ಈಗಾಗಲೇ ಚಂದ್ರಯಾನ-3ರಲ್ಲಿ ಯಶ ಕಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ತನ್ನ ಮೊತ್ತಮೊದಲ ಸೂರ್ಯಯಾನ ಕೈಗೊಳ್ಳಲು ಸಿದ್ಧವಾಗಿದೆ. ಸೂರ್ಯನ ಕುರಿತು ಹೆಚ್ಚಿನ ಅಧ್ಯಯನದ ಉದ್ದೇಶ ಹೊಂದಿರುವ ‘ಆದಿತ್ಯ-ಎಲ್1’ ವ್ಯೋಮನೌಕೆ ಶನಿವಾರ ಬೆಳಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ನೆಲೆಯಿಂದ ಉಡ್ಡಯನಗೊಳ್ಳಲಿದೆ.
ಇದು ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಹಾರಿಬಿಡುತ್ತಿರುವ ಮೊದಲ ನೌಕೆಯಾಗಿದೆ. ಇದಕ್ಕಾಗಿ ಶುಕ್ರವಾರ ಮಧ್ಯಾಹ್ನ 12.10ರಿಂದಲೇ ಕ್ಷಣಗಣನೆ ಆರಂಭವಾಗಿದೆ.
ಆದಿತ್ಯ- ಎಲ್1 ನೌಕೆಯನ್ನು ಪಿಎಸ್‌ಎಲ್‌ವಿ-ಸಿ57 ರಾಕೆಟ್ ಮೂಲಕ ಭೂಮಿಯಿಂದ ಹಾರಿಸಲಾಗುತ್ತದೆ. ಸೂರ್ಯ ಹಾಗೂ ಭೂಮಿಯ ನಡುವೆ 15 ಕೋಟಿ ಕಿ.ಮೀ. ಅಂತರವಿದೆ. ಆದರೆ 15 ಲಕ್ಷ ಕಿ.ಮೀ ದೂರವಿರುವ ‘ಎಲ್1’ ಪಾಯಿಂಟ್‌ನಲ್ಲಿ ನೌಕೆಯನ್ನು ಇರಿಸಲಾಗುತ್ತದೆ. ಅಲ್ಲಿಗೆ ತಲುಪಲು ಸುಮಾರು 4 ತಿಂಗಳು (125 ದಿನ) ಬೇಕಾಗುತ್ತದೆ. ಕಕ್ಷೆ ಸೇರಿದ ನಂತರ ದಿನಕ್ಕೆ 1440 ಚಿತ್ರಗಳನ್ನು ಅದು ಕಳಿಸಲಿದೆ.
ಎಲ್1ನಲ್ಲೇ ಏಕೆ ಅಧ್ಯಯನ?:
‘ಲ್ಯಾಗ್ರೇಂಜಿಯನ್ ಪಾಯಿಂಟ್’ ಅಥವಾ ಎಲ್1 ಎನ್ನುವುದು ಸೂರ್ಯ-ಭೂಮಿಯ ಗುರುತ್ವ ಬಲ ಸಮಾನವಾಗಿರುವ ಸ್ಥಳ. ಇಲ್ಲಿ ನೌಕೆ ನಿಯೋಜಿಸಿದರೆ ಸೂರ್ಯನನ್ನು ಗ್ರಹಣದಂಥ ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಸತತವಾಗಿ ನೇರವಾಗಿ ವೀಕ್ಷಣೆ ಮಾಡಲು ಸಾಧ್ಯ. ಇದು ಹೆಚ್ಚಿನ ಇಂಧನ ವ್ಯರ್ಥಮಾಡದೇ ಸುದೀರ್ಘ ಕಾಲ ನೌಕೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ನೌಕೆಯು ಒಟ್ಟು 7 ಪೇ ಲೋಡ್‌ಗಳನ್ನು ಒಳಗೊಂಡಿದೆ. ಅಂದರೆ 7 ವಿವಿಧ ಉಪಕರಣಗಳನ್ನು ಹೊಂದಿದೆ.
