ಹಿಂದೆಲ್ಲ ನಾಟಿ ಅಂದ್ರೇನೆ ಒಂದು ಹಬ್ಬ, ಸಂಭ್ರಮ. ಉಳುಮೆ ಮಾಡಿದ ಕೆಸರು ಗದ್ದೆಯಲ್ಲಿ ಚಟಪಟ ಸುರಿಯುವ ಮಳೆಯಲ್ಲಿ ಊರ ಹೆಂಗಸರ ಮೀಟಿಂಗ್ ಜೋರಾಗೆ ನಡೆಯುತ್ತಿತ್ತು. ಅಲ್ಲಿ ಪಕ್ಕದ ಮನೆ ಲಲಿತಕ್ಕ, ಮೂಲೆಮನೆ ಗೀತಾಕ್ಕ, ಕೆಳಮನೆ ಸಾವಿತ್ರಕ್ಕ...ಹೀಗೆ ಊರಿನ ಎಲ್ಲರ ಮನೆಯ ಸುದ್ದಿಗಳೂ ಹರಿದಾಡುತ್ತಿದ್ದವು. ಇಡೀ ಊರಿನ ವಾರ್ತೆ ನಾಟಿ ಗದ್ದೆಯಲ್ಲಿ ಸಿಗುತ್ತಿತ್ತು. ಅತ್ತೆ ಕಿರುಕುಳ,ಪತಿಯ ಹೊಡೆತ,ಮಕ್ಕಳ ಮಂಗನಾಟ,ಸೊಸೆಯ ಧಿಮಾಕು,ಕಾಳುಮೆಣಸು ಮಾರಿ ಮಾಡಿಸಿದ ಎರಡೆಳೆ ಸರ, ಜಾತ್ರೆಯಲ್ಲಿ ಕಳೆದು ಹೋದ ಚಪ್ಪಲಿ...ಹೀಗೆ ಏನುಂಟು, ಏನಿಲ್ಲ ಎಂಬಂತೆ ಮನಸ್ಸಿನಲ್ಲಿ ಹುದುಗಿರುವ ನೋವು, ಸಂತಸ, ಹತಾಸೆ ಎಲ್ಲವನ್ನೂ ಹೊರಹಾಕಿ ನಿಟ್ಟುಸಿರುವ ಬಿಡುವ ಮಹಿಳೆ, ಆಪ್ತ ಸಮಾಲೋಚನೆಗೊಳಗಾದ ಬಳಿಕ ಸಿಗುವ ನಿರಾಳತೆಯೊಂದಿಗೆ ಸಂಜೆ ಮನೆಗೆ ಹಿಂತಿರುಗುತ್ತಿದ್ದಳು.

