ಕಣ್ಣಿನಲ್ಲಿ ಕಣ್ಣನ್ನಿಟ್ಟು ಅಪ್ಪಿಕೊಳ್ಳೋ ಒಮ್ಮೆ; ಹೇಳಿ ಬಿಡುವೆ ನೀ ನನಗ್ಯಾರೆಂದು
ಅಪ್ಪುಗೆಯಲ್ಲಿರುವ ಸುಖ ಎಲ್ಲರಿಗೂ ಗೊತ್ತು? ಆದರೆ,ಅಪ್ಪುಗೆಯಲ್ಲಿಯೂ ವಿಧಗಳಿದ್ದು, ವ್ಯಕ್ತಿತ್ವದ ಗುಟ್ಟು ರಟ್ಟು ಮಾಡಬಲ್ಲವು ಎಂಬುದು ತಿಳಿದಿದೆಯಾ?ಇಲ್ಲವಾದ್ರೆ ಒಮ್ಮೆ ಅಪ್ಪಿಕೊಂಡು ಕನ್ಫರ್ಮ್ ಮಾಡ್ಕೊಳ್ಳಿ ನೀವು ಎಂಥವರು ಎಂದು.
ಒಂದು ಅಪ್ಪುಗೆ ಎಷ್ಟೋ ವರ್ಷದ ವೈಮನಸ್ಸನ್ನು ತಣ್ಣಗೆ ಕರಗಿಸಿ ಬಿಡಬಲ್ಲದು. ಅಮ್ಮನ ಅಪ್ಪುಗೆ ಮಮತೆಯ ಅನುಭೂತಿ ನೀಡಿದರೆ,ಅಪ್ಪನ ಅಪ್ಪುಗೆ ಮನಸ್ಸಿನಲ್ಲಿ ಮನೆ ಮಾಡಿರುವ ಅಸುರಕ್ಷಿತ ಭಾವನೆಗಳನ್ನು ದೂರ ಮಾಡುತ್ತದೆ. ಸಂಗಾತಿಯ ಅಪ್ಪುಗೆ ಪ್ರೀತಿಯ ಜೊತೆಗೆ ಭರವಸೆಯ ಭಾವವನ್ನು ಹೊತ್ತು ತರುತ್ತದೆ. ಹೀಗೆ ನಮ್ಮೊಂದಿಗೆ ಸಂಬಂಧ ಬೆಸೆದಿರುವ ವ್ಯಕ್ತಿಗಳ ಅಪ್ಪುಗೆ ನಮಗೆ ಬೇರೆ ಬೇರೆ ಭಾವನೆಗಳನ್ನು ಮೂಡಿಸುತ್ತದೆ. ಅಪ್ಪುಗೆ ನೀಡುವ ನೆಮ್ಮದಿ, ಖುಷಿ ಹಾಗೂ ಸುರಕ್ಷಿತ ಭಾವ ಬದುಕಿಗೊಂದು ಭರವಸೆಯನ್ನು ನೀಡಬಲ್ಲದು. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಅಪ್ಪುಗೆ ಎರಡು ಮನಸ್ಸುಗಳನ್ನು ಬೆಸೆಯುತ್ತದೆ, ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.ಆದ್ರೆ ನಿಮಗೊಂದು ವಿಷಯ ಗೊತ್ತಾ? ಅಪ್ಪುಗೆಯಲ್ಲಿಯೂ ನಾನಾ ವಿಧಗಳಿವೆ.ಪ್ರತಿ ಅಪ್ಪುಗೆಯ ಹಿಂದೆ ಒಂದು ಆಸಕ್ತಿಕರ ಸಂಗತಿ ಅಡಗಿದೆ.ಅದೇನಂತೀರಾ,ನೀವು ಹೇಗೆ ಅಪ್ಪಿಕೊಳ್ಳುತ್ತೀರಿ ಎಂಬುದು ಆ ವ್ಯಕ್ತಿಯೊಂದಿಗಿನ ನಿಮ್ಮ ಸಂಬಂಧವನ್ನು ಸೂಚಿಸುವ ಜೊತೆಗೆ ನಿಮ್ಮ ವ್ಯಕ್ತಿತ್ವದ ಗುಟ್ಟನ್ನು ರಟ್ಟು ಮಾಡಬಲ್ಲದು ಕೂಡ.