ಉಡ್ಡಯನದ ಉದ್ದೇಶ:
ನೌಕೆಗಳಲ್ಲಿನ 7 ಪೇಲೋಡ್ (ಉಪಕರಣ) ಮೂಲಕ ಫೋಟೋಸ್ಪಿಯರ್, ಕ್ರೋಮೋಸ್ಪಿಯರ್ ಮತ್ತು ಸೂರ್ಯನ ಹೊರವಲಯ (ಕರೋನಾ)ವನ್ನು ಎಲೆಕ್ಟ್ರೋಮ್ಯಾಗ್ನೆಟಿಕ್, ಪಾರ್ಟಿಕಲ್ ಮತ್ತು ಮ್ಯಾಗ್ನೆಟಿಕ್ ಫೀಲ್ಡ್ ಡಿಟೆಕ್ಟರ್‌ಗಳ ಮೂಲಕ ಅಧ್ಯಯನ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ನೌಕೆಯಲ್ಲಿನ 4 ಉಪಕರಣಗಳು ಸತತವಾಗಿ ಸೂರ್ಯನನ್ನು ವೀಕ್ಷಿಸುತ್ತಾ ಮಾಹಿತಿ ಸಂಗ್ರಹಿಸಲಿದ್ದರೆ, ಉಳಿದ ಮೂರು ಉಪಕರಣಗಳು ಸ್ಥಳದಲ್ಲಿನ ಪಾರ್ಟಿಕಲ್ (ಕಣಗಳು) ಮತ್ತು ಪ್ರದೇಶಗಳ ಅಧ್ಯಯನ ನಡೆಸಿ ಅದರ ಮಾಹಿತಿಯನ್ನು ಭೂಮಿಗೆ ರವಾನಿಸಲಿವೆ. ಇದರಿಂದಾಗಿ ಕರೋನಾದ (ಸೂರ್ಯನ ಪ್ರಭಾವಲಯ) ಉಷ್ಣತೆಯ ಸಮಸ್ಯೆಗಳು, ಪ್ರಭಾವಲಯದಿಂದ ಹೊರಹೊಮ್ಮುವ ಭಾರೀ ಪ್ರಮಾಣದ ಜ್ವಾಲೆ, ಜ್ವಾಲೆಗೂ ಮುನ್ನಾ ಸ್ಥಿತಿ, ಜ್ವಾಲೆಯ ಚಟುವಟಿಕೆಗಳು, ಜ್ವಾಲೆಯ ಗುಣಲಕ್ಷಣ, ಬಾಹ್ಯಾಕಾಶದ ಹವಾಮಾನ ಮೊದಲಾದ ವಿಷಯಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
‘ಆದಿತ್ಯ ಎಲ್1, ತನ್ನ ಇಮೇಜಿಂಗ್ ಸಾಧನದಿಂದ ನಿಮಿಷಕ್ಕೆ ಒಂದು ಚಿತ್ರದಂತೆ 24 ಗಂಟೆಗಳ ಕಾಲ ಸರಿಸುಮಾರು 1,440 ಚಿತ್ರಗಳನ್ನು ನಾವು ನೆಲದ ನಿಲ್ದಾಣದಲ್ಲಿ ಸ್ವೀಕರಿಸುತ್ತೇವೆ ಎಂದು ಆದಿತ್ಯ ಎಲ್1 ಯೋಜನಾ ವಿಜ್ಞಾನಿ ಹಾಗೂ ಕಾರ್ಯಾಚರಣೆ ನಿರ್ವಾಹಕಿ ಡಾ ಮುತ್ತು ಪ್ರಿಯಾಳ್ ಹೇಳಿದ್ದಾರೆ.
4 ತಿಂಗಳು ಬೇಕು:
ಪಿಎಸ್‌ಎಲ್‌ವಿ-ಸಿ57 ರಾಕೆಟ್ ಮೂಲಕ ಹಾರುವ ಆದಿತ್ಯ-ಎಲ್1 ನೌಕೆಯನ್ನು ಮೊದಲಿಗೆ ಭೂಮಿಯ ಕೆಳಗಿನ ಹಂತದ ಕಕ್ಷೆಯಲ್ಲಿ ಇರಿಸಲಾಗುವುದು. ನಂತರ ಹಂತವಾಗಿ ನೌಕೆಯ ಪಥವನ್ನು ಅಂಡಾಕಾರದ ಪಥಕ್ಕೆ ಬದಲಾಯಿಸಿ ಅಂತಿಮವಾಗಿ ನೌಕೆಯಲ್ಲಿ ಇಂಧನವನ್ನು ಬಳಸಿಕೊಂಡು ಅದನ್ನು ಎಲ್1 ಎಂದು ಕರೆಯಲಾಗುವ ಸ್ಥಳಕ್ಕೆ ಚಿಮ್ಮಿಸಲಾಗುವುದು. ಹೀಗೆ ಎಲ್1 ಪಾಯಿಂಟ್ ಸೇರಿಕೊಳ್ಳುವ ನೌಕೆ ಆ ಸ್ಥಳದಿಂದಲೇ ಸೂರ್ಯನ ಕುರಿತ ಅಧ್ಯಯನ ನಡೆಸಲಿದೆ. ಹೀಗೆ ಇಡೀ ಪ್ರಕ್ರಿಯೆ ಪೂರ್ಣಕ್ಕೆ 125 ದಿನ ಬೇಕಾಗಲಿದೆ. ಎಲ್1 ಪಾಯಿಂಟ್ ಭೂಮಿ ಮತ್ತು ಚಂದ್ರನ ನಡುವಿನ ಅಂತರದ 4 ಪಟ್ಟು ಹೆಚ್ಚು ದೂರದಲ್ಲಿದೆ.