ಕೊಡಗಿನಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟುಂಬವೊಂದು ದುರಂತ ಅಂತ್ಯ ಕಂಡಿದೆ. ನಾಲ್ವರು ಮಲಗಿದ್ದಲ್ಲೇ ಹತ್ಯೆಯಾಗಿದ್ದು, ಕುಟುಂಬದ ಸದಸ್ಯನೋರ್ವ ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.28) : ಕೂಲಿ ನಾಲಿ ಮಾಡುತ್ತಾ ಪುಟ್ಟ ಗುಡಿಸಿನಲ್ಲಿ ಬದುಕು ನಡೆಸುತ್ತಿದ್ದ ಕುಟುಂಬ ಅದು. ಗುರುವಾರ ರಾತ್ರಿ ಊಟ ಮುಗಿಸಿ ಮಲಗಿದ್ದವರು ಶುಕ್ರವಾರ ಸೂರ್ಯ ಮೂಡಿ ಬಹಳ ಸಮಯವಾದರೂ ಇವರು ಮಾತ್ರ ಮೇಲೆದ್ದಿರಲೇ ಇಲ್ಲ. ಮಲಗಿದ್ದಲ್ಲೇ ನಾಲ್ವರು ಮಸಣ ಸೇರಿದ್ದರು. ಆದರೆ ಜೊತೆಯಲ್ಲೇ ಇದ್ದವನೊಬ್ಬ ಮಾತ್ರ ನಾಪತ್ತೆಯಾಗಿದ್ದ. ಸಣ್ಣ ಮನೆಯಲ್ಲೇ ಬದುಕು ನಡೆಸುತ್ತಿದ್ದ ಇಡೀ ಕುಟುಂಬ ಸರ್ವನಾಶವಾಗಿದ್ದೇಕೆ ಎನ್ನುವುದನ್ನು ನೀವು ನೋಡಲೇಬೇಕು.
ಸುತ್ತಮುತ್ತ ಮರಗಿಡಗಳಿಂದ ಕೂಡಿರುವ ಕಾಡಿನಂತಹ ಪ್ರದೇಶ. ಅಲ್ಲಿಯೇ ಇರುವ ಒಂದಿಷ್ಟು ಕಾಫಿ ತೋಟ. ಕಾಫಿ ತೋಟದೊಳಗೆ ಇರುವ ಸಣ್ಣ ಗುಡಿಸಿಲಿನಲ್ಲಿ ಹರಿದಿತ್ತು ರಕ್ತದ ಕೋಡಿ. ಎಸ್ ಮಲಗಿರುವ ಹಾಸಿಯ ಮೇಲೆ ಮಲಗಿರುವಲ್ಲಿಯೇ ಪ್ರಾಣಬಿಟ್ಟಿರುವ ನಾಲ್ವರು. ಒಂದೆಡೆ ಉಸಿರು ಚೆಲ್ಲಿರುವ ಇಳಿವಯಸ್ಸಿನಲ್ಲಿ ಮೊಮ್ಮೊಗಳೊಂದಿಗೆ ಆಟವಾಡಿಕೊಂಡಿರಬೇಕಾದ ಅಜ್ಜ, ಅಜ್ಜಿ. ಅದರ ಪಕ್ಕದಲ್ಲಿಯೇ ಹೆಣವಾಗಿ ಬಿದ್ದಿರುವ ಮೊಮ್ಮಗಳು ನಾಗಿ. ತಾಯಿ ನಾಗಿಯ ಪಕ್ಕದಲ್ಲಿಯೇ ಬಿದ್ದಿರುವ ಇನ್ನೂ ಆಟವಾಡಿಕೊಂಡಿರಬೇಕಾದ ಐದು ವರ್ಷದ ಪುಟ್ಟಬಾಲಕಿ ಕಾವೇರಿ. ಅಯ್ಯಯ್ಯೋ ಇದೆಂಥ ಘೋರ ದುರಂತ ಅಲ್ವಾ.?
