Asianet Suvarna News Asianet Suvarna News

ಏರ್‌ಪೋರ್ಟ್‌ ಹೋಟೆಲಿಗೆ ಹೋಗೋ ಮುನ್ನ ಪರ್ಸ್‌ ನೋಡಿಕೊಳ್ಳಿ!

ಮೊದಲ ಬಾರಿ ವಿಮಾನಯಾನ ಮಾಡ್ತಿರೋರಿಗೆ ಶಾಕ್‌ ಕೊಡೋದು ವಿಮಾನ ನಿಲ್ದಾಣದಲ್ಲಿರುವ ಹೊಟೇಲ್‌ಗಳು. ಸೆಕ್ಯೂರಿಟಿ ಚೆಕ್‌ಇನ್‌ ಆದಮೇಲೆ ಫ್ಲೈಟ್‌ ಬರೋದಕ್ಕೆ ಗಂಟೆಗಟ್ಟಲೆ ಕಾಯುವಾಗ ಅಪ್ಪಿತಪ್ಪಿ ಇಲ್ಲಿರುವ ಹೊಟೇಲ್‌ಗಳತ್ತ ಹಾದಿರೋ, ಪರ್ಸು ಖಾಲಿಯಾಗೋದು ಗ್ಯಾರೆಂಟಿ.

Airport hotel thrice time costlier than other hotel
Author
Bengaluru, First Published Sep 23, 2019, 4:59 PM IST

ಮೊದಲ ಬಾರಿಗೆ ಒಂದು ಕೆಲಸದ ನಿಮಿತ್ತ ದೂರದ ದೆಹಲಿಗೆ ಹೋಗಬೇಕಿತ್ತು. ಬೆಳಗ್ಗೆ 5 ಗಂಟೆಗೇ ಫ್ಲೈಟ್‌ ಇದ್ದಿದ್ದರಿಂದ ಗಡಿಬಿಡಿಯಲ್ಲಿ ಏನೂ ತಿಂಡಿ ಮಾಡಿಕೊಳ್ಳುವುದಕ್ಕೆ ಆಗಲಿಲ್ಲ. ಏರ್‌ಪೋರ್ಟ್‌ನಲ್ಲಿ ಹೋಟೆಲ್‌ ಜೊತೆಗೆ ಬಟ್ಟೆ, ಪುಸ್ತಕ ಹೀಗೆ ನಾನಾ ರೀತಿಯ ಮಳಿಗೆಗಳಿರುತ್ತೆ ಎಂದು ನನ್ನ ಸ್ನೇಹಿತರು ಹೇಳಿದ್ದರು.

ಮೊದಲ ಬಾರಿ ಹೋಗುತ್ತಿದ್ದರಿಂದ ಟೈಂ ಬೇರೆ ಇರದಿದ್ದ ಕಾರಣ ಏರ್‌ಪೋರ್ಟ್‌ನಲ್ಲಿ ತಿಂಡಿ ತಿನ್ನೋಣ ಎಂದು ನಡೆದೆ. ಚೆಕ್ಕಿಂಗ್‌ ಎಲ್ಲಾ ಮುಗಿದಿತ್ತು, ನನ್ನ ಫ್ಲೈಟ್‌ಗೆ ಇನ್ನೂ ಸಮಯ ಇದ್ದಿದ್ದರಿಂದ ಹೊಟ್ಟೆಗೆ ಏನಾದರೂ ಹಾಕಿಕೊಂಡು ಹೋಗೋಣ ಎಂದು ಹೋಟೆಲ್‌ಗೆ ಹೋದೆ. ಹೀಗೆ ಹೋದಾಗ ನನಗೆ ಅಲ್ಲಿ ಅಚ್ಚರಿಯ ಕಾದಿತ್ತು.

ಬಂದೇ ಬಿಡ್ತು ದಸರಾ; ರಜೆ ಮಜಾ ಮಾಡಲು ಓಕಿನಾವಾಗೆ ಪ್ರವಾಸ ಹೋಗಲು ರೆಡಿಯಾಗಿ!

