ಆತ ನಾಪತ್ತೆಯಾಗಿರುವ ತನ್ನ ಹೆಂಡತಿಯನ್ನು ಹುಡುಕಿಕೊಡಿ ಎಂದು ಠಾಣೆಗೆ ದೂರು ಕೊಟ್ಟಿದ್ದ. ದೂರು ಕೊಟ್ಟ ವರ್ಷದಲ್ಲೇ ಅಲ್ಲೊಂದು ಮಹಿಳೆಯ ಅಸ್ತಿಪಂಜರ ದೊರೆತಿತ್ತು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.02): ಆತ ನಾಪತ್ತೆಯಾಗಿರುವ ತನ್ನ ಹೆಂಡತಿಯನ್ನು ಹುಡುಕಿಕೊಡಿ ಎಂದು ಠಾಣೆಗೆ ದೂರು ಕೊಟ್ಟಿದ್ದ. ದೂರು ಕೊಟ್ಟ ವರ್ಷದಲ್ಲೇ ಅಲ್ಲೊಂದು ಮಹಿಳೆಯ ಅಸ್ತಿಪಂಜರ ದೊರೆತಿತ್ತು. ಪೊಲೀಸರ ಆಣತಿಯಂತೆ ಅದೇ ಸ್ಥಳದಲ್ಲಿ ಶವಸಂಸ್ಕಾರ ಮಾಡಿ ಮನೆಗೆ ಬಂದಿದ್ದವನನ್ನು ನೀನೆ ಕೊಲೆ ಮಾಡಿದ್ದೀಯಾ ಅಂತ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿಬಿಟ್ಟಿದ್ರು. ಎರಡು ವರ್ಷ ಜೈಲು ವಾಸ ಅನುಭವಿಸಿ ಇನ್ನೂ ಕೋರ್ಟು ಕಟ್ಟಲೆ ಅಂತ ಅಲೆಯುತ್ತಿರುವವನ ಮುಂದೆ ಸತ್ತು ಸಂಸ್ಕಾರವಾಗಿದ್ದವಳು ಎದ್ದು ಬಂದರೆ ಏನಾಗಬಹುದು. ಅರರೆ ಏನಿದು ಪೊಲೀಸ್ ಭೂತದ ಚೇಷ್ಠೆ. ಕೇಳಿದ್ರೆ ನೀವೆ ಬೆಚ್ಚಿ ಬೀಳ್ತೀರಾ.
ಆರತಿಗೊಬ್ಬಳು, ಕೀರ್ತಿಗೊಬ್ಬ ಅಂತ ಮುದ್ದಾದ ಎರಡು ಮಕ್ಕಳು. ತಾನಾಯ್ತು ತನ್ನ ಕುಟುಂಬವಾಯ್ತು ಅಂತ ದುಡಿದು ಸಾಕುವ ಪ್ರೀತಿಯ ಗಂಡ. ಇಷ್ಟಿದ್ದರೂ ಆಕೆ ಪರಸಂಗ ಮಾಡಿ ಗಂಡ, ಮಕ್ಕಳು ಮರಿಗಳನ್ನು ಬಿಟ್ಟು ಹಾರಿಬಿಟ್ಟಿದ್ದಳು. ಯಾರೊಂದಿಗೆ ಇದ್ದಾಳೆ ಎನ್ನುವುದು ತಿಳಿದು ಫೋನ್ ಕರೆ ಮಾಡಿ ಇದೆನೆಲ್ಲಾ ಬಿಟ್ಟು ಬಾ ಅಂತ ಹೆತ್ತ ತಾಯಿ, ಗಂಡ ಮತ್ತು ಮಕ್ಕಳೆಲ್ಲರೂ ಕರೆದಿದ್ದರು. ಆದರೂ ಆಕೆ ಬಂದಿರಲೇ ಇಲ್ಲ. ಹಾಳಾದವಳು ಏನಾದರೂ ಆಗಿ ಸಾಯಲಿ ಎಂದು ಎಲ್ಲರೂ ಆಕೆಯ ಸುದ್ದಿಯನ್ನು ಬಿಟ್ಟು ಸುಮ್ಮನಾಗಿದ್ದರು. ಮುಂದೆ ಏನಾದರೂ ಆದರೆ ತೊಂದರೆಯಾದರೆ ನಮ್ಮ ತಲೆಗೆ ಬರಬಹುದು ಎಂದು ಗಂಡ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ.
ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯಬೇಕೆಂಬುದು ವಿದ್ಯಾರ್ಥಿಗಳ ಹಂಬಲ: ಡಿ.ಕೆ.ಶಿವಕುಮಾರ್
ಅಲ್ಲಿಂದ ಆತ ಅನುಭವಿಸಿದ ಕಷ್ಟ ಕೋಟಲೆ ಅಷ್ಟಿಷ್ಟಲ್ಲ. ಹೌದು ಅಷ್ಟಕ್ಕೂ ಇದೆಲ್ಲಾ ನಡೆದಿರುವುದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯಲ್ಲಿ. ಬಸವನಹಳ್ಳಿ ಸುರೇಶ್ ತಾನು ಮಾಡದ ತಪ್ಪಿಗೆ ಎಷ್ಟೆಲ್ಲಾ ಕಷ್ಟ ಕೋಟಲೆಗಳನ್ನು ಅನುಭವಿಸುತ್ತಿರುವ ವ್ಯಕ್ತಿ. 2021 ರಲ್ಲಿ ಈತನ ಮಿಸ್ಸಸ್ ಮಲ್ಲಿಗೆ ಮಿಸ್ ಆಗಿಬಿಟ್ಟಿದ್ದಳು. ಹಾಗೆಂದು ಆಕೆಯೇನು ಎಲ್ಲೋ ತಪ್ಪಿಸಿಕೊಂಡಿರಲಿಲ್ಲ. ಬದಲಾಗಿ ಆಕೆಯದ್ದೇ ದೂರದ ನೆಂಟರೊಬ್ಬನ ಹಿಂದೆ ಹಾರಿದ್ದಳು. ಹೀಗಾಗಿ ಸುರೇಶ್ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ವಿಪರ್ಯಾಸವೆಂದರೆ ಪೊಲೀಸರು ಆಕೆಯನ್ನು ಹುಡುಕಲೇ ಇಲ್ಲ.
ಇತ್ತ ಒಂದು ವರ್ಷವಾದರೂ ಆಕೆ ತಿರುಗಿ ಬರಲೂ ಇಲ್ಲ. ಸುರೇಶ್ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರೆ ನಿಮ್ಮ ಹೆಂಡತಿ ಶವ ದೊರೆತ್ತಿದೆ ಎಂದು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಪೊಲೀಸರು ಸುರೇಶ್ ಮತ್ತು ಆತನ ಅತ್ತೆ ಗೌರಿಯನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಯಾವುದೋ ಅಸ್ತಿ ಪಂಜರ ತೋರಿಸಿ ನಿಮ್ಮ ಹೆಂಡತಿಯದ್ದೇ ಅಸ್ತಿ ಪಂಜರ, ಸಂಸ್ಕಾರ ಮಾಡಿ ಎಂದು ಅಲ್ಲೇ ಅರಣ್ಯದಲ್ಲಿ ಶವ ಸಂಸ್ಕಾರ ಮಾಡಿಸಿದ್ದರು. ಅಲ್ಲಿಗೆ ಕುಶಾಲನಗರ ಪೊಲೀಸ್ ಠಾಣೆಗೆ ನೀಡಿದ್ದ ಕಂಪ್ಲೈಂಟ್ ಕ್ಲೋಸ್ ಆಗಿತ್ತು. ಕುಶಾಲನಗರ ಠಾಣೆಯಲ್ಲಿ ಎಲ್ಲವೂ ಮುಗಿದರೆ ಈತ ಗ್ರಹಚಾರಕ್ಕೆ ಇನ್ನಿಲ್ಲ ಸಕ್ಷನ್ ಅಡಿಗಳಲ್ಲಿ ಇದೇ ಸುರೇಶ್ ಮೇಲೆ ದೂರು ದಾಖಲಾಗಿತ್ತು.
ಹೀಗಾಗಿ ಬಸವನಹಳ್ಳಿಗೆ ಬಂದಿದ್ದ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ. ತಾನು ಮಾಡದ ತಪ್ಪಿಗೆ ಸುರೇಶ್ ಎರಡು ವರ್ಷ ಜೈಲಿನಲ್ಲಿ ಕೊಳೆತಿದ್ದಾರೆ. ಹೀಗೆ ಜೈಲಿಗೆ ಹೋದ ಸುರೇಶ್ ಆಚೆಗೆ ಬರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವರ ಕಷ್ಟವನ್ನು ಅದ್ಹೇಗೋ ಕಂಡಿದ್ದ ವಕೀಲ ಪಾಂಡು ಪೂಜಾರಿ ಇವರ ಬೆನ್ನಿಗೆ ನಿಂತಿದ್ದಾರೆ. ಸಂಸ್ಕಾರ ಮಾಡಿದ್ದ ಅಸ್ತಿಪಂಜರ ಮತ್ತು ಮಿಸ್ ಆದ ಮಿಸ್ಸಸ್ ಮಲ್ಲಿಗೆಯ ತಾಯಿ ಗೌರಿಯ ಡಿಎನ್ಎ ಪರೀಕ್ಷೆಗೆ ಕೋರ್ಟ್ ಅನುಮತಿ ಪಡೆದು ಪರೀಕ್ಷೆ ಮಾಡಿಸಿದ್ದಾರೆ. ಡಿಎನ್ಎ ವರದಿ ಬಂದಾಗ ಅದು ಹೊಂದಾಣಿಕೆ ಆಗಿಲ್ಲ. ಹೀಗಾಗಿ ಮಲ್ಲಿಗೆ ಕೊಲೆ ಆಗಿಲ್ಲ ಎಂದು ಕೋರ್ಟಿಗೆ ಮನವರಿಕೆ ಮಾಡಿ ಬೇಲ್ ಮೇಲೆ 2023 ರಲ್ಲಿ ಹೊರ ಬಂದಿದ್ದಾರೆ. ಇದೆಲ್ಲವೂ ಮುಗಿದ ಅಧ್ಯಾಯ.