ಗುರುವಾರ ರಾತ್ರಿ ಮಲಗಿದ್ದಲ್ಲೇ ಎಲ್ಲರ ರಕ್ತದ ಕೋಡಿ ಹರಿದೆ. ಇಂತಹ ಘೋರ ದುರಂತ ನಡೆದಿರುವುದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರಿನಲ್ಲಿ. ಹತ್ಯೆಯಾದ ನಾಗಿ ತನ್ನ ಐದು ವರ್ಷದ ಮಗಳು ಕಾವೇರಿಯೊಂದಿಗೆ ಅಜ್ಜ, ಅಜ್ಜಿಯರಾದ ಕರಿಯ ಮತ್ತು ಗೌರಿಯೊಂದಿಗೆ ಜೀವನ ನಡೆಸುತ್ತಿದ್ದಳು. ಆಗಲೇ ಸಿಕ್ಕವನು ಈ ಗಿರೀಶ್. ಹೌದು ಮೂರನೇ ಗಂಡನನ್ನಾಗಿ ಗಿರೀಶ್ನೊಂದಿಗೆ ಕೂಡಿಕೊಂಡು ಬದುಕು ನಡೆಸುತ್ತಿದ್ದ ನಾಗಿ ಗಿರೀಶ್ನೊಂದಿಗೆ ಸಂಸಾರ ನಡೆಸುತ್ತಿದ್ದಳು. ಒಂದಿಷ್ಟು ಕಾಫಿ ತೋಟವೂ ಇತ್ತು. ಈ ಕಾಫಿ ತೋಟದಲ್ಲಿ ಈ ಬಾರಿ ಒಂದಷ್ಟು ಕಾಫಿ ಬೆಳೆಯೂ ಬಂದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಕಾಫಿಗೆ ಒಳ್ಳೆಯ ಬೆಲೆಯೂ ಬಂದಿತ್ತು. ಇದೇ ನೋಡಿ ಹೀಗೆ ಇಡೀ ಕುಟುಂಬ ಹೆಣವಾಗಿ ಸ್ಮಶಾನ ಸೇರುವಂತೆ ಆಗಲು ಕಾರಣವಾಗಿದ್ದು.
ಇದನ್ನೂ ಓದಿ: ಕೊಡಗು: ಕಸ ವಿಲೇವಾರಿ ಘಟಕ ವಿರೋಧಿಸಿ ಹಾಡಿ ಜನರ ಅಹೋರಾತ್ರಿ ಧರಣಿ, ಅಮರಣಾಂತರ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ!
ಹೌದು ಈ ವರ್ಷ ಕಾಫಿಗೆ ಹಿಂದೆದೂ ಇರದಷ್ಟು ಉತ್ತಮ ಬೆಲೆ ಬಂದಿದೆ. ಚೀಲ ಕಾಫಿಗೆ ಬರೋಬ್ಬರಿ 12 ಸಾವಿರ ರೂಪಾಯಿ ಆಗಿದೆ. ಇದೇ ಕಾಫಿಯ ಬೆಲೆ, ಆ ಕಾಫಿಗೆ ಸಿಗುವ ಹಣವೇ ಹೀಗೆ ನಾಲ್ವರನ್ನು ಸಾವಿನ ಮನೆ ಸೇರುವಂತೆ ಮಾಡಿದೆ ಎನ್ನಲಾಗುತ್ತಿದೆ. ಕಳೆದ ಬಾರಿ ಒಂದಿಷ್ಟು ಒಳ್ಳೆಯ ಮಳೆಯಾಗಿದ್ದರಿಂದ ಒಳ್ಳೆಯ ಕಾಫಿ ಬೆಳೆಯೂ ಬಂದಿತ್ತು. ಅದೇನು ಅದೃಷ್ಟವೋ, ಇಲ್ಲ ಏನೋ ಬಂಪರ್ ಬೆಲೆಯೂ ಬಂದಿತ್ತು. ಹೀಗಾಗಿ ಗಿರೀಶನಿಗೆ ನಾಗಿಯವರ ಮನೆಯಲ್ಲಿ ಇದ್ದ ಕಾಫಿ ಮೇಲೆ ಕಣ್ಣು ಬಿದ್ದಿತ್ತು. ಈ ಕಾಫಿ ಮಾರಾಟದ ವಿಷಯಕ್ಕಾಗಿಯೇ ಕೊಲೆ ನಡೆದಿಬರಹುದೇನೋ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಮೂಲತಃ ಕೇರಳದವನಾದ ಗಿರೀಶನನ್ನು