ಹೇಳ್ದೆ ಕೇಳ್ದೆ ಮಾಸ್ ಸಿಕ್ ಲೀವ್ ಹಾಕಿದ ಏರ್ ಇಂಡಿಯಾ ಸಿಬ್ಬಂದಿ: 70ಕ್ಕೂ ಹೆಚ್ಚು ಫ್ಲೈಟ್ ಕ್ಯಾನ್ಸಲ್

By Suvarna NewsFirst Published May 8, 2024, 1:29 PM IST
Highlights

ಏರ್ ಇಂಡಿಯಾ ಸಿಬ್ಬಂದಿ ಸಾಮೂಹಿಕವಾಗಿ ಅನಾರೋಗ್ಯ ರಜೆ ಅಥವಾ ಸಿಕ್ ಲೀವ್ ಹಾಕಿದ ಪರಿಣಾಮ 78ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಏರ್ ಇಂಡಿಯಾ ಕ್ಯಾನ್ಸಲ್ ಮಾಡಿದಂತಹ ಘಟನೆ ನಡೆದಿದೆ. 

ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿ ಸಾಮೂಹಿಕವಾಗಿ ಅನಾರೋಗ್ಯ ರಜೆ ಅಥವಾ ಸಿಕ್ ಲೀವ್ ಹಾಕಿದ ಪರಿಣಾಮ 78ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಏರ್ ಇಂಡಿಯಾ ಕ್ಯಾನ್ಸಲ್ ಮಾಡಿದಂತಹ ಘಟನೆ ನಡೆದಿದೆ. ಸಿಬ್ಬಂದಿಯ ಸಾಮೂಹಿಕ ರಜೆಯಿಂದಾಗಿ ಒಟ್ಟು 78 ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸುವಂತಾಗಿದೆ. ಏರ್ ಇಂಡಿಯಾದ ಹಿರಿಯ ಸಿಬ್ಬಂದಿಗಳು ಯಾವುದೇ ಮಾಹಿತಿ ನೀಡದೇ ಸಾಮೂಹಿಕ ಸಿಕ್ ಲೀವ್ ತೆಗೆದುಕೊಂಡ ಪರಿಣಾಮ ಈ ಘಟನೆ ನಡೆದಿದೆ. ಇದರಿಂದ ಕನಿಷ್ಠ 78 ಅಂತಾರಾಷ್ಟ್ರೀಯ ಹಾಗೂ ದೇಶಿಯ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹೇಳಿದೆ. 

ಏರ್ ಇಂಡಿಯಾ ವಿಮಾನಯಾನ ಸಿಬ್ಬಂದಿಯ ತಮ್ಮ ವೇತನ ಪರಿಷ್ಕರಣೆ, ಬಡ್ತಿ ಇನ್ಸೆಂಟಿವ್, ಸ್ಯಾಲರಿ ಮುಂತಾದವುಗಳ ಬಗ್ಗೆ ಅಸಮಾಧಾನಗೊಂಡು ಈ ರೀತಿ ಸಾಮೂಹಿಕ ರಜೆ ಹಾಕಿ ಹಾಕಿದ್ದಾರೆ ಎಂದು ಕೆಲ ಮೂಲಗಳಿಂದ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಮುಂತಾದ ಕಾರಣಗಳಿಂದ ಈ ರೀತಿ ಸಾಮೂಹಿಕ ರಜೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಯಾಣಿಕರ ಲಗೇಜ್ ಬೇಕಾಬಿಟ್ಟಿ ಹ್ಯಾಂಡಲ್ ಮಾಡಿದ ಏರ್ ಇಂಡಿಯಾ ವೀಡಿಯೋ ವೈರಲ್, ನೆಟ್ಟಿಗರ ಆಕ್ರೋಶ

ಈ ಮಧ್ಯೆ ಕೆಲ ಮಾಧ್ಯಮಗಳು ಪ್ರತಿಭಟನಾನಿರತ ವಿಮಾನಯಾನ ಸಿಬ್ಬಂದಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ ಯಾರು ಸಂಪರ್ಕಕ್ಕೆ ಸಿಕ್ಕಿಲ್ಲ,  ಈ ಮಧ್ಯೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಕ್ತಾರರು ಹೇಳಿಕೆ ನೀಡಿದ್ದು, ನಮ್ಮ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗವು ಕಳೆದ ರಾತ್ರಿಯಿಂದ ಕೊನೆ ನಿಮಿಷದಲ್ಲಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.  ಇದರಿಂದಾಗಿ ಹಲವು ವಿಮಾನಗಳ ಪ್ರಯಾಣ ವಿಳಂಬವಾಗಿದ್ದರೆ ಮತ್ತೆ ಕೆಲವು ವಿಮಾನಗಳು ರದ್ದಾಗಿವೆ.. ಈ ಘಟನೆಗಳ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ನಾವು ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಹಾಗೂ ನಮ್ಮ ಅತಿಥಿಗಳಿಗೆ ಉಂಟಾಗುವ ಯಾವುದೇ ಅನಾನುಕೂಲತೆಯನ್ನು ಕಡಿಮೆ ಮಾಡಲು ನಮ್ಮ ತಂಡಗಳು ಈ ಸಮಸ್ಯೆಯನ್ನು ಸಕ್ರಿಯವಾಗಿ ಪರಿಹರಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ.