ಆದರೆ ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಿಸ್ಸೆಸ್ ಮಲ್ಲಿಗೆ 2025 ರ ಏಪ್ರಿಲ್ ಒಂದರಂದು ಅಂದರೆ ನಿನ್ನೆಯಷ್ಟೇ ಮಡಿಕೇರಿಯ ಹೊಟೇಲ್ ಒಂದರಲ್ಲಿ ತನ್ನ ಪ್ರಿಯತಮನೊಂದಿಗೆ ಊಟ ಮಾಡುತ್ತಿದ್ದಳು. ಇದನ್ನು ಕಂಡಿದ್ದ ಸುರೇಶನ ಸ್ನೇಹಿತರು ವಿಡಿಯೋ ಮಾಡಿ ಸುರೇಶ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಮೈಸೂರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸ್ಟೋರಿಗೆ ಬಹಳ ಟ್ವಿಸ್ಟ್ ಇರುವುದೇ ಇಲ್ಲಿ ನೋಡಿ. ಆಕೆ ಸತ್ತಿಲ್ಲ ಬದುಕಿದ್ದಾಳೆ ಎನ್ನುದಾದರೆ ದೊರೆತ ಅಸ್ತಿಪಂಜರ ನಿಮ್ಮ ಪತ್ನಿಯದ್ದೇ. ಸಂಸ್ಕಾರ ಮಾಡಿ ಎಂದು ಪೊಲೀಸರು ಸಂಸ್ಕಾರ ಮಾಡಿಸಿದ್ದೇಕೆ. ಸಂಸ್ಕಾರ ಮಾಡಿದ ಮೇಲೆ ನೀನೆ ಆಕೆಯನ್ನು ಕೊಲೆ ಮಾಡಿದ್ದೀಯಾ ಎಂದು ಏನೂ ಗೊತ್ತಿಲ್ಲದ ಸುರೇಶನನ್ನು ಜೈಲಿಗೆ ಕಳುಹಿಸಿದ್ದೇಕೆ.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ಈಕೆ ಬದುಕಿದ್ದಾಳೆ ಎನ್ನುವುದಾದರೆ ಸಂಸ್ಕಾರ ಮಾಡಿದ ಆ ಅಸ್ತಿಪಂಜರ ಯಾರದ್ದು ಎನ್ನುವುದೆಲ್ಲಾ ದೊಡ್ಡ ಪ್ರಶ್ನೆ ಎನ್ನುತ್ತಾರೆ ವಕೀಲ ಪಾಂಡು ಪೂಜಾರಿ. ಓದಿದ್ರಲಾ ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿತು ಎನ್ನುವ ಹಾಗೆ ಆಕೆ ಅಕ್ರಮ ಸಂಬಂಧ ಹೊಂದಿದವನ ಜೊತೆಗೆ ಹೋಗಿದ್ದನ್ನು ನೋಡಿ ಸಹಿಸಿಕೊಂಡು ಬದುಕುತಿದ್ದ ಸುರೇಶ ಶಿಕ್ಷೆ ಅನುಭವಿಸುವಂತೆ ಆಗಿದೆ. ಏನೂ ತಪ್ಪು ಮಾಡದಿದ್ದರೂ ಜೈಲು ಅನುಭವಿಸುವಂತೆ ಆಗಿದೆ. ಏನೂ ತಪ್ಪು ಮಾಡದ ಸುರೇಶನನ್ನು ಹೀಗೆ ಜೈಲಿಗೆ ಕಳುಹಿಸಿದ ಪೊಲೀಸರ ಉದ್ದೇಶವಾದರೂ ಏನು ಎನ್ನುವುದು ಮಾತ್ರ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.