ಕ್ಷೀಣಿಸಿದ ಮಳೆ, ಒಣಗುತ್ತಿರುವ ಬೆಳೆ: ಆತಂಕದಲ್ಲಿ ಅನ್ನದಾತ..!

By Kannadaprabha News  |  First Published Jun 21, 2022, 3:40 PM IST

*  ಬೇಸಿಗೆಯಲ್ಲಿ ಅಬ್ಬರಿಸಿದ್ದ ವರುಣ, ಮಳೆಗಾಲದಲ್ಲಿಯೇ ಮಾಯ
*  ಚಿಂತೆಯಿಂದ ನಿತ್ಯ ಮುಗಿಲು ನೋಡುತ್ತಿರುವ ಅನ್ನದಾತರು
*  ಪ್ರಸಕ್ತ ಸಾಲಿನಲ್ಲಿ ಕ್ಷೀಣಿಸಿದ ಮುಂಗಾರು 
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.21): ಮೋಡವಿದ್ದರೂ ಇಳೆಗೆ ಹನಿ ನೀರು ಸುರಿಸುತ್ತಿಲ್ಲ. ಪೂರ್ವ ಮುಂಗಾರಿನಲ್ಲಾದ ಮಳೆಯನ್ನೇ ನಂಬಿ ಬಿತ್ತಿದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಡುತ್ತಿರುವ ಬೆಳೆಯನ್ನು ನೋಡಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಕ್ಷೀಣಿಸಿದೆ. ಬಿತ್ತಿದವರು ಬಾಡುತ್ತಿರುವ ಬೆಳೆಯನ್ನು ಕಾಪಾಡಿಕೊಳ್ಳಲು ಮಳೆದೇವರಾಯರ ಮೊರೆ ಹೋಗುತ್ತಿದ್ದರೆ, ಬಿತ್ತದೇ ಇರುವವರು ಮಳೆಗಾಗಿ ಆಕಾಶ ನೋಡುತ್ತಿದ್ದಾರೆ.

Latest Videos

undefined

ಕಳೆದೊಂದು ತಿಂಗಳಿಂದ ಮಳೆಯ ಅಭಾವ, ಜೂನ್‌ ತಿಂಗಳಲ್ಲಿ ಮಳೆಯಾಗಿದ್ದೇ ಅಪರೂಪ. ಅಲ್ಲಲ್ಲಿ ವಿಪರೀತ ಸುರಿಯುತ್ತಿದರೂ ಆಗಬೇಕಾದ ಕಡೆಯಲ್ಲಾ ಆಗುತ್ತಿಲ್ಲ. ಜಿಲ್ಲೆಯಲ್ಲಿ ವಾಡಿಕೆಯಷ್ಟುಮಳೆಯಾಗಿದ್ದರೂ ಬಹುತೇಕ ಕಡೆ ಮಳೆಯ ಅಭಾವ ವಿಪರೀತವಾಗಿದೆ. ಬೀಸುತ್ತಿರುವ ಗಾಳಿ ನೀರಿಲ್ಲದೆ ಬಾಡಿರುವ ಬೆಳೆಗಳು ಮತ್ತಷ್ಟುಕಳೆ ಕಳೆದುಕೊಳ್ಳುತ್ತಿವೆ. ಬಾಡಿ ನೆಲಕ್ಕೆ ಒರಗುತ್ತಿರುವ ದೃಶ್ಯ ನೋಡಿ ರೈತರು ಮರುಗುತ್ತಿದ್ದಾರೆ.