 ಅನುಮಾನವೇ ಇಲ್ಲ, ತಾಯಂದಿರೆಲ್ಲರೂ ಸುಂದರಿಯರೇ

ಆದರೆ, ಇಂದು ಹಳ್ಳಿಗಳಲ್ಲಿ ಮಹಿಳೆಯರು ಈ ರೀತಿ ಒಂದೆಡೆ ಸೇರಿ ಮನಸ್ಸೋಇಚ್ಛೆ ಮಾತನಾಡುವಂತಹ ದೃಶ್ಯಗಳು ಕಾಣಸಿಗುವುದಿಲ್ಲ. ಇದಕ್ಕೆ ಕಾರಣ ಯಂತ್ರಗಳು. ಹೌದು, ನಾಟಿ, ಕಟಾವಿಗೂ ಇಂದು ಯಂತ್ರಗಳು ಬಂದುಬಿಟ್ಟಿವೆ.ಇನ್ನು ಊರ ಕೆರೆಯಲ್ಲಿ ಬಟ್ಟೆ ತೊಳೆಯುತ್ತ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದ ಮಹಿಳೆಯರ ಮನೆಗಳಲ್ಲಿ ವಾಷಿಂಗ್ ಮಷಿನ್ ಎಂಬ ಸಾಧನ ಬಂದು ಕೂತಿದೆ. ಹೀಗಾಗಿ ಬಟ್ಟೆ ತೊಳೆಯಲು ಊರ ಕೆರೆ ತನಕ ಹೋಗಬೇಕಾದ ಅನಿವಾರ್ಯತೆಯಿಲ್ಲ. ಸಂಜೆ ಹೊತ್ತು ಪಂಚಾಯ್ತಿ ಸೇರುತ್ತಿದ್ದ ಅಕ್ಕಪಕ್ಕದ ಮನೆ ಮಹಿಳೆಯರೆಲ್ಲ ಈಗ ಟಿವಿ ಮುಂದೆ ಒಂಟಿಯಾಗಿ ಕುಳಿತು ಬಿಡುತ್ತಾರೆ. ಹೀಗೆ ಯಾರೊಂದಿಗೂ ಬೆರೆಯದೆ ಮನಸ್ಸಿನ ಮಾತುಗಳಿಗೆ ಅಣೆಕಟ್ಟು ಕಟ್ಟಿದ ಪರಿಣಾಮ ಅವಳೆದೆಯಲ್ಲಿ ಭಾವನೆಗಳ ಹೊಯ್ದಾಟ ಹೆಚ್ಚಿ,ಕುದಿಮೌನ ಆವರಿಸಿದೆ.ಇದು ಹಳ್ಳಿ ಹೆಂಗಸಿನ ಕಥೆಯಾದ್ರೆ,ನಗರದ ಮಾಡರ್ನ್,ಸೂಪರ್‍ವುಮೆನ್, ಹೌಸ್ ಮೇಕರ್ ಕಥೆ ಇನ್ನೊಂದು ತರಹ.

ನಗರದ ಬದುಕಿಗೆ ಬ್ಯುಸಿ ಎಂಬ ಹಣೆಪಟ್ಟಿ ಕಟ್ಟಿದ್ದೇವೆ.ಅದ್ರಲ್ಲೂ ಉದ್ಯೋಗಸ್ಥೆ ಮಹಿಳೆಯಾದ್ರೆ ಆಕೆಯದ್ದು ಗಾಣಕ್ಕೆ ಕಟ್ಟಿದ ಎತ್ತಿನ ಸ್ಥಿತಿ. ದಿನದ 24 ಗಂಟೆ ದುಡಿದ್ರೂ ಮುಗಿಯದ ಕೆಲಸದ ಭಾರ ಹೆಗಲಿಗೇರಿದೆ.ವಿಭಕ್ತ ಕುಟುಂಬವಾದ ಕಾರಣ ಮನೆಗೆಲಸ, ಮಕ್ಕಳ ಪಾಲನೆ, ಅಡುಗೆ ಎಲ್ಲವನ್ನೂ ಒಬ್ಬಳೇ ನಿಭಾಯಿಸುತ್ತಿದ್ದಾಳೆ.ಆ ಮೂಲಕ ಸ್ವಾಭಿಮಾನಿ ಮಹಿಳೆ ಎಂದು ಕರೆಸಿಕೊಂಡರೂ ಒಳಗೊಳಗೆ ಏನೋ ತಳಮಳ.

ರಾಜಕುಮಾರಿ ಕೇಟ್‌ ಮಿಡ್ಲ್‌ಟನ್ ಹೆರಿಗೆ ನೋವಿನಿಂದ ಪಾರಾಗಿದ್ದು ಹೇಗೆ?

ಖಿನ್ನತೆಗೆ ಶಿಕಾರಿಯಾಗುತ್ತಿದ್ದಳಾ ಆಧುನಿಕ ಮಹಿಳೆ?:

