂ ಒಬ್ಬರಿಗಾಗಿ ಒಬ್ಬರು ಎಂಬಂತೆ ಜೀವಿಸಿರುತ್ತಾರೆ.

ಗೋದಾವರಿ ತನ್ನ ಕರಕುಶಲ ವಿದ್ಯೆ ಸೀರೆ ನೇಯುವುದನ್ನೇ ತನ್ನ ಕಾಯಕವಾಗಿ ಮಾಡಿಕೊಂಡಿರುತ್ತಾಳೆ. ಅದು ಅವಳಿಗೆ ತನ್ನ ತಾಯಿ ಮನೆಯಿಂದ ಬಂದಿರುವ ಬಳುವಳಿ / ಪರಂಪರೆ. ಗೋದಾವರಿ ನೇಯ್ದ ಸೀರೆಗಳು ಒಂದು ಲಕ್ಷದಿಂದ ಎಂಟು ಲಕ್ಷದವರೆಗೂ ಬೆಲೆ ಬಾಳುವಂಥದ್ದು. ಅಷ್ಟು ಸೀರೆ ನೇಯ್ದರೂ ಗೋದಾವರಿ ಒಂದು ಪೈಥಾನಿ ಸೀರೆಯನ್ನು ಉಟ್ಟಿರುವುದಿಲ್ಲ. ಸೀರೆ ನೇಯುವುದು ಅವಳ ಉದ್ಯೋಗವೇ ಅಲ್ಲದೆ ಅವಳ ಆತ್ಮಾಭಿಮಾನ ಹಾಗೂ ಅವಳ ಹೆಗ್ಗುರುತು ಆಗಿರುತ್ತದೆ. ಪೈಥಾಣಿ ಕಲೆ ಅವಳ ರಕ್ತದಲ್ಲಿ ಬೆರೆತು ಹೋಗಿರುತ್ತದೆ. ಸೀರೆ ನೇಯ್ದು ನೇಯ್ದು ಅವಳ ಕಣ್ಣುಗಳು ತಮ್ಮ ಮೊದಲಿನ ಶಕ್ತಿ ಕಳೆದುಕೊಂಡು, ದಪ್ಪ ಕನ್ನಡಕ ಹಾಕಬೇಕಾಗಿ ಬಂದರೂ ಗೋದಾವರಿಗೆ ಚಿಂತೆಯಿಲ್ಲ. ಅವಳ ಗುರಿ ಒಂದೇ, ಬದುಕಿರುವವರೆಗೂ ತಾನು ಸೀರೆಗಳನ್ನು ನೇಯುತ್ತಲೇ ಇರಬೇಕು. ಸೀರೆ ನೇಯುವುದು ನಿಂತರೆ ಅಲ್ಲಿಗೆ ತನ್ನ ಬದುಕೂ ನಿಂತು ಬಿಡುತ್ತದೆ ಎಂಬ ಭಾವನೆ.

ಕಣ್ಣೀರಾಗಿಸುವ ‘ಮೇಯಗಳನ್’ 

ಪೈಥಾನಿ ತಾನು ಉಟ್ಟಿಲ್ಲವೆಂಬ ವಿಷಯ ಹಾಗೂ ಪೈಥಾಣಿ ಸೀರೆ ಉಡಬೇಕೆಂಬ ಆಸೆ ಯಾವ ಹೆಣ್ಣಿಗೆ ಇರುವುದಿಲ್ಲ ಎಂಬ ಗೋದಾವರಿಯ ಅಂತರಾಳದ ಬಯಕೆ ತಿಳಿದ ಮಗಳು ತಾಯಿಗೆ ಅತ್ಯುನ್ನತವಾದ ತನ್ನ ತಾಯಿಯೇ ನೇಯ್ದ ಸೀರೆಯನ್ನು ಉಡುಗೊರೆಯಾಗಿ ಕೊಡಬೇಕೆಂದು ಬಯಸುತ್ತಾಳೆ. ಅದಕ್ಕಾಗಿ ಹಣ ಒಟ್ಟು ಮಾಡುತ್ತಾಳೆ. ಸಂಬಳದ ಮೇಲೆ ಲೋನ್ ಪಡೆಯುತ್ತಾಳೆ. ಹಾಗೂ ಹಣ ಸಾಕಾಗದೆ ಇದ್ದಾಗ ತನ್ನ ಆಸೆ ತಿಳಿದ ಅಜ್ಜಿ ಗಂಗಾ ಅವಳಿಗೆ ತನ್ನ ಪುಟ್ಟ ಜಮೀನಿನ ತುಂಡೊಂದನ್ನು ಒತ್ತೆ ಇಟ್ಟು ಲೋನ್ ಪಡೆಯಲು ಹೇಳುತ್ತಾಳೆ. ಈ ವಿಷಯ ತಾಯಿಯ ಕಿವಿಗೆ ಬೀಳಬಾರದೆಂದು ಕಾವೇರಿ ಅಜ್ಜಿಗೆ ತಾಕೀತು ಮಾಡುತ್ತಾಳೆ.

