ಭಾರತವು ರಷ್ಯಾದಿಂದ ವೊರೊನೆಜ್ ದೀರ್ಘ-ವ್ಯಾಪ್ತಿಯ ರೇಡಾರ್ ವ್ಯವಸ್ಥೆಯನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳುವ ಹಂತದಲ್ಲಿದೆ. ಈ ರೇಡಾರ್ ವ್ಯವಸ್ಥೆಯು ಭಾರತದ ಕ್ಷಿಪಣಿ ಗುರುತಿಸುವಿಕೆ ಮತ್ತು ವಾಯು ರಕ್ಷಣಾ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಭಾರತ ಸದ್ಯದಲ್ಲೇ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಬಹಳಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿ ಕಂಡುಬರುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ನವದೆಹಲಿ ಮಾಸ್ಕೋದೊಡನೆ 4 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದಕ್ಕೆ ಸಿದ್ಧತೆ ನಡೆಸುತ್ತಿದ್ದು, ರಷ್ಯಾದಿಂದ ಅತ್ಯಾಧುನಿಕ ವೊರೊನೆಜ್ ದೀರ್ಘ ವ್ಯಾಪ್ತಿಯ ರೇಡಾರ್ ವ್ಯವಸ್ಥೆಯನ್ನು ಖರೀದಿಸಲಿದೆ. (1 ಬಿಲಿಯನ್ ಡಾಲರ್ ಎಂದರೆ ಅಂದಾಜು 8,500 ಕೋಟಿ ರೂಪಾಯಿ ಆಗಲಿದೆ).
ಒಂದು ವೇಳೆ, ಭಾರತ ಏನಾದರೂ ಈ ರೇಡಾರ್ ವ್ಯವಸ್ಥೆಯನ್ನು ಪಡೆದುಕೊಂಡರೆ, ಇದು ಭಾರತದ ಹಾರಿಬರುವ ಕ್ಷಿಪಣಿಗಳನ್ನು ಗುರುತಿಸುವ ಮತ್ತು ವಾಯು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಮೂರು ದಿನಗಳ ರಷ್ಯಾ ಪ್ರವಾಸ ಡಿಸೆಂಬರ್ 10ರಂದು ಮುಕ್ತಾಯವಾದ ಬೆನ್ನಲ್ಲೇ ಈ ಒಪ್ಪಂದದ ಸುದ್ದಿ ಬಂದಿದೆ.
ರೇಡಾರ್ ವ್ಯವಸ್ಥೆ ಎಂದರೇನು? ಇದು ಹೇಗೆ ಕಾರ್ಯಾಚರಿಸುತ್ತದೆ?
undefined
ರೇಡಾರ್ ವ್ಯವಸ್ಥೆ ಎನ್ನುವುದು ಒಂದು ಅಸಾಧಾರಣ ಕಣ್ಣಿನಂತಿದ್ದು, ರೇಡಿಯೋ ತರಂಗಗಳನ್ನು ಬಳಸಿಕೊಂಡು ದೂರದಲ್ಲಿರುವ ವಸ್ತುಗಳನ್ನು ಯಶಸ್ವಿಯಾಗಿ ಗುರುತಿಸುತ್ತದೆ. ಇದು ಸಂಕೇತಗಳನ್ನು ಕಳುಹಿಸಿ, ಅವುಗಳು ಏನನ್ನಾದರೂ ತಾಗಿ ಹಿಂದಕ್ಕೆ ಬಂದಾಗ, ಅದರ ಮೂಲಕ ವಿಮಾನಗಳನ್ನು, ಕ್ಷಿಪಣಿಗಳನ್ನು, ಅಥವಾ ಹಡಗುಗಳನ್ನು ಗುರುತಿಸುತ್ತದೆ. ರೇಡಾರ್ ವ್ಯವಸ್ಥೆಗೆ ಆ ವಸ್ತುಗಳು ಇರುವ ಸ್ಥಳ, ಅವುಗಳು ಸಾಗುವ ವೇಗ, ಮತ್ತು ದಿಕ್ಕನ್ನು ಬಹಳಷ್ಟು ದೂರದಿಂದ, ಅತ್ಯಂತ ಕೆಟ್ಟ ವಾತಾವರಣದಲ್ಲೂ ಗುರುತಿಸಲು ಸಾಧ್ಯವಾಗುತ್ತದೆ.
ವೊರೊನೆಜ್ ರೇಡಾರ್ ವ್ಯವಸ್ಥೆ ಎಂದರೇನು?
