ಆತ್ಮಾವಲೋಕನ ಅಗತ್ಯ: ಕಾಂಗ್ರೆಸ್ ‘ಜ್ಯೋತಿ’ ಹೇಳಿದ್ದು ಸತ್ಯ!

By Web DeskFirst Published Oct 10, 2019, 1:39 PM IST
Highlights

ಲೋಕಸಭೆ ಚುನಾವಣೆ ಸೋಲಿನ ಪರಾಮರ್ಶೆಯಲ್ಲಿರುವ ಕಾಂಗ್ರೆಸ್| ಪಕ್ಷದ ಉದ್ಧಾರಕ್ಕಾಗಿ ಸಲಹೆ ನೀಡುತ್ತಿರುವ ಕಾಂಗ್ರೆಸ್ ನಾಯಕರು| ಆತ್ಮಾವಲೋಕನ ಅಗತ್ಯ ಎಂದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ| ನಾಯಕತ್ವದಲ್ಲಿರುವ ನಿರ್ವಾತ ತುಂಬುವ ಅಗತ್ಯವಿದೆ ಎಂದ ಸಿಂಧಿಯಾ| ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿರುವ ಸಿಂಧಿಯಾ| ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಯತ್ತ ವಾಲುವ ಸಾಧ್ಯತೆ|

ನವದೆಹಲಿ(ಅ.10): ಆಳಿಗೊಂದು ಕಲ್ಲು ಎಂಬಂತೆ ಲೋಕಸಭೆ ಚುನಾವಣೆ ಬಳಿಕ ಸೋಲಿನ ಪರಾಮರ್ಶೆಯಲ್ಲಿರುವ ಕಾಂಗ್ರೆಸ್’ಗೆ, ಸ್ವಪಕ್ಷದ ನಾಯಕರಿಂದಲೇ ಸಲಹೆಗಳ ಮಹಾಪೂರವೇ ಹರಿದು ಬರುತ್ತಿದೆ.

ಹೀಗೆ ಮಾಡಿದರೆ ಹೇಗೆ, ಹಾಗೆ ಮಾಡಿದರೆ ಹೇಗೆ..ಹೀಗೆ ಹತ್ತು ಹಲವು ಸಲಹೆಗಳು ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿವೆ. ಇದೀಗ ಪಕ್ಷಕ್ಕೆ ಸಲಹೆ ಕೊಡುವ ಸರದಿ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರದ್ದು.

ಪಕ್ಷಕ್ಕೆ ಆತ್ಮಾವಲೋಕನ ಅಗತ್ಯವಾಗಿದ್ದು, ಪಕ್ಷದ ಉನ್ನತ ನಾಯಕತ್ವ ಶೀಘ್ರದಲ್ಲಿ ಈ ಕುರಿತು ಚಿಂತಿಸುವುದು ಒಳ್ಳೆಯದು ಎಂದು ಸಿಂಧಿಯಾ ಅಭಿಪ್ರಾಯಪಟ್ಟಿದ್ದಾರೆ.

ಪಕ್ಷಕ್ಕೆ ನಾಯಕತ್ವದ ಕೊರತೆ ಎದುರಾಗಿದ್ದು, ಈ ನಿರ್ವಾತವನ್ನು ತುಂಬುವ ಕೆಲಸವನ್ನು ಅತ್ಯಂತ ತುರ್ತಾಗಿ ಮಾಡಬೇಕಿದೆ ಎಂದು ಸಿಂಧಿಯಾ ಹೇಳಿದ್ದಾರೆ.

Jyotiraditya Scindia,Congress on Salman Khurshid's remark: I would not like to react on someone else's comment but yes no doubt that the Congress needs to do self introspection. https://t.co/P22EyRzeFa pic.twitter.com/RhSyYI0utc

— ANI (@ANI)

ನಾಯಕತ್ವ ವಿಚಾರ ಕುರಿತಂತೆ ಪಕ್ಷದ ಮತ್ತೋರ್ವ ಹಿರಿಯ ನಾಯಕ ಸಲ್ಮಾನ್ ಖರ್ಷಿದ್ ನೀಡಿದ್ದ ಹೇಳಿಕೆಯನ್ನು ಪರೋಕ್ಷವಾಗಿ ಬೆಂಬಲಿಸಿರುವ ಸಿಂಧಿಯಾ, ಆತ್ಮಾವಲೋಕನವೊಂದೇ ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಬಲ್ಲದು ಎಂದು ನುಡಿದಿದ್ದಾರೆ.

ಚುನಾವಣಾ ಸೋಲಿನ ಪರಾಮರ್ಶೆ ಜೊತೆ ಜೊತೆಗೆ ಭವಿಷ್ಯದಲ್ಲಿ ಪಕ್ಷವನ್ನು ಬಲಪಡಿಸುವ ದಾರಿಯತ್ತಲೂ ಉನ್ನತ ನಾಯಕತ್ವ ಚಿತ್ತ ಹರಿಸಬೇಕಿದೆ ಎಂದು ಸಿಂಧಿಯಾ ಹೇಳಿದ್ದು, ಪ್ರಬಲ ಬಿಜೆಪಿಯನ್ನು ಎದುರಿಸಲು ಸೈದ್ಧಾಂತಿಕ ಗಟ್ಟಿತನವನ್ನು ಪಕ್ಷ ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಿಂಧಿಯಾ, ಪಕ್ಷದಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಕ್ಷದಲ್ಲಿ ಯುವ ನಾಯಕತ್ವಕ್ಕೆ ಮಣೆ ಹಾಕದಿರುವುದು ಸಿಂಧಿಯಾ ಕೋಪಕ್ಕೆ ಕಾರಣ ಎನ್ನಲಾಗಿದೆ.

ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿರುವ ಸಿಂಧಿಯಾ, ಸ್ಥಾನ ಸಿಗದಿದ್ದರೆ ಬಿಜೆಪಿಯತ್ತ ವಾಲುವ ಸಾಧ್ಯತೆ ಇದೆ ಎನ್ನಲಾಗಿದೆ.

click me!