ಹಣ ಒಟ್ಟು ಮಾಡಿ ಸೀರೆ ಆರ್ಡರ್ ಮಾಡಬೇಕೆಂಬ ಸಮಯದಲ್ಲಿ ಗೋದಾವರಿ ನೇಯುತ್ತಿದ್ದ ಸೀರೆ ಮುಂಬೈನ ಖ್ಯಾತ ಉದ್ಯಮಿಯೊಬ್ಬ ಮೂರು ಲಕ್ಷ ರೂ ಮುಂಗಡ ಕೊಟ್ಟು ಕಾದಿರಿಸುತ್ತಾನೆ. ಕಾವೇರಿಗೆ ನಿರಾಶೆಯಾಗುತ್ತದೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅವಳು ಆ ಉದ್ಯಮಿಯ ಅಡ್ರೆಸ್ ಪತ್ತೆ ಮಾಡಿ ಮುಂಬೈನಲ್ಲಿ ಅವನನ್ನು ಭೇಟಿ ಮಾಡಿ, ತನ್ನ ತಾಯಿಗೆ ಆ ಸೀರೆಯನ್ನು ಬಿಟ್ಟು ಕೊಡಲು ಹೇಳುತ್ತಾಳೆ. ಆದರೆ ಆ ಉದ್ಯಮಿ ವಿಶಾಲ್ ಒಂದು ಫ್ಯಾಷನ್ ಶೋ ರೂಂ ಮುಕ್ತಿ ಕ್ರಿಯೇಷನ್ ನ ಮಾಲೀಕ. ಮುಂಬರುವ ಒಂದು ಫ್ಯಾಷನ್ ಶೋನಲ್ಲಿ ಆ ಸೀರೆಯನ್ನು  ಪ್ರಸ್ತುತ ಪಡಿಸಲು ಯೋಚಿಸಿರುತ್ತಾನೆ. ಅವನು ತನ್ನ ಆರ್ಡರ್ ಕ್ಯಾನ್ಸಲ್ ಮಾಡಿಕೊಳ್ಳಲು ಬಿಲ್ ಕುಲ್ ಒಪ್ಪುವುದಿಲ್ಲ. ತಾನೊಬ್ಬ ಉದ್ಯಮಿ, ತನಗೆ ತನ್ನ ಪ್ರಸಿದ್ಧಿ ಹಾಗೂ ಲಾಭವೇ ಮುಖ್ಯ ಎನ್ನುತ್ತಾನೆ.

