ಮಾತಿಲ್ಲ, ಕಥೆಯಿಲ್ಲ ಮೌನವೇ ಜೀವನ, ಆದರೂ ಡಿವೋರ್ಸ್ ಬೇಕಾ?

By Web DeskFirst Published Sep 9, 2019, 11:35 AM IST
Highlights

ಮದುವೆಯಾದ ಬಳಿಕ ಒಂದಿಲ್ಲೊಂದು ಸಮಸ್ಯೆ ಎದುರಾಗಬಹುದು. ಆಗೆಲ್ಲ ವಿಚ್ಚೇದನದ ಯೋಚನೆ ಬರಬಹುದು. ಹಾಗಂತ ಅದು ಕೇವಲ ಒಂದು ಕ್ಷಣದ ಯೋಚನೆಯಾಗಿರುತ್ತದೆ. ಆದರೆ ಪದೇ ಪದೇ ವಿಚ್ಚೇದನದ ಯೋಚನೆ ಬರುತ್ತಿದೆ ಎಂದಾದಾಗ ಮಾತ್ರ ಕೆಲವೊಂದಿಷ್ಟು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಬೇಕು. 

ವಿವಾಹದ ಎಲ್ಲ ಸಮಸ್ಯೆಗಳಿಗೆ ಡೈವೋರ್ಸ್ ಪರಿಹಾರವಲ್ಲ. ಹೆಚ್ಚಿನ ಬಾರಿ ಡೈವೋರ್ಸ್ ಮತ್ತೊಂದು ಸಮಸ್ಯೆಯ ಗುಚ್ಛವೇ ಹೊರತು ಪರಿಹಾರವಾಗಲು ಸಾಧ್ಯವಿಲ್ಲ. ಡೈವೋರ್ಸ್ ಬಗ್ಗೆ ಯೋಚಿಸುವ ಮುನ್ನ ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.

1. ನನ್ನ ಸಮಸ್ಯೆ ದೊಡ್ಡದೋ, ಸಣ್ಣದೋ?
ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ ನಿಜ, ಆಯಾ ಸಮಸ್ಯೆಗಳು ಅನುಭವಿಸುತ್ತಿರುವವರಿಗೆ ದೊಡ್ಡದೇ. ಆದರೆ, ಇಲ್ಲಿ ದೊಡ್ಡ ಸಮಸ್ಯೆ ಎಂದರೆ ನಿಮ್ಮ ಪತಿ ವರದಕ್ಷಿಣಗೆ ಪೀಡಿಸುತ್ತಾನೆಯೇ, ಕುಡಿದು ಬಂದು ಹೊಡೆಯುತ್ತಾನೆಯೇ, ಗುಣಪಡಿಸಲಾಗದ ಚಟಗಳ ದಾಸನಾಗಿದ್ದಾನೆಯೇ, ಜವಾಬ್ದಾರಿಹೀನನೇ, ದುಡಿಮೆಯೇ ಇಲ್ಲದೆ ನಿಮ್ಮ ಮೇಲೆ ಸವಾರಿ ಮಾಡುತ್ತಾನೆಯೇ, ಮಕ್ಕಳನ್ನು ನೋಡಿಕೊಳ್ಳಲಾರನೇ ಮುಂತಾದವು. ಇಂಥ ಸಂದರ್ಭದಲ್ಲಿ ಖಂಡಿತವಾಗಿ ನೀವು ತಕ್ಷಣ ಸಂಬಂಧದಿಂದ ಹೊರಬರುವುದು ಒಳ್ಳೆಯ ನಿರ್ಧಾರ. ಇನ್ನು ಸಮಸ್ಯೆ ಸಣ್ಣದೆಂದರೆ ಇಬ್ಬರೂ ಜವಾಬ್ದಾರಿಯುತರಾಗಿದ್ದೂ ಇಬ್ಬರ ನಡುವೆ ಪ್ರೀತಿಯ ಕೊರತೆ ಇರುವುದು, ಒಬ್ಬರಿಗೊಬ್ಬರು ಸಹಾಯ ಮಾಡದಿರುವುದು, ಸಣ್ಣ ಪುಟ್ಟ ಜಗಳದಿಂದ ನೀವು ರೋಸಿ ಹೋಗಿರುವುದು, ಸರಿಯಾದ ಸಾಂಗತ್ಯ ಸಿಗದಿರುವುದು ಇತ್ಯಾದಿ. ಇವನ್ನೆಲ್ಲ ಸರಿಪಡಿಸಬಹುದು. ಇಬ್ಬರೇ ಕುಳಿತು ಮಾತನಾಡಿದರೂ ಆಯಿತು, ಇಲ್ಲದಿದ್ದರೆ ಕೌನ್ಸೆಲಿಂಗ್ ಸಹಾಯ ಪಡೆಯಬಹುದು. 