Koppal: ದೇಶದ ಎರಡನೇ ನಾರಿ ಸುವರ್ಣ ಕುರಿ ಸಂವರ್ಧನಾ ಕೇಂದ್ರ ಆರಂಭ

ಮಳೆ ಅಭಾವ:

ಜಿಲ್ಲೆಯಲ್ಲಿ ಜೂನ್‌ 1ರಿಂದ 20ರ ವರೆಗೂ ಸರಾಸರಿ 56 ಮಿಲಿ ಮೀಟರ್‌ ಮಳೆಯಾಗಬೇಕು. ಆದರೆ, ಆಗಿರುವುದು 57 ಮಿಲಿಮೀಟರ್‌. ಅಂದರೆ ಸರಾಸರಿಗಿಂತ 1 ಮಿಲಿ ಮೀಟರ್‌ ಮಳೆ ಅಧಿಕ ಆಗಿದೆ. ಹೀಗೆ ಸರಾಸರಿಗಿಂತಲೂ ಒಂದು ಮಿಲಿ ಮೀಟರ್‌ ಮಳೆಯಾಗಿದ್ದರೂ ಬರದ ಛಾಯೆ ಮಾತ್ರ ಆವರಿಸುತ್ತಲೇ ಇದೆ.

ಅಭಾವ ಆಗಿದ್ದೆಲ್ಲಿ?:

ಜಿಲ್ಲೆಯಲ್ಲಿ ಎಲ್ಲೊ ಒಂದು ಕಡೆ ವಿಪರೀತ ಮಳೆಯಾಗುವುದು, ಉಳಿದೆಡೆ ಮಳೆಯೇ ಆಗುವುದಿಲ್ಲ. ಇದರಿಂದ ಬೆಳೆ ಬಾಡುತ್ತಾ ಬರದ ಛಾಯೆ ಕಾಡುತ್ತಿದೆ. ಕೊಪ್ಪಳ ಹೋಬಳಿಯಲ್ಲಿ ಆಗಬೇಕಾಗಿರುವುದು 64 ಮಿಲಿಮೀಟರ್‌, ಆದರೆ ಸುರಿದಿರುವ ಮಳೆ ಪ್ರಮಾಣ ಕೇವಲ 25 ಮಿಲಿಮೀಟರ್‌. ಅಂದರೆ ಶೇ. 60 ರಷ್ಟುಮಳೆಯ ಅಭಾವ ಆಗಿದೆ.

ಹನುಮನಾಳ ಹೋಬಳಿಯಲ್ಲಿ ಶೇ. 47, ಹನುಮಸಾಗರ ಹೋಬಳಿಯಲ್ಲಿ ಶೇ. 44, ಹುಲಿಹೈದರನಲ್ಲಿ ಶೇ. 20, ಕುಕನೂರು, ಮಂಗಳೂರು, ಕನಕಗಿರಿ ಸೇರಿದಂತೆ ಶೇ. 10ರಿಂದ 22ರಷ್ಟುಮಳೆ ಕೊರತೆಯಾಗಿದೆ. ಅತಿ ಮಳೆಯ ಕೊರತೆ ಇರುವುದೇ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿನಲ್ಲಿ. ಉಳಿದೆಡೆ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ ಮಳೆ ಕೊರತೆಯಾಗದಿದ್ದರೂ ಕಾಲಕ್ಕುನುಗುಣವಾಗಿ ಆಗದೆ ಇರುವುದರಿಂದ ಬೆಳೆಗಳು ಒಣಗಲಾರಂಭಿಸಿವೆ.

ತುರ್ತಾಗಿ ಬೇಕು ಮಳೆ:

