’ಜಲೀಲಾ’ ನಿಂದ 'ಭೀಷ್ಮ': 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಂಬಿ ನಟನೆ!

By Web DeskFirst Published Nov 25, 2018, 9:32 AM IST
Highlights

1973ರಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ‘ನಾಗರಹಾವು’ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ಅಂಬರೀಶ್ 205ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ದೊಡ್ಡ ಆಸ್ತಿಯಾಗಿ ಬೆಳೆದಿದ್ದರು.

ಬೆಂಗಳೂರು[ನ.25]: 1973ರಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ‘ನಾಗರಹಾವು’ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ಅಂಬರೀಶ್ 205ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ದೊಡ್ಡ ಆಸ್ತಿಯಾಗಿ ಬೆಳೆದಿದ್ದರು.

ಸುಮಾರು ಐದು ದಶಕಗಳ ಕಾಲ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌ ಅವರ ಜೊತೆ ಜೊತೆಗೆ ಚಿತ್ರರಂಗದಲ್ಲಿ ಬೆಳೆದ ಅಂಬರೀಶ್ ಅವರು ತಮ್ಮ ಸಮಕಾಲೀನ ದಿಗ್ಗಜರೊಂದಿಗೆ ಸ್ನೇಹಮಯವಾಗಿರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಡಾ.ವಿಷ್ಣುವರ್ಧನ್‌ ಅವರಿಗಂತೂ ಆಪ್ತಮಿತ್ರ ಆಗಿದ್ದ ಅಂಬರೀಶ್ ತಮ್ಮ ಕುಚಿಕು ಗೆಳೆಯನನ್ನು ಹಿಂಬಾಲಿಸಿದ್ದಾರೆ. ಈ ಮೂಲಕ ತ್ರಿಮೂರ್ತಿಗಳ ಕೊನೆಯ ಕೊಂಡಿ ಕಳಚಿದಂತಾಗಿದೆ.

ಇದನ್ನೂ ಓದಿ: ಮಂಡ್ಯ ರಾಜಕಾರಣಕ್ಕೆ ಅಂಬಿಯೇ ಹೈಕಮಾಂಡ್

ಮರೆಯಾದ ಕಲಿಯುಗದ ಕರ್ಣ:

ನಾಗರಹಾವು, ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಚಕ್ರವ್ಯೂಹ, ಮಸಣದ ಹೂವು, ಏಳು ಸುತ್ತಿನ ಕೋಟೆಯಂತಹ ಅದ್ಭುತ ಚಿತ್ರಗಳನ್ನು ನೀಡಿದ ಕೀರ್ತಿ ಅವರದ್ದು. ಕೇವಲ ಚಲನಚಿತ್ರ ರಂಗಕ್ಕೆ ತಮ್ಮ ನಟನೆ ಮೂಲಕ ಮಾತ್ರವೇ ಅಲ್ಲದೆ, ಚಿತ್ರ ರಂಗದ ಪ್ರತಿಯೊಂದು ಸಮಸ್ಯೆಯನ್ನೂ ಬಗೆಹರಿಸುವ ‘ಟ್ರಬಲ್‌ ಶೂಟರ್‌’ ಆಗಿಯೂ ನೆರವಾಗಿದ್ದರು.

ಚಿತ್ರರಂಗದಲ್ಲಿ ತಲೆದೋರಿದ ಸಂಕೀರ್ಣ ಹಾಗೂ ಗಂಭೀರ ಸಮಸ್ಯೆಗಳಿಂದ ಹಿಡಿದು ಇತ್ತೀಚಿಗಿನ ನಟ ಅರ್ಜುನ್‌ ಸರ್ಜಾ ಹಾಗೂ ಶ್ರುತಿ ಹರಿಹರನ್‌ ನಡುವಿನ ಮೀಟೂ ವಿವಾದದವರೆಗೂ ನೂರಾರು ಪ್ರಕರಣಗಳನ್ನು ಇತ್ಯರ್ಥ ಮಾಡಿದ್ದರು. ಈ ಮೂಲಕ ಚಲನಚಿತ್ರ ‘ಟ್ರಬಲ್‌ ಶೂಟರ್‌’ ಆಗಿಯೇ ಜನಜನಿತರಾಗಿದ್ದರು.