2. ನಾನು ಈಗಾಗಲೇ ವಿಚ್ಚೇದಿತನೇ ?
ಬಹುಷಃ ಹೀಗಾಗಿರಬಹುದು: ನೀವು ಬೆಳಗ್ಗೆ 8ಕ್ಕೆ ಆಫೀಸಿಗೆ ಹೊರಟರೆ ಸಂಜೆ ಕಚೇರಿ ಮುಗಿಯುವುದೇ 8 ಆಗಬಹುದು. ಆ ಬಳಿಕ ಗೆಳೆಯರನ್ನು ಮೀಟ್ ಆಗಿ, ಪಾರ್ಟಿ ಗೀರ್ಟಿ ಮುಗಿಸಿ ಮನೆಗೆ ಬರುವಾಗ 11. ಮತ್ತದೇ ದಿನಚರಿ. ನಿಮ್ಮ ಪತ್ನಿ ಕೂಡಾ ಕಚೇರಿ ಮುಗಿಸಿ, ಜಿಮ್ ಹೋಗಿ ಬಂದು, ಧಾರಾವಾಹಿ ನೋಡಿ ಮುಗಿಸಿ ಮಲಗುವಾಗ 10.30. ಅಂದರೆ ನೀವು ಹೋಗುವಾಗಾಗಲೇ ಆಕೆ ಮಲಗಿರುತ್ತಾರೆ. ಇದು ಹೀಗೇ ಆಗುತ್ತಾ ವರ್ಷಗಳೇ ಕಳೆದಿವೆ. ಇಬ್ಬರಲ್ಲೂ ಮಾತಿಗೆ ಸಮಯವಿಲ್ಲ. ಈಗ ಬದುಕಿನಲ್ಲಿ ಡೈವೋರ್ಸ್ ಎಂಬುದು ನಿಮಗೆ ಫಾರ್ಮಾಲಿಟಿ ಅಷ್ಟೇ. ಅದು ಸಿಕ್ಕಿದರೂ ಒಂದೇ, ಸಿಗದಿದ್ದರೂ ಒಂದೇ ಎಂಬಂಥ ಜೀವನ. ಹೀಗೆ ಭಾವನಾತ್ಮಕವಾಗಿ, ಮಾನಸಿಕವಾಗಿ ಈಗಾಗಲೇ ದೂರವಾಗಿದ್ದೆವೆಂದ ಮೇಲೆ ಡೈವೋರ್ಸ್ ಏಕೆ ಮಾಡಿಕೊಳ್ಳಬಾರದು ಎಂದು ನಿಮಗೆ ಅನಿಸಬಹುದು. ಆದರೆ, ಮದುವೆಯಾಗಿ 10-15 ವರ್ಷಗಳಾದ ಮೇಲೆ ಇಂಥ ಸಂದರ್ಭದಲ್ಲಿ ಡೈವೋರ್ಸ್‍ ಅಗತ್ಯವಾದರೂ ಏನು?