ವೊರೊನೆಜ್ ದೀರ್ಘ ವ್ಯಾಪ್ತಿಯ ಕ್ಷಿಪ್ರ ಮುನ್ನೆಚ್ಚರಿಕಾ ರೇಡಾರ್ ರಷ್ಯಾದ ಅಲ್ಮಾಜ್ - ಆ್ಯಂಟೀ ಕಾರ್ಪೋರೇಷನ್ ಅಭಿವೃದ್ಧಿ ಪಡಿಸಿರುವ ಸರಣಿ ರೇಡಾರ್‌ಗಳ ಭಾಗವಾಗಿದೆ. ವೊರೊನೆಜ್ ರೇಡಾರ್ ಗಮನಾರ್ಹವಾದ ಪತ್ತೆಹಚ್ಚುವ ವ್ಯಾಪ್ತಿಯನ್ನು ಹೊಂದಿದೆ. ಅದರ ಆವೃತ್ತಿಯ ಆಧಾರದಲ್ಲಿ, ವೊರೊನೆಜ್ ರೇಡಾರ್ ತನ್ನ ಗುರಿಗಳನ್ನು ಗರಿಷ್ಠ 10,000 ಕಿಲೋಮೀಟರ್ ದೂರದಲ್ಲಿ ಗುರುತಿಸಿ, ಹಿಂಬಾಲಿಸುವ ಸಾಮರ್ಥ್ಯ ಹೊಂದಿದೆ.
ನಿರ್ದಿಷ್ಟ ಹೇಳುವುದಾದರೆ:
* ಹಾರಿಜಾನ್ ರೇಂಜ್ (ಸಮತಲ ವ್ಯಾಪ್ತಿ): ಗರಿಷ್ಠ 6,000 ಕಿಲೋಮೀಟರ್.
* ವರ್ಟಿಕಲ್ ರೇಂಜ್ (ಲಂಬ ವ್ಯಾಪ್ತಿ): ಗರಿಷ್ಠ 8,000 ಕಿಲೋಮೀಟರ್.
ವರದಿಗಳ ಪ್ರಕಾರ, ಈ ರೇಡಾರ್ ಏಕಕಾಲದಲ್ಲಿ 500ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸಬಲ್ಲದು.
ವೊರೊನೆಜ್ ರೇಡಾರ್ ವ್ಯವಸ್ಥೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಸ್ಟೆಲ್ತ್ ಯುದ್ಧ ವಿಮಾನಗಳು ಸೇರಿದಂತೆ, ಇತರ ವೈಮಾನಿಕ ವಸ್ತುಗಳನ್ನು ನಿಖರವಾಗಿ ಗುರುತಿಸಬಲ್ಲದು. ಇದು ಅತ್ಯಂತ ದೀರ್ಘವಾದ ಲಂಬ ವ್ಯಾಪ್ತಿಯನ್ನು ಹೊಂದಿದ್ದು, ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳ (ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ಸ್ - ಐಸಿಬಿಎಂ) ಕುರಿತೂ ವಿಸ್ತೃತ ಮಾಹಿತಿಗಳನ್ನು ಒದಗಿಸಬಲ್ಲದು. ಅದರೊಡನೆ, ಬಾಹ್ಯಾಕಾಶದಲ್ಲಿ ಭೂಮಿಗೆ ಸನಿಹದಲ್ಲಿರುವ ವಸ್ತುಗಳನ್ನೂ ಗಮನಿಸಬಲ್ಲದು.
ಬಲ್ಲ ಮೂಲಗಳ ಪ್ರಕಾರ, ಈ ರೇಡಾರ್ ವ್ಯವಸ್ಥೆಯ ಕನಿಷ್ಠ 60% ಭಾರತದ ಸ್ಥಳೀಯ ಸಹಯೋಗಿಗಳೇ ನಿರ್ಮಿಸಲಿದ್ದು, ಇದು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಗೆ ಅನುಗುಣವಾಗಿರಲಿದೆ.