ಪ್ರೀತ್ಸೋದು ತಪ್ಪಲ್ಲ; ಆದ್ರೆ ಇದನ್ನ ತಿಳ್ಕೊಳ್ದೆ ಬಿದ್ರೆ ಅದು ತಪ್ಪೇ!
ಅರ್ಧ ಅಪ್ಪಿಕೊಂಡ್ರೆ ಜೊತೆಗಾರ: ಯಾರಾದ್ರೂ ನಿಮ್ಮನ್ನು ಪೂರ್ತಿಯಾಗಿ ತಬ್ಬಿಕೊಳ್ಳದೆ,ಒಂದು ಬದಿಯಿಂದ ಆಲಂಗಿಸಿದ್ರೆ ಅಥವಾ ಅರ್ಧ ತಬ್ಬಿಕೊಂಡ್ರೆ ಆ ವ್ಯಕ್ತಿಗೆ ಮುಜುಗರ ಜಾಸ್ತಿ ಎಂದೋ ಅಥವಾ ಅವರಿಗೆ ನಮ್ಮೊಂದಿಗೆ ಅಷ್ಟೊಂದು ಸಲುಗೆ ಅಥವಾ ಆತ್ಮೀಯತೆ ಇಲ್ಲ ಎಂದೇ ಭಾವಿಸುತ್ತೇವೆ.ಆದರೆ,ವಾಸ್ತವ ಸಂಗತಿನೇ ಬೇರೆ ಕಣ್ರೀ. ಈ ರೀತಿ ಅರ್ಧ ತಬ್ಬಿಕೊಳ್ಳುವುದು ನಿಮ್ಮೊಂದಿಗೆ ಸಹಮತ ಹೊಂದಿರುವ ವ್ಯಕ್ತಿಗಳು ಮಾತ್ರವಂತೆ. ಅಷ್ಟೇ ಅಲ್ಲ,ಪರಸ್ಪರ ಪ್ರೀತಿಸುವ ವ್ಯಕ್ತಿಗಳು ಹೆಚ್ಚಾಗಿ ಅರ್ಧ ತಬ್ಬಿಕೊಳ್ಳುತ್ತಾರಂತೆ. ಈ ರೀತಿ ಅಪ್ಪಿಕೊಳ್ಳುವುದು ಭಾವನಾತ್ಮಕವಾಗಿ ಇಬ್ಬರೂ ಸಂಪರ್ಕ ಹೊಂದಿದ್ದಾರೆ ಎಂಬುದರ ಸಂಕೇತವಂತೆ. ಈ ರೀತಿ ಅಪ್ಪಿಕೊಳ್ಳುವ ವ್ಯಕ್ತಿಗಳು ‘ಫ್ರೆಂಡ್ ಇನ್ ನೀಡ್’ ‘ಪಾರ್ಟನರ್ ಇನ್ ಕ್ರೈಮ್’ ಎನ್ನುವ ರೀತಿಯಲ್ಲಿ ಗಾಢ ಸಂಬಂಧ ಹೊಂದಿರುತ್ತಾರಂತೆ. ಸೋ, ನಿಮ್ಮ ಸಂಗಾತಿಯನ್ನು ಹೇಗೆ ತಬ್ಬಿಕೊಳ್ಳಬೇಕು ಎಂಬುದು ತಿಳಿಯಿತ್ತಲ್ಲ?