3. ಒಂದೇ ವಿಷಯಕ್ಕೆ ಗಮನ ಹರಿಸಿದ್ದೀನಾ?
ನೀವು ಸಮಸ್ಯೆಗಳುಳ್ಳ ಸಂಬಂಧ ಹೊಂದಿದ್ದರೆ, ನಿಮ್ಮ ಪೂರ್ತಿ ಗಮನ ಅದರಲ್ಲಿ ಸಮಸ್ಯೆಗಳತ್ತಲೇ ಇರುತ್ತದೆ. ಇನ್ನೊಂದು ದೊಡ್ಡ ಜಗಳವಾದರಂತೂ ಈ ಮನುಷ್ಯನನ್ನು ಬಿಟ್ಟು ಹೋದರೆ ಸಾಕು, ನಾನು ಸುಖವಾಗಿ ಆರಾಮಾಗಿ ಇರಬಲ್ಲೆ ಎನಿಸುತ್ತದೆ. ಆದರೆ, ಎರಡನೇ ಮದುವೆಯಾದ ಶೇ.60 ಜೋಡಿಗಳು ನಿರಾಸೆ ಹೊಂದುತ್ತಾರೆ. ಅಂದರೆ, ವಿಚ್ಚೇದನವೇ ಪರಿಹಾರ ಎಂದೇನಲ್ಲ. ಇದೇ ಸಂಬಂಧವನ್ನು ಸರಿಪಡಿಸಿಕೊಳ್ಳುವ ಬಗೆ ಹುಡುಕಿಕೊಂಡರೆ ಬಹುಷಃ ಅಲ್ಲಿ ಹಲವು ಪಾಸಿಟಿವ್ ಸಂಗತಿಗಳು ಕೂಡಾ ಕಾಣಲಾರಂಭಿಸುತ್ತವೆ. ಸುಖವನ್ನು ಇದ್ದಲ್ಲೇ ಅರಸುವುದು ಜಾಣತನವೇ ಹೊರತು ಮತ್ತೆಲ್ಲೋ ಇರಬಹುದು ಎಂದು ಕಲ್ಪಿಸಿಕೊಳ್ಳುವುದಲ್ಲ.

4. ಈ ಎಲ್ಲ ಕೆಲಸ ಮಾಡುವ ಸಂಗಾತಿ ಪಡೆಯಲು ನಾನು ಅರ್ಹ
ಡೈವೋರ್ಸ್ ಎಂಬ ಪದ ಬಳಸುವ ಮೊದಲು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಾವು ತಮ್ಮ ಸಂಬಂಧ ಉಳಿಸಿಕೊಳ್ಳಲು ಏನೆಲ್ಲ ಮಾಡಬಹುದೋ ಅದೆಲ್ಲ ಮಾಡಿಯಾಗಿದೆ ಎನಿಸತೊಡಗುತ್ತದೆ. ಆದರೆ, ಖಂಡಿತಾ ಎಲ್ಲವನ್ನೂ ಮಾಡಿರಲಾರರು. ಬಹುಷಃ ನೀವು ಮನಸ್ಸಿನೊಳಗೇ, ಮನೆಯ ಆದಾಯದ ಶೇ.50ರಷ್ಟು ದುಡಿಯುವ ಸಂಗಾತಿ ಪಡೆಯಲು ನಾನು ಅರ್ಹ, ದಿನಸಿ ಶಾಪಿಂಗ್‌ಗೆ ಹೋಗುವಾಗ ನನ್ನ ಬಗ್ಗೆಯೇ ಯೋಚಿಸುವಂಥ ಪಾರ್ಟ್ನರ್ ಬೇಕು, ಸಮಯಕ್ಕೆ ಸರಿಯಾಗಿ ಹೇಳಿದ್ದೆಲ್ಲವನ್ನೂ ಮಾಡುವ ಸಂಗಾತಿ ನನಗೆ ಬೇಕು, ಚಟಗಳಿಲ್ಲದ ಸಂಗಾತಿ ಬೇಕು, ನನ್ನ ಪೋಷಕರನ್ನು ಸ್ವಂತ ತಂದೆತಾಯಿಯಂತೆ ನೋಡುವ ಪಾರ್ಟ್ನರ್ ಬೇಕು... ಪಟ್ಟಿ ಬೆಳೆಯುತ್ತಲೇ ಇರುತ್ತದೆ... ಬಹುಷಃ ಎಲ್ಲರಿಗೂ ಇಷ್ಟೆಲ್ಲ ಕನಸುಗಳಿರುತ್ತವಾದರೂ, ಎಲ್ಲವೂ ಒಬ್ಬರಿಂದ ಸಿಗುವುದು ದುಃಸಾಧ್ಯ. ನೀವು ನಿಮ್ಮ ಅರ್ಹತೆಯನ್ನು ಜಾಸ್ತಿ ಮೇಲಿಟ್ಟು ಯೋಚಿಸಿದಷ್ಟೂ, ಎದುರಿರುವ ಸಂಗಾತಿಗಿಂತ ಕನಸಿನ ಸಂಗಾತಿ ಅದ್ಭುತ ಎನಿಸತೊಡಗುತ್ತಾನೆ. ನಿಧಾನವಾಗಿ ನಿಮ್ಮ ಸಂಗಾತಿಯಲ್ಲಿ ಅಂಥದ್ದೇನೂ ಸಮಸ್ಯೆಗಳಿಲ್ಲವಾದರೂ ನಿಮ್ಮ ನಿರೀಕ್ಷೆಯ ಭಾರಕ್ಕೆ ಅವನು ಸೋಲತೊಡಗುತ್ತಾನೆ.

