ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲವಾ? ಈ ಸಿಂಪಲ್ ಡೇಟಿಂಗ್ ಪ್ಲ್ಯಾನ್ಸ್ ಟ್ರೈ ಮಾಡಿ
ಉದ್ಯೋಗಸ್ಥ ದಂಪತಿ ವೀಕೆಂಡ್‍ಗಳಲ್ಲಿ ಡೇಟಿಂಗ್‍ಗೆಂದು ಹೊರಗಡೆ ಹೋದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಜೊತೆಗೆ ನಿತ್ಯದಂತೆ ಟ್ರಾಫಿಕ್ ಕಿರಿಕಿರಿ ಕಾಡಿ ಟೈಮ್ ಕೂಡ ವೇಸ್ಟ್. ಇದರ ಬದಲು ಪ್ಲ್ಯಾನ್ ಮಾಡಿದ್ರೆ ಮನೆಯಲ್ಲೇ ರೊಮ್ಯಾಂಟಿಕ್ ವೀಕೆಂಡ್ ಎಂಜಾಯ್ ಮಾಡಬಹುದು.
ಇಂದು ಸಂಸಾರದ ಬಂಡಿ ಸಾಗಲು ಗಂಡ-ಹೆಂಡತಿ ಇಬ್ಬರೂ ದುಡಿಯಲೇಬೇಕಾದಂತಹ ಅನಿವಾರ್ಯತೆಯಿದೆ. ಬೆಳಗ್ಗೆ ಮನೆ ಬಿಟ್ಟರೆ ಮತ್ತೆ ಇಬ್ಬರೂ ಮುಖಾಮುಖಿಯಾಗುವುದು ರಾತ್ರಿಯೇ. ಕೆಲವು ಮನೆಗಳಲ್ಲಿ ಒಬ್ಬರಿಗೆ
ಮಾರ್ನಿಂಗ್ ಶಿಫ್ಟ್ ಆದ್ರೆ ಇನ್ನೊಬ್ಬರಿಗೆ ನೈಟ್ ಶಿಫ್ಟ್. ಇವರಿಬ್ಬರೂ ಸರಿಯಾಗಿ ಒಬ್ಬರ ಮುಖ ಇನ್ನೊಬ್ಬರು ನೋಡುವುದು ವೀಕೆಂಡ್‍ಗಳಲ್ಲೇ. ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಪ್ರಮಾಣ ಹೆಚ್ಚಾಗಲೂ ಇಂಥ ಜೀವನಶೈಲಿಯೂ
ಒಂದು ಕಾರಣ ಎನ್ನುತ್ತದೆ ಮನೋವಿಜ್ಞಾನ. ಹಾಗಂತ ಸಂಬಂಧವನ್ನು ಸುಧಾರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಉದ್ಯೋಗಕ್ಕೆ ರಾಜೀನಾಮೆ ನೀಡಲು ಸಾಧ್ಯವೆ? ಉದ್ಯೋಗ ಕೂಡ ಅನಿವಾರ್ಯ. ಇನ್ನು ವೀಕೆಂಡ್‍ಗಳಲ್ಲಿ
ಹೊರಗೆಲ್ಲೋ ಸುತ್ತಾಡಿಕೊಂಡು ಹೋಟೆಲ್‍ನಲ್ಲಿ ಊಟ ಮಾಡಿಕೊಂಡು ರೋಮ್ಯಾಂಟಿಕ್ ಆಗಿ ದಿನ ಕಳೆಯೋಣ ಎಂದರೆ ಕೆಲವರಿಗೆ ಬಜೆಟ್ ಪ್ರಾಬ್ಲಂ ಎದುರಾಗಬಹುದು. ಇಂಥ ಪರಿಸ್ಥಿತಿಯಲ್ಲಿ ಸಂಸಾರದಲ್ಲಿ ರೊಮ್ಯಾನ್ಸ್
ಉಳಿಸಿಕೊಳ್ಳುವುದು ಹೇಗೆ?