ಅಪ್ಪಿಕೊಂಡು ಬೆನ್ನು ಸವರಿದ್ರೆ ಕೇರ್ ಟೇಕರ್: ಜೋರಾಗಿ ಅಳುತ್ತಿರುವ ಮಗುವನ್ನು ತಾಯಿ ಅಪ್ಪಿಕೊಂಡು ಬೆನ್ನು ಸವರಿದ್ರೆ ಸಾಕು, ಆ ಸ್ಪರ್ಶದ ಕಾಳಜಿಯನ್ನು ಅರಿತಂತೆ ಮಗು ತಕ್ಷಣ ಅಳು ನಿಲ್ಲಿಸುತ್ತದೆ. ನೀವು ಕೂಡ ಯಾರನ್ನಾದರೂ ತಬ್ಬಿಕೊಂಡು ಅವರ ಬೆನ್ನು ಸವರಿದ್ರೆ ಅವರ ಕೇರ್ ಟೇಕರ್ ಸ್ಥಾನವನ್ನು ತುಂಬಲು ಬಯಸುತ್ತಿದ್ದೀರಿ ಎಂದೇ ಅರ್ಥ. ಅವರ ಬಗ್ಗೆ ನಿಮಗಿರುವ ಕಾಳಜಿಯನ್ನು ಇದು ತೋರಿಸುತ್ತದೆ.
ದಾಂಪತ್ಯ ಸುಖಕ್ಕೆ ಪ್ರೀತಿಯಲ್ಲಿ ಬೀಳ್ಬೇಡಿ
ಹಿಂದಿನಿಂದ ತಬ್ಬಿಕೊಂಡ್ರೆ ರಕ್ಷಕ: ಸಿನಿಮಾಗಳಲ್ಲಿ ಏನೋ ಕೆಲಸದಲ್ಲಿ ನಿರತಳಾಗಿರುವ ಹೀರೋಯಿನ್ ಅನ್ನು ಹೀರೋ ಹಿಂದಿನಿಂದ ಹೋಗಿ ಅಪ್ಪಿಕೊಳ್ಳುವುದನ್ನು ನೋಡಿರುತ್ತೀರಿ. ನಿಮ್ಮ ಸಂಗಾತಿ ಕೂಡ ಕೆಲವೊಮ್ಮೆ ನಿಮಗೆ ತಿಳಿಯದಂತೆ ಹಿಂದಿನಿಂದ ನಿಮ್ಮನ್ನು ಗಟ್ಟಿಯಾಗಿ ತಬ್ಬಿಕೊಂಡು ಸಪ್ರ್ರೈಸ್ ನೀಡುವ ಅಭ್ಯಾಸ ಹೊಂದಿರಬಹುದು.ಈ ರೀತಿ ಅಪ್ಪಿಕೊಳ್ಳುವ ಮೂಲಕ ಸಂಗಾತಿ ‘ನಾನು ಸದಾ ನಿನಗೆ ಬೆಂಗಾವಲಾಗಿರುತ್ತೇನೆ ಹಾಗೂ ನಿನ್ನನ್ನು ಅಪಾಯಗಳಿಂದ ರಕ್ಷಿಸುತ್ತೇನೆ’ ಎಂಬ ಸಂದೇಶ ರವಾನಿಸುತ್ತಾರಂತೆ. ನೀವು ಕೂಡ ನಿಮ್ಮ ಸಂಗಾತಿಯನ್ನು ಹಿಂದಿನಿಂದ ಅಪ್ಪಿ ಮುದ್ದಾಡುವ ಅಭ್ಯಾಸ ಹೊಂದಿದ್ದರೆ ನೀವು ಅವರ ರಕ್ಷಕನಂತೆ ವರ್ತಿಸಲು ಬಯಸುತ್ತೀರಿ ಎಂದರ್ಥ.