ಜತೆಗೆ ಮನೆಗೆ ಬಂದವರನ್ನು ಖಾಲಿ ಕೈಲಿ ಕಳುಹಿಸದ ಅಂಬರೀಶ್ ಕಲಿಯುಗ ಕರ್ಣನಾಗಿಯೂ ಮನೆ ಮಾತಾಗಿದ್ದರು. ಅಂಬರೀಶ್ ಅವರಿಂದ ವೈಯಕ್ತಿಕವಾಗಿ ನೆರವು ಪಡೆದವರು ಹಾಗೂ ಸಹಾಯ ಪಡೆದವರಿಗೆ ಲೆಕ್ಕವಿಲ್ಲ. ಕುದುರೆ ರೇಸ್‌ ಮತ್ತಿತರ ಮೋಜಿನ ಹವ್ಯಾಸಗಳನ್ನು ರೂಢಿಸಿಕೊಂಡಿದ್ದ ಅಂಬರೀಶ್ ಅಸಂಖ್ಯಾತ ಸ್ನೇಹಿತರನ್ನು ಗಳಿಸಿದ್ದರು. ತೆಲುಗಿನ ಮೆಗಾಸ್ಟಾರ್‌ ಚಿರಂಜೀವಿ, ಮೋಹನ್‌ಬಾಬು, ನಟ ರಜನಿಕಾಂತ್‌ ಅವರೊಂದಿಗೆ ಅತ್ಯಾಪ್ತ ಗೆಳೆತನ ಹೊಂದಿದ್ದ ಅವರು ಅವರ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಾಗುವ ಮಟ್ಟಿಗೆ ಬೆಳೆದು ನಿಂತಿದ್ದರು. ಅಂತಹ ಅಂಬರೀಶ್ ಅವರು ತೆರೆಯ ಮರೆಗೆ ಸರಿಯುವ ಮೂಲಕ ಕೇವಲ ಚಂದನವನ ಮಾತ್ರವಲ್ಲದೇ ದಕ್ಷಿಣ ಭಾರತೀಯ ಚಲನಚಿತ್ರರಂಗಕ್ಕೇ ದೊಡ್ಡ ನಷ್ಟಉಂಟು ಮಾಡಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆ ಹಿಂಬಾಗಿಲಿನಿಂದ ಮನೆಗೆ ಶವ ರವಾನೆ

ಮಂಡ್ಯದ ಜನಪ್ರಿಯ ನಾಯಕ:

ಚಲನಚಿತ್ರ ರಂಗದಲ್ಲಿನ ಖ್ಯಾತಿ ಹಾಗೂ ವೈಯಕ್ತಿಕ ವರ್ಚಸ್ಸಿನಿಂದ 1994ರಲ್ಲಿ ಕಾಂಗ್ರೆಸ್‌ ಮೂಲಕ ರಾಜಕೀಯ ಪಾದಾರ್ಪಣೆ ಮಾಡಿದ ಅವರಿಗೆ 1996ರಲ್ಲಿ ಟಿಕೆಟ್‌ ನಿರಾಕರಿಸಲಾಗಿತ್ತು. ಇದರಿಂದ 1998ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದ ಅವರು, ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಸತತ ಎರಡು ಬಾರಿ ಲೋಕಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. 1998ರಿಂದ 2009ರವರೆಗೆ ಮೂರು ಅವಧಿಯ ಲೋಕಸಭೆ ಸದಸ್ಯರಾಗಿದ್ದ ಅವರು, 2006ರಲ್ಲಿ ಕೇಂದ್ರ ಸಚಿವರಾಗಿಯೂ ಅಧಿಕಾರ ಸ್ವೀಕರಿಸಿದರು.

ಕಾವೇರಿ ವಿವಾದದ ಹಿನ್ನೆಲೆಯಲ್ಲಿ 2008ರಲ್ಲಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮತ್ತೊಮ್ಮೆ ‘ರೆಬೆಲ್‌ಸ್ಟಾರ್‌’ ಆದರು. ಬಳಿಕ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ ಗೆದ್ದು ವಸತಿ ಸಚಿವರಾಗಿದ್ದರು. ಬಳಿಕ 2014-15ರಲ್ಲಿ ತೀವ್ರ ಅನಾರೋಗ್ಯ ಉಂಟಾದ ಪರಿಣಾಮ ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದರು.

ಇದನ್ನೂ ಓದಿ: ’ಅಂಬ್ರೀಶಣ್ಣ ಬೈದ್ರು’ ಎಂದು ಖುಷಿ ಪಡುತ್ತಿದ್ದ ಅಭಿಮಾನಿಗಳು!

ಬಳಿಕ 2018ರ ಚುನಾವಣೆಗೆ ಅನಾರೋಗ್ಯದ ಕಾರಣ ನೀಡಿ ಸ್ಪರ್ಧಿಸಿರಲಿಲ್ಲ. ಈ ಮೂಲಕ ಎರಡು ದಶಕಗಳ ಸುದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ್ದ ವರ್ಚಸ್ವಿ ನಾಯಕನ ಕಳೆದುಕೊಂಡಿರುವುದು ಎರಡೂ ಕ್ಷೇತ್ರಗಳಿಗೆ ದೊಡ್ಡ ನಷ್ಟ ಉಂಟಾಗಿದೆ.

click me!