ಕಾವೇರಿ ನಿರಾಶಳಾಗಿ ಊರಿಗೆ ಹಿಂದಿರುಗುತ್ತಾಳೆ. ಅಜ್ಜಿ ಮತ್ತು ತನ್ನ ಗೆಳತಿಯ ಮುಂದೆ ತನಗಾದ ಪರಾಭವವನ್ನು ಹೇಳಿಕೊಂಡು ಹಪಹಪಿಸುತ್ತಾಳೆ. ಪ್ರಸ್ತುತ ಗೋದಾವರಿ ನೇಯುತ್ತಿರುವ ಆ ಪೈಥಾಣಿ ಸೀರೆ ಗೋದಾವರಿ ನೇಯುವ ಕೊನೆಯ ಸೀರೆಯಾಗಿರುತ್ತದೆ. ಏಕೆಂದರೆ ಕಣ್ಣಿನ ಸಮಸ್ಯೆಯಿಂದ ಅವಳು ಇನ್ನು ಮುಂದೆ ಸೀರೆ ನೇಯಲು ಸಾಧ್ಯವಿರುವುದಿಲ್ಲ. ಹಾಗಾಗಿ ಅವಳು ನೇಯುತ್ತಿರುವ ಆ ಸೀರೆಯನ್ನೇ ಅವಳಿಗೆ ಉಡುಗೊರೆಯಾಗಿ ಕೊಡಬೇಕೆಂದು ಕಾವೇರಿಯ ಆಸೆ. ತನಗಾಗಿ ಅಷ್ಟೊಂದು ದುಡಿದಿರುವ ತನ್ನ ತಾಯಿಗೆ ತಾನು ನೀಡುವ ಒಂದು ಭಾವಪೂರ್ಣ ಉಡುಗೊರೆ ಎಂದು ಹೇಳುವ ಕಾವೇರಿಯ ಮಾತು ನೋಡುಗನ ಹೃದಯ ಒದ್ದೆಯಾಗುವಂತೆ ಮಾಡುತ್ತದೆ.

ಉಲಝ್: ರಾಜತಾಂತ್ರಿಕ ಜಾಲದಲ್ಲಿ ಭಾರತೀಯ ರಾಯಭಾರಿ

ತನ್ನ ಬದುಕನ್ನು ಕಾವೇರಿಯ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದ ಗೋದಾವರಿ, ಕಾವೇರಿಗೆ ಒಬ್ಬ ತಮ್ಮ ಇರುವುದನ್ನೂ ತಿಳಿಸಿರುತ್ತಾಳೆ. ಆ ತಮ್ಮನನ್ನು ಕಾವೇರಿ ನೋಡಿಯೂ ಇರುತ್ತಾಳೆ ಆದರೆ ಬಾಂಧವ್ಯ ಬೆಳೆದಿರುವುದಿಲ್ಲ. ಗೋದಾವರಿ ಆರೈಕೆಯಲ್ಲಿ ಬೆಳೆದ ಕಾವೇರಿ ಸುಶಿಕ್ಷಿತಳಾಗಿ ಬೆಳೆದರೆ ತಂದೆಯ ಆರೈಕೆಯಲ್ಲಿ ಬೆಳೆದ ಮಗ ಸಾಮ್ರಾಟ ಅಲಸಿಯಾಗಿ, ಲಂಪಟನಾಗಿ ಬೆಳೆಯುತ್ತಾನೆ. ಸದಾ ದುಷ್ಟ ಸ್ನೇಹಿತರೊಡನೆ ಇಸ್ಪೀಟು ಆಡುತ್ತಾ, ಬಾಜಿ ಕಟ್ಟುತ್ತಾ ಹಣ ಕಳೆಯುತ್ತಾ, ಹಣ ಸಾಕಾಗದಿದ್ದಾಗ ತಂದೆಯ ಹಣವನ್ನು ಕದಿಯುತ್ತ ಎಲ್ಲ ದುರ್ಗುಣಗಳ ಪ್ರತಿರೂಪವಾಗಿ ಬೆಳೆಯುತ್ತಾನೆ. ಇವನನ್ನು ದುಷ್ಟ ಸಹವಾಸದಿಂದ ತಪ್ಪಿಸಿ ನಾಗರಿಕನನ್ನಾಗಿಸಲು ಬಯಸುವ ತಂದೆ ಪಡುವ ಪಾಡು ಒಂದೊಂದಲ್ಲ.