1. ಜೊತೆಯಾಗಿ ಸಿದ್ಧಪಡಿಸಿ ನಳಪಾಕ: ರೊಮ್ಯಾನ್ಸ್ ಬೆಡ್‍ರೂಮ್‍ಗೆ ಮಾತ್ರ ಸೀಮಿತವಾಗಿಲ್ಲ. ಅಡುಗೆ ಮನೆಯಲ್ಲೂ ನಿಮ್ಮ ಪ್ರೀತಿಯ ನೈವೇದ್ಯವನ್ನು ಸಂಗಾತಿಗೆ ಉಣಬಡಿಸಬಹುದು. ವೀಕೆಂಡ್‍ನ ಒಂದು ರಾತ್ರಿ ಇಬ್ಬರೂ
ಜೊತೆಯಾಗಿ ಸ್ಪೆಷಲ್ ಅಡುಗೆ ಸಿದ್ಧಪಡಿಸಿ. ಜಾಸ್ತಿ ಸಮಯ ತೆಗೆದುಕೊಳ್ಳುವ ಖಾದ್ಯಗಳಿಗಿಂತ ಸಿಂಪಲ್ ಆಗಿರುವ ರೆಸಿಪಿಗಳಿಗೆ ಆದ್ಯತೆ ನೀಡಿ. ಈ ಸಮಯದಲ್ಲಿ ಒಬ್ಬರಿಗೊಬ್ಬರು ನೆರವು ನೀಡುವ ಜೊತೆಗೆ ಬೇರೆ ಬೇರೆ ವಿಷಯಗಳ
ಬಗ್ಗೆ ಮಾತನಾಡಲು ಕೂಡ ಸಾಧ್ಯವಾಗುತ್ತದೆ. ಇದರಿಂದ ಮನಸ್ಸು ಹಗುರವಾಗುವ ಜೊತೆಗೆ ಅಡುಗೆ ಕೆಲಸ ಮುಗಿದ್ದಿದ್ದೇ ತಿಳಿಯುವುದಿಲ್ಲ. ಅಷ್ಟೇ ಅಲ್ಲ, ನೀವು ಸಿದ್ಧಪಡಿಸಿದ ಖಾದ್ಯಗಳು ಹಿಂದೆಂದಿಗಿಂತಲೂ ಸೂಪರ್
ಟೇಸ್ಟಿಯಾಗಿರುತ್ತವೆ.
ನಲ್ಮೇಯ ಮಾತಿಗೆ ಹಿರಿ ಹಿರಿ ಹಿಗ್ಗುವ ಹಿರಿಯರು
2. ಕ್ಯಾಂಡಲ್ ಲೈಟ್ ಡಿನ್ನರ್: ಸ್ಪೆಷಲಾಗಿ ಅಡುಗೆಯೇನೂ ಸಿದ್ಧಪಡಿಸಿರುತ್ತೀರಿ, ಅದನ್ನು ಸವಿಯಲು ರೊಮ್ಯಾಂಟಿಕ್ ಮೂಡ್ ಕ್ರಿಯೇಟ್ ಮಾಡುವುದು ಬೇಡ್ವಾ? ಹೋಟೆಲ್ಗೆ ಹೋಗಿ ಸಾವಿರಾರು ರೂಪಾಯಿ ಕೊಟ್ಟು ಕ್ಯಾಂಡಲ್
ಲೈಟ್ ಡಿನ್ನರ್ ಮಾಡುವ ಬದಲು ನಿಮ್ಮ ಮನೆಯಲ್ಲೇ ಏಕೆ ಅಂಥ ವಾತಾವರಣವನ್ನು ಸೃಷ್ಟಿಸಬಾರದು. ಡೈನಿಂಗ್ ಟೇಬಲ್ ಸುತ್ತ ಬಣ್ಣ ಬಣ್ಣದ ಕ್ಯಾಂಡಲ್‍ಗಳನ್ನು ಹಚ್ಚಿ, ಮನೆಯ ಲೈಟ್‍ಗಳನ್ನು ಆಫ್ ಮಾಡಿ ಇಬ್ಬರೂ ಜೊತೆಯಾಗಿ
ಕುಳಿತು ಪ್ರೀತಿಯ ಮಾತುಗಳನ್ನಾಡುತ್ತ ಊಟ ಮಾಡಿ.
3.ಹೋಂ ಥಿಯೇಟರ್‍ನಲ್ಲಿ ಮೂವೀ ವೀಕ್ಷಣೆ: ರಜೆ ಇರುವಾಗ ಮನೆಯಲ್ಲೇ ಕುಳಿತು ಇಬ್ಬರೂ ಇಷ್ಟಪಡುವ ಸಿನಿಮಾವನ್ನು ವೀಕ್ಷಿಸಿ. ಈ ದಿನ ಅಡುಗೆ, ಕ್ಲೀನಿಂಗ್ ಮುಂತಾದ ಕೆಲಸಗಳಿಂದ ಬಿಡುವು ಪಡೆಯಿರಿ. ಹೋಟೆಲ್
ಅಥವಾ ಆನ್‍ಲೈನ್ ಮೂಲಕ ಫುಡ್ ಆರ್ಡರ್ ಮಾಡಿ. ಇದರಿಂದ ಫ್ರಿಯಾಗಿ ಕುಳಿತು ನಿಮ್ಮಿಷ್ಟದ ಸಿನಿಮಾ ನೋಡಲು ಸಾಧ್ಯವಾಗುತ್ತದೆ.
