ಪುಡ್ ಡೆಲಿವರಿ ಕಂಪನಿಗಳು ಆಗಾಗ ಆರ್ಡರ್ ಕೊಡುವಾಗ ಎಡವಟ್ಟು ಮಾಡಿ ಗ್ರಾಹಕರ ಕೈಲಿ ಉಗಿಸಿಕೊಳ್ಳುತ್ತವೆ. ಆದರೆ, ಈ ಮಹಿಳೆ ಕಂಪನಿಯ ಎಡವಟ್ಟಿಗೆ 50 ಲಕ್ಷ ರೂ. ಪರಿಹಾರ ಕೋರಿದ್ದಾರೆ.
ಅಹಮದಾಬಾದ್‌ನ ಸೋಲಾ ಪ್ರದೇಶದ ಚಾಮುಂಡನಗರ ನೆರೆಹೊರೆಯಲ್ಲಿ ವಾಸಿಸುವ ಮಹಿಳೆಯೊಬ್ಬರು ಫುಡ್ ಡೆಲಿವರಿ ಆ್ಯಪ್ ಮೂಲಕ ರೆಸ್ಟೋರೆಂಟ್‌ನಿಂದ ಆರ್ಡರ್ ಮಾಡಿದ್ದ ಪನೀರ್ ಟಿಕ್ಕಾ ಸ್ಯಾಂಡ್‌ವಿಚ್ ಬದಲಿಗೆ ಚಿಕನ್ ಟಿಕ್ಕಾ ಸ್ಯಾಂಡ್‌ವಿಚ್ ಅನ್ನು ಡೆಲಿವರಿ ಮಾಡಲಾಗಿದೆ.
ನಿರಾಲಿ ಪರ್ಮಾರ್ ಎಂದು ಗುರುತಿಸಲಾದ ಮಹಿಳೆ ಸ್ಯಾಂಡ್‌ವಿಚ್‌ನ್ನು ಸ್ವಲ್ಪ ತಿಂದ ನಂತರ ಈ ಎಡವಟ್ಟನ್ನು ಗಮನಿಸಿದರು. ಸಸ್ಯಾಹಾರಿಯಾಗಿರುವ ಪರ್ಮಾರ್ ಡೆಲಿವರಿ ಕಂಪನಿಯ ಈ ತಪ್ಪಿನಿಂದ ಅಸಮಾಧಾನಗೊಂಡಿದ್ದಾರೆ ಮತ್ತು ಉಂಟಾದ ಅನಾನುಕೂಲತೆಗಾಗಿ 50 ಲಕ್ಷ ರೂಪಾಯಿ ಪರಿಹಾರವನ್ನು ಕೋರಿದ್ದಾರೆ.
ಪರ್ಮಾರ್ ಅವರ ದೂರಿನ ಮೇರೆಗೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಆರೋಗ್ಯ ವಿಭಾಗವು ರೆಸ್ಟೋರೆಂಟ್ ನಡೆಸುತ್ತಿರುವ VRYLY ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿತು ಮತ್ತು 5,000 ರೂ ದಂಡ ವಿಧಿಸಿತು. ಮತ್ತಷ್ಟು ಉಲ್ಲಂಘನೆಗಳು ಅದರ ಔಟ್ಲೆಟ್ ಸೀಲಿಂಗ್ಗೆ ಕಾರಣವಾಗಬಹುದು ಎಂದು ಇಲಾಖೆಯು ಕಂಪನಿಗೆ ಎಚ್ಚರಿಕೆ ನೀಡಿದೆ.
ಹೆಚ್ಚುವರಿಯಾಗಿ, ಏಪ್ರಿಲ್ 28 ರಿಂದ ಮೇ 4 ರವರೆಗೆ ನಡೆಸಿದ ತಪಾಸಣೆಯಲ್ಲಿ, ನಗರದ 760 ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ. ಈ ಪೈಕಿ 270 ಮಂದಿಗೆ ಅನೈರ್ಮಲ್ಯ ಅಥವಾ ಬಳಕೆಗೆ ಯೋಗ್ಯವಲ್ಲದ ಆಹಾರವನ್ನು ಮಾರಾಟ ಮಾಡಿದ್ದಕ್ಕಾಗಿ ನೋಟಿಸ್ ನೀಡಲಾಗಿದೆ. ಇದಲ್ಲದೆ, 928 ಕೆಜಿ ಘನ ಆಹಾರ ಪದಾರ್ಥಗಳು ಮತ್ತು 704 ಲೀಟರ್ ದ್ರವರೂಪದ ಆಹಾರ ಪದಾರ್ಥಗಳು ಬಳಕೆಗೆ ಯೋಗ್ಯವಲ್ಲವೆಂದು ಕಂಡುಬಂದು ನಾಶಪಡಿಸಲಾಗಿದೆ. ಈ ತಪಾಸಣೆಗಳ ಪರಿಣಾಮವಾಗಿ ನಾಗರಿಕ ಸಂಸ್ಥೆಯು ಒಟ್ಟು 1.44 ಲಕ್ಷ ರೂ.ಗಳ ದಂಡವನ್ನು ಸಂಗ್ರಹಿಸಿದೆ.