ರಾಜಸ್ಥಾನದಲ್ಲಿ ಹೆಂಡತಿಯೊಂದಿಗೆ ಜಗಳವಾಡಿದ ಗಂಡ ತನ್ನ 5 ತಿಂಗಳ ಅವಳಿ ಮಕ್ಕಳನ್ನು ನೆಲಕ್ಕೆ ಹೊಡೆದು ಕೊಂದಿದ್ದಾನೆ. ನಂತರ ಶವಗಳನ್ನು ಹೂತು ಹಾಕಿದ್ದು, ಸೋದರ ಮಾವನ ದೂರಿನಿಂದ ಪ್ರಕರಣ ಬೆಳಕಿಗೆ ಬಂದಿದೆ.
ಹೆಂಡತಿ ಜೊತೆ ನಿರಂತರವಾಗಿ ಜಗಳವಾಡುತ್ತಿದ್ದ ಗಂಡ ಹೆಂಡತಿ ಮೇಲಿನ ಸಿಟ್ಟಲ್ಲಿ ಮುದ್ದಾದ ಕೇವಲ 5 ತಿಂಗಳಷ್ಟೇ ತುಂಬಿದ್ದ ನವಜಾತ ಶಿಶುಗಳನ್ನು ನೆಲಕ್ಕೆ ಹೊಡೆದು ಕೊಂದಿರುವಂತಹ ಆಘಾತಕಾರಿ ಕ್ರೌರ್ಯದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಕೊಲೆಯ ನಂತರ ಆರೋಪಿ ಶವಗಳನ್ನು ಹೂತು ಹಾಕಿದ್ದಾನೆ. ಆದರೆ ಮಕ್ಕಳ ಸೋದರ ಮಾವ ನೀಡಿದ ದೂರಿನ ಮೇರೆಗೆ ಈಗ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಸಿಕರ್ ಜಿಲ್ಲೆಯ (Sikar District) ನೀಮ್‌ಕಾಥಾನಾ ಪ್ರದೇಶದಲ್ಲಿ (Neemkathana Area)ಈ ಭಯಾನಕ ಘಟನೆ ನಡೆದಿದೆ.
ಕೋಪದಲ್ಲಿ ರಾಕ್ಷಸನಾದ ತಂದೆ
ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ವಾರ್ಡ್ ನಂಬರ್ 31 ನಿವಾಸಿ ಅನಿತಾ ಹಾಗೂ ಆಕೆಯ ಪತಿ ಅಶೋಕ್ ಮಧ್ಯೆ ಮಧ್ಯಾಹ್ನ ಸುಮಾರು 2:30 ರಿಂದ 3 ಗಂಟೆಯ ನಡುವೆ ಜಗಳ ಶುರುವಾಗಿದೆ. ಪತ್ನಿ ಅನಿತಾ ಜೊತೆ ಜಗಳ ಶುರು ಮಾಡಿದ ಅಶೋಕ್ ಅದೇ ಕೋಪದಲ್ಲಿ ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ , 5 ತಿಂಗಳಷ್ಟೇ ತುಂಬಿದ್ದ ಪುಟ್ಟ ಕಂದಮ್ಮಗಳಾದ ನವ್ಯಾ ಹಾಗೂ ನಿಧಿಯನ್ನು ನೆಲಕ್ಕೆ ಹೊಡೆದು ನಿರ್ದಯವಾಗಿ ವರ್ತಿಸಿದ್ದಾನೆ. ಪಾಪಿ ಅಪ್ಪನ ಕ್ರೌರ್ಯದಿಂದ ಗಂಭೀರ ಗಾಯಗೊಂಡ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ವೈದ್ಯರು ಮಕ್ಕಳು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿ ಮತ್ತು ಆತನ ಕುಟುಂಬದವರು ಶವಗಳನ್ನು ಮರೆಮಾಚಲು ಯೋಜಿಸಿದ್ದಾರೆ. ಅದರಂತೆ ಆರೋಪಿ ಮಕ್ಕಳ ಶವಗಳನ್ನು ಮನೆಯಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಕಲೆಕ್ಟರೇಟ್ ಬಳಿಯ ಖಾಲಿ ಜಾಗದಲ್ಲಿ ಹೂತು ಹಾಕಿದ್ದಾನೆ. ಮತ್ತು ಮೇಲೆ ಕಲ್ಲು ಮತ್ತು ಪೊದೆಗಳನ್ನು ಹಾಕಿ ಯಾರಿಗೂ ಅನುಮಾನ ಬರದಂತೆ ನೋಡಿಕೊಂಡಿದ್ದಾರೆ.
ಸೋದರ ಮಾವನಿಂದ ಪೊಲೀಸರಿಗೆ ಮಾಹಿತಿ
ಇತ್ತ ಗುರುವಾರ ರಾತ್ರಿ ಸುಮಾರು 11:30 ಕ್ಕೆ, ಮೃತ ಮಕ್ಕಳ ಮಾವ ಸುನೀಲ್ ಯಾದವ್ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಎಎಸ್ಪಿ ರೋಷನ್ ಮೀನಾ, ಎಸ್‌ಡಿಎಂ ರಾಜವೀರ್ ಯಾದವ್ ಮತ್ತು ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಆಗಮಿಸಿ,. ತಕ್ಷಣವೇ ಘಟನಾ ಸ್ಥಳವನ್ನು ಸೀಲ್ ಮಾಡಿದ್ದಾರೆ. ಬಳಿಕ ಇಂದು ಶುಕ್ರವಾರ ಬೆಳಿಗ್ಗೆ 8:30 ಕ್ಕೆ ಮಕ್ಕಳ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮದುವೆಯಾದಾಗಿನಿಂದ ಹೆಂಡತಿಗೆ ಹಿಂಸೆ ನೀಡುತ್ತಿದ್ದ ಪತಿ
ಮದುವೆಯಾದಾಗಿನಿಂದಲೂ ಪತ್ನಿ ಅನಿತಾಗೆ ಅಶೋಕ್ ಹಿಂಸೆ ನೀಡುತ್ತಿದ್ದ. ಹಲವು ಬಾರಿ ದಂಪತಿ ಮಧ್ಯೆ ಜಗಳ ಆಗುತ್ತಿತ್ತು. ಆದರೆ ಪ್ರತಿ ಬಾರಿಯೂ ರಾಜಿ ಮಾಡಿಸಲಾಯಿತು. ಈ ಬಾರಿ ಸಣ್ಣ ಜಗಳವು ದೊಡ್ಡದಾಗಿ ಬೆಳೆದು ಆರೋಪಿ ತನ್ನ ಸ್ವಂತ ಮಕ್ಕಳನ್ನೇ ನಿರ್ದಯವಾಗಿ ಕೊಂದಿದ್ದಾನೆ. ಮಕ್ಕಳ ಶವ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ನಂತರ ಪೊಲೀಸರು ಆರೋಪಿ ಅಶೋಕ್ ಕುಮಾರ್‌ನನ್ನು ಬಂಧಿಸಿದ್ದಾರೆ ಮತ್ತು ಆತನ ವಿರುದ್ಧ ಕೊಲೆ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆದಿದೆ
.110 ಗ್ರಾಂ ಬಂಗಾರದ ಜೊತೆಗೆ ಚಿನ್ನದಂಥ ಹೆಣ್ಣು ಕೊಟ್ಟರೂ ತೀರಲಿಲ್ಲ ವರದ ...