WhatsApp ಅಲರ್ಟ್, ವಾಯ್ಸ್ ಮತ್ತು ವಿಡಿಯೋ ಕಾಲ್‌ಗಳಿಗೆ 4 ಹೊಸ ಫೀಚರ್ಸ್
ವೊರೊನೆಜ್ ರೇಡಾರ್ ವ್ಯವಸ್ಥೆಯನ್ನು ಕರ್ನಾಟಕದ ಚಿತ್ರದುರ್ಗದಲ್ಲಿ ಸ್ಥಾಪಿಸಲು ಆಲೋಚಿಸಲಾಗುತ್ತಿದೆ. ಚಿತ್ರದುರ್ಗ ಈಗಾಗಲೇ ಭಾರತದ ಅತ್ಯಾಧುನಿಕ ಮತ್ತು ಅತ್ಯಂತ ಗೌಪ್ಯವಾದ ರಕ್ಷಣೆ ಮತ್ತು ಏರೋಸ್ಪೇಸ್ ವ್ಯವಸ್ಥೆಗಳನ್ನು ಹೊಂದಿದೆ. ಸದ್ಯದ ಮಟ್ಟಿಗೆ, ಕೇವಲ ರಷ್ಯಾ, ಚೀನಾ ಮತ್ತು ಅಮೆರಿಕಾಗಳು ಮಾತ್ರವೇ 5,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿಯ ರೇಡಾರ್ ವ್ಯವಸ್ಥೆಗಳನ್ನು ತಮ್ಮ ಬತ್ತಳಿಕೆಯಲ್ಲಿ ಹೊಂದಿವೆ.
ರಕ್ಷಣಾ ಅಭಿವೃದ್ಧಿಗೆ ಶಕ್ತಿ ತುಂಬಿದೆ ಎಲ್ಆರ್‌ಡಿಇ ಬೆಂಗಳೂರು: ಭಾರತದಲ್ಲಿ ಈ ಯೋಜನೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಅಂಗಸಂಸ್ಥೆಯಾದ ಎಲ್ಆರ್‌ಡಿಇ (ಇಲೆಕ್ಟ್ರಾನಿಕ್ಸ್ ಆ್ಯಂಡ್ ರೇಡಾರ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್ಮೆಂಟ್) ನಿರ್ವಹಿಸಲಿದೆ.
ಬಲ್ಲ ಮೂಲಗಳ ಪ್ರಕಾರ, ಡಿಆರ್‌ಡಿಓ ಮುಖ್ಯಸ್ಥರಾದ ಸಮೀರ್ ಕಾಮತ್ ಅವರ ನೇತೃತ್ವದಲ್ಲಿ ಡಿಆರ್‌ಡಿಓ ತಂಡ ನವೆಂಬರ್ 5, 2022ರಂದು ಮಾಸ್ಕೋಗೆ ಭೇಟಿ ನೀಡಿತು. ಈ ತಂಡದಲ್ಲಿ, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಸಿಸ್ಟಮ್ಸ್ (ಇಸಿಎಸ್) ವ್ಯವಸ್ಥಾಪಕ ನಿರ್ದೇಶಕರಾದ ಬಿ ಕೆ ದಾಸ್ ಅವರಂತಹ ಹಿರಿಯ ಅಧಿಕಾರಿಗಳೂ ಉಪಸ್ಥಿತರಿದ್ದರು.
ಇಸಿಎಸ್ ಎನ್ನುವುದು ಒಂದು ಪ್ರಯೋಗಾಲಯಗಳ ಸಮೂಹವಾಗಿದ್ದು, ಇದು ಎಲ್ಆರ್‌ಡಿಇ ಅನ್ನೂ ಒಳಗೊಂಡಿದೆ. ಇದು ಇಲೆಕ್ಟ್ರಾನಿಕ್, ಇಲೆಕ್ಟ್ರೋ ಆಪ್ಟಿಕಲ್ ಮತ್ತು ಲೇಸರ್ ಆಧಾರಿತ ವ್ಯವಸ್ಥೆಗಳು ಮತ್ತು ಸೆನ್ಸರ್‌ಗಳನ್ನು ಅಭಿವೃದ್ಧಿ ಪಡಿಸುತ್ತದೆ.
ಈ ಯೋಜನೆ ಭಾರತದ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ, ಇದರಲ್ಲಿ 50ಕ್ಕೂ ಹೆಚ್ಚು ಭಾರತೀಯ ಸಂಸ್ಥೆಗಳು ಭಾಗಿಯಾಗುವುದರಿಂದ, ದೇಶಾದ್ಯಂತ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
5 ವರ್ಷಗಳಿಂದ ಪಾಕ್‌ನಲ್ಲಿ ಸಿಲುಕಿರುವ ಭಾರತೀಯ ರೈಲು!
ಈ ಸಂಸ್ಥೆಗಳ ಪೈಕಿ, ಬಹಳಷ್ಟು ಸಂಸ್ಥೆಗಳು ಸ್ಟಾರ್ಟಪ್‌ಗಳಾಗಿವೆ. ಈ ಒಪ್ಪಂದದ ಕುರಿತು ಮಾತುಕತೆ ನಡೆಸುವ ಸಂದರ್ಭದಲ್ಲಿ, ಭಾರತದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಆದ್ಯತೆಯ ವಿಚಾರವಾಗಿತ್ತು ಎನ್ನಲಾಗಿದೆ.