ನಿರಾಶೆಯಿಂದ ಮುಂಬೈನಿದ ಮರಳುವ ಕಾವೇರಿ ಏನು ಮಾಡುವುದೆಂದು ತೋಚದೇ, ಅಜ್ಜಿಯೊಡನೆ  ಗೆಳತಿಯೊಡನೆ ಚಿಂತಿಸುತ್ತಾ ಇರುವಾಗ ಅವಳಿಗೆ ಬ್ಯಾಂಕ್ ಲೋನ್ ಸಹ ಬಿಡುಗಡೆಯಾದ ಮೆಸೇಜ್ ಬರುತ್ತದೆ. ಕಾವೇರಿಯ ಚಡಪಡಿಕೆ ತೀವ್ರವಾಗುತ್ತದೆ.

ಈ ಮಧ್ಯೆ ಪೈಥಾಣಿ ಕಾದಿರಿಸಿದ್ದ ಉದ್ಯಮಿ ತನ್ನ ಸೀರೆಗೆ ಸಾಂಪ್ರದಾಯಿಕವಾದ ಟಚ್ ಕೊಡದೆ ಗೇಟ್ ವೇ ಆಫ್ ಇಂಡಿಯಾ ದ ಚಿತ್ರವನ್ನು ನೇಯಬೇಕೆಂದು ಹೇಳುತ್ತಾನೆ. ಇದಕ್ಕಾಗಿ ಅವನು ಪೈಥಾಣ್‌ಗೆ ಬಂದು ಖುದ್ದು ಗೋದಾವರಿಯೊಡನೆ ಮಾತನಾಡುತ್ತಾನೆ. ಇದಕ್ಕೆ ಗೋದಾವರಿ ಎಷ್ಟು ಮಾತ್ರಕ್ಕೂ ಒಪ್ಪುವುದಿಲ್ಲ. ಪೈಥಾಣಿ ಸಾಂಪ್ರದಾಯಿಕವಾದ ಒಂದು ಶೈಲಿ. ಅದು ಬಳ್ಳಿ ಹೂವು ಮಯೂರಗಳಿಂದಲೇ ಅಲಂಕಾರ ಗೊಳ್ಳಬೇಕು. ಅದೇ ಶೈಲಿಯ ನೇಯ್ಗೇಯೇ ಆಗಬೇಕು. ಸಾಂಪ್ರದಾಯಿಕ ಶೈಲಿ ಬಿಟ್ಟು, ಬೇರೆ ಶೈಲಿಯಲ್ಲಿ ತಾನು ನೇಯುವುದಿಲ್ಲ, ಗೇಟ್ ವೇ ಆಫ್ ಇಂಡಿಯಾ ಚಿತ್ರ ನೇಯ್ದರೆ ಅದು ಪೈಥಾಣಿಯಾಗುವುದಿಲ್ಲ, ಹಾಗಾಗಿ ತಾನು ಆ ಕೆಲಸ ಮಾಡಲಾರೆ, ಎಂದು ಖಡಾಖಂಡಿತವಾಗಿ ಹೇಳಿ ಬಿಡುತ್ತಾಳೆ. ವಿಶಾಲ್ ಎಷ್ಟು ಕೇಳಿ ಕೊಂಡರೂ ಗೋದಾವರಿ ಒಪ್ಪುವುದಿಲ್ಲ. ಆಗ ಅಲ್ಲಿ ಬರುವ ಕಾವೇರಿಯನ್ನು ನೋಡಿದ ವಿಶಾಲ್ 'ನೀನ್ಯಾಕೆ ನನ್ನ ಹಿಂದೆ ಬಿದ್ದಿರುವೆ? ನಿನಗಾಗಿ ನಾನು ಪೈಥಾನ್ ಸೀರೆಯನ್ನು ತ್ಯಾಗ ಮಾಡುವುದಿಲ್ಲ,' ಎನ್ನುತ್ತಾನೆ ಅದಕ್ಕೆ ಕಾವೇರಿ ಹೇಳುತ್ತಾಳೆ, ನಾನಲ್ಲ ನಿನ್ನ ಹಿಂದೆ ಬಿದ್ದಿರುವುದು, ನೀನೇ ನನ್ನ ಹಿಂದೆ ಬಿದ್ದಿರುವೆ ಇದು ನನ್ನ ಊರು ಆ ಸೀರೆ ನೇಯುವ ಗೋದಾವರಿ ನನ್ನ ತಾಯಿ, ಇದೇ ಅವಳು ನೇಯುವ ಕೊನೆಯ ಸೀರೆ. ಈ ಸೀರೆಯನ್ನು ನಾನು ಅವಳಿಗೆ ಉಡುಗೊರೆ ಕೊಡಬೇಕೆಂಬುವುದು ನನ್ನ ಆಸೆ. ನನ್ನ ತಾಯಿ ನನಗಾಗಿ ಬಹಳ ಕಷ್ಟ ಪಟ್ಟಿದ್ದಾಳೆ. ಅವಳಿಗೆ ಇದು ನಾನು ಕೃತಜ್ಞತಾ ಪೂರ್ವಕವಾಗಿ ಕೊಡುವ ಉಡುಗೊರೆ. ದಯವಿಟ್ಟು ನಿನ್ನ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿ ಎನ್ನುತ್ತಾಳೆ. ಆದರೆ ವಿಶಾಲ್ ಅದಕೊಪ್ಪದೆ ಮುಂಬೈಗೆ ಹೋಗಿ ಬಿಡುತ್ತಾನೆ.