4.ಮನೆಯಲ್ಲೊಂದು ಸ್ಪಾ ಸೆಂಟರ್: ಸ್ಪಾ ಸೆಂಟರ್‍ಗೆ ಹೋಗಿ ಮಸಾಜ್ ಮಾಡಿಕೊಳ್ಳಲು ಸಮಯ ಹಾಗೂ ದುಡ್ಡು ಎರಡೂ ಬೇಕು. ಅದೇ ಮನೆಯಲ್ಲೇ ಸ್ಪಾ ಮಾಡಿಕೊಂಡರೆ ಪ್ರೀತಿ ಹೆಚ್ಚುವ ಜೊತೆಗೆ ದೇಹ ಮತ್ತು ಮನಸ್ಸು
ಎರಡೂ ರಿಲಾಕ್ಸ್ ಆಗುತ್ತವೆ. ಮಸಾಜ್‍ಗೆ ಬೇಕಾಗಿರುವ ಮಾಸ್ಕ್ ಗಳು, ಸ್ಕ್ರಬ್ ಗಳು ಶಾಪ್‍ಗಳಲ್ಲಿ ಸಿಗುತ್ತವೆ. ಅವನ್ನು ಖರೀದಿಸಿ ತಂದು ವೀಕೆಂಡ್‍ನಲ್ಲಿ ಮನೆಯಲ್ಲೇ ನಿಮ್ಮದೊಂದು ಸ್ಪಾ ಸೆಂಟರ್ ತೆರೆಯಿರಿ.
ಕನಸಿನಲ್ಲಿ ಹಳೇ ಪ್ರೇಮಿ ಕಾಡಲು ಕಾರಣವೇನು ಗೊತ್ತಾ?
5.ನೆನಪುಗಳ ಮಾತೇ ಮಧುರ: ಹಿಂದಿನ ನೆನಪುಗಳು ಮನಸ್ಸಿಗೆ ಹಿತ ನೀಡುತ್ತವೆ. ಅಷ್ಟೇ ಅಲ್ಲ, ಸಂಬಂಧವನ್ನು ಮತ್ತಷ್ಟು ಗಾಢಗೊಳಿಸುತ್ತವೆ ಕೂಡ. ವೀಕೆಂಡ್ ರಾತ್ರಿ ಇಬ್ಬರೂ ಒಂದೆಡೆ ಕುಳಿತು ಮದುವೆಗೆ ಮುನ್ನ
ನಿಮ್ಮಿಬ್ಬರ ಭೇಟಿ, ಮದುವೆ, ಹನಿಮೂನ್, ನೀವು ಸುತ್ತಾಡಿದ ಜಾಗಗಳ ಕುರಿತ ಹಳೆಯ ನೆನಪುಗಳನ್ನು ಪರಸ್ಪರ ಹಂಚಿಕೊಳ್ಳಿ. ಮದುವೆಯ ಫೋಟೋಗಳು, ವಿಡಿಯೋವನ್ನು ನೋಡಿ. ಆ ಸಂದರ್ಭದಲ್ಲಿನ ಘಟನೆಗಳು, ಸುಮಧುರ
ಕ್ಷಣಗಳು ನಿಮ್ಮಿಬ್ಬರನ್ನು ಮತ್ತಷ್ಟು ಹತ್ತಿರವಾಗಿಸುತ್ತವೆ. ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನೊಳಗೆ ಸಂಗಾತಿಯ ಕುರಿತಂತೆ ಬೆಚ್ಚಗೆ ಮಲಗಿರುವ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.
6.ಇಷ್ಟದ ಮ್ಯೂಸಿಕ್‍ಗೆ ಹೆಜ್ಜೆ ಸೇರಿಸಿ: ವೀಕೆಂಡ್ ರಾತ್ರಿಗಳಲ್ಲಿ ಇಬ್ಬರೂ ಇಷ್ಟಪಡುವ ಮ್ಯೂಸಿಕ್‍ಗೆ ಹೆಜ್ಜೆ ಹಾಕಿ. ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ನೀವಿಬ್ಬರೂ ದೈಹಿಕವಾಗಿ ಒಬ್ಬರಿಗೊಬ್ಬರು ಹತ್ತಿರವಾಗುವ ಕಾರಣ
ಪ್ರೀತಿಸಲು ಮತ್ತೊಮ್ಮೆ ಕಾರಣ ಸಿಗುತ್ತದೆ.