ನಾನು ನಗರದೊಳಗಿನ ಹೋಟೆಲ್‌ಗೆ ಹೋದಾಗ ರು. 20ರಿಂದ 30 ಕೊಟ್ಟು ದೋಸೆ ತಿಂದಿದ್ದುಂಟು. ಆದರೆ ಏರ್‌ಪೋರ್ಟ್‌ನ ಹೋಟೆಲ್‌ನಲ್ಲಿ ಒಂದು ದೋಸೆಗೆ ರು.100 ದಾಟಿತ್ತು. ಹೋಗಲಿ ಕಾಫಿನಾದರೂ ಕುಡಿಯೋಣ ಎಂದರೆ, ರು.10ಕ್ಕೆ ಸಿಗುವ ಕಾಫಿ ಅಲ್ಲಿ ರು. 90ರಿಂದ 150ಕ್ಕೆ ಇತ್ತು. ಅಲ್ಲಿನ ಮೆನುವಿನಲ್ಲಿ ತಿಂಡಿಗಳಿಗೆ ನಿಗದಿ ಪಡಿಸಿದ್ದ ಬೆಲೆ ನೋಡಿ ದಂಗಾಗಿ ಪರ್ಸ್‌ನ್ನು ಭದ್ರವಾಗಿ ಕೈನಲ್ಲಿಟ್ಟುಕೊಂಡು ಹಾಗೇ ಮರಳಿದೆ.

ಏರ್‌ಪೋರ್ಟ್‌ಗಳು ನಗರದಲ್ಲಿನ ಮಾಲ್‌ಗಿಂತ ಏನು ಕಡಿಮೆ ಇಲ್ಲ. ಅಟ್‌ಲೀಸ್ಟ್‌ ಮಾಲ್‌ಗಳಾದರೂ ಬೇಕು ಏರ್‌ಪೋರ್ಟ್‌ ಬೇಡ. ಹೊಟ್ಟೆಗೆ ಬಿಟ್ಟುಕೊಳ್ಳಲು ಹೋಟೆಲ್‌ಗೇನಾದರೂ ಹೋದರೆ ಒಂದು ನಿಮ್ಮ ಪರ್ಸ್‌ನಲ್ಲಿ ದುಡ್ಡು ಇರಬೇಕು, ಇಲ್ಲ ಫ್ಲೈಟ್‌ನಲ್ಲಿ ಸಿಗುವ ಇನ್‌ಸ್ಟೆಂಟ್‌ ಫುಡ್‌ ತಿನ್ನಬೇಕು. ಅದೂ ಬೇಡ ಎಂದರೆ ಹಸಿದುಕೊಂಡು ಹಾಗೇ ಇರಬೇಕು.

ವನ್‌ ಟು ತ್ರಿಬಲ್‌ ಬೆಲೆ ನಿಗದಿಸುವ ಈ ಏರ್‌ಪೋರ್ಟ್‌ಗಳಲ್ಲಿ ಅಂತಹ ವೈಶಿಷ್ಟ್ಯವೇನೂ ಇರೋದಿಲ್ಲ. ಆದರೆ ಸಾಮಾನ್ಯ ಜನ ಇಷ್ಟೊಂದು ಹಣ ತೆತ್ತು ಅವರನ್ನು ಉದ್ದಾರ ಮಾಡುತ್ತಿರುವ ಹಿಂದೆ ಬಹಳ ಕಾರಣಗಳಿವೆ. ಈ ರೂಲ್ಸ್‌ ಅಲ್ಲಷ್ಟೇ ಏಕೆ, ಎಲ್ಲೂ ಇಲ್ಲದ ಕೊಳ್ಳೆ ಹೊಡೆಯುವ ಪದ್ಧತಿ ಇಲ್ಯಾಕೆ ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಜಗತ್ತಿನ ಮೈ ನವಿರೇಳಿಸುವ ಹೋಟೆಲ್ ಪೂಲ್‌ಗಳಿವು!

ಬೆಲೆ ಏರಿಕೆ ಏರ್‌ಪೋರ್ಟ್‌ನಲ್ಲಷ್ಟೇ ಏಕೆ? ನಿಮಗೆ ಗೊತ್ತಿರಲಿ ಈ ಅಂಶಗಳು

* ದೆಹಲಿ, ಬೆಂಗಳೂರು, ಮುಂಬೈ, ಚೆನ್ನೈ ಹೀಗೆ ಬಹುತೇಕ ಏರ್‌ಪೋರ್ಟ್‌ನಲ್ಲಿ ಹೊಟೆಲ್‌ಗಳನ್ನು ನಡೆಸುತ್ತಿರುವವರು ಖಾಸಗಿಯವರು. ಅಲ್ಲಿನ ಹೋಟೆಲ್‌ ತೆರೆಯಲು ಬಾಡಿಗೆ, ನಿರ್ವಹಣೆ, ಕೆಲಸಗಾರರಿಗೆ ವೇತನ, ಪದಾರ್ಥಗಳು, ಕುಡಿಯುವ ನೀರಿನ ಬಾಟಲ್‌, ಅಷ್ಟೇ ಅಲ್ಲದೆ ಇತರೆ ಹೋಟೆಲ್‌ ಜೊತೆಗಿನ ಪೈಪೋಟಿ, ಟ್ರಾನ್ಸ್‌ಪೋರ್ಟ್‌ ಚಾಜ್‌ರ್‍ ಹೀಗೆ ಎಲ್ಲಾ

