ವರ್ಷದ ಕೊನೆಯ ತಿಂಗಳು ಡಿಸೆಂಬರ್ ಕೂಡ ಕೊನೆಯ ಹಂತಕ್ಕೆ ಬರುತ್ತಿದೆ. ಹೊಸ ವರ್ಷ ಶುರುವಾಗಲಿದೆ. ಈ ಸಂದರ್ಭದಲ್ಲಿ ಇಂದು ಅಂದರೆ 2024 ರ ಡಿಸೆಂಬರ್ 15 ರಂದು ವಿಶ್ವವು ಒಂದು ಅಪರೂಪದ ಖಗೋಳ ಘಟನೆಗೆ ಸಾಕ್ಷಿಯಾಗಿದೆ.
ಡಿಸೆಂಬರ್ 15 ರಂದು ವಿಶ್ವವು ಚಂದ್ರನ ಒಂದು ರೂಪವನ್ನು ನೋಡಲಿದೆ, ಇದನ್ನು ಕೋಲ್ಡ್ ಮೂನ್ ಅಥವಾ ಶೀತಲ ಚಂದ್ರ ಎಂದು ಕರೆಯಲಾಗುತ್ತದೆ. ಶೀತಲ ಚಂದ್ರನನ್ನು ವರ್ಷದ ಕೊನೆಯ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಇದು ಚಳಿಗಾಲದ ಆರಂಭವನ್ನು ಸೂಚಿಸುತ್ತದೆ.
ಸಾಮಾನ್ಯವಾಗಿ ಶೀತಲ ಚಂದ್ರ ವರ್ಷದ ಅತಿ ಉದ್ದದ ರಾತ್ರಿ ಅಂದರೆ ಡಿಸೆಂಬರ್ 21 ರ ಸುಮಾರಿಗೆ ಕಾಣಿಸಿಕೊಳ್ಳುತ್ತದೆ. ನಾಸಾ ಪ್ರಕಾರ, ಈ ಸಮಯದಲ್ಲಿ, ಭಾನುವಾರ, ಡಿಸೆಂಬರ್ 15 ರಂದು, ಭಾರತೀಯ ಕಾಲಮಾನ ಮಧ್ಯಾಹ್ನ 2:32 ರಿಂದ ಚಂದ್ರ ತನ್ನ ಪೂರ್ಣ ಹಂತದಲ್ಲಿ ಇರುತ್ತದೆ. ಈ ಖಗೋಳ ಘಟನೆಯನ್ನು ಪೂರ್ವ ಆಕಾಶದಲ್ಲಿ ಉದಯಿಸುವಾಗ ಉತ್ತಮವಾಗಿ ವೀಕ್ಷಿಸಬಹುದು.
ಶೀತಲ ಚಂದ್ರ ಎಂದರೇನು? ಡಿಸೆಂಬರ್ ತಿಂಗಳಲ್ಲಿ ಕಾಣಿಸಿಕೊಳ್ಳುವ ಹುಣ್ಣಿಮೆಯನ್ನು ಶೀತಲ ಚಂದ್ರ ಎಂದು ಕರೆಯಲಾಗುತ್ತದೆ. ಶೀತಲ ಚಂದ್ರ ಒಂದು ಖಗೋಳ ಘಟನೆಯಾಗಿದ್ದು, ಚಂದ್ರ ಸುಮಾರು 99.5% ರಷ್ಟು ಗೋಚರಿಸುತ್ತದೆ.
ಶೀತಲ ಚಂದ್ರ ಎಂಬ ಪದವು ಅಮೇರಿಕನ್ ಮತ್ತು ಯುರೋಪಿಯನ್ ಘಟನೆಗಳಿಂದ ಹುಟ್ಟಿಕೊಂಡಿದೆ. ಶೀತಲ ಚಂದ್ರ, 'ದೀರ್ಘ ರಾತ್ರಿ ಚಂದ್ರ' ಎಂದೂ ಕರೆಯಲ್ಪಡುತ್ತದೆ, ಡಿಸೆಂಬರ್ ತಿಂಗಳಲ್ಲಿ ರಾತ್ರಿಯ ಉದ್ದವನ್ನು ಪ್ರತಿಬಿಂಬಿಸುತ್ತದೆ.
