ಜನತೆ ಹೇಳಿದರೆ ಹೊಸ ಪಕ್ಷ ಕಟ್ಟುವೆ ಎಂದ ಯತ್ನಾಳ್! ವಿಜಯದಶಮಿಗೆ ನಿರ್ಧಾರ ರೆಬೆಲ್ಸ್?

ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ ಹಿಂದುತ್ವದ ಆಧಾರದ ಮೇಲೆ ಹೊಸ ಪಕ್ಷ ಕಟ್ಟುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಿದ್ದಾರೆ. ವಿಜಯದಶಮಿಯಂದು ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಅವರು ಘೋಷಿಸಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ಹಿತ ಕಾಯುವ ಪಕ್ಷವೆಂದು ಟೀಕಿಸಿದ ಅವರು, ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮುಂದುವರೆಸಿದ್ದಾರೆ.

Basanagouda Patil Yatnal said he will form a new party if people ask him to.

ಕೊಪ್ಪಳ/ವಿಜಯಪುರ (ಏ.1) :  ‘ಹಿಂದುತ್ವದ ಆಧಾರದ ಮೇಲೆ ಜನರು ಹೊಸ ಪಕ್ಷ ಕಟ್ಟಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಶೀಘ್ರವೇ ರಾಜ್ಯಾದ್ಯಂತ ಸುತ್ತಾಡಿ ಜನಾಭಿಪ್ರಾಯ ಸಂಗ್ರಹಿಸಿ ಹೊಸ ಪಕ್ಷ ಕಟ್ಟುವ ಕುರಿತು ವಿಜಯದಶಮಿಗೆ ರಾಜಕೀಯ ನಿರ್ಧಾರ ಕೈಗೊಳ್ಳುವೆ’ ಎಂದು ಬಿಜೆಪಿ ಉಚ್ಚಾಟಿತ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಿಸಿದ್ದಾರೆ.

ಅಲ್ಲದೆ, ‘ಕಾಂಗ್ರೆಸ್ ಮುಸ್ಲಿಮರ ಹಿತ ಕಾಯುವ ಪಕ್ಷ. ನಾನು ಈ ಜನ್ಮದಲ್ಲಿ ಅಲ್ಲ, ಮುಂದಿನ ಜನ್ಮದಲ್ಲಿಯೂ ಕಾಂಗ್ರೆಸ್‌ಗೆ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Latest Videos

ವಿಜಯಪುರದಲ್ಲಿ ಹಾಗೂ ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದುತ್ವದ ಆಧಾರದ ಮೇಲೆ ಹೊಸ ಪಕ್ಷ ಕಟ್ಟಬೇಕೆಂದು ಜನರು ಬಯಸಿದರೆ ಹೊಸ ಪಕ್ಷ ಕಟ್ಟುವೆ. ನಾವು ಚೆನ್ನಮ್ಮ, ರಾಯಣ್ಣ ಬ್ರಿಗೇಡ್ ಪರವಾಗಿ ಕೆಲಸ ಮಾಡಲ್ಲ. ಎಲ್ಲ ಹಿಂದುಗಳ ಪರವಾಗಿ ಕೆಲಸ ಮಾಡುತ್ತೇವೆ. ಆ ಮೇಲೆ ಚೆನ್ನಮ್ಮ, ರಾಯಣ್ಣ ಹಾಗೂ ಅಂಬೇಡ್ಕರ್ ನಮ್ಮ ಪರವಾಗಿಯೇ ಬರುತ್ತಾರೆ’ ಎಂದರು.

ಇದನ್ನೂ ಓದಿ: 'ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ್‌ಗೆ ಬರೆದುಕೊಟ್ಟಿಲ್ಲ' : ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

‘ನಾನೆಂದೂ ಕಾಂಗ್ರೆಸ್‌ಗೆ ಹೋಗುವುದಿಲ್ಲ’ ಎಂದು ಹೇಳಿದ ಯತ್ನಾಳ್, ‘ಸೋಷಿಯಲ್ ಮೀಡಿಯಾ ಮೂಲಕ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದನ್ನು ಯಾರೂ ನಂಬಬೇಡಿ’ ಎಂದು ಸೂಚ್ಯವಾಗಿ ಹೇಳಿದರು.