ಹೌದು ಎನ್ನುತ್ತಿವೆ ಅಧ್ಯಯನಗಳು.ಹಳ್ಳಿಗಳಲ್ಲಿ ಕೃಷಿ ಯಾಂತ್ರೀಕರಣ, ಟಿವಿ, ವಾಷಿಂಗ್ ಮಷಿನ್ ಸೇರಿದಂತೆ ಆಧುನಿಕ ಉಪಕರಣಗಳ ಆಗಮನದಿಂದ ಮಹಿಳೆ ಖಿನ್ನತೆಗೆ ಒಳಗಾಗಿಲ್ಲ. ಬದಲಿಗೆ ಇವೆಲ್ಲ ಇಲ್ಲದಿರುವಾಗ ಆಕೆ ಅಕ್ಕಪಕ್ಕದ ಮನೆ ಮಹಿಳೆಯರೊಂದಿಗೆ ಬೆರೆಯುತ್ತಿದ್ದಳು,ಮಾತನಾಡುತ್ತಿದ್ದಳು.ಭಾವನೆಗಳನ್ನು ಹಂಚಿಕೊಂಡ ಪರಿಣಾಮ ಮನಸ್ಸು ಹಗುರರಾಗುತ್ತಿತ್ತು.ಆದ್ರೆ ಇಂದು ಬೇಸರ ಮರೆಸಲು ನಾನಾ ಕಥಾಹಂದರವುಳ್ಳ ಸೀರಿಯಲ್‍ಗಳಿವೆ. ಆದ್ರೆ ಅವಳ ಮನಸ್ಸಿನ ಕಥೆ ಅವಳೊಳಗೇ ಬಂಧಿಯಾಗಿದೆ.ಇನ್ನು ಸೂಪರ್‍ವುಮೆನ್ ಅನ್ನಿಸಿಕೊಳ್ಳುವ ನಗರದ ಮಹಿಳೆ ಆಫೀಸ್, ಮನೆ ಎಲ್ಲ ಕಡೆ ‘ನಾನು ಚೆನ್ನಾಗೇ ಇದ್ದೀನಿ’ ಎಂಬ ಮುಖವಾಡ ಧರಿಸಿಕೊಂಡು ಅಡ್ಡಾಡುತ್ತಾಳೆ. ಆದ್ರೆ ಅವಳೊಳಗೆ ಹೇಳಿಕೊಳ್ಳಲಾಗದ ಒತ್ತಡ ಕಾಡುತ್ತಿದೆ.ಇದು ಆಕೆಯನ್ನು ಅವಳಿಗರಿವಿಲ್ಲದಂತೆ ಖಿನ್ನತೆಯತ್ತ ನೂಕುತ್ತಿದೆ. 2019ರ ಡಿಸೆಂಬರ್‍ನಲ್ಲಿ ‘ದಿ ಲ್ಯಾನ್ಸೆಟ್ ಸೈಕ್ಯಾಟ್ರಿ’ಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಭಾರತದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಿದ್ದಾರೆ. ಅಷ್ಟೇ ಅಲ್ಲ, ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವವರಲ್ಲಿ ಕೂಡ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ.

ಒಂಟಿತನ ಸ್ಮೋಕಿಂಗ್‍ನಷ್ಟೇ ಡೇಂಜರಸ್:

ಒಂಟಿತನ ಸ್ಮೋಕಿಂಗ್‍ನಷ್ಟೇ ಡೇಂಜರಸ್ ಎನ್ನುವುದನ್ನು ಕೆಲವು ಅಧ್ಯಯನಗಳು ಸಾರಿ ಹೇಳಿವೆ. ‘ಬ್ರೇವಿಂಗ್ ದಿ ವೈಲ್ಡರ್‍ನೆಸ್’ ಎಂಬ ಪುಸ್ತಕದಲ್ಲಿ ಲೇಖಕಿ ಬ್ರೆನೆ ಬ್ರೌನ್ಸ್ ಒಂಟಿಯಾಗಿರುವುದು ದಿನಕ್ಕೆ 15 ಸಿಗರೇಟ್ ಸೇದುವುದರಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮದಷ್ಟೇ ಹಾನಿಕಾರಕ ಎಂದಿದ್ದಾರೆ. ನಿಜ, ಸಿಗರೇಟ್ ಹೊಗೆ ಶ್ವಾಸಕೋಶವನ್ನು ಸುಟ್ಟರೆ, ಒಂಟಿತನ ಮಿದುಳನ್ನೇ ಕೊರೆದು ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ.

ಮಕ್ಕಳು ಎದೆಹಾಲು ಕುಡಿಯುವುದನ್ನು ಬಿಡುತ್ತಿಲ್ವಾ?