ಕಣ್ಣಿನಲ್ಲಿ ಕಣ್ಣನಿಟ್ಟು ಅಪ್ಪಿಕೊಂಡ್ರೆ ನಿಯತ್ತಿನ ಪ್ರೇಮಿ: ಪ್ರೀತಿಯಲ್ಲಿ ಬಿದ್ದವರು, ಪ್ರೀತಿಯನ್ನು ಸಂಗಾತಿಗೆ ತೋರ್ಪಡಿಸಲು ಯತ್ನಿಸುವವರು ಅಪ್ಪಿಕೊಳ್ಳುವಾಗ ಮರೆಯದೆ ಇಬ್ಬರ ಕಣ್ಣುಗಳು ಕಲೆಯುವಂತೆ ಮಾಡುತ್ತಾರೆ. ಇಬ್ಬರು ಒಬ್ಬರನ್ನೊಬ್ಬರು ದಿಟ್ಟಿಸುತ್ತ ಅಪ್ಪಿಕೊಳ್ಳುವ ಮೂಲಕ ಮನಸ್ಸಿನಾಳಕ್ಕೆ ಇಳಿಯಲು ಪ್ರಯತ್ನಿಸುತ್ತಾರೆ. ಈ ರೀತಿ ಅಪ್ಪಿಕೊಳ್ಳುವ ವ್ಯಕ್ತಿ ತನ್ನ ಪ್ರೀತಿಯೆಡೆಗೆ ನಿಯತ್ತನ್ನು ಹೊಂದಿರುತ್ತಾನೆ. ಜೊತೆಗೆ ಇಂಥವರು ಸಂಬಂಧದಲ್ಲಿ ಗಾಢ ಪ್ರೀತಿ ಹಾಗೂ ಸ್ಥಿರತೆಯನ್ನು ಬಯಸುತ್ತಾರೆ.
ಪ್ರೇಮಿಯ ಮೇಲೆ ಅತಿಯಾದ ಅವಲಂಬನೆ ಒಳ್ಳೇದಲ್ಲ
ಉಸಿರುಕಟ್ಟಿಸುವಂತೆ ತಬ್ಬಿಕೊಂಡ್ರೆ ಅಭದ್ರತೆ: ಕೆಲವರು ಎಷ್ಟು ಬಿಗಿಯಾಗಿ ತಬ್ಬಿಕೊಳ್ಳುತ್ತಾರಂದ್ರೆ ಉಸಿರಾಡಲು ಕಷ್ಟವಾಗುತ್ತದೆ. ಅವರ ಹಿಡಿತದಿಂದ ತಪ್ಪಿಸಿಕೊಳ್ಳುವುದು ಕಷ್ಟವೆಂಬುಷ್ಟು ಬಿಗಿಯಾಗಿರುತ್ತದೆ ಅಪ್ಪುಗೆ. ‘ಡೆಡ್‍ಲಾಕ್’ ಎಂದು ಕೂಡ ಕರೆಯಲಾಗುವ ಈ ಅಪ್ಪುಗೆ ಅಭದ್ರತೆಯ ಸಂಕೇತವಾಗಿದೆ. ನಿನ್ನನ್ನು ನಾನು ಎಂದಿಗೂ ದೂರವಾಗಲು ಬಿಡಲಾರೆ ಎಂಬಂತಹ ಅಪ್ಪುಗೆಯ ಅರ್ಥ ನಿಮ್ಮ ಸಂಗಾತಿ ನಿಮ್ಮನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಕೆಲವರು ಸಂಗಾತಿಯನ್ನು ಎಲ್ಲಿ ಕಳೆದುಕೊಂಡು ಬಿಡುವೇನು ಎಂದು ಮನಸ್ಸಿನಲ್ಲಿ ಮೂಡಿರುವ ಅಭದ್ರತೆಯ ಭಾವನೆಯನ್ನು ಬಿಗಿಯಾಗಿ ಅಪ್ಪಿಕೊಳ್ಳುವ ಮೂಲಕ ತೋರ್ಪಡಿಸುತ್ತಾರೆ.