ಮೃತ ನಾಗಿಯು ಅವನ ಬಿಟ್ಟು ಇವನ್ಯಾರ್ ಎನ್ನುವ ಹಾಗೆ, ಮೂರನೆಯ ಗಂಡನನ್ನಾಗಿ ಮದುವೆಯಾಗಿದ್ನಂತೆ. ಮದುವೆಯಾದಾಗಿನಿಂದಲೂ ಯಾವುದ್ಯಾವುದೋ ವಿಷಯಕ್ಕೆ ನಾಗಿ ಮತ್ತು ಗಿರೀಶನ ನಡುವೆ ಗಲಾಟೆ ನಡೆಯುತ್ತಲೇ ಇತ್ತಂತೆ. ವರ್ಷದ ಹಿಂದೆಯೇ ಮದುವೆಯಾಗಿದ್ದರೂ ಅವನು ವಾಪಸ್ ಕೇರಳಕ್ಕೆ ಹೋಗಿದ್ದನಂತೆ. ಆದರೆ ಎರಡು ತಿಂಗಳ ಹಿಂದೆಯಷ್ಟೇ ನಾಗಿ ಕೇರಳಕ್ಕೆ ಹೋಗಿ ಗಿರೀಶನನ್ನು ಕರೆದುಕೊಂಡು ಬಂದಿದ್ದಳಂತೆ. ಎರಡು ತಿಂಗಳಿನಿಂದಲೂ ಇಲ್ಲಿಯೇ ಇದ್ದ ಗಿರೀಶ್ ನಿನ್ನೆಯವರೆಗೂ ಕರಿಯ ಮತ್ತು ಗೌರಿಯ ಮನೆಯಲ್ಲಿಯೇ ನಾಗಿ ಮತ್ತು ಕಾವೇರಿಯೊಂದಿಗೆ ಇದ್ದನಂತೆ. ನಿನ್ನೆ ರಾತ್ರಿಯೋ ಅಥವಾ ಇಂದು ಮುಂಜಾನೆಯೋ ಭರ್ಬರವಾಗಿ ಹತ್ಯೆ ಮಾಡಲಾಗಿದೆ. ಇತ್ತ ಗಿರೀಶ್ ಮನೆಯಿಂದ ಕಾಲ್ಕಿತ್ತಿದ್ದು ಎತ್ತ ಹೋದನೋ ಎನ್ನುವುದು ಅನುಮಾನ ಮೂಡಿಸಿದೆ. ಹೀಗಾಗಿಯೇ ಗಿರೀಶನೇ ಹತ್ಯೆ ಮಾಡಿರಬಹುದು ಎಂಬ ಅನುಮಾನದಿಂದ ಆತನಿಗಾಗಿ ಕೊಡಗು ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: Kodagu News: ಆರೋಗ್ಯ ಸಚಿವರೇ ಇಲ್ನೋಡಿ, ಮದ್ಯಪಾನದಿಂದ ಕಿಡ್ನಿ ವೈಫಲ್ಯ ಹೆಚ್ಚಳ, ಒಬ್ಬೇ ಒಬ್ಬ ತಜ್ಞ ವೈದ್ಯರಿಲ್ಲ!
ಇತ್ತ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಡಗು ಎಸ್.ಪಿ. ರಾಮರಾಜನ್ ಸಹಿತ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಅವರು ಭೇಟಿ ನೀಡಿದರು. ಶ್ವಾನದಳ, ಬೆಳಚ್ಚು ತಜ್ಞರ ತಂಡ ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದೆ. ಈ ಕುರಿತು ಮಾತನಾಡಿರುವ ಐಜಿಪಿ ಬೋರಲಿಂಗಯ್ಯ ಅವರು ಪ್ರಾಥಮಿಕ ಮಾಹಿತಿ ಪ್ರಕಾರ ಗಿರೀಶನೇ ಹತ್ಯೆ ಮಾಡಿರಬಹುದು ಎಂಬ ಅಂದಾಜಿದೆ. ಒಟ್ಟಿನಲ್ಲಿ ಆರೋಪಿಯ ಪತ್ತೆಗಾಗಿ ಎರಡು ತಂಡಗಳನ್ನು ನಿಯೋಜನೆ ಮಾಡಿದ್ದು ಎರಡು ತಂಡಗಳು ಆರೋಪಿಗಾಗಿ ಹುಡುಕಾಟ ಆರಂಭಿಸಿವೆ ಎಂದಿದ್ದಾರೆ.