ಸ್ವತಂತ್ರರಾಗಿರಿ, ಆದ್ರೆ ಸಂಘಜೀವಿ ಎಂಬುದನ್ನು ಮರೆಯಬೇಡಿ:

ಆಧುನಿಕ ಮಹಿಳೆ ಸ್ವಾವಲಂಬಿ, ಸ್ವತಂತ್ರ ವ್ಯಕ್ತಿತ್ವದವಳು ಎಂಬುದು ಹೆಮ್ಮೆಯ ಸಂಗತಿಯೇ. ಆದ್ರೆ ಆಕೆ ಸಂಘಜೀವಿ ಕೂಡ ಹೌದು ಎಂಬುದನ್ನು ಪ್ರತಿ ಮಹಿಳೆ ಅರ್ಥೈಸಿಕೊಳ್ಳಬೇಕಿದೆ. ಆಫೀಸ್, ಮನೆ, ಗಂಡ-ಮಕ್ಕಳ ಹೊರತಾಗಿಯೂ ಅವಳಿಗಾಗಿ ಒಂದಿಷ್ಟು ಸಮಯ, ಸ್ನೇಹಿತರ ಅಗತ್ಯವಿದೆ. ಆ ಸ್ನೇಹಿತರನ್ನು ಹೇಗೆ ಸಂಪಾದಿಸಬೇಕು, ಎಲ್ಲಿ ಸಂಪಾದಿಸಬೇಕು ಎಂಬುದು ಅವಳಿಗೆಬಿಟ್ಟ ವಿಚಾರ. ಸ್ಕೂಲ್, ಕಾಲೇಜಿನಲ್ಲಿ ಆತ್ಮೀಯರಾಗಿದ್ದ ಗೆಳೆಯ-ಗೆಳತಿಯರೊಂದಿಗೆ ಹೊಸದಾಗಿ ಸಂಪರ್ಕ ಬೆಳೆಸಬಹುದು. ಇಲ್ಲವೆ ಆಫೀಸ್‍ನಲ್ಲಿಯೂ ಸಮಾನಮನಸ್ಕರ ಗುಂಪೊಂದನ್ನು ರಚಿಸಿಕೊಳ್ಳಬಹುದು. ಗೃಹಿಣಿಯಾಗಿದ್ರೆ ಅಕ್ಕಪಕ್ಕದ ಮನೆಯಲ್ಲಿ ತನ್ನ ಭಾವನೆಗಳಿಗೆ ಸ್ಪಂದಿಸಬಲ್ಲ ಗೆಳತಿಯರನ್ನು ಸಂಪಾದಿಸಿಕೊಳ್ಳಬಹುದು. ವಾರಕ್ಕೋ, ತಿಂಗಳಿಗೋ ಒಮ್ಮೆ ಅವರನ್ನು ಭೇಟಿಯಾಗಿ ಕಷ್ಟ-ಸುಖ ಮಾತನಾಡುವ ಪರಿಪಾಠ ಬೆಳೆಸಿಕೊಳ್ಳಿ. ಮಹಿಳೆಯರು ಒಟ್ಟಿಗೆ ಸೇರಿದ್ರೆ ಅಲ್ಲಿ ಮ್ಯಾಜಿಕ್ ನಡೆದೇ ಬಿಡುತ್ತದೆ.ಎಂಥ ನೋವನ್ನಾದ್ರೂ ಮರೆಸುವ ಜೊತೆಗೆ ಸಮಸ್ಯೆಗೆ ಪರಿಹಾರವನ್ನೂ ಒದಗಿಸುತ್ತದೆ. ಈಗಂತೂ ಕೈಯಲ್ಲಿ ಮೊಬೈಲ್‍ಯಿದೆ, ದಿನದಲ್ಲಿ ಸ್ವಲ್ಪ ಸಮಯವಾದ್ರೂ ನಿಮಗೆ ಆತ್ಮೀಯರಾದ ವ್ಯಕ್ತಿಗಳು ಅಮ್ಮ, ಅಕ್ಕ, ಜೀವದ ಗೆಳತಿ ಯಾರೂ ಬೇಕಾದರೂ ಆಗ್ಬಹುದು, ಅವರೊಂದಿಗೆ ಮಾತನಾಡಿ, ಮನಸ್ಸು ಬಿಚ್ಚಿ ನಗಿ. ಹಾಗೆಯೇ ಅಳಬೇಕೆನಿಸಿದರೆ ಜೋರಾಗಿ ಅತ್ತುಬಿಡಿ. ಒತ್ತಡಗಳಿಂದ ತುಂಬಿರುವ ಮನಸ್ಸು ಖಾಲಿಯಾಗಲಿ.