ಅಶಿಸ್ತಿನ ಕಾರಣ ನೀಡಿ ಬಿಜೆಪಿಯಿಂದ ಉಚ್ಚಾಟನೆ ಮಾಡಿದ ಬಗ್ಗೆ ಉತ್ತರಿಸಿದ ಅವರು, ‘ನಾನು ಬಿಜೆಪಿ ವಿರುದ್ಧ ಯಾವುದೇ ಅಶಿಸ್ತು ತೋರಿಲ್ಲ. ಅದಕ್ಕೆ ಸಾಕ್ಷಿ ಇದ್ದರೆ ನೀಡಿ. ಯಡಿಯೂರಪ್ಪ, ವಿಜಯೇಂದ್ರ ಅವರ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ಕುರಿತು ಮಾತನಾಡಿದ್ದೇನೆ. ಅವರ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ. ಮಹಾಭಾರತದಲ್ಲಿ ಗೆದ್ದಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ ಹಾಗೂ ಧೃತರಾಷ್ಟ್ರರಲ್ಲ’ ಎಂದು ಗುಡುಗಿದರು.

ಕಾರಜೋಳ ಸೋಲಿಸಲು ಅಪ್ಪ-ಮಗ ಯತ್ನ:

ಲೋಕಸಭಾ ಚುನಾವಣೆಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಲು ಯಡಿಯೂರಪ್ಪ, ವಿಜಯೇಂದ್ರ ಅವರ ಒಳ ಒಪ್ಪಂದವೇ ಕಾರಣ. ದಾವಣಗೆರೆ ಸೇರಿ ಹಲವಾರು ಕ್ಷೇತ್ರಗಳಲ್ಲಿ ಯಡಿಯೂರಪ್ಪ, ವಿಜಯೇಂದ್ರ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ. ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳರನ್ನು ಸೋಲಿಸಲು ಯತ್ನ ನಡೆದಿತ್ತು. ಗೋವಿಂದ ಕಾರಜೋಳರ ವಿರುದ್ಧ ಪ್ರಚಾರ ಮಾಡಿದವರನ್ನೇ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.

‘ವೀರಶೈವ-ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದ್ದೇ ಯಡಿಯೂರಪ್ಪ ಹಾಗೂ ವಿಜಯೇಂದ್ರ. ನನ್ನ ಹೋರಾಟ ಬಿಜೆಪಿ ವಿರುದ್ಧ ಅಲ್ಲ. ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ’ ಎಂದು ಸ್ಪಷ್ಟಪಡಿಸಿದರು.

‘ರಮೇಶ ಜಾರಕಿಹೊಳಿ ಸಿಡಿ ಕೇಸ್‌, ಸಚಿವ ರಾಜಣ್ಣ ಹನಿಟ್ರ್ಯಾಪ್ ಯತ್ನಗಳಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಕೈವಾಡವಿದೆ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ಆಗಬೇಕು. ಇದೆಲ್ಲದರ ಕುರಿತು ಸಿಬಿಐ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

ಮುಂದಿನ ಸಿಎಂ ಯತ್ನಾಳ ಎಂದು ಘೋಷಣೆ:

ಯತ್ನಾಳರು ಗವಿಮಠಕ್ಕೆ ಆಗಮಿಸಿದಾಗ ಅವರ ಬೆಂಬಲಿಗರು, ಮುಂದಿನ ಸಿಎಂ ಯತ್ನಾಳ ಎಂದು ಘೋಷಣೆ ಕೂಗಿದರು.

ಹೋಮ, ಹವನ, ನವಗ್ರಹ ಪೂಜೆ ನೆರವೇರಿಸಿದ ಯತ್ನಾಳ ದಂಪತಿ

ಬಿಜೆಪಿಯಿಂದ ಉಚ್ಚಾಟನೆ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕುಟುಂಬ ಸಹಿತರಾಗಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಸಮುದಾಯ ಭವನದ ವಾಸ್ತುಶಾಂತಿ ಕಾರ್ಯಕ್ರಮ, ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಭಾನುವಾರ ನಡೆಯಿತು.

ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗಲ್ಲ: ದಿನೇಶ್ ಗುಂಡೂರಾವ್

ಯುಗಾದಿ ಅಂಗವಾಗಿ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯತ್ನಾಳ ಮತ್ತು ಅವರ ಪತ್ನಿ ಶೈಲಜಾ ಪಾಟೀಲ, ನಂತರ ಗೋಮಾತೆಗೆ ಪೂಜೆ ಸಲ್ಲಿಸಿ, ಸಿಹಿ ತಿನಿಸಿ ಶಿವಾನುಭವ ಸಮುದಾಯ ಭವನ ಪ್ರವೇಶಿಸಿದರು. ವಾಸ್ತುಶಾಂತಿ ಅಂಗವಾಗಿ ಹೋಮ-ಹವನ, ನವಗ್ರಹ ಪೂಜೆ, ಅಷ್ಟದಿಕ್ಪಾಲಕ, ಮಹಾಲಕ್ಷ್ಮೀ ಪೂಜೆ ನೆರವೇರಿಸಲಾಯಿತು.

vuukle one pixel image
click me!