ನಾವು ಈ ಅನಿರೀಕ್ಷಿತ ಅಡಚಣೆಗಾಗಿ ನಮ್ಮ ಅತಿಥಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ಈ ಪರಿಸ್ಥಿತಿಯು ನಾವು ಒದಗಿಸಲು ಶ್ರಮಿಸುವ ಸೇವೆಯ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಒತ್ತಿ ಹೇಳುತ್ತೇವೆ ಹಾಗೂ ವಿಮಾನ ರದ್ದಿನಿಂದ ತೊಂದರೆಗೊಳಗಾದ  ಅತಿಥಿಗಳಿಗೆ ಪೂರ್ಣ ಮರುಪಾವತಿ ಅಥವಾ ಇನ್ನೊಂದು ದಿನಾಂಕಕ್ಕೆ ಪೂರಕ ಮರು ಹೊಂದಿಕೆಯನ್ನು ನೀಡಲಾಗುತ್ತದೆ ಎಂದು ಏರ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.  ಅಲ್ಲದೇ ಇಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ ಈ ಬಗ್ಗೆ ಮಾಹಿತಿ ನೀಡಿರುವ ಏರ್ ಇಂಡಿಯಾ, ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು, ಸಿಬ್ಬಂದಿಯ ಸಾಮೂಹಿಕ ರಜೆಯಿಂದ ತಮ್ಮ ವಿಮಾನವೂ ಕೂಡ ತೊಂದರೆಗೊಳಗಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಮನವಿ ಮಾಡಿದೆ. 

ದಕ್ಷಿಣ ಭಾರತದ “ಪ್ರೀಮಿಯರ್ ಏವಿಯೇಷನ್ ಹಬ್” ಆಗಿ ಬೆಂಗಳೂರು: ಏರ್ ಇಂಡಿಯಾದೊಂದಿಗೆ BIAL ಒಪ್ಪಂದ

ಈ ಮಧ್ಯೆ ಪಿಟಿಐ ಸುದ್ದಿಸಂಸ್ಥೆಯ ವರದಿ ಪ್ರಕಾರ 200 ಕ್ಯಾಬಿನ್ ಸಿಬ್ಬಂದಿ ಹೀಗೆ ದಿಢೀರ್ ರಜೆ ಮೇಲೆ ಹೋಗಿದ್ದಾರೆ ಎಂದು ವರದಿ ಆಗಿದೆ. ಹೀಗಾಗಿ ಕೊಚ್ಚಿ, ಕೋಲ್ಕತ್ತಾ, ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಬಹುತೇಕ ವಿಮಾನ ನಿಲ್ದಾಣಗಳಿಂದ ಪ್ರಯಾಣಿಸಬೇಕಾದ ಏರ್ ಇಂಡಿಯಾ ವಿಮಾನಗಳ ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿ ಆಗಿದೆ. 

ಇತ್ತ ಏರ್ ಇಂಡಿಯಾವೂ ಏರ್ ಏಷ್ಯಾ ಇಂಡಿಯಾವನ್ನು ಕೂಡ ತನ್ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಇದ್ದು, ಇದು ಮಾರ್ಚ್‌ನಲ್ಲಿ ಆರಂಭವಾದ ಬೇಸಿಗೆಯ ಸ್ಕೆಡ್ಯೂಲ್‌ನಂತೆ ಪ್ರತಿದಿನವೂ 360 ವಿಮಾನಗಳ ಹಾರಾಟ ನಡೆಸುತ್ತದೆ. ಆದರೆ ಈ ವಿಲೀನ ಪ್ರಕ್ರಿಯೆ ಆರಂಭವಾದಾಗಿನಿಂದ ಕ್ಯಾಬಿನ್ ಸಿಬ್ಬಂದಿಯ ಮಧ್ಯೆ ಅಸಮಾಧಾನವಿದೆ.  ಪ್ರಸ್ತುತ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ನಿರ್ವಹಿಸುತ್ತಿದೆ. ಏರ್‌ಲೈನ್‌ನ ನಿರ್ವಹಣೆ ಮತ್ತು ಕ್ಯಾಬಿನ್ ಸಿಬ್ಬಂದಿ ಸದಸ್ಯರ ನಡುವಿನ ವಿವಾದಗಳಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯ ಕಾರಣಕ್ಕೆ 2023ರ ಡಿಸೆಂಬರ್‌ನಲ್ಲಿ ಕೇಂದ್ರ ಕಾರ್ಮಿಕ ಸಚಿವಾಲಯವೂ ಏರ್ ಇಂಡಿಯಾಗೆ ನೋಟೀಸ್ ಜಾರಿ ಮಾಡಿತ್ತು.

click me!