ವಯಸ್ಸಾದ ಜೀವಕ್ಕೆ ಬೆಲೆ ಇಲ್ಲವೇ?: ಸಿಗ್ನೇಚರ್ ಹೇಳೋ ಕಥೆ ಇದು!

ಸೀರೆ ನೇಯ್ದ ಮೇಲೆ ಗೋದಾವರಿ ಅದನ್ನು ನೋಡಿ ಸಂಭ್ರಮಿಸುತ್ತಾಳೆ. ಅದರ ಅಂದ ಚೆಂದವನ್ನು ನೋಡಿ ಆ ಸೀರೆಯನ್ನು ಕೆನ್ನೆಗೊತ್ತಿಕೊಂಡು ಸಂತೋಷಿಸುತ್ತಾಳೆ. ತನ್ನ ಹೆತ್ತ ಮಗುವನ್ನು ಮುದ್ದಿಸುವಂತೆ ಮೃದುವಾಗಿ ಮುದ್ದಿಸುತ್ತಾಳೆ. ಗುಲಾಬಿ ಬಣ್ಣದ ಆ ಸೀರೆಯ ಅಂದ ಚೆಂದ ನೋಡಿ ಎಷ್ಟು ಸಂಭ್ರಮಿಸಿದರೂ ಸಾಲದು ಅವಳಿಗೆ. ಸೀರೆ ರೆಡಿ ಆಗಿದೆ ಎಂದು ಮಗ್ಗದ ಮಾಲೀಕ ವಿಶಾಲ್ ಗೆ ದೂರವಾಣಿ ಮುಖಾಂತರ ತಿಳಿಸುತ್ತಾರೆ. ಯಾರನ್ನಾದರೂ ಕಳಿಸಿದರೆ ಸೀರೆ ಕೊಟ್ಟು ಕಳಿಸುವುದಾಗಿ ಹೇಳುತ್ತಾರೆ. ಅವರಿಗೆ ಗೋದಾವರಿ ಎಂದರೆ ತಂಗಿಗಿಂತ ಹೆಚ್ಚು ಅಭಿಮಾನ. ಗೋದಾವರಿಯ ನೇಯ್ಗೆಯ ಆಯ್ಕೆ ಡಿಸೈನ್‌ಗಳನ್ನು ಅವರು ಸದಾ ಬೆಂಬಲಿಸಿರುತ್ತಾರೆ. ವಿಶಾಲ್ ಅವರಿಬ್ಬರನ್ನೂ ಮುಂಬೈಗೆ ಬಂದು ಸೀರೆಯನ್ನು ಅವರೇ ಖುದ್ದು ಡೆಲಿವರಿ ಕೊಡಲು ಹೇಳುತ್ತಾನೆ. ಅದರಂತೆ ಮಾಲೀಕರು ಹಾಗೂ ಗೋದಾವರಿ ಮುಂಬೈಗೆ ಹೊರಡುತ್ತಾರೆ.