ಹೆಚ್ಚಾಗಲಿದೆ ಭಾರತದ ಕಣ್ಗಾವಲು ಮತ್ತು ರಕ್ಷಣಾ ಸಾಮರ್ಥ್ಯ: ಒಂದು ಬಾರಿ ಭಾರತ ವೊರೊನೆಜ್ ರೇಡಾರ್ ವ್ಯವಸ್ಥೆಯನ್ನು ಗಳಿಸಿದರೆ, ಅದು ಭಾರತಕ್ಕೆ ಏಷ್ಯಾ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಒಆರ್) ತಲೆದೋರುವ ಅಪಾಯಗಳು ಮತ್ತು ಚಟುವಟಿಕೆಗಳನ್ನು ಗಮನಿಸುವ ಸಾಮರ್ಥ್ಯ ನೀಡಲಿದೆ. ಇದು ಹೆಚ್ಚುತ್ತಿರುವ ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳ ನಡುವೆ, ಭಾರತಕ್ಕೆ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗಲಿದೆ.
ಬಾಹ್ಯಾಕಾಶದಲ್ಲಿ ವಸ್ತುಗಳನ್ನು ಗುರುತಿಸುವ ಈ ರೇಡಾರ್ ಸಾಮರ್ಥ್ಯ ಭಾರತದ ಮಿಲಿಟರಿ ಮತ್ತು ನಾಗರಿಕ ಉದ್ದೇಶಗಳೆರಡಕ್ಕೂ ನೆರವಾಗಲಿದೆ. ಅದರೊಡನೆ, ಇಸ್ರೋಗೆ ತನ್ನ ಬಾಹ್ಯಾಕಾಶ ಯೋಜನೆಗಳನ್ನು ವಿಸ್ತರಿಸಲು ಇದು ಸಹಾಯಕವಾಗಲಿದೆ. ವೊರೊನೆಜ್ ರೇಡಾರ್ ಭಾರತಕ್ಕೆ ಉಪಗ್ರಹಗಳು, ಬಾಹ್ಯಾಕಾಶ ತ್ಯಾಜ್ಯಗಳ ಮೇಲೆ ಕಣ್ಣಿಡಲು ನೆರವಾಗಿ, ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಹೆಚ್ಚು ಸುರಕ್ಷಿತ ಮತ್ತು ಸುಸ್ಥಿರಗೊಳಿಸಲಿದೆ.
ವೊರೊನೆಜ್ ರೇಡಾರ್: ಭಾರತದ ವಿನೂತನ ರಕ್ಷಣಾ ಕವಚ: ವೊರೊನೆಜ್ ರೇಡಾರ್ ವ್ಯವಸ್ಥೆ ಅತ್ಯಂತ ಆಧುನಿಕ ಮತ್ತು ಬೃಹತ್ ರೇಡಾರ್ ವ್ಯವಸ್ಥೆಯಾಗಿದ್ದು, ಕ್ಷಿಪಣಿ, ಮತ್ತು ಯುದ್ಧ ವಿಮಾನಗಳಂತಹ ಅಪಾಯಗಳ ಲಕ್ಷಣಗಳನ್ನು ಬಲುಬೇಗನೆ ಗುರುತಿಸುವ ಸಲುವಾಗಿ ವಿನ್ಯಾಸಗೊಂಡಿದೆ. ಈ ರೇಡಾರ್ ಕುರಿತ ಪ್ರಮುಖ ಮಾಹಿತಿಗಳು ಇಂತಿವೆ:
ಗಾತ್ರ ಮತ್ತು ವಿನ್ಯಾಸ: ಈ ರೇಡಾರ್ ಅನ್ನು ಹಲವು ಬೃಹತ್ ಮಾಡ್ಯೂಲ್‌ಗಳನ್ನು ಬಳಸಿ ನಿರ್ಮಿಸಲಾಗಿದ್ದು, ಒಟ್ಟಾರೆಯಾಗಿ ಇದು ದೊಡ್ಡ ಗಾತ್ರವನ್ನು ಹೊಂದಿದೆ. ಇದು ಆಧುನಿಕ ವಿನ್ಯಾಸವನ್ನು ಹೊಂದಿದ್ದು, ಇದನ್ನು ಕ್ಷಿಪ್ರವಾಗಿ ಜೋಡಿಸಿ, ಕೆಲವು ತಿಂಗಳ ಒಳಗೆ ಕಾರ್ಯಾಚರಣೆಗೆ ಸಿದ್ಧಗೊಳಿಸಲು ಸಾಧ್ಯವಾಗುತ್ತದೆ. ಇಂತಹ ಸರಳ ಸಿದ್ಧತೆ ಹಳೆಯ ರೇಡಾರ್ ವ್ಯವಸ್ಥೆಗಳಿಗೆ ಹೋಲಿಸಿದರೆ ಇದನ್ನು ಅಳವಡಿಸುವುದು ಸುಲಭವಾಗಿಸುತ್ತದೆ.