ರೀತಿಯ ವೆಚ್ಚಗಳನ್ನು ಈ ತಿಂಡಿಗಳ ಬೆಲೆಗಳ ಮೇಲೆ ಅಳವಡಿಸುತ್ತಾರೆ. ತಾವು ಹಾಕಿದ ಬಂಡವಾಳವನ್ನು ಈ ರೀತಿಯಲ್ಲಿ ವಸೂಲಿ ಮಾಡಿಕೊಳ್ಳುತ್ತಾರೆ.

* ಸಾಮಾನ್ಯವಾಗಿ ಎಲ್ಲಾ ಏರ್‌ಪೋರ್ಟ್‌ಗಳ ಅಂಗಡಿಗಳಲ್ಲಿ ಕನಿಷ್ಠ ಮಟ್ಟಕ್ಕಿಂತ ಬೆಲೆ ಹೆಚ್ಚಾಗಿರುತ್ತೆ. ಅದರಲ್ಲೂ ಹೋಟೆಲ್‌ನಲ್ಲಿ ಇನ್ನೂ ಜಾಸ್ತಿಯೇ. ದೆಹಲಿಯಂತಹ ಏರ್‌ಪೋರ್ಟ್‌ನಲ್ಲಿ ಮಳಿಗೆಯ ಬಾಡಿಗೆ ಹೆಚ್ಚು, ಇದರ ಜೊತೆಗೆ ಅರ್ಹತೆಗೆ ಅನುಗುಣವಾಗಿ ಕೆಲಸಗಾರರನ್ನು ತೆಗೆದುಕೊಳ್ಳುವುದು ಇರುತ್ತೆ. ಹೋಟೆಲ್‌ ಒಳಾಂಗಣ ನಿರ್ವಹಣೆಗಿಂತ ಹೊರಗಿನ ಕ್ಲೀನಿಂಗ್‌ಗೆ ಹೆಚ್ಚಾಗಿರುತ್ತೆ. ಅದನ್ನೂ ವಸೂಲಿ ಮಾಡಲು ಗ್ರಾಹಕರ ಜೇಬಿಗೆ ಕತ್ತರಿ ಹಾಕಿ ಸಮನಾಗಿಸುತ್ತಾರೆ ಹೊಟೇಲ್‌ ಮಾಲಿಕರು.

* ಅಲ್ಲಿ ಸಿಗುವ ನೀರು ಮಾಮೂಲಿ ನೀರಲ್ಲ. ಎಲ್ಲವೂ ಮಿನರಲ್‌ ವಾಟರ್‌. ಬೇಕೆಂದರೆ ಬಾಟಲ್‌ ವಾಟರ್‌ ಸಹ ಸಿಗುತ್ತೆ. ಅದರ ಮೂಲ ಬೆಲೆ ಅಂದರೆ ಎಂಆರ್‌ಪಿ ಬೆಲೆಗಿಂತ ಒಂದು ರು.30 ಆದರೂ ಹೆಚ್ಚಾಗಿ ಇರುತ್ತೆ. ಇಷ್ಟೇ ಅಲ್ಲ ಲೇಸ್‌, ಕುರ್‌ಕುರೆಯಂಥಾ ಪ್ಯಾಕೆಟ್‌ ಸ್ನಾ್ಯಕ್ಸ್‌ಗೂ ಬೆಲೆ ಹೆಚ್ಚು. ರು.20 ಇರುವ ಲೇಸ್‌ ಪ್ಯಾಕೆಟ್‌ಗೆ ರು. 35 ನೀಡಿ ಕೊಂಡುಕೊಳ್ಳಬೇಕಾಗುತ್ತೆ. ಬಿಸ್ಕೆಟ್‌, ಜ್ಯೂಸ್‌, ಕುರುಕಲು ತಿಂಡಿಗಳು ಇದೆಲ್ಲಾ ಒಂದಕ್ಕೊಂದು ಚೈನ್‌ ಲಿಂಕ್‌ ಇದ್ದಂತೆ.

* ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಏರುಪೇರು ಆಗುತ್ತಲೇ ಇರುತ್ತೆ. ಹೀಗಾದಾಗಲೆಲ್ಲ, ತಿಂಡಿಗಳ ಮೇಲೆ ಬೆಲೆ ಆಗಿಂದಾಗ್ಗೆ ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ಏರ್‌ಪೋರ್ಟ್‌ನಲ್ಲಿ ಎಲ್ಲಾ ಹೋಟೆಲ್‌ಗಳು ಮಾತನಾಡಿಕೊಂಡು ಒಂದು ಫಿಕ್ಸೆಡ್‌ ಬೆಲೆ ನಿಗದಿಸುತ್ತವೆ. ಅದು ಮಾರ್ಕೆಟ್‌ ಟು ಹೋಟೆಲ್‌ ಟ್ರಾನ್ಸ್‌ಪೋರ್ಟ್‌ ಚಾಜ್‌ರ್‍ ಸಹ ಸೇರಿರುತ್ತೆ.

* ಅಡಿಗೆ ಕೋಣೆಯಲ್ಲಿ ತಯಾರಾಗುವ ಅಡಿಗೆಗಳಿಗೆ ಬೇಕಾದ ಪದಾರ್ಥಗಳು, ಅವುಗಳ ಟ್ರಾನ್ಸ್‌ಪೋರ್ಟ್‌, ಮಾಡುವವರ ಶ್ರಮ, ಗ್ಯಾಸ್‌ ಸಿಲಿಂಡರ್‌ ಹೀಗೆ ಎಲ್ಲವನ್ನೂ ಸೇರಿಸಿ ಗ್ರಾಹಕರಿಗೆ ಒಂದು ನಿಗದಿತ ಬೆಲೆಯಲ್ಲಿ ತಿಂಡಿ ನೀಡುತ್ತಾರೆ.

* ಏರ್‌ಪೋರ್ಟ್‌ ಎಂದ ಮೇಲೆ ಫ್ಲೈಟ್‌ಗಳ ಹಾರಾಟದ ಸಮಯ ಬೇರೆಯಾಗಿರುತ್ತೆ. ಪ್ರಯಾಣಿಕರು ಇದ್ದೇ ಇರುತ್ತಾರೆ. ಹೀಗಿರುವಾಗ ಏಪೋರ್ಟ್‌ 24*7 ಕೆಲಸ ಮಾಡುತ್ತಲೇ ಇರುತ್ತೆ. ಅದಕ್ಕೆ ಕರೆಂಟ್‌, ನೀರು, ನಿರ್ವಹಣೆ ಎಲ್ಲದೂ ಸೇರಿ ಗ್ರಾಹಕರ ಹೊಟ್ಟೆಗೆ ಹೊಡೆಯುತ್ತಾರೆ ಈ ಹೋಟೆಲ್‌ನ ಮಾಲೀಕರು.

ಯಾವುದರ ಬೆಲೆ ಕಡಿಮೆ?

ಏರ್‌ಪೋರ್ಟ್‌ನಲ್ಲಿ ಕೇವಲ ಆಹಾರ, ತಿಂಡಿ ತಿನಿಸುಗಳಷ್ಟೇ ಸಿಗುವುದಿಲ್ಲ. ಬದಲಾಗಿ ಅಲ್ಲಿ ಹಲವಾರು ಬ್ರ್ಯಾಂಡೆಡ್‌ ಕಂಪನಿಗಳ ಬಟ್ಟೆಅಂಗಡಿಗಳು, ಮಕ್ಕಳ ಆಟಿಕೆ, ಪುಸ್ತಕ, ಆಭರಣ ಹೀಗೆ ನಾನಾ ಮಳಿಗೆಗಳು ಇರುತ್ತವೆ. ಹಾಗಾದರೆ ಇವುಗಳಿಗೂ ಹೋಟೆಲ್‌ನಲ್ಲಿ ಇದ್ದಂತೆ ಬೆಲೆ ಹೆಚ್ಚಳವೇ ಎಂದು ಪ್ರಶ್ನಿಸಿದರೆ, ಉತ್ತರ ಇಲ್ಲ. ಹೌದು ಆಹಾರಕ್ಕೆ ಹೋಲಿಸಿದರೆ ಇಲ್ಲಿ ಸಿಗುವ ಬಟ್ಟೆ, ಪುಸ್ತಕದಂತಹ ವಸ್ತುಗಳಿಗೆಲ್ಲಾ ಬೆಲೆ ಕಡಿಮೆಯೇ ಇರುತ್ತೆ. ಜಾಗಕ್ಕೆ ಅನುಗುಣವಾಗಿ ಎಲ್ಲಾ ಅಂಗಡಿಗಳೂ ಒಂದೇ ರೀತಿಯ ಬೆಲೆಯನ್ನು ಕಾಯ್ದುಕೊಂಡಿವೆ. ಅಲ್ಲದೆ ಮೂಲ ಬೆಲೆಯಲ್ಲಿ ಮಾರಾಟವಾಗುತ್ತವೆ.