ಇಲ್ಲಿ ಕಾವೇರಿಯ ತಮ್ಮ ಸಾಮ್ರಾಟ ತನ್ನ ಹಣದ ವಿಷಯಕ್ಕೆ ತನ್ನ ಸ್ನೇಹಿತನ ಜೊತೆ ಜಗಳವಾಡಿ ಹೊಡೆದಾಟವಾಗಿ ಅವನ ಸ್ನೇಹಿತ ಸಾಮ್ರಾಟನನ್ನು ಚೆನ್ನಾಗಿ ಹೊಡೆದು ಬೀದಿಯಲ್ಲಿ ಬಿಸುಡಿ ಹೋಗಿ ಬಿಟ್ಟಿರುತ್ತಾನೆ. ಅಚಾನಕ್ ರಸ್ತೆಯಲ್ಲಿ ಜ್ಞಾನವಿಲ್ಲದೆ ಬಿದ್ದಿರುವ ತಮ್ಮನನ್ನು ನೋಡಿ ಕಾವೇರಿ ಕಂಗಾಲಾಗಿ ಅವನನ್ನು ಆಸ್ಪತ್ರೆಗೆ ಸೇರಿಸುತ್ತಾಳೆ. ಅವನ ಚಿಕಿತ್ಸೆಗೆ ತನ್ನ ಬಳಿ ಇದ್ದ ಹಣದಲ್ಲಿ, ಮೂರು ಲಕ್ಷ ಆಸ್ಪತ್ರೆಗೆ ಕಟ್ಟುತ್ತಾಳೆ. ಮಗನನ್ನು ನೋಡಲು ಧಾವಿಸಿ ಬರುವ ತಂದೆಗೆ ಮಗಳ ಹಿರಿತನ ಅರಿವಾಗಿ ಕುಗ್ಗಿ ಹೋಗುತ್ತಾನೆ. ಮಗ-ಮಗಳು ಇಬ್ಬರೂ ತನ್ನದೇ ಕರುಳಿನ ಚೂರುಗಳು ಎಂದು ಅರಿವಾಗಿ ಪಶ್ಚತ್ತಾಪದಿಂದ ಕಣ್ಣೀರಿಡುತ್ತಾನೆ. ಮಗಳನ್ನು ಕ್ಷಮೆ ಕೇಳುತ್ತಾನೆ. ಏನೊಂದೂ ಮಾತಾಡದ ಕಾವೇರಿ ತನ್ನ ಸ್ನೇಹಿತೆಯೊಡನೆ ಅಲ್ಲಿಂದ ಹೊರಟು ಬಿಡುತ್ತಾಳೆ.

ಗಂಗಾ ಅಜ್ಜಿ ಹಾಗೂ ಸ್ನೇಹಿತೆಯೊಡನೆ ಮಾತಾಡುವ ಕಾವೇರಿ ತಾನು ಮುಂಬೈಗೆ ಹೋಗಿ ಕಡೆಯ ಪ್ರಯತ್ನವಾಗಿ ವಿಶಾಲ್‌ನನ್ನು ಮಾತನಾಡಿಸಲು ನಿರ್ಧರಿಸುತ್ತಾಳೆ. ಅವಳು ಮುಕ್ತಿ ಕ್ರಿಯೇಷನ್ ಕಚೇರಿಗೆ ಬಂದಾಗ ಅಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ಫ್ಯಾಷನ್ ಶೋಗೆ ಹೋಗಿರುತ್ತಾರೆ. ಸೆಕ್ಯುರಿಟಿಯಿಂದ ವಿಳಾಸ ತಿಳಿದು, ಆ ಫ್ಯಾಷನ್ ಶೋ ನಡೆಯುವ ಜಾಗಕ್ಕೆ ಹೋದ ಕಾವೇರಿಗೆ ಅಲ್ಲೊಂದು ಆಶ್ಚರ್ಯ ಕಾದಿರುತ್ತದೆ. ಏನು ಅದು ಆಶ್ಚರ್ಯ? ನೀವೇ ನೋಡಿ ಎಂಜಾಯ್ ಮಾಡಿ. ಆ ಆಶ್ಚರ್ಯ ನಿಮ್ಮ ಕಣ್ಣಲ್ಲಿ ಆನಂದ ಬಾಷ್ಪವನ್ನು ತರುವುದರಲ್ಲಿ ಸಂದೇಹವೇ ಇಲ್ಲ.