 

5. ಗೊಂದಲದಿಂದ ಹೊರ ಬರುವ ದಾರಿ
ಮದುವೆಯಲ್ಲಿ ಸಮಸ್ಯೆಗಳಿದ್ದಾಗ ಗೊಂದಲಗಳು ಜಾಸ್ತಿ. ಇದು ಸರಿಯಾಗುತ್ತದೆಯೇ, ಇಲ್ಲವೇ, ಪರಿಸ್ಥಿತಿ ಇನ್ನೂ ಹದಗೆಡುತ್ತದೆಯೇ? ಆತ ಬದಲಾಗುತ್ತಾನೆಯೇ? ನನ್ನಿಂದ ಬದಲಾಗಲು ಸಾಧ್ಯವೇ? ಇದಕ್ಕೆ ಪರಿಹಾರ ಇರಲು ಸಾಧ್ಯವೇ? ಇಷ್ಟೆಲ್ಲ ಆದ ಮೇಲೆ ಮತ್ತೆ ಅವನನ್ನು ಪ್ರೀತಿಸಲು ಸಾಧ್ಯವೇ? ಮುಂತಾದ ಗೊಂದಲಗಳು ಪರಿಹಾರ ಕಾಣದೆ, ಹೀಗೆ ಗೊಂದಲದಲ್ಲಿರುವುದಕ್ಕಿಂತ ಡೈವೋರ್ಸ್ ಆಗಿ ನೋವಿನಲ್ಲಿರುವುದೇ ಬೆಟರ್ ಎಂದುಕೊಳ್ಳುವವರು ಹಲವರು. ಕನಿಷ್ಠ ಪಕ್ಷ ಬದುಕಿನ ಬಗ್ಗೆ ಅಷ್ಟು ಗೊಂದಲಗಳಿರುವುದಿಲ್ಲ ಆಗ ಎಂಬುದು ಅವರ ಯೋಚನೆ. ಇಲ್ಲಿ ಬೇಕಾಗಿದ್ದು ಡೈವೋರ್ಸ್ ಅಲ್ಲ, ಗೊಂದಲಗಳನ್ನು ತಿಳಿಗೊಳಿಸುವ ಮನಸ್ಥಿತಿ. 

click me!