ದರ ನಿಗದಿ ಹೀಗೆ

ಬಟ್ಟೆ, ಪುಸ್ತಕ ಇಂತಹ ಮಳಿಗೆಗಳಿಗೆ ಹೋಲಿಸಿದರೆ ಹೋಟೆಲ್‌ ರೆಸ್ಟೊರೆಂಟ್‌ಗಳಲ್ಲಿ ಶ್ರಮ ಹಾಗೂ ಕೆಲಸಗಳು ಹೆಚ್ಚು. ಏರ್‌ಪೋರ್ಟ್‌ 24*7 ಕಾರ್ಯ ನಿರ್ವಹಿಸುತ್ತವೆ. ಮೊದಲೇ ಹೇಳಿದಂತೆ ಮೇಂಟೆನೆನ್ಸ್‌ ಚಾಜ್‌ರ್‍ನಿಂದ ಹಿಡಿದು ವಿದ್ಯುತ್‌ವರೆಗೂ ಬಾಡಿಗೆ ನೀಡಬೇಕಾಗುತ್ತದೆ. ಅಲ್ಲದೆ ಪುಸ್ತಕ ಬಟ್ಟೆಮಳಿಗೆಗಳಲ್ಲಿ ಒಮ್ಮೆ ಬಂದ ಸರಕು ರಾರ‍ಯಕ್‌ ಸೇರಿದ ಮೇಲೆ ಅದು ಖಾಲಿಯಾದ ಮೇಲೆಯೇ ಸರಕುಗಳನ್ನು ತರಿಸಲಾಗುತ್ತೆ.

ಕೆಲಸಗಾರರು, ಶ್ರಮ, ಉಪಕರಣಗಳ ಬಳಕೆ ಇಲ್ಲಿ ಕಡಿಮೆ. ಆದರೆ ಹೋಟೆಲ್‌, ರೆಸ್ಟೊರೆಂಟ್‌ ಚಿತ್ರಣವೇ ಬದಲು. ಇದು ಒಂದು ರೀತಿಯಲ್ಲಿ ಹರಿಯುವ ನದಿಯಂತೆ. ತರಕಾರಿಗಳ ಸಾಗಣೆ, ಅವುಗಳನ್ನಿಡಲು ಸೂಕ್ತ ವಾತಾವರಣ ಬೇಕು. ಅದಕ್ಕೆ ಫ್ರಿಡ್ಜ್‌ನಂತಹ ಉಪಕರಣ, ಕೆಲಸಗಾರರು, ಹೀಗೆ ಒಂದು ಆಹಾರ ತಯಾರಿಕೆಯಿಂದ ಹಿಡಿದು ಗ್ರಾಹಕರ ಕೈ ಸೇರುವವರೆಗೂ ಇಲ್ಲಿ ಶ್ರಮ ಹೆಚ್ಚು. ಬಟ್ಟೆಅಂಗಡಿಗೆ ಅಥವಾ ಪುಸ್ತಕದಂಗಡಿಗೆ ಗ್ರಾಹಕರು ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಹೋಟೆಲ್‌ಗೆ ಹೋಗಲು ಮರೆಯುವುದಿಲ್ಲ. ಏಕೆಂದರೆ ಹೊಟ್ಟೆಮಾತು ಕೇಳಬೇಕಲ್ಲ. ಹೀಗಾಗಿ ಶ್ರಮದ ಕೆಲಸ ಹೆಚ್ಚಿದ್ದರಿಂದ ಎಲ್ಲವನ್ನೂ ಸೇರಿಸಿಯೇ ಬೆಲೆ ನಿಗದಿಸಲಾಗುತ್ತೆ.

- ಮೇಘಾ ಎಂ ಎಸ್ 

Follow Us:
Download App:
  • android
  • ios