ಕ್ರಿಕೆಟ್ ಪ್ರೇಮದ ಕಹಿ ಸತ್ಯ: 'ಮಿಸ್ಟರ್ ಆ್ಯಂಡ್ ಮಿಸೆಸ್ ಮಹಿ'

ಗೋದಾವರಿಯಾಗಿ ಮೃಣಾಲ್ ಕುಲಕರ್ಣಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪಾರಿಜಾತ ಪುಷ್ಪದಂತ ಕೋಮಲ ಸೌಂದರ್ಯ, ಮೃದು ಮಾತು ಮುಗ್ಧ ನಗೆ ಅವರ ವಿಶೇಷತೆ. ಬಹಳಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದರೂ ಪೈಥಾಣಿ ಅವರಿಗೆ ಬ್ರೇಕ್ ಕೊಟ್ಟಂತ ಸೀರೀಸ್. ಇನ್ನು ಕಾವೇರಿಯಾಗಿ ಈಶಾ ಸಿಂಗ್ ಹಾಗೂ ಅಜ್ಜಿಯಾಗಿ ಸಂಗೀತಾ ಬಾಲಚಂದರ್ ತಮ್ಮ ಪಾತ್ರಗಳಲ್ಲಿ ಕಳೆದು ಹೋಗಿದ್ದಾರೆ. ಇದು ಒಂದು ತಾಯಿ, ಮಗಳು ಮೊಮ್ಮಗಳ ಆಪ್ತ ಸಂಬಂಧದ ಕಥೆ. ಕೆಲವು ಸಂಭಾಷಣೆಗಳಂತೂ ಮನಸ್ಸಿಗೆ ಆಪ್ತವಾಗುತ್ತದೆ. ಕಾವೇರಿ ಒಂಟಿಯಾಗಿ ಮುಂಬೈನಂಥ ಮಹಾನಗರಕ್ಕೆ ಹೋಗುವುದು, ಅಲ್ಲಿನ ಅವಳ ಅನುಭವ ಬಹಳ ಅದ್ಭುತವಾಗಿ ಚಿತ್ರಿಸಿದ್ದಾರೆ. ಹೆಣ್ಣು ಮಕ್ಕಳು ಈಗ ಕಾರ್ಯ ನಿಮಿತ್ತ ಯಾವ ಶಹರಿಗೆ ಬೇಕಾದರೂ ನಿರ್ಭಯವಾಗಿ ಹೋಗಿಬರಬಹುದು ಎಂಬುದೊಂದು ಗುಣಾತ್ಮಕ ಅಂಶ ಈ ಚಿತ್ರದಲ್ಲಿದೆ. ಹಾಗೆಯೇ ಮುಂಬೈ ಮಹಾನಗರಿ ಕೆಟ್ಟದ್ದಲ್ಲ, ಇಲ್ಲಿನ ಜನರು ಸಹಾಯ ಮಾಡಲು ಸದಾ ತುಡಿಯುತ್ತಾರೆ ಎಂಬ ಅಂಶ ಮತ್ತಷ್ಟು ಪಾಸಿಟಿವ್ ಆಗಿದೆ.

 

ಮನೆಮಂದಿಯೆಲ್ಲಾ ಆರಾಮಾಗಿ ಕುಳಿತು ನೋಡಿ ಎಂಜಾಯ್ ಮಾಡಬಹುದಾದ ಸೀರೀಸ್ ಇದು. ಯಾವುದೇ ಅಬ್ಬರ, ಗದ್ದಲ, ನಾಟಕೀಯತೆ, ಹೇಸಿಗೆ ದೃಶ್ಯಗಳು ಇಲ್ಲದೆ ನವಿರಾದ ನಾಜೂಕಾದ ಈ ಸೀರೀಸ್ ಒಂದು ದೃಶ್ಯಕಾವ್ಯ.
 

click me!