ಭಾರತದ ಖರೀದಿ ಯೋಜನೆ: ರಷ್ಯಾದ ಜೊತೆಗಿನ 4 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಯ ಭಾಗವಾಗಿ, ಭಾರತ ರಷ್ಯಾದಿಂದ ಹಲವು ವೊರೊನೆಜ್ ರೇಡಾರ್‌ಗಳನ್ನು ಖರೀದಿಸಲಿದೆ. ಈ ಶಕ್ತಿಶಾಲಿ ರೇಡಾರ್ ವ್ಯವಸ್ಥೆಗಳು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಸ್ಟೆಲ್ತ್ ಯುದ್ಧ ವಿಮಾನಗಳು ಸೇರಿದಂತೆ, ದೀರ್ಘ ವ್ಯಾಪ್ತಿಯ ಅಪಾಯಗಳನ್ನು ಗುರುತಿಸುವ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲಿವೆ. ಅವುಗಳನ್ನು ಹೆಚ್ಚಿನ ಭದ್ರತೆಗಾಗಿ ಭಾರತದ ವಾಯು ರಕ್ಷಣಾ ವ್ಯವಸ್ಥೆಯ ಜಾಲದಲ್ಲಿ ಅಂತರ್ಗತಗೊಳಿಸಲಾಗುತ್ತದೆ. ಈ ರೇಡಾರ್ ವ್ಯವಸ್ಥೆಯ ಖರೀದಿ ಭಾರತದ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ವೊರೊನೆಜ್ ರೇಡಾರ್: ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ವರ್ಧಕ: ವೊರೊನೆಜ್ ರೇಡಾರ್ ವ್ಯವಸ್ಥೆ ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಾದ ಎಸ್-400, ಪಿಎಡಿ (ಪೃಥ್ವಿ ಏರ್ ಡಿಫೆನ್ಸ್), ಮತ್ತು ಎಎಡಿ (ಅಡ್ವಾನ್ಸ್ಡ್ ಏರ್ ಡಿಫೆನ್ಸ್) ಗಳ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ. ಈ ಆಧುನಿಕ ರೇಡಾರ್ 8,000 ಕಿಲೋಮೀಟರ್ ದೂರದಲ್ಲಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳನ್ನು ಗುರುತಿಸಬಲ್ಲದು. ಬಹಳ ಬೇಗನೆ ಮುನ್ಸೂಚನೆ ನೀಡುವ ಇದರ ಸಾಮರ್ಥ್ಯ, ಈ ವಾಯು ರಕ್ಷಣಾ ವ್ಯವಸ್ಥೆಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿ, ಸಂಭಾವ್ಯ ಅಪಾಯಗಳನ್ನು ಪರಿಣಾಮಕಾರಿಯಾಗಿ ಹೊಡೆದುರುಳಿಸಲು ನೆರವಾಗಲಿದೆ.
ಭಾರತದ ರಕ್ಷಣಾ ಜಾಲದ ಭಾಗವಾದ ಬಳಿಕ, ವೊರೊನೆಜ್ ರೇಡಾರ್ ಸಂಭಾವ್ಯ ಅಪಾಯಗಳ ಕುರಿತಾದ ಅರಿವನ್ನು ಹೆಚ್ಚಿಸಿ, ತುರ್ತು ಪರಿಸ್ಥಿತಿಯಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ವೃದ್ಧಿಸಿ, ಭಾರತದ ಬಹು ಪದರಗಳ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಸಶಕ್ತವಾಗಿಸಲಿದೆ. ಯಾವುದೇ ರೀತಿಯ ಕ್ಷಿಪಣಿ ದಾಳಿಗಳು ಮತ್ತು ಇತರ ವೈಮಾನಿಕ ಅಪಾಯಗಳನ್ನು ಎದುರಿಸಲು ಭಾರತವನ್ನು ವೊರೊನೆಜ್ ರೇಡಾರ್ ಸಿದ್ಧಗೊಳಿಸಲಿದೆ.