ಮಹಾರಾಷ್ಟ್ರದಲ್ಲಿ ಬಿಜೆಪಿ ಮಿತ್ರಪಕ್ಷಗಳು ಮಹಾಯುತಿ ಅಭೂತಪೂರ್ವ ಗೆಲುವು ದಾಖಲಿಸಿ ಇದೀಗ ಸರ್ಕಾರ ರಚನೆ ಕಸರತ್ತಿನಲ್ಲಿದೆ. ಈ ಬೆಳವಣಿಗೆ ನಡುವೆ ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ ನೀಡಲಿದ್ದಾರೆ.
ಮುಂಬೈ(ನ.25) ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷಗಳ ಮಹಾಯುತಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಅದ್ಭುತ ಗೆಲುವು ದಾಖಲಿಸುವ ಮೂಲಕ ಮಹಾಯುತಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದೀಗ ಮುಂದಿನ ಮುಖ್ಯಮಂತ್ರಿ ಆಯ್ಕೆ ಕಸರತ್ತು ನಡೆಯುತ್ತಿದೆ. ಏಕನಾಥ್ ಶಿಂಧೆ ಮುಂದುವರಿಯಲಿದ್ದಾರೆ ಅನ್ನೋದು ಒಂದು ವಾದವಾದರೆ, ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಸ್ಥಾನಕ್ಕ ಮರಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ಅಜಿತ್ ಪವಾರ್ ಬಣ ಕೂಡ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ನಾಳೆ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ನವೆಂಬರ್ 26ರಂದು ಏಕನಾಥ್ ಶಿಂಧೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ನೂತನ ಮುಖ್ಯಮಂತ್ರಿ ಆಯ್ಕೆಯಾಗುವ ವರೆಗೆ ಮಹಾರಾಷ್ಟ್ರದ ಕೇರ್ ಟೇಕರ್ ಸಿಎಂ ಆಗಿ ಮುಂದುವರಿಯಲಿದ್ದಾರೆ. ಪ್ರಸಕ್ತ ವಿಧಾನಸಭೆ ಅವಧಿ ನಾಳೆಗೆ ಅಂತ್ಯಗೊಳ್ಳುತ್ತಿದೆ. ಹೀಗಾಗಿ ನಾಳೆ ಏಕನಾಥ್ ಶಿಂಧೆ ರಾಜೀನಾಮೆ ನೀಡುತ್ತಿದ್ದಾರೆ. ನಾಳೆಯೇ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭವೂ ನಡೆಯುವ ಸಾಧ್ಯತೆ ಇದೆ ಎಂದು ಏಕನಾಥ್ ಶಿಂಧೆ ಬಣದ ಸಚಿವ ದೀಪಕ್ ಕೆಸರ್ಕರ್ ಹೇಳಿದ್ದಾರೆ.
undefined
ತನ್ನದೇ ಒರಿಜಿನಲ್ ಶಿವಸೇನೆ ಎಂದು ಸಾಬೀತುಪಡಿಸಿದ ಏಕನಾಥ ಶಿಂಧೆ
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ(ಶಿಂಧೆ ಬಣ) ಹಾಗೂ ಎನ್‌ಸಿಪಿ(ಅಜಿತ್ ಪವಾರ್ ಬಣ) ಮೈತ್ರಿಯ ಮಹಾಯುತಿ 288 ಸ್ಥಾನಗಳ ಪೈಕಿ 235 ಸ್ಥಾನ ಗೆದ್ದುಕೊಂಡಿದೆ. ಬಿಜೆಪಿ ಏಕಾಂಗಿಯಾಗಿ 132 ಸ್ಥಾನ ಗೆದ್ದಕೊಂಡಿದೆ. ಇನ್ನು ಏಕನಾಥ್ ಶಿಂಧೆ ಬಣ 57 ಕ್ಷೇತ್ರ ಗೆದ್ದುಕೊಂಡಿದ್ದರೆ, ಅಜಿತ್ ಪವಾರ್ ಎನ್‌ಸಿಪಿ 41 ಸ್ಥಾನ ಗೆದ್ದುಕೊಂಡಿದೆ.
ಗೆಲುವಿನ ಬಳಿಕ ಈಗಾಗಲೇ ಮೂರು ಪಕ್ಷದ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಶಿಂಧೆ ಬಣದ ನಾಯಕರು ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಅಜಿತ್ ಪವಾರ್ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇದರ ನಡುವೆ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿ ಆಗುವುದು ಸೂಕ್ತ ಅನ್ನೋದು ಕೆಲ ಬಿಜೆಪಿಗರ ಅಭಿಪ್ರಾಯ. ಹೀಗಾಗಿ ಸಿಎಂ ಆಯ್ಕೆ ಕಸರತ್ತು ಜೋರಾಗಿದೆ.
ಗೆಲುವಿನ ವಿಶ್ವಾಸದಲ್ಲಿದ್ದ ಮಹಾ ವಿಕಾಸ್ ಅಘಾಡಿ ಮೈತ್ರಿ ಕೂಡ ಮಕಾಡೆ ಮಲಗಿದೆ. ಕಾಂಗ್ರೆಸ್, ಎನ್‌ಸಿಪಿ(ಶರದ್ ಪವಾರ್ ಬಣ) ಶಿವಸೇನೆ(ಉದ್ಧವ್ ಠಾಕ್ರೆ ಬಣ) ಭಾರಿ ಮುಖಭಂಗ ಅನುಭವಿಸಿದೆ. ಮೂರು ಪಕ್ಷಗಳು ಸೇರಿ ಒಟ್ಟು 288 ಸ್ಥಾನಕ್ಕೆ ಸ್ಪರ್ಧಿಸಿತ್ತು. ಆದರೆ ಮೂವರು ಒಟ್ಟು ಗೆದ್ದಿರುವ ಕ್ಷೇತ್ರ 49 ಮಾತ್ರ.