ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಹಿಲ್ ಜೈನ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರನ್ಯಾ ಚಿನ್ನ ಸಾಗಣೆಗೆ ಸಹಾಯ ಮಾಡಿದ್ದ ಆರೋಪ ಸಾಹಿಲ್ ಮೇಲಿದೆ.
ಬೆಂಗಳೂರು (ಎ.2): ಡಿಜಿಪಿ ಮಲಮಗಳು ಹಾಗೂ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಬಂಧಿತನಾಗಿದ್ದ 3ನೇ ಆರೋಪಿ ಸಾಹಿಲ್ ಜೈನ್ ಗೆ ನ್ಯಾಯಾಂಗ ಬಂಧನವಾಗಿದೆ. ಏ.7ರವರೆಗೆ ಸಾಹಿಲ್ ಜೈನ್ ಗೆ ನ್ಯಾಯಾಂಗ ಬಂಧನ ವಿಧಿಸಿ 64ನೇ ಸಿಸಿಎಚ್ ನ್ಯಾಯಾಲಯದಿಂದ ಆದೇಶ ಹೊರಬಿದ್ದಿದೆ. ರನ್ಯಾ ಚಿನ್ನ ಸ್ಮಗ್ಲಿಂಗ್ ಗೆ ಸಹಾಯ ಮಾಡಿದ್ದ ಆರೋಪದಲ್ಲಿ ಮಾ.26ರಂದು ಸಾಹಿಲ್ ಜೈನ್ ನನ್ನು ಬಂಧಿಸಲಾಗಿತ್ತು.
ಬಳ್ಳಾರಿ ನಗರದ ಬ್ರಾಹ್ಮಿನ್ ರಸ್ತೆಯ ಮಹೇಂದ್ರ ಕುಮಾರ್ ಜೈನ್ ಪುತ್ರ ಸಾಹಿಲ್ ಸಕಾರಿಯಾ ಜೈನ್ ಗೆ ದುಬೈನಿಂದ ಚಿನ್ನ ಸಾಗಿಸುವ ಮುನ್ನ ನಟಿ ರನ್ಯಾ ರಾವ್ ಅವರು ವಾಟ್ಸಪ್‌ನಲ್ಲಿ ಮೆಸೇಜ್ ಮಾಡಿದ್ದಳು ಎಂಬ ವಿಚಾರ ಡಿಆರ್‌ಐ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾಹಿಲ್‌ನನ್ನು ಸಹ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿತು. ವಿಚಾರಣೆ ವೇಳೆ ಚಿನ್ನ ಕಳ್ಳ ಸಾಗಾಣಿಕೆ ಕೃತ್ಯದಲ್ಲಿ ತನ್ನ ಪಾತ್ರದ ಕುರಿತು ಆತ ಬಹಿರಂಗಪಡಿಸಿದ್ದಾನೆ. ಅಲ್ಲದೆ, ಸಾಹಿಲ್ ಮೊಬೈಲನ್ನು ಜಪ್ತಿ ಮಾಡಿ ಪರಿಶೀಲಿಸಿದಾಗ ರನ್ಯಾ ಹಾಗೂ ಆತನ ನಡುವಿನ ಮಾತುಕತೆ ವಿವರ ಪತ್ತೆಯಾಗಿದೆ ಎನ್ನಲಾಗಿದೆ.
ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಏರ್ಪೋರ್ಟ್ ಸಿಸಿಟೀವಿ ದೃಶ್ಯಾವಳಿ ಸಂಗ್ರಹಿಸಿಡಲು ಹೈಕೋರ್ಟ್ ಸೂಚನೆ
ದುಬೈನಿಂದ ಕಳ್ಳ ಮಾರ್ಗದಲ್ಲಿ ರಾಜ್ಯಕ್ಕೆ ರನ್ಯಾ ತರುತ್ತಿದ್ದ ಚಿನ್ನ ಸಾಹಿಲ್ ಮೂಲಕ ವಿಲೇವಾರಿಯಾಗುತ್ತಿತ್ತು. ಇನ್ನು, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಸಾಹಿಲ್ ಕುಟುಂಬ ಸಹ ಚಿನ್ನಾಭರಣ ಮಾರಾಟ ಮಳಿಗೆ ಹೊಂದಿದೆ. ತಮ್ಮ ಅಂಗಡಿ ಮಾತ್ರವಲ್ಲದೆ ಬೇರೆ ವ್ಯಾಪಾರಿಗಳಿಗೆ ರನ್ಯಾರವರಿಂದ ಪಡೆದ ಚಿನ್ನವನ್ನು ಸಾಹಿಲ್ ಮಾರಾಟ ಮಾಡಿಸುತ್ತಿದ್ದ. ಹೀಗಾಗಿ, ದುಬೈನಿಂದ ಚಿನ್ನ ತೆಗೆದುಕೊಂಡು ಬರುವ ವೇಳೆ ರನ್ಯಾ ಆತನಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿದ್ದಳು ಎನ್ನಲಾಗಿದೆ.
\ನಟಿ ರನ್ಯಾ ರಾವ್ ಪ್ರೋಟೋಕಾಲ್ ಬಗ್ಗೆ ತಂದೆಗೆ ಗೊತ್ತಿತ್ತು: ಸರ್ಕಾರಕ್ಕೆ ಗೌರವ್ ಗುಪ್ತಾ ವರದಿ
ಹಲವು ವರ್ಷಗಳಿಂದ ಬಳ್ಳಾರಿ ನಗರದಲ್ಲಿ ಚಿನ್ನಾಭರಣ ಮಾರಾಟ ಮಳಿಗೆಯನ್ನು ಸಾಹಿಲ್ ಕುಟುಂಬ ನಡೆಸುತ್ತಿದೆ. ತನ್ನ ಸ್ನೇಹಿತರ ಮೂಲಕ ಆತನಿಗೆ ರನ್ಯಾ ಪರಿಚಯವಾಗಿದೆ. ಹಣದಾಸೆಗೆ ಚಿನ್ನ ಕಳ್ಳ ಸಾಗಣೆ ಕೃತ್ಯಕ್ಕೆ ಆತ ಸಹಕರಿಸಿದ್ದಾನೆ. ಅಂತೆಯೇ ದುಬೈನಿಂದ ಕಳ್ಳ ಮಾರ್ಗದಲ್ಲಿ ಬೆಂಗಳೂರಿಗೆ ಚಿನ್ನ ತರುತ್ತಿದ್ದ ರನ್ಯಾ, ನಂತರ ಸಾಹಿಲ್ ಮೂಲಕ ಆ ಚಿನ್ನವನ್ನು ವಿಲೇವಾರಿ ಮಾಡಿ ಹಣ ಸಂಪಾದಿಸುತ್ತಿದ್ದಳು. ಸಾಹಿಲ್ ಗೂ ಇದರಲ್ಲಿ ಕಮಿಷನ್ ಇದೆ ಎನ್ನಲಾಗಿದೆ.