ಜಿಲ್ಲಾದ್ಯಂತ ತುರ್ತಾಗಿ ಮಳೆ ಬೇಕಾಗಿದೆ. ಕಳೆದ 20 ದಿನಗಳಿಂದ ಮಳೆ ಇಲ್ಲದೆ ಇರುವುದರಿಂದ ಬಿತ್ತಿದ್ದು ಒಣಗಲಾರಂಭಿಸಿದ್ದರೆ ಬಿತ್ತನೆ ಮಾಡುವುದಕ್ಕೆ ತೇವಾಂಶ ಇಲ್ಲದಂತಾಗಿದೆ. ಆದ್ದರಿಂದ ತುರ್ತಾಗಿ ಮಳೆ ಬೇಕಾಗಿದೆ. ಹೀಗಾಗಿ ರೈತರು ಓಡುವ ಮೋಡಗಳಿಗೆ ಮಳೆ ಸುರಿಸುವಂತೆ ಮೊರೆ ಇಡುತ್ತಿದ್ದಾರೆ. ಮುಂಗಾರು ಹಂಗಾಮಿಗೆ ಹಾಕಿದ ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ, ಹೆಸರು, ಮಡಿಕೆ, ಸಜ್ಜೆ ಸೇರಿದಂತೆ ಮೊದಲಾದ ಬೆಳೆಗಳು ಒಣಗುತ್ತಿವೆ. ವಾರದೊಳಗಾಗಿ ಮಳೆಯಾಗದಿದ್ದರೆ ಬೆಳೆ ಸಂಪೂರ್ಣ ಒಣಗಲಿವೆ.

India@75: ಭೀಮರಾಯನ ಆರ್ಭಟಕ್ಕೆ ಸಾಕ್ಷಿ ಕೊಪ್ಪಳದ ಕೋಟೆ

ಶೇ. 34ರಷ್ಟು ಬಿತ್ತನೆ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮಳೆಯಾಶ್ರಿತ ಬೆಳೆಯಾಗಿ ಸುಮಾರು 308000 ಹೆಕ್ಟೇರ್‌ ಬಿತ್ತನೆಯಾಗಬೇಕಾಗಿದ್ದು, ಇದುವರೆಗೂ ಶೇ. 34ರಷ್ಟುಮಾತ್ರ ಬಿತ್ತನೆಯಾಗಿದೆ. ಅಂದರೆ ಸುಮಾರು 98 ಸಾವಿರ ಹೆಕ್ಟೇರ್‌ ಬಿತ್ತನೆಯಾಗಿದೆ. ಅದರಲ್ಲೂ ಮಳೆ ಕ್ಷೀಣಿಸಿರುವುದರಿಂದ ಜೂನ್‌ ಮೂರನೇ ವಾರದಲ್ಲಿಯೇ ಬಿತ್ತನೆಗೆ ಭಾರಿ ಹಿನ್ನಡೆಯಾಗಿದೆ.

ಮುಂಗಾರು ಮಳೆ ಈಗ ಕ್ಷೀಣಿಸಿದೆ. ಇದರಿಂದ ಬಿತ್ತನೆಯೂ ಹಿನ್ನಡೆಯಾಗುತ್ತಿದ್ದು, ಶೀಘ್ರದಲ್ಲಿಯೇ ಮಳೆಯ ಅಗತ್ಯವಿದೆ. ಇಲ್ಲದಿದ್ದರೆ ಬೆಳೆ ಒಣಗಲಾರಂಭಿಸುತ್ತದೆ ಅಂತ ಕೊಪ್ಪಳ ಜೆಡಿ ಕೃಷಿ ಇಲಾಖೆ ಸದಾಶಿವ ತಿಳಿಸಿದ್ದಾರೆ. 

ನಮ್ಮ ಎರಡು ಎಕರೆಯಲ್ಲಿ ಮಳೆಯಾಶ್ರಿತವಾಗಿ ಮೆಕ್ಕೆಜೋಳವನ್ನು ಬಿತ್ತನೆ ಮಾಡಲಾಗಿದೆ. ಆದರೆ, ಈಗ ಕಳೆದ ಹದಿನೈದು ದಿನಗಳಿಂದ ಮಳೆಯೇ ಇಲ್ಲದಿರುವುದರಿಂದ ಬಹುತೇಕ ಒಣಗಲಾರಂಭಿಸಿದೆ ಅಂತ ಹೊರತಟ್ನಾಳ ರೈತ  ಹೇಮಂತ ಹೇಳಿದ್ದಾರೆ. 
 

click me!