ವಾಸ್ತವವಾಗಿ, ಡಿಸೆಂಬರ್ ತಿಂಗಳಲ್ಲಿ, ಹೆಚ್ಚಿನ ಸಮಯ ರಾತ್ರಿ ಸುಮಾರು 15 ಗಂಟೆಗಳ ಕಾಲ ಕತ್ತಲೆಯಾಗಿರುತ್ತದೆ. ಅಂದರೆ ಸಂಜೆಯಾಗುತ್ತಿದ್ದಂತೆ ಕತ್ತಲಾಗುತ್ತದೆ. ಈ ಬದಲಾವಣೆಯನ್ನು ಎಲ್ಲರೂ ಅನುಭವಿಸುತ್ತಿರುತ್ತಾರೆ. ಕೆಲವರು ಗುರುತಿಸಿರುತ್ತಾರೆ.
ಶೀತಲ ಚಂದ್ರ ಎಲ್ಲಿ ಕಾಣಿಸುತ್ತದೆ? ವೃಷಭ ರಾಶಿಯಲ್ಲಿರುವ ಶೀತಲ ಚಂದ್ರ ರಾತ್ರಿಯ ಆಕಾಶದ ಕೆಲವು ಪ್ರಕಾಶಮಾನ ನಕ್ಷತ್ರಗಳು ಮತ್ತು ಗುರು ಗ್ರಹದಿಂದ ಸುತ್ತುವರೆದಿರುತ್ತದೆ, ಇದು ನಕ್ಷತ್ರ ವೀಕ್ಷಕರಿಗೆ ಒಂದು ಸುಂದರ ದೃಶ್ಯವನ್ನು ಸೃಷ್ಟಿಸುತ್ತದೆ.
ವರದಿಗಳ ಪ್ರಕಾರ, ಮ್ಯಾಸಚೂಸೆಟ್ಸ್, ಉತ್ತರ ಕೆನಡಾ, ವಾಯುವ್ಯ ಯುರೋಪ್, ಗ್ರೀನ್‌ಲ್ಯಾಂಡ್ ಮತ್ತು ಐಸ್‌ಲ್ಯಾಂಡ್‌ನಲ್ಲಿ ವಾಸಿಸುವ ಜನರು ಶೀತಲ ಚಂದ್ರನನ್ನು ಸುಲಭವಾಗಿ ನೋಡಬಹುದು. ಸಾಮಾನ್ಯವಾಗಿ, ಇದನ್ನು ನೋಡಲು ಯಾವುದೇ ಉಪಕರಣದ ಅಗತ್ಯವಿಲ್ಲ, ಆದರೆ ನೀವು ಅದರ ಹೊಳಪು ಮತ್ತು ಮೇಲ್ಮೈಯನ್ನು ಚೆನ್ನಾಗಿ ನೋಡಲು ಬಯಸಿದರೆ ಬೈನಾಕ್ಯುಲರ್ ಅಥವಾ ಸಣ್ಣ ದೂರದರ್ಶಕವನ್ನು ಬಳಸಬಹುದು.
ಕೆಲ್ಟಿಕ್ ಪರಂಪರೆಯು ಇದನ್ನು ಓಕ್ ಚಂದ್ರ ಅಥವಾ ದೀರ್ಘ ರಾತ್ರಿಗಳ ಚಂದ್ರ ಎಂದು ಕರೆಯುತ್ತದೆ, ಇದು ಋತುವಿನ ತಂಪಾದ ವಾತಾವರಣವನ್ನು ಸಂಕೇತಿಸುತ್ತದೆ. ಚಳಿಗಾಲದ ನಂತರ ಬರುವ ಹುಣ್ಣಿಮೆ ಕೂಡ ವಿಶೇಷ. ಹೊಸ ವರ್ಷದ ಮೊದಲ ಹುಣ್ಣಿಮೆಯನ್ನು ವುಲ್ಫ್ ಚಂದ್ರ ಎಂದು ಕರೆಯಲಾಗುತ್ತದೆ. 2025 ರ ಜನವರಿ 13 ರಂದು ಈ ವುಲ್ಫ್ ಚಂದ್ರ ಕಾಣಿಸಿಕೊಳ್